ಬುಧವಾರ, ಮೇ 12, 2021
17 °C

ಚಾಮರಾಜನಗರ: ಹೂವಿನ ಧಾರಣೆ ಕುಸಿತ; ಟೊಮೆಟೊ, ಈರುಳ್ಳಿ ಅಗ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮಾರುಕಟ್ಟೆಯಲ್ಲಿ ಹೂವುಗಳ ಧಾರಣೆ ಈ ವಾರ ಮತ್ತಷ್ಟು ಕುಸಿದಿದೆ. ತರಕಾರಿಗಳಲ್ಲೂ ಕೆಲವುದರ ಬೆಲೆ ಇಳಿಮುಖವಾಗಿದೆ. ಮಾಂಸಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಗ್ರಾಮೀಣ ಭಾಗಗಳಲ್ಲಿ ಜಾತ್ರೆಗಳು ನಡೆಯುತ್ತಿದ್ದರೂ, ಹೂವಿಗೆ ಹೆಚ್ಚು ಬೇಡಿಕೆ ಬಂದಿಲ್ಲ. ಕನಕಾಂಬರ ಬಿಟ್ಟು ಉಳಿದ ಎಲ್ಲ ಹೂವುಗಳ ಧಾರಣೆ ಕಡಿಮೆಯಾಗಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹೂವುಗಳು ಬರುತ್ತಿರುವುದು ಇದಕ್ಕೆ ಕಾರಣ ಎಂದು ಹೇಳುತ್ತಾರೆ ವ್ಯಾಪಾರಿಗಳು. 

ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕಳೆದ ವಾರ ಕೆಜಿಗೆ ₹200 ಇದ್ದ ಕನಕಾಂಬರ ಈ ವಾರ ₹400ಕ್ಕೆ ಏರಿಕೆಯಾಗಿದೆ. ₹160ರಷ್ಟಿದ್ದ ಕಾಕಡದ ಬೆಲೆ ₹100ಕ್ಕೆ ಇಳಿದಿದೆ. ₹30 ಇದ್ದ ಕೆಜಿ ಚೆಂಡು ಹೂವು ₹10ಕ್ಕೆ ಕುಸಿದಿದೆ. ₹120ರವರೆಗೆ ಇದ್ದ ಸೇವಂತಿಗೆಗೆ ₹60ರಿಂ ₹70ರವರೆಗೆ ಇದೆ. 

ಹೂವಿನ ಮಾರುಕಟ್ಟೆಗೆ ಮಲ್ಲಿಗೆ ಬಂದಿದ್ದು, ಕೆಜಿಗೆ ₹100 ಇದೆ. ಯುಗಾದಿವರೆಗೂ ಇದೇ ಬೆಲೆ ಮುಂದುವರಿಯುವ ಸಾಧ್ಯತೆ ಇದೆ ಎಂಬುದು ವ್ಯಾಪಾರಿಗಳ ಮಾತು. 

ತರಕಾರಿಗಳ ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲ ತರಕಾರಿಗಳ ಬೆಲೆ ಸ್ಥಿರವಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಟೊಮೆಟೊ ಮತ್ತು ಈರುಳ್ಳಿ ಬೆಲೆ ಮತ್ತೆ ₹5 ಕಡಿಮೆಯಾಗಿದೆ. 

ಕಳೆದವಾರ ಕೆಜಿಗೆ ₹20 ಇದ್ದ ಟೊಮೆಟೊ ಸೋಮವಾರ ₹15 ಇತ್ತು. ₹25ರಷ್ಟಿದ್ದ ಈರುಳ್ಳಿ ಈಗ ₹20ಕ್ಕೆ ಸಿಗುತ್ತಿದೆ. ಹೊರಗಡೆ ಈರುಳ್ಳಿ ಬೆಲೆ ಹಾಪ್‌ಕಾಮ್ಸ್‌ಗಿಂತ ಸ್ವಲ್ಪ ಹೆಚ್ಚಿದೆ.

ಬೀನ್ಸ್‌ (40), ಕ್ಯಾರೆಟ್‌ (₹20), ಆಲೂಗಡ್ಡೆ (₹30) ಬೆಲೆಗಳಲ್ಲಿ ವ್ಯತ್ಯಾಸವಾಗಿಲ್ಲ.

ಕಿತ್ತಳೆ, ದಾಳಿಂಬೆ ದುಬಾರಿ: ಹಣ್ಣುಗಳ ಪೈಕಿ ಕಿತ್ತಳೆ ಮತ್ತು ದಾಳಿಂಬೆ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಉಳಿದ ಹಣ್ಣುಗಳ ಧಾರಣೆ ಯಥಾಸ್ಥಿತಿ ಮುಂದುವರೆದಿದೆ.

ಕಿತ್ತಳೆ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದು, ಇದರಿಂದ ಬೆಲೆ ಹೆಚ್ಚಾಗಿದೆ ಎಂದು ಹೇಳುತ್ತಾರೆ ಹಾಪ್‌ಕಾಮ್ಸ್‌ ವ್ಯಾಪಾರಿ ಮಧು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು