ಗುರುವಾರ , ಜುಲೈ 7, 2022
25 °C
ಮಳೆಯಿಂದಾಗಿ ಆವಕ ಕಡಿಮೆ, ಟೊಮೆಟೊ ಬೆಳೆಗಾರರಿಗೆ ಬಂಪರ್‌ ಬೆಲೆ

ಶತಕ ಬಾರಿಸಿದ ಟೊಮೆಟೊ, ಬೀನ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ತರಕಾರಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ₹100 ತಲುಪಿದೆ. ಬೀನ್ಸ್‌ ಬೆಲೆ ಕೂಡ ಶತಕದ ಆಸುಪಾಸಿನಲ್ಲಿದೆ. 

ನಿರಂತರವಾಗಿ ಸುರಿದ ಮಳೆಯಿಂದ ಟೊಮೆಟೊ ಹಾಗೂ ಬೀನ್ಸ್‌ ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದ್ದು, ಬೇಡಿಕೆ ಹೆಚ್ಚಾಗಿದೆ.

ಮೂರು ವಾರಗಳಿಂದ ಟೊಮೆಟೊ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಪ್ರತಿ ವಾರ ಕೆ.ಜಿ.ಗೆ ₹20ರಷ್ಟು ಜಾಸ್ತಿಯಾಗುತ್ತಾ ಬಂದಿದೆ. ಹಾಪ್‌ಕಾಮ್ಸ್‌ನಲ್ಲಿ ಕಳೆದ ವಾರ ಕೆ.ಜಿ.ಗೆ ₹80 ಇತ್ತು. ಈ ವಾರ ₹100 ಆಗಿದೆ. ತಳ್ಳು ಗಾಡಿ ವ್ಯಾಪಾರಿಗಳು ಕೊಂಚ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. 

ಟೊಮೆಟೊ ಬೆಳೆದ ರೈತರಿಗೂ ಉತ್ತಮ ಬೆಲೆ ಸಿಗುತ್ತಿದ್ದು, ಎಪಿಎಂಸಿಯಲ್ಲಿ ಕೆ.ಜಿ.ಗೆ ₹85ರಿಂದ ₹90 ಬೆಲೆ ಇದೆ. 

ಮಳೆಯಿಂದಾಗಿ ಟೊಮೆಟೊ ಬೆಳೆಗೆ ಹಾನಿಯಾಗಿದೆ. ಮಳೆ ಬಂದರೆ ಇಳುವರಿಯೂ ಕಡಿಮೆಯಾಗುತ್ತದೆ. ಹೀಗಾಗಿ ಬೆಲೆ ಹೆಚ್ಚಾಗಿದೆ ಎಂದು ಹೇಳುತ್ತಾರೆ ಬೆಳೆಗಾರರು. ‌

ಇದೇ ಪರಿಸ್ಥಿತಿ ಮುಂದುವರಿದರೆ ಟೊಮೆಟೊ ಬೆಲೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

ಹಲವು ವಾರಗಳಿಂದ ಸ್ಥಿರವಾಗಿದ್ದ ಬೀನ್ಸ್‌ ಬೆಲೆ ಈ ವಾರ ಹೆಚ್ಚಾಗಿದೆ. ಕಳೆದ ವಾರದವರೆಗೂ ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ ಬೀನ್ಸ್‌ಗೆ ₹80 ಇತ್ತು. ಈಗ ಅದು ₹90ರಿಂದ ₹100ರವರೆಗೆ ಇದೆ. ಗುಣಮಟ್ಟದ ಆಧಾರದಲ್ಲಿ ದರ ನಿಗದಿಯಾಗುತ್ತಿದೆ.

ಮಳೆಯ ಪರಿಣಾಮವಾಗಿ ಗೆಡ್ಡೆಕೋಸು ಕೂಡ ತುಟ್ಟಿಯಾಗಿದೆ. ಹೋದ ವಾರದವರೆಗೂ ₹40 ಇದ್ದ ಬೆಲೆ ಈ ವಾರ ₹60ಕ್ಕೆ ತಲುಪಿದೆ. ಹಸಿಮೆಣಸಿನಕಾಯಿ ಬೆಲೆ ಕೆ.ಜಿ.ಗೆ ₹20 ಕಡಿಮೆಯಾಗಿದೆ. ಸದ್ಯ ₹40 ಇದೆ.

ಉಳಿದಂತೆ ಕ್ಯಾರೆಟ್‌ (₹40), ಈರುಳ್ಳಿ (₹20), ಮೂಲಂಗಿ (₹30) ಸೇರಿದಂತೆ ಇತರ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. 

ನಿಂಬೆ ದುಬಾರಿ: ಮಳೆ ಆರಂಭವಾದರೂ ನಿಂಬೆ ಹಣ್ಣಿಗೆ ಬೇಡಿಕೆ ಕುಸಿದಿಲ್ಲ. ಹಾಗಾಗಿ, ಬೆಲೆ ಹೆಚ್ಚಾಗಿಯೇ ಇದೆ. ಗಾತ್ರಕ್ಕೆ ಅನುಸಾರವಾಗಿ ವ್ಯಾಪಾರಿಗಳು ಬೆಲೆ ಹೇಳುತ್ತಿದ್ದು, ಒಂದು ನಿಂಬೆ ಹಣ್ಣಿಗೆ ಗರಿಷ್ಠ ₹12ರವರೆಗೂ ಬೆಲೆ ಇದೆ. 

ಹಣ್ಣುಗಳ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. ಸೇಬಿನ ದುಬಾರಿ ದರ (₹180) ಈ ವಾರವೂ ಮುಂದುವರಿದಿದೆ. ದಾಳಿಂಬೆಯ ಬೆಲೆಯಲ್ಲೂ (₹160) ಬದಲಾವಣೆ ಕಂಡು ಬಂದಿಲ್ಲ. ಕಿತ್ತಳೆಗೆ ಕೆ.ಜಿ.ಗೆ ₹120 ಇದೆ. 

ಮಾಂಸಗಳ ಪೈಕಿ ಚಿಕನ್‌, ಮಟನ್‌ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಮಳೆ ಪರಿಣಾಮ: ಮಲ್ಲಿಗೆ ದುಬಾರಿ

ನಿರಂತರ ಮಳೆಯ ಕಾರಣಕ್ಕೆ ಹೂವಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ‌‌

ನಗರಕ್ಕೆ ಸಮೀಪದ ಚೆನ್ನೀಪುರದ ಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕೆಜಿ ಮಲ್ಲಿಗೆಗೆ ₹320 ಬೆಲೆ ಇದೆ. ಕಳೆದ ವಾರ ಕೆಜಿಗೆ ₹240 ಇತ್ತು.

‘ಮಳೆಯ ಕಾರಣದಿಂದ ಮಲ್ಲಿಗೆ ಹೆಚ್ಚು ಬರುತ್ತಿಲ್ಲ. ಶುಭ ಸಮಾರಂಭಗಳು ನಡೆಯುತ್ತಿರುವುದರಿಂದ ಬೇಡಿಕೆಯೂ ಹೆಚ್ಚಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.