ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

​ಚಾಮರಾಜನಗರ: ಸೇಬು, ಮೂಸಂಬಿ, ಬೀನ್ಸ್ ಅಗ್ಗ, ಕಿತ್ತಳೆ ತುಟ್ಟಿ

ಹೂವಿಗೆ ಬೇಡಿಕೆ ಕುಸಿತ, ಚಿಕನ್‌ ಬೆಲೆ ₹20 ಕಡಿಮೆ
Last Updated 10 ಆಗಸ್ಟ್ 2021, 4:23 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಮಾರುಕಟ್ಟೆಯಲ್ಲಿ ಈ ವಾರ ತರಕಾರಿಗಳ ಪೈಕಿ ಬೀನ್ಸ್, ಹಣ್ಣುಗಳಲ್ಲಿ ಸೇಬು, ಮೂಸಂಬಿ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಕಿತ್ತಳೆ ತಟ್ಟಿಯಾಗಿದೆ. ಹೂವುಗಳಿಗೆ ಬೇಡಿಕೆ ಕುಸಿದಿದೆ.

ಹಾಪ್‌ಕಾಮ್ಸ್‌ನಲ್ಲಿ ಬೀನ್ಸ್ ಬೆಲೆ ಕೆಜಿಗೆ ₹10 ಕಡಿಮೆಯಾಗಿದೆ. ಕಳೆದ ವಾರ ಕೆಜಿ ಬೀನ್ಸ್ ಬೆಲೆ ₹40 ಇತ್ತು. ಸೋಮವಾರ ₹30ಕ್ಕೆ ಇಳಿದಿದೆ.

'ಬೀನ್ಸ್ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗುತ್ತಿದ್ದು, ಬೇಡಿಕೆ ಕಡಿಮೆಯಾಗಿದೆ. ಈ ಕಾರಣದಿಂದ ಬೆಲೆ ಇಳಿದಿದೆ. ಉಳಿದ ತರಕಾರಿಗಳ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ' ಎಂದು ಹಾಪ್ ಕಾಮ್ಸ್ ವ್ಯಾಪಾರಿ ಮಧು ಅವರು ತಿಳಿಸಿದರು.

ಹಣ್ಣುಗಳ ಪೈಕಿ ಸೇಬಿನ ಬೆಲೆ ಕೆಜಿಗೆ ₹20 ಕಡಿಮೆಯಾಗಿದೆ. ಮೂಸಂಬಿಯ‌ ಬೆಲೆಯೂ ಅಷ್ಟಕ್ಕೆ ಇಳಿದಿದೆ. ಹಾಪ್ ಕಾಮ್ಸ್‌ನಲ್ಲಿ ಕಳೆದ ವಾರ ಸೇಬಿನ ಬೆಲೆ ಕೆಜಿಗೆ ₹180 ಇತ್ತು. ಅದೀಗ ₹160ಕ್ಕೆ ಕುಸಿದಿದೆ. ಅದೇ ರೀತಿ ₹80 ಇದ್ದ ಮೂಸಂಬಿ ₹60ಕ್ಕೆ‌ ಇಳಿದಿದೆ. ಕಿತ್ತಳೆ ಬೆಲೆ ₹20 ಹೆಚ್ಚಾಗಿದೆ.

ಮೂಸಂಬಿ ಹೆಚ್ಚಿನ‌ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದ್ದು, ವ್ಯಾಪಾರಿಗಳು ತಳ್ಳುಗಾಡಿ, ಸರಕು ಸಾಗಣೆ ಆಟೊಗಳಲ್ಲಿ ರಾಶಿ ಹಾಕಿ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಕಿತ್ತಳೆ ಬೆಲೆ ಕೆಜಿಗೆ ₹20ರಷ್ಟು ಹೆಚ್ಚಾಗಿದೆ. ಕಡಿಮೆ ಪ್ರಮಾಣದಲ್ಲಿ ಕಿತ್ತಳೆ ಪೂರೈಕೆಯಾಗುತ್ತಿರುವುದರಿಂದ ಬೆಲೆ ಹೆಚ್ಚಾಗಿದೆ ಎಂಬುದು ವ್ಯಾಪಾರಿಗಳ ಮಾತು.

ಹೂವಿನ ಬೆಲೆ ಇಳಿಕೆ: ಶ್ರಾವಣ ಮಾಸದ ಆರಂಭದಲ್ಲೇ ಹೂವಿಗೆ ಬೇಡಿಕೆ ಕುಸಿದಿದೆ. ಶನಿವಾರ ಮತ್ತು ಭಾನುವಾರ ಹೆಚ್ಚು ಬೇಡಿಕೆ ಇತ್ತು. ಹಾಗಾಗಿ ದರವೂ ಹೆಚ್ಚಾಗಿತ್ತು. ಸೋಮವಾರ ಕನಕಾಂಬರ ಬಿಟ್ಟು ಉಳಿದ ಹೂವುಗಳ ಧಾರಣೆ ಇಳಿಮುಖವಾಗಿದೆ.

‘ಶ್ರಾವಣ ಮಾಸ ಆರಂಭಕ್ಕೂ ಮುನ್ನ ಹೆಚ್ಚು ಬೇಡಿಕೆ ಇತ್ತು. ಸೋಮವಾರ ಇರಲಿಲ್ಲ. ಮುಂದಿನ ದಿನಗಳಲ್ಲಿ ಹೂವಿನ ಖರೀದಿ ಹೆಚ್ಚಲಿದ್ದು, ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಬೆಲೆ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಬಿಡಿಹೂವಿನ ವ್ಯಾಪಾರಿ ರವಿ ಅವರು ಮಾಹಿತಿ ನೀಡಿದರು.

ಮಾಂಸದ ಮಾರುಕಟ್ಟೆಯಲ್ಲಿ ಚಿಕನ್‌ ಬೆಲೆ ಕೆಜಿಗೆ ₹20ರಷ್ಟು ಇಳಿದಿದೆ. ಮಟನ್‌ ಬೆಲೆ (₹560) ಸ್ಥಿರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT