ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್‌ ಐಸಿಯು: ಸುರೇಶ್‌ ಕುಮಾರ್‌

Last Updated 23 ಏಪ್ರಿಲ್ 2021, 14:59 IST
ಅಕ್ಷರ ಗಾತ್ರ

ಹನೂರು: ಚಾಮರಾಜನಗರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೇಲಿನ ಎರಡು ಮಹಡಿಗಳನ್ನು ಕೋವಿಡ್‌ ಸೋಂಕಿತರ ಚಿಕಿತ್ಸೆ ನೀಡಲು ತಯಾರು ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶುಕ್ರವಾರ ಹೇಳಿದರು.

ತಾಲ್ಲೂಕಿನ ರಾಮಾಪುರದಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಇದರಲ್ಲಿ ಸುಮಾರು 200 ಹಾಸಿಗೆಗಳಿಗೆ ಜಾಗ ಸಿಗಬಹುದು. ಅದನ್ನು ಐಸಿಯು ಕೇಂದ್ರವಾಗಿ ಮಾರ್ಪಾಡು ಮಾಡಲಾಗುವುದು’ ಎಂದು ಅವರು ಹೇಳಿದರು.

ಭಯ ಬೇಡ: ಸ್ವಲ್ಪ ದಿನಗಳ ಕಾಲ ಕೋವಿಡ್‌ ಪ್ರಕರಣ ಹೆಚ್ಚಾಗಲಿದೆ.ಇದಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜನರು ಯಾವುದೇ ಭಯ ಪಡುವ ಅವಶ್ಯಕತೆಯಿಲ್ಲ. ಇದೊಂದು ಯುದ್ಧ ಇದ್ದ ಹಾಗೆ. ಇದನ್ನು ಗೆಲ್ಲಲು ಸಾರ್ವಜನಿಕರ ಸಹಕಾರ ಅತ್ಯಂತ ಅತ್ಯಗತ್ಯ. ರಾಜ್ಯದಲ್ಲಿ ಸೋಂಕಿತರಿಗೆ ಹಾಸಿಗೆಗಳ ಕೊರತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನಲ್ಲಂತೂ ಇದರ ಪ್ರಮಾಣ ಇನ್ನು ಹೆಚ್ಚಾಗುತ್ತಿರುವುದು ಆತಂಕ ತರುತ್ತಿದೆ. ಹೀಗಾಗಿ ಬಿಬಿಎಂಪಿಯು ಸಾವಿರ ಬೆಡ್ಗಳುಳ್ಳ ಐಸಿಯು ಅನ್ನು ನಿರ್ಮಾಣ ಮಾಡಲಾಗುತ್ತಿದ್ದು ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ’ ಎಂದರು.

ಬೆಂಗಳೂರಿನ ಸಚಿವರು ಹಾಗೂ ಉನ್ನತ ಅಧಿಕಾರಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಮಾಡಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆಮ್ಲಜನಕದ ಸಮರ್ಥ ಪೂರೈಕೆಗೆ ಎಲ್ಲ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಜಿಲ್ಲಾಡಳಿತ ವತಿಯಿಂದಲೂ ಜಂಬೂ ಸಿಲಿಂಡರ್ ಖರೀದಿಗೆ ತಯಾರಿ ನಡೆಯುತ್ತಿದೆ. ಕೈಗಾರಿಕಾ ಸಚಿವರು ಸಹ ಕೈಗಾರಿಕೆಗಳಿಗೆ ಪೂರೈಸುವ ಸಿಲಿಂಡರ್ಗಳನ್ನು ಕೋವಿಡ್ ನಿಯಂತ್ರಣಕ್ಕೆ ನೀಡಲು ಸಿದ್ಧರಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಹಾಸಿಗೆಗಳು, ಆಮ್ಲಜನಕ ಕೊರತೆ ನಿವಾರಣೆಯಾಗಲಿದೆ’ ಎಂದರು.

‘ಕೋವಿಡ್ ಸೋಂಕಿತರಾಗುತ್ತಿರುವವರ ಜೊತೆಗೆ ಅದರಿಂದ ಗುಣಮುಖರಾಗುತ್ತಿರುವವ ಸಂಖ್ಯೆಯೂ ಹೆಚ್ಚಿದೆ. ಸಾವಿನ ಪ್ರಮಾಣ ಕಡಿಮೆ ಮಾಡುವುದು ನಮ್ಮ ಕರ್ತವ್ಯ. ಜಿಲ್ಲೆಯಲ್ಲಿ ಶೇ 1ಕ್ಕಿಂತಲೂ ಕಡಿಮೆಯಿದ್ದು, ಇದನ್ನು ಮುಂದಿನ ದಿನಗಳಲ್ಲೂ ಹೀಗೆ ಕಾಪಾಡಿಕೊಳ್ಳುವುದು ಅವಶ್ಯಕತೆಯಿದೆ’ ಎಂದು ಸಚಿವರು ಹೇಳಿದರು.

ವಿವಿಧ ಯೋಜನೆಗಳ ಉದ್ಘಾಟನೆ
ಹನೂರು ತಾಲ್ಲೂಕಿಗೆ ಶುಕ್ರವಾರ ಭೇಟಿ ನೀಡಿರುವ ಸಚಿವರು ವಿವಿಧ ಹಲವು ಗ್ರಾಮಗಳಲ್ಲಿ ವಿವಿಧ ಇಲಾಖೆಗಳ ವತಿಯಿಂದ ₹ 27.6 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು.

ಹನೂರು ಸಮೀಪದಹುಲಸುಗುಡ್ಡೆ ಬಳಿ ₹ 2 ಕೋಟಿ ವೆಚ್ಚದಲ್ಲಿ ಐಟಿಐ ಕಾಲೇಜು, ಪೊಲೀಸ್‌ ವಸತಿ ಗೃಹ ಬಳಿ ಜಿಲ್ಲಾ ಪಂಚಾಯಿತಿ ಮತ್ತು ಕೃಷಿ ಇಲಾಖೆ ವತಿಯಿಂದ ಆರ್.ಐ.ಡಿ.ಎಫ್-23 ಯೋನೆಯಡಿ ₹ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ರೈತ ಸಂಪರ್ಕ ಕೇಂದ್ರ, ಹನೂರು ಪಟ್ಟಣ ಚಿಂಚಳ್ಳಿ ರಸ್ತೆಯಲ್ಲಿ ₹ 3.25 ಕೋಟಿ ವೆಚ್ಚದಲ್ಲಿ ಬಿಸಿಎಂ ಹಾಸ್ಟೇಲ್, ಬಂಡಳ್ಳಿ ಗ್ರಾಮದಲ್ಲಿ ₹ 1.92 ಕೋಟಿ ವೆಚ್ಚದಲ್ಲಿ ಪಿಯು ಕಾಲೇಜು, ಲಾಜರ್ ದೊಡ್ಡಿ ಗ್ರಾಮದಲ್ಲಿ ₹ 1.90 ಕೋಟಿ ವೆಚ್ಚದ ಚೆಕ್ ಡ್ಯಾಂ ಹಾಗೂ ಬ್ಯಾರೇಜ್ ಬ್ರಿಡ್ಜ್, ಅಜ್ಜೀಪುರ ಗ್ರಾಮದಲ್ಲಿ ₹ 4.89 ಕೋಟಿ ವೆಚ್ಚದಲ್ಲಿ ವಿದ್ಯುತ್ ಸ್ಥಾವರ ಕೇಂದ್ರ, ರಾಮಾಪುರದಲ್ಲಿ ₹ 2.10 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ₹ 44 ಲಕ್ಷ ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರ ಕಟ್ಟಡ, ನಾಲ್ ರೋಡ್‍ನಲ್ಲಿ ₹ 4.25 ಕೋಟಿ ರೂ ವೆಚ್ಚದ ಸೇತುವೆ ಹಾಗೂ ಕಾಡಂಚಿನ ಪ್ರದೇಶ ನಕ್ಕುಂದಿ ಗ್ರಾಮದಲ್ಲಿ ₹ 5.89 ಕೋಟಿ ವೆಚ್ಚದಲ್ಲಿ ಪರಿಶಿಷ್ಟ ವರ್ಗಗಳ ಇಲಾಖೆ ವತಿಯಿಂದ ನಿರ್ಮಿಸಿರುವ ಸರ್ಕಾರಿ ಬುಡಕಟ್ಟು ವಸತಿ ಶಾಲೆ ಕಟ್ಟಡಗಳನ್ನು ಉದ್ಘಾಟಿಸಿದರು.

ಶಾಸಕ ಆರ್.ನರೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ಬಸವರಾಜು, ಶಿವಮ್ಮ, ಕೇಂದ್ರ ಬರ ಪರಿಹಾರ ಸಮಿತಿ ಅಧ್ಯಕ್ಷ ರಾಮಚಂದ್ರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾ , ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಹರ್ಷಲ್ ಭೋಯರ್ ನಾರಾಯಣ್‍ರಾವ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ, ತಹಶೀಲ್ದಾರ್ ನಾಗರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ಡಿವೈಎಸ್‍ಪಿ ಅನ್ಸರ್ ಅಲಿ, ಇನ್‌ಸ್ಪೆಕ್ಟರ್‌ಗಳಾದ ಸಂತೋಷ್ ಕಶ್ಯಪ್, ನಂಜುಂಡಸ್ವಾಮಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT