ಬುಧವಾರ, ಮೇ 18, 2022
23 °C
ಇಳಿಯುತ್ತಿದೆ ತರಕಾರಿ ಧಾರಣೆ, ಹಣ್ಣು, ಮಾಂಸಗಳ ಬೆಲೆ ಸ್ಥಿರ

ಚಾಮರಾಜನಗರ: ಜಾತ್ರೆ, ಉತ್ಸವ ರದ್ದು, ಬಾಡಿದ ’ಹೂವು‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ ಹರಡುವಿಕೆ ತಡೆ್ಗಾಗಿ ವಾರಾಂತ್ಯ ಕರ್ಫ್ಯೂ, ಜಾತ್ರೆ, ಉತ್ಸವಗಳು, ಮದುವೆ ಸೇರಿದಂತೆ ಇತರ ಸಮಾರಂಭಗಳ ಆಯೋಜನೆಗೆ ನಿರ್ಬಂಧ ವಿಧಿಸಿರುವುದರಿಂದ ಪುಷ್ಪೋದ್ಯಮದ ಮೇಲೆ ಪರಿಣಾಮ ಬೀರಿದೆ. 

ಹೂವಿನ ಮಾರುಕಟ್ಟೆಯಲ್ಲಿ ಹೂವುಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ಬೆಲೆಗಳು ಕುಸಿದಿವೆ. 

ಸಂಕ್ರಾಂತಿ ಹಬ್ಬದ ಆಸುಪಾಸಿನಲ್ಲಿ ಹೂವುಗಳ ಧಾರಣೆಯಲ್ಲಿ ಕೊಂಚ ಹೆಚ್ಚಳವಾಗಿದ್ದು ಬಿಟ್ಟರೆ ಬಳಿಕ ಕಡಿಮೆಯಾಗಿದೆ. 

ನಗರಕ್ಕೆ ಸಮೀಪದ ಚೆನ್ನೀಪುರ ಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕನಕಾಂಬರಕ್ಕೆ ಕೆಜಿಗೆ ₹400, ಕಾಕಡಕ್ಕೆ ₹240, ಸೇವಂತಿಗೆಗೆ ₹100 ಸುಗಂಧರಾಜಕ್ಕೆ ₹40 ಹಾಗೂ ಚೆಂಡುಹೂವಿಗೆ ಕೆಜಿಗೆ ₹20ರಿಂದ ₹30 ಬೆಲೆ ಇದೆ. 

’ಜಾತ್ರೆಗಳು ರದ್ದಾಗಿವೆ. ಶುಭ ಸಮಾರಂಭಗಳಲ್ಲಿ ಜನರು ಭಾಗವಹಿಸುವುದಕ್ಕೆ ಮಿತಿ ಹೇರಲಾಗಿದೆ. ಜಾತ್ರೆಗಳ ಸಂದರ್ಭದಲ್ಲಿ ಹೂವುಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಈಗ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಖರೀದಿಸುತ್ತಿದ್ದಾರೆ. ಕೋವಿಡ್‌ ನಿರ್ಬಂಧದಿಂದಾಗಿ ವ್ಯಾ‍ಪಾರಕ್ಕೆ ಹೊಡೆತ ಬಿದ್ದಿದೆ‘ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ’ಪ್ರಜಾವಾಣಿ‘ಗೆ ತಿಳಿಸಿದರು. 

ನಿರ್ಬಂಧಗಳು ಇದೇ ರೀತಿ ಮುಂದುವರೆದರೆ ಧಾರಣೆ ಚೇತರಿಕೆಗೆ ಇನ್ನಷ್ಟು ಸಮಯ ಬೇಕಾಗಬಹುದು ಎಂದು ಹೇಳುತ್ತಾರೆ ವ್ಯಾಪಾರಿಗಳು.

ತರಕಾರಿ ಬೆಲೆ ಇಳಿಮುಖ: ವಾರದಿಂದ ವಾರಕ್ಕೆ ತರಕಾರಿಗಳ ಬೆಲೆಯಲ್ಲಿ ಇಳಿಮುಖವಾಗುತ್ತಿದ್ದು, ಟೊಮೆಟೊ ಸೇರಿದಂತೆ ಹಲವು ತರಕಾರಿಗಳ ಬೆಲೆಯಲ್ಲಿ ಈ ವಾರ ಮತ್ತಷ್ಟು ಇಳಿಕೆ ಕಂಡು ಬಂದಿದೆ. 

ಹಾಪ್‌ಕಾಮ್ಸ್‌ನಲ್ಲಿ ಟೊಮೆಟೊ, ಬೀನ್ಸ್‌, ಬದನೆಕಾಯಿ, ಬೆಂಡೆಕಾಯಿ, ಅವರೆಕಾಯಿ, ತೊಗರಿಕಾಯಿ, ಬೆಳ್ಳುಳ್ಳಿಗಳ ಬೆಲೆ ₹10ರಿಂದ ₹20ರವರೆಗೂ ಕುಸಿದಿದೆ. 

ಟೊಮೆಟೊ ಬೆಲೆ ಮತ್ತೆ ಕೆಜಿಗೆ ₹10 ಕಡಿಮೆಯಾಗಿ ₹30ಕ್ಕೆ ತಲುಪಿದೆ. ಕಳೆದ ವಾರದವರೆಗೂ ₹80 ಇದ್ದ ಕೆಜಿ ಬೀನ್ಸ್‌ ಈಗ ₹60 ಇದೆ. ಬದನೆಕಾಯಿಯ ಬೆಲೆ ₹10 ಕಡಿಮೆಯಾಗಿದೆ. ₹80 ಇದ್ದ ಬೆಂಡೆಕಾಯಿ ₹60 ಆಗಿದೆ. ₹60 ಇದ್ದ ಕೆಜಿ ಬೆಳ್ಳುಳ್ಳಿ ಬೆಲೆ ಸೋಮವಾರ ₹40 ಇತ್ತು. 

ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿರುವ ಅವರೆಕಾಯಿ ಹಾಗೂ ತೊಗರಿಕಾಯಿಯ ಬೆಲೆ ₹20 ಕಡಿಮೆಯಾಗಿ ₹40ಕ್ಕೆ ಕುಸಿದಿದೆ. 

’ಬೀನ್ಸ್‌ ಸೇರಿದಂತೆ ಬಹುತೇಕ ತರಕಾರಿಗಳು ಈಗ ಮಾರುಕಟ್ಟೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿವೆ. ಹೀಗಾಗಿ ಬೆಲೆ ಕಡಿಮೆಯಾಗಿದೆ‘ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ಹಣ್ಣುಗಳ ಧಾರಣೆ ಯಥಾಸ್ಥಿತಿ

ಹಣ್ಣುಗಳ ಬೆಲೆ ಹಲವು ವಾರಗಳಿಂದ ಸ್ಥಿರವಾಗಿದೆ. ಸೀಡ್‌ಲೆಸ್‌ ಕಪ್ಪು ದ್ರಾಕ್ಷಿಗೆ ಬೇಡಿಕೆ ಮುಂದುವರೆದಿದೆ. ಹೀಗಾಗಿ ಬೆಲೆಯೂ (ಕೆಜಿಗೆ ₹200) ಯಥಾಸ್ಥಿತಿ ಮುಂದುವರೆದಿದೆ. ಎರಡು ತಳಿಯ ದಾಳಿಂಬೆ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ₹100ರಿಂದ ₹120ರವರೆಗೆ ಬೆಲೆ ಇದೆ. 

ಉಳಿದಂತೆ ಸೇಬು (₹120), ಏಲಕ್ಕಿ ಬಾಳೆ (₹40), ಸಪೋಟ (₹60) ಸೇರಿದಂತೆ ಇತರ ಹಣ್ಣುಗಳ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ. 

ಮಾಂಸದ ಮಾರುಟ್ಟೆಯಲ್ಲಿ ಚಿಕನ್‌ ಹಾಗೂ ಮಟನ್‌ ಬೆಲೆ ಬದಲಾಗಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು