ಶನಿವಾರ, ಸೆಪ್ಟೆಂಬರ್ 18, 2021
21 °C
ಕೋವಿಡ್‌–19 ಕಂಟಕ: ಶ್ರಮಿಕರ ಬದುಕಿಗೆ ನೆರವಾದ ನರೇಗಾ ಯೋಜನೆ

ಚಾಮರಾಜನಗರ| ಕಾರ್ಮಿಕರ ಕಾಯಕಕ್ಕೆ ‘ಜಲಾಮೃತ’ದ ಸಿಹಿ

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಕೋವಿಡ್‌–19ರ ಕಾರಣಕ್ಕೆ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ನಿಂದ ತತ್ತರಿಸಿರುವ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಕೈ ಹಿಡಿದಿದೆ. ಯೋ‌ಜನೆ ಅಡಿಯಲ್ಲಿ ‘ಜಲಾಮೃತ ಯೋಜನೆ’ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿ ಕೈಗೆತ್ತಿಕೊಂಡಿದ್ದು, ಸಂಕಷ್ಟಕ್ಕೆ ಗುರಿಯಾಗಿದ್ದ ಕಾರ್ಮಿಕರ ಬದುಕಿಗೆ ತುಸು ನೆಮ್ಮದಿ ತಂದಿದೆ. 

ತಾಲ್ಲೂಕಿನಲ್ಲಿ 12 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ನರೇಗಾ ಯೋಜನೆಗೆ ಚಾಲನೆ ನೀಡಲಾಗಿದೆ. ಸಾವಿರಾರು ಜನರು ದುಡಿಮೆಗೆ ತೊಡಗಿದ್ದಾರೆ. ಈ ನಡುವೆ ಮುಂಗಾರು ಪೂರ್ವದಲ್ಲಿ ಸುರಿಯುತ್ತಿರುವ ಮಳೆ ಮತ್ತು ಜಲಾನಯನ ಪ್ರದೇಶಗಳ ಅಭಿವೃದ್ಧಿಗೆ ವರವಾಗುವ ನಿಟ್ಟಿನಲ್ಲಿ ‘ಜಲ ಸಾಕ್ಷರತೆ’ಗೆ ಒತ್ತು ನೀಡಲಾಗುತ್ತಿದೆ.

‘ಬೆಟ್ಟಗುಡ್ಡಗಳ ಅಂಚಿಗೆ ಹೊಂದಿಕೊಂಡ ಗ್ರಾಮಗಳ ಕೃಷಿ ಭೂಮಿಗಳಲ್ಲಿ ಅಂತರ್ಜಲ ಕುಸಿದಿದೆ. ಮುಂಗಾರಿನಲ್ಲಿ ರೈತರ ಜಮೀನುಗಳಲ್ಲಿ ಜಲ ಮರುಪೂರಣ ಕೆಲಸ ಕೈಗೆತ್ತಿಕೊಳ್ಳಲು ಮತ್ತು ಕೃಷಿ ಭೂಮಿಯನ್ನು ಅಭಿವೃದ್ಧಿ ಪಡಿಸಲು ಈಗ ಸಕಾಲ. ಈ ನಿಟ್ಟಿನಲ್ಲಿ ಜಲಾಮೃತ ಯೋಜನೆ ನೆರವಾಗಿದೆ. ಕೂಲಿ ಅರಸುವವರಿಗೆ ಉದ್ಯೋಗದ ಮೂಲವೂ ಆಗಿದೆ. ಇದರಿಂದ ಕೆರೆ, ಕಟ್ಟೆಗಳಲ್ಲಿ ನೀರಿನ ಸಮೃದ್ಧಿಗೆ ಕಾರಣವಾಗುತ್ತದೆ’ ಎಂದು ಯರಗಂಬಳ್ಳಿ ಗ್ರಾಮದ ಕಾರ್ಮಿಕರಾದ ಮಹದೇವ ಮತ್ತು ಲಕ್ಷ್ಮಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು. 

ಜಲಸಂರಕ್ಷಣೆ, ಜಲಸಾಕ್ಷರತೆ, ಜಲ ಮೂಲಗಳ ಪುನಶ್ಚೇತನ, ಹಸಿರೀಕರಣ ಮಾಡಲು ಜಲಾಮೃತ ಯೋಜನೆಯಲ್ಲಿ ಅವಕಾಶ ಇದೆ. ಕೂಲಿ ಅರಸಿ ಬರುವವರಿಗೆ ಮತ್ತು ನರೇಗಾ ಯೋಜನೆಯ ನೆರವಿನ ಫಲಾನುಭವಿಗಳು ಇದರಲ್ಲಿ ಭಾಗಿಯಾಗಬಹುದು. 

‘ಜನ ಸಾಮಾನ್ಯರಲ್ಲಿ ಸುಸ್ಥಿರ ಜಲ ಸಂಸ್ಕೃತಿಯನ್ನು ಬೆಳೆಸುವುದು, ಜಲಮೂಲಗಳ ಪುನಶ್ಚೇತನ, ಜಲ ಸಂರಕ್ಷಣಾ ಚಳವಳಿ ಯೋಜನೆಯ  ಉದ್ಧೇಶ’ ಎಂದು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಎಸ್‌.ಎಂ.ರಾಜು ‘ಪ್ರಜಾವಾಣಿ’ಗೆ ತಿಳಿಸಿದರು. 

‘ತಾಲ್ಲೂಕಿನ 12 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 28 ಕೆರೆಗಳು ಮತ್ತು ಸಣ್ಣಪುಟ್ಟ ಒರತೆಗಳ ತಾಣಗಳಿವೆ. ಭೂ ಅಭಿವೃದ್ಧಿ ಭಾಗವಾಗಿ ಅಭಿವೃದ್ಧಿ ಪಡಿಸಲು ಹೆಚ್ಚಿನ ಅವಕಾಶ ಇದೆ. ಯರಗಂಬಳ್ಳಿ ಬಳಿಯ ಹುಲಿಗೆರೆ ಬಳಿ 150 ಕಾರ್ಮಿಕರು ಗುರುವಾರದಿಂದ ಜಲಾಮೃತ ಯೋಜನೆಯಡಿ ಕಾಯಕ ನಿರ್ವಹಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಕೋವಿಡ್–19 ತಡೆ ಜಾಗೃತಿ

ಕಾಮಗಾರಿಯ ಸಂದರ್ಭದಲ್ಲೂ ಕೋವಿಡ್‌–19 ತಡೆಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ವೈಯಕ್ತಿಕ ಸ್ವಚ್ಛತೆ ಕಾಪಾಡುವುದರ ಜೊತೆಗೆ ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್‌ ಬಳಕೆ, ಧೂಮಪಾನ, ಮದ್ಯಪಾನ ಮಾಡುವುದಿಲ್ಲ ಎಂದು ಕಾರ್ಮಿಕರು ಪ್ರತಿಜ್ಞಾ ವಿಧಿ ಸ್ವೀಕರಿಸುವಂತೆ ಮಾಡಲಾಗುತ್ತಿದೆ. ಕಾರ್ಮಿಕರು ಪರಸ್ಪರ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು