ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಕರ್ಫ್ಯೂ: ಪುಷ್ಪೋದ್ಯಮದ ಮೇಲೆ ಹೊಡೆತ

ಬೀನ್ಸ್‌ ತುಟ್ಟಿ, ಮಾರುಕಟ್ಟೆಗೆ ಲಗ್ಗೆ ಇಟ್ಟ ಹಣ್ಣುಗಳ ರಾಜ
Last Updated 26 ಏಪ್ರಿಲ್ 2021, 13:28 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ 2ನೇ ಅಲೆ ತಡೆಗೆ ಸರ್ಕಾರ ಜಾರಿಗೊಳಿಸಿರುವ ಕೋವಿಡ್‌ ಕರ್ಫ್ಯೂ ಪುಷ್ಪೋದ್ಯಮದ ಮೇಲೆ ನಕಾರಾತ್ಮಕ ಬೀರಿದೆ.

ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫ್ಯೂ ಆರಂಭವಾದಾಗಿನಿಂದ ದೇವಸ್ಥಾನಗಳು ಮುಚ್ಚಿವೆ. ಧಾರ್ಮಿಕ ಕಾರ್ಯಕ್ರಮ, ಸಮಾರಂಭಗಳು, ನಡೆಯುತ್ತಿಲ್ಲ. ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳು ಸರಳವಾಗಿ ನಡೆಯುತ್ತಿದ್ದು, ಹೂವುಗಳಿಗೆ ಬೇಡಿಕೆ ದಿಢೀರ್‌ ಆಗಿ ಕುಸಿದಿದೆ. ಹಾಗಾಗಿ, ಹೂವುಗಳನ್ನು ಕೊಳ್ಳುವವರಿಲ್ಲ. ಇದರಿಂದಾಗಿ ಬೆಲೆಯೂ ಕಡಿಮೆಯಾಗಿದ್ದು, ಹೂವಿನ ಬೆಳೆಗಾರರು ಹಾಗೂ ವ್ಯಾಪಾರಿಗಳಿಗೂ ನಷ್ಟವಾಗುತ್ತಿದೆ.

ನಗರದ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕಳೆದ ವಾರ ಕನಕಾಂಬರಕ್ಕೆ ಕೆಜಿಗೆ ₹400 ಇತ್ತು. ಈ ವಾರ ₹200ಕ್ಕೆ ಇಳಿದಿದೆ. ₹120 ಇದ್ದ ಮಲ್ಲಿಗೆ ₹80ಕ್ಕೆ ಇಳಿದಿದೆ. ಸುಗಂಧರಾಜ, ಬಟನ್‌ ಗುಲಾಬಿಗಳ ಬೆಲೆಯಲ್ಲಿ ವ್ಯಾತ್ಯಾಸವಾಗದಿದ್ದರೂ, ವ್ಯಾಪಾರ ಆಗುತ್ತಿಲ್ಲ.

‘ಕೋವಿಡ್‌ ಎರಡನೇ ಎಲೆ ಆರಂಭಗೊಂಡ ನಂತರ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿತ್ತು. ಕರ್ಫ್ಯೂ ಜಾರಿಯಾದ ಮೇಲೆ ಇಡೀ ಮಾರುಕಟ್ಟೆ ಬಿದ್ದು ಹೋಗಿದೆ. ಬೆಳೆಗಾರರು ಹೂವುಗಳನ್ನು ತರುತ್ತಾರೆ. ಆದರೆ, ನಮ್ಮಿಂದ ಖರೀದಿಸಲು ಗ್ರಾಹಕರು ಬರುತ್ತಿಲ್ಲ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರ್ಫ್ಯೂ ಇದ್ದರೂ, ತರಕಾರಿ, ಹಣ್ಣುಗಳಿಗೆ ಬೇಡಿಕೆ ಇರುತ್ತದೆ. ಧಾರ್ಮಿಕ ಕಾರ್ಯಕ್ರಮಗಳು, ಮದುವೆಗಳಂತಹ ಸಮಾರಂಭ ನಡೆಯದಿದ್ದರೆ, ಹೂವಿಗೆ ಬೇಡಿಕೆ ಎಲ್ಲಿ ಇರುತ್ತದೆ? ಕರ್ಫ್ಯೂ ಮುಗಿಯುವವರೆಗೂ ಇದೇ ಪರಿಸ್ಥಿತಿ ಇರಲಿದೆ’ ಎಂದು ಅವರು ಹೇಳಿದರು.

ಮಾವಿನಹಣ್ಣು ಲಗ್ಗೆ: ಈ ಮಧ್ಯೆ, ಹಣ್ಣುಗಳ ರಾಜ ಮಾವಿನ ಋತು ಆರಂಭವಾಗಿದ್ದು, ಮಾರುಕಟ್ಟೆ ಲಗ್ಗೆ ಇಟ್ಟಿದೆ. ರಸಪೂರಿ, ಬಾದಾಮಿ, ಸಿಂಧೂರ ಸೇರಿದಂತೆ ವಿವಿಧ ತಳಿ ಮಾವಿನಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಹಾಪ್‌ಕಾಮ್ಸ್‌, ಹಣ್ಣಿನ ಮಳಿಗೆಗಳಲ್ಲದೇ, ಬೀದಿ ಬದಿ ವ್ಯಾಪಾರಿಗಳು ಕೂಡ ತಳ್ಳು ಗಾಡಿಗಳಲ್ಲಿ ಮಾವಿನಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೆಜಿ ಮಾವಿಗೆ ₹60ರಿಂದ ₹100ರವರೆಗೂ ಬೆಲೆ ಇದೆ.

ಮಂಗಳವಾರ ರಾತ್ರಿಯಿಂದ ಆರಂಭವಾಗಲಿರುವ 14 ದಿನಗಳ ಕೋವಿಡ್‌ ಕರ್ಫ್ಯೂ, ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಆತಂಕ ವ್ಯಾಪಾರಿಗಳನ್ನು ಕಾಡುತ್ತಿದೆ. ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಮಳಿಗೆ ತೆರೆಯಲು ಅವಕಾಶ ಕಲ್ಪಿಸಿರುವುದು ಅವರಿಗೆ ಕೊಂಚ ಸಮಾಧಾನ ತಂದಿದೆ.

ಈ ವಾರ ಹಣ್ಣಿನ ಮಾರುಕಟ್ಟೆಯಲ್ಲಿ ದಾಳಿಂಬೆಯ ಬೆಲೆ ಇಳಿಕೆಯಾಗಿದೆ. ಕಳೆದ ವಾರ ಹಾಪ್‌ಕಾಮ್ಸ್‌ನಲ್ಲಿ ದಾಳಿಂಬೆ ಕೆಜಿಗೆ ₹200ರಿಂದ ₹220ರವರೆಗೆ ಇತ್ತು. ಈ ವಾರ ₹160ರಿಂದ ₹200ರವರೆಗೆ ಇದೆ. ಉಳಿದಂತೆ ಎಲ್ಲ ಹಣ್ಣುಗಳ ಧಾರಣೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ.

ಬೀನ್ಸ್‌ ತುಟ್ಟಿ: ತರಕಾರಿಗಳ ಮಾರುಕಟ್ಟೆಯಲ್ಲಿ ಬೀನ್ಸ್‌ ಬಿಟ್ಟರೆ, ಉಳಿದ ಎಲ್ಲ ತರಕಾರಿಗಳ ಬೆಲೆಗಳಲ್ಲಿ ವ್ಯತ್ಯಾಸವಾಗಿಲ್ಲ. ಹಾಪ್‌ಕಾಮ್ಸ್‌ನಲ್ಲಿ ಕಳೆದ ವಾರ ಬೀನ್ಸ್‌ಗೆ ಕೆಜಿಗೆ ₹30 ಇತ್ತು. ಈ ವಾರ ₹60ಕ್ಕೆ ಏರಿದೆ.

‘ಬೀನ್ಸ್‌ ಬಿಟ್ಟು ಬೇರೆ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಕರ್ಫ್ಯೂ‌ಪರಿಣಾಮ ತರಕಾರಿಗಳ ಮೇಲೆ ಬಿದ್ದಿಲ್ಲ. 14 ದಿನಗಳ ಕರ್ಫ್ಯೂ ಅವಧಿಯಲ್ಲಿ ಏನಾಗುತ್ತದೋ ನೋಡಬೇಕು’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಂಸದ ಮಾರುಕಟ್ಟೆಯಲ್ಲಿ ಮೊಟ್ಟೆ, ಚಿಕನ್‌, ಮಟನ್‌ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT