ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೇಕೆದಾಟು ಯೋಜನೆಯಿಂದ ಗಡಿ ಜಿಲ್ಲೆಗೆ ಅನುಕೂಲ: ಪ್ರಾಧ್ಯಾಪಕ ಡಾ.ಬಿ.ಯೋಗೇಂದ್ರ

Last Updated 26 ನವೆಂಬರ್ 2021, 16:19 IST
ಅಕ್ಷರ ಗಾತ್ರ

ಚಾಮರಾಜನಗರ: ಕಾವೇರಿ ನದಿಗೆ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸುವುದರಿಂದ ಚಾಮರಾಜನಗರ ಜಿಲ್ಲೆಗೆ ಅನುಕೂಲವಾಗಲಿದೆ ಎಂದು ಹಾಸನದ ಮಲೆನಾಡು ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ಈ.ಯೋಗೇಂದ್ರ ಅವರು ಶುಕ್ರವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಸಾಕಷ್ಟು ನದಿಗಳಿವೆ. ಹಾಗಿದ್ದರೂ, ಇಲ್ಲಿ ಜಲಾನಯನ ಪ್ರದೇಶ, ನೀರಾವರಿ ವ್ಯವಸ್ಥೆ ಅಭಿವೃದ್ಧಿಯಾಗಿಲ್ಲ. 1.91 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವ್ಯವಸಾಯ ಮಾಡಲಾಗುತ್ತಿದ್ದರೂ, 67,143 ಹೆಕ್ಟೇರ್‌ ಪ್ರದೇಶ ಮಾತ್ರ ನೀರಾವರಿಗೆ ಒಳಪಟ್ಟಿದೆ. ಇಲ್ಲಿ ಜಲಾನಯನ ಪ್ರದೇಶಗಳ ಅಭಿವೃದ್ಧಿಯಾಗದೇ ಇರುವುದರಿಂದ ಅಂತರ್ಜಲದ ಅವೈಜ್ಞಾನಿಕ ಬಳಕೆ ಹೆಚ್ಚಾಗಿ ನೀರಿನ ಸಮಸ್ಯೆ ಉದ್ಭವವಾಗಿದೆ. ವಾರ್ಷಿಕ ಸರಾಸರಿ ಮಳೆ 79.12 ಸೆಂ.ಮೀ. ಇದ್ದರೂ, ಮಳೆ ನೀರನ್ನು ಬಳಸಿಕೊಳ್ಳಲು ಜಿಲ್ಲೆಗೆ ಸಾಧ್ಯವಾಗಿಲ್ಲ’ ಎಂದರು.

‘ಜಿಲ್ಲೆಯಲ್ಲಿ ಎರಡು ಹೆಕ್ಟೇರ್‌ಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ 128 ಕೆರೆಗಳು ಅಥವಾ ಜಲಾಶಯಗಳಿವೆ. ಅವೈಜ್ಞಾನಿಕವಾಗಿ ಹೆಚ್ಚು ಅಂತರ್ಜಲವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ನೀರಿನ ಮರುಪೂರಣ ಆಗುತ್ತಿಲ್ಲ. ಹೀಗಾಗಿ ಕೆರೆಗಳು ಬತ್ತಿ ಹೋಗಿವೆ’ ಎಂದು ಹೇಳಿದರು.

‘ಜಿಲ್ಲೆಯ ರೈತರಲ್ಲಿ ಅರಿವು ಮೂಡಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಜಲಾನಯನ ಪ್ರದೇಶವನ್ನು ಅಭಿವೃದ್ಧಿ ಪಡಿಸಬೇಕು. ಜಿಲ್ಲೆಯ ಜನರು ಹಾಗೂ ಜಾನುವಾರುಗಳ ನೀರಿನ ಬೇಡಿಕೆ ಪೂರೈಸಲು ಕಾವೇರಿ ನದಿಯಲ್ಲಿ ಹೆಚ್ಚುವರಿಯಾಗಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳುವುದು ಅವಶ್ಯಕವಾಗಿದೆ. ಸುಪ್ರೀಂಕೋರ್ಟ್‌ನ ತೀರ್ಪಿನ ಪ್ರಕಾರ, ರಾಜ್ಯವು ತಮಿಳುನಾಡಿಗೆ ವಾರ್ಷಿಕವಾಗಿ 192 ಟಿಎಂಸಿ ಅಡಿಗಳಷ್ಟು ನೀರು ಹರಿಸಬೇಕು. 40 ವರ್ಷದ ಸರಾಸರಿ ತೆಗೆದುಕೊಂಡರೆ ವಾರ್ಷಿಕವಾಗಿ 272 ಟಿಎಂಸಿ ಅಡಿಗಳಷ್ಟು ನೀರು ಹರಿಯುತ್ತಿದೆ. ಅಂದರೆ 82 ಟಿಎಂಸಿ ಅಡಿ ಹೆಚ್ಚುವರಿ ನೀರು ತಮಿಳುನಾಡಿಗೆ ಹೋಗುತ್ತಿದೆ. ಇದನ್ನು ಸಂಗ್ರಹಿಸಲು 100 ಟಿಎಂಸಿ ಸಾಮರ್ಥ್ಯದ ಅಣೆಕಟ್ಟೆಯ ಅಗತ್ಯವಿದೆ. ಮೇಕೆದಾಟು ಅದಕ್ಕೆ ಸೂಕ್ತ ಜಾಗ. ಸರ್ಕಾರ ಈ ಯೋಜನೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

‘ಮೇಕೆದಾಟು ಯೋಜನೆಯ ನೀರನ್ನು ಮೇಲಕ್ಕೆತ್ತುವ ಮೂಲಕ ಜಿಲ್ಲೆಯ ಜಲಮೂಲಗಳನ್ನು ಶಾಶ್ವತವಾಗಿ ಜೀವಂತವಾಗಿಡಲು ಕಾರ್ಯಯೋಜನೆ ರೂಪಿಸಬೇಕು. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ನೇಮಿಸಿ ಕೆರೆಗಳ ಹಾಗೂ ನೀರಾವರಿ ವ್ಯವಸ್ಥೆಗಳ ಅಧ್ಯಯನ ವರದಿ ತಯಾರಿಸಲು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಮಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಿದ್ದೇನೆ’ ಎಂದು ಯೋಗೇಂದ್ರ ಹೇಳಿದರು.

ಮುಖಂಡರಾದಮನು ಶ್ಯಾನುಭೋಗ್, ಸಿದ್ದರಾಜು, ಮೂಡ್ಲುಪುರ ನಂದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT