ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಸೀತಾಫಲದ ಸಿಹಿ: ಹಣ್ಣುಗಳ ಧಾರಣೆ ಇಳಿತ

ಬೀನ್ಸ್‌ ದುಬಾರಿ, ಹಸಿಮೆಣಸು, ದಪ್ಪ ಮೆಣಸು ಅಗ್ಗ, ಹಣ್ಣುಗಳ ಧಾರಣೆ ಇಳಿತ
Last Updated 12 ಸೆಪ್ಟೆಂಬರ್ 2022, 16:29 IST
ಅಕ್ಷರ ಗಾತ್ರ

ಚಾಮರಾಜನಗರ: ಹಣ್ಣಿನ ಮಾರುಕಟ್ಟೆಯಲ್ಲಿ ಈಗ ಸೀತಾಫಲದ ಭರಾಟೆ. ಎಲ್ಲಿ ನೋಡಿದರಲ್ಲಿ, ಅದರಲ್ಲೂ ವಿಶೇಷವಾಗಿ ತಳ್ಳುಗಾಡಿಗಳಲ್ಲಿ ವ್ಯಾಪಾರಿಗಳು ರಾಶಿ ಹಾಕಿಕೊಂಡು ಮಾರುತ್ತಿದ್ದಾರೆ.

ಮಳೆಗಾಲದಲ್ಲಿ ಸಿಗುವ ಫಲಗಳಲ್ಲಿ ಸೀತಾಫಲವೂ ಒಂದು. ಉತ್ತಮ ಮಳೆಯಾದರೆ ಸೀತಾಫಲ ಸಿಹಿ ಇನ್ನಷ್ಟು ಹೆಚ್ಚಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ಸೀತಾಫಲ ಕಾಣಸಿಗುತ್ತಿದೆ.

ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ₹40 ಇದೆ. ಹಣ್ಣುಗಳ ಅಂಗಡಿ, ತಳ್ಳುಗಾಡಿಗಳಲ್ಲಿ ₹40ರಿಂದ ₹50 ಮಾರಾಟವಾಗುತ್ತಿದೆ.

ಜಿಲ್ಲೆಯಲ್ಲೂ ಸೀತಾಫಲ ಬೆಳೆಯುವ ರೈತರಿದ್ದಾರೆ. ನಂಜನಗೂಡು, ಮೈಸೂರು ಭಾಗಗಳಿಂದಲೂ ಜಿಲ್ಲೆಗೆ ಹಣ್ಣು ಬರುತ್ತದೆ. ತೋಟವನ್ನು ಗುತ್ತಿಗೆ ತೆಗೆದುಕೊಂಡು, ಹಣ್ಣುಗಳನ್ನು ಕಟಾವು ಮಾಡಿ ಸ್ವತಃ ಮಾರಾಟ ಮಾಡುವ ವ್ಯಾಪಾರಿಗಳೂ ಹಲವರಿದ್ದಾರೆ.

‘ಈಗ ಸೀತಾಫಲ ಹೆಚ್ಚು ಸಿಹಿ ಇರುತ್ತದೆ. ಕೆಜಿಗೆ ₹40ಕ್ಕೆ ಮಾರಾಟ ಮಾಡುತ್ತಿದ್ದೇವೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಹೇಳಿದರು.

ಸೇಬು, ಮೂಸಂಬಿ ಅಗ್ಗ: ಹಾಪ್‌ಕಾಮ್ಸ್‌ನಲ್ಲಿ ಏಲಕ್ಕಿ ಬಾಳೆ (₹80) ಪಚ್ಚೆಬಾಳೆ (₹40), ದ್ರಾಕ್ಷಿ (₹120) ಮತ್ತು ದಾಳಿಂಬೆಗಳ (₹160) ಬೆಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ.

ಸೇಬು, ಮೂಸಂಬಿ, ಕಿತ್ತಳೆ ಬೆಲೆಗಳಲ್ಲಿ ಕೆಜಿಗೆ ₹20 ಇಳಿದಿದೆ. ₹120 ಇದ್ದ ಸೇಬಿನ ಬೆಲೆ ₹100ಕ್ಕೆ ಕುಸಿದಿದೆ. ಮೂಸಂಬಿ ಬೆಲೆ ₹80ರಿಂದ ₹60ಕ್ಕೆ ತಲುಪಿದೆ. ಕಿತ್ತಳೆಯ ಧಾರಣೆಯೂ ₹100ರಿಂದ ₹80ಕ್ಕೆ ಇಳಿಕೆ ಕಂಡಿದೆ.

ಬೀನ್ಸ್‌ ತುಟ್ಟಿ: ತರಕಾರಿಗಳ ಪೈಕಿ ಬೀನ್ಸ್‌ ಬೆಲೆಯಲ್ಲಿ ಈ ವಾರ ಏರಿಕೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿ ಬೀನ್ಸ್‌ಗೆ ₹80 ಇದೆ. ಕಳೆದ ವಾರ ₹60 ಇತ್ತು.

'ಮಳೆ ಕಾರಣಕ್ಕೆ ಬೆಳೆ ನಷ್ಟವಾಗಿದ್ದು, ಕಡಿಮೆ ‌‍ಪ್ರಮಾಣದಲ್ಲಿ ಬರುತ್ತಿದೆ. ಹೀಗಾಗಿ ಬೇಡಿಕೆ ಹೆಚ್ಚಾಗಿದೆ" ಎಂದು ವ್ಯಾಪಾರಿ ಮಧು ಹೇಳಿದರು.

ಹಸಿಮೆಣಸಿನಕಾಯಿಯ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ₹80ರಿಂದ ₹30ಕ್ಕೆ ಕುಸಿದಿದೆ. ₹80 ಇದ್ದ ದಪ್ಪಮೆಣಸಿನಕಾಯಿ ಬೆಲೆ ಸೋಮವಾರ ₹60 ಇತ್ತು. ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಹೂವಿಗೆ ಬೇಡಿಕೆ ಕಡಿಮೆ

ವರಮಹಾಲಕ್ಷ್ಮಿ ಹಬ್ಬದ ನಂತರ ಹೂವುಗಳ ಧಾರಣೆ ಇಳಿಮುಖವಾಗಿ ಸಾಗಿದ್ದು, ಈ ವಾರ ಇನ್ನಷ್ಟು ಕುಸಿದಿದೆ. ದಸರಾ ಆರಂಭವಾಗುವವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

ನಗರಕ್ಕೆ ಸಮೀಪದ ಚೆನ್ನಿಪುರಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಸೋಮವಾರ ಕನಕಾಂಬರದ ಬೆಲೆ ಕೆಜಿಗೆ ₹400 ಇತ್ತು.

‘ಕಾಕಡ, ಮರ್ಲೆ ₹200ಕ್ಕೆ ಸಿಗುತ್ತಿದೆ. ಚೆಂಡು ಹೂವಿಗೆ ₹10 ಇದೆ. ಸೇವಂತಿಗೆ ₹100 ಇದೆ. ಬಟನ್‌ ಗುಲಾಬಿ ₹80ಗೆ ಮಾರಾಟವಾಗುತ್ತಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT