ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜೇಬು ಸುಡಲಿದೆ ದಸರಾ ಹಬ್ಬ

ಚಾಮರಾಜನಗರ: ಈರುಳ್ಳಿಗೆ ₹80, ಹೂವುಗಳೂ ತುಟ್ಟಿ
Last Updated 19 ಅಕ್ಟೋಬರ್ 2020, 20:15 IST
ಅಕ್ಷರ ಗಾತ್ರ

ಚಾಮರಾಜನಗರ: ಆಯುಧಪೂಜೆ, ವಿಜಯ ದಶಮಿಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ.

ಈರುಳ್ಳಿ ಸೇರಿದಂತೆ ಕೆಲವು ತರಕಾರಿಗಳು ತುಟ್ಟಿಯಾಗುತ್ತಿದ್ದು, ಹೂವುಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ವಾರದ ಆರಂಭದಲ್ಲಿ ಬಹುತೇಕ ಎಲ್ಲ ಹೂಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಕಣ್ಣೀರು ತರಿಸುತ್ತಿದೆ ಈರುಳ್ಳಿ: ಕಳೆದ ವರ್ಷ ಅಕ್ಟೋಬರ್–‌ ನವೆಂಬರ್‌ ಅವಧಿಯಲ್ಲಿ ಈರುಳ್ಳಿ ಬೆಲೆ ಕೆಜಿಗೆ ₹100 ದಾಟಿತ್ತು. ಈ ವರ್ಷವೂ ಅದೇ ರೀತಿಯಾಗುವ ಲಕ್ಷಣ ಕಾಣಿಸುತ್ತಿದೆ.

ಮೂರ್ನಾಲ್ಕು ವಾರಗಳಿಂದ ಏರಿಕೆ ಕಂಡು ಬಂದಿದ್ದ ಈರುಳ್ಳಿಯ ಧಾರಣೆ ಈ ವಾರ ₹80 ತಲುಪಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

‘ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಾಗಿರುವುದರಿಂದ ಹೊಸ ಫಸಲು ಬಂದಿಲ್ಲ. ಬೆಳೆ ಹಾಳಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ದಾಸ್ತಾನಿನಲ್ಲಿದ್ದ ಈರುಳ್ಳಿ ಮಾರಾಟವಾಗುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಇದರಿಂದ ಬೆಲೆ ಹೆಚ್ಚಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಧಾರಣೆ ಇನ್ನಷ್ಟು ಹೆಚ್ಚಾಗುವುದು ಖಚಿತ’ ಎಂದು ಸಿವಿಜೆ ಸ್ಟೋರ್ಸ್‌ ಮಾಲೀಕ ಬಾಬು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ದಿನಸಿ ಅಂಗಡಿಗಳಲ್ಲಿ ₹75ರಿಂದ ₹85ಕ್ಕೆ ಮಾರಾಟವಾಗುತ್ತಿದೆ. ಹಾಪ್‌ಕಾಮ್ಸ್‌ನಲ್ಲಿ ₹80ರಿಂದ ₹85ರವರೆಗೆ ಬೆಲೆ ಇದೆ. ಕಳೆದ ವಾರ ಕೆಜಿ ಈರುಳ್ಳಿ ಬೆಲೆ ₹45ರಿಂದ ₹50ವರೆಗೆ ಇತ್ತು.

ಮಾರುಕಟ್ಟೆಗೆ ಟೊಮೆಟೊ ಬಾರಿ ಪ್ರಮಾಣದಲ್ಲಿ ಬರುತ್ತಿದ್ದು, ಬೇಡಿಕೆ ಕಡಿಮೆಯಾಗಿದೆ. ಹಾಗಾಗಿ, ಬೆಲೆಯಲ್ಲಿ ಇಳಿಮುಖ ಕಾಣುತ್ತಿದೆ. ಕಳೆದ ವಾರ ಕೆಜಿಗೆ ₹20 ಇತ್ತು. ಈ ವಾರ ₹15ಕ್ಕೆ ಇಳಿದಿದೆ.

ದಪ್ಪ ಮೆಣಸಿನಕಾಯಿಗೆ ₹20 ಜಾಸ್ತಿಯಾಗಿದೆ. ಕಳೆದ ವಾರ ₹40 ಇದ್ದ ಬೆಲೆ, ಸೋಮವಾರ ‌₹60 ಇತ್ತು. ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಹಣ್ಣುಗಳ ಪೈಕಿ, ಕಿತ್ತಳೆಯ ಸೀಸನ್‌ ಆರಂಭವಾಗಿದ್ದು, ಎಲ್ಲಿ ನೋಡಿದರಲ್ಲಿ ಕಿತ್ತಳೆಗಳೇ ಕಾಣ ಸಿಗುತ್ತಿವೆ. ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿರುವುದರಿಂದ ಬೆಲೆಯಲ್ಲಿ ಇಳಿಕೆಯಾಗಿದೆ. ₹80ರಿಂದ ₹100ರವರೆ ಇದ್ದ ಧಾರಣೆ ಈಗ ₹60ಕ್ಕೆ ಕುಸಿದಿದೆ. ಉಳಿದ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಹೂವಿಗೆ ಹೆಚ್ಚಿದ ಬೇಡಿಕೆ

ನವರಾತ್ರಿಯ ಸಂದರ್ಭದಲ್ಲಿ ಹೂವುಗಳಿಗೆ ಸಾಮಾನ್ಯವಾಗಿ ಬೇಡಿಕೆ ಹೆಚ್ಚು ಇರುತ್ತದೆ. ಆಯುಧಪೂಜೆ, ವಿಜಯ ದಶಮಿಯ ಸಂದರ್ಭದಲ್ಲಿ ಪೂಜಾ ಕಾರ್ಯಕ್ರಮಗಳು ಹೆಚ್ಚು ನಡೆಯುವುದರಿಂದ ಹೂವಿನ ಬಳಕೆ ಹೆಚ್ಚು.

ಕಾಕಡ, ಸುಗಂಧರಾಜ, ಚೆಂಡು ಹೂವುಗಳನ್ನು ಗ್ರಾಹಕರು ಹೆಚ್ಚು ಖರೀದಿಸುತ್ತಾರೆ.

ಕಳೆದವಾರಕ್ಕೆ ಹೋಲಿಸಿದರೆ, ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಎಲ್ಲ ಹೂವುಗಳ ಬೆಲೆಯಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ.

ಕನಕಾಂಬರ ಕೆಜಿಗೆ ₹600ರಿಂದ ₹800ರವರಗೆ ಇದೆ. ಕಳೆದವಾರ ₹400 ಇತ್ತು. ₹240ರಿಂದ ₹280ರಷ್ಟಿದ್ದ ಕಾಕಡಕ್ಕೆ ₹800 ಆಗಿದೆ. ಚೆಂಡು ಹೂವಿಗೆ ₹30ರಿಂದ ₹40ರವರೆಗೆ ಇದೆ. ಸುಗಂಧರಾಜದ ಬೆಲೆ ₹60ರಿಂದ ₹80ರಷ್ಟು ಹೆಚ್ಚಾಗಿದೆ.

‘ಹಬ್ಬದ ಸಮಯವಾಗಿರುವುದರಿಂದ ಬೆಲೆ ಹೆಚ್ಚಾಗಿದೆ. ಆಯುಧಪೂಜೆ, ವಿಜಯದಶಮಿಗೆ ಇನ್ನಷ್ಟು ಹೆಚ್ಚಾಗಲಿದೆ’ ಎಂದು ಬಿಡಿಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಂಸಗಳ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT