ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಮುಂಗಾರು ಪೂರ್ವ ಮಳೆ; ಬಿತ್ತನೆ ಬಿರುಸು

ಸೂರ್ಯಕಾಂತಿ ಬಿತ್ತಲು ರೈತರ ಒಲವು; ಬಿತ್ತನೆ ಬೀಜಕ್ಕೆ ಬೇಡಿಕೆ
Last Updated 5 ಮೇ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಚೆನ್ನಾಗಿ ಸುರಿಯುತ್ತಿದ್ದು ರೈತರಲ್ಲಿ ಸಂತಸ ಮೂಡಿಸಿದೆ. ಜೊತೆಗೆ ಬಿತ್ತನೆ ಕಾರ್ಯವೂ ಶುರುವಾಗಿದೆ.

ಸೂರ್ಯಕಾಂತಿ, ಶಕ್ತಿಮಾನ ಜೋಳ, ಉದ್ದು, ಹೆಸರು, ಅಲಸಂದೆ, ನೆಲಗಡಲೆ, ಹತ್ತಿ, ಕಬ್ಬು ಬಿತ್ತನೆಗೆ ರೈತರು ಒತ್ತು ನೀಡಿದ್ದಾರೆ.

ವಾರದಿಂದೀಚೆಗೆ ಪ್ರತಿ ದಿನ ಮಳೆಯಾಗುತ್ತಿದ್ದು, ರೈತರು ಉಳುಮೆ ಮೂಲಕ ಜಮೀನು ಹದಗೊಳಿಸುವುದರಲ್ಲಿ ನಿರತರಾಗಿದ್ದಾರೆ. ರೈತ ಸಂಪರ್ಕ ಕೇಂದ್ರಗಳಿಂದ ಬೀಜಗಳನ್ನು ಖರೀದಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಮಾರ್ಚ್‌ ಮಧ್ಯಭಾಗದಿಂದ ಮಳೆಯಾಗುವುದಕ್ಕೆ ಆರಂಭವಾಗಿದೆ. ಏಪ್ರಿಲ್‌ ತಿಂಗಳ ಕೊನೆ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಈ ತಿಂಗಳ ಆರಂಭದಲ್ಲೂ ಎಲ್ಲೆಡೆಯೂ ಮಳೆಯಾಗಿದೆ. ಹಗಲು ಹೊತ್ತಿನಲ್ಲಿ ಬಿಸಿಲು ಪ್ರಖರವಾಗಿದ್ದರೂ, ಸಂಜೆ ಇಲ್ಲವೇ ರಾತ್ರಿ ಮಳೆಯಾಗುತ್ತಿದೆ.

ಮಾರ್ಚ್‌ 1ರಿಂದ ಮೇ 31ರವರೆಗಿನ ಅವಧಿಯನ್ನು ಮುಂಗಾರು ಪೂರ್ವ ಅವಧಿ ಎಂದು ಕರೆಯಲಾಗುತ್ತದೆ. ಕೃಷಿ ಇಲಾಖೆಯು ಮುಂಗಾರು ಪೂರ್ವ ಅವಧಿಯಲ್ಲಿ 56,215 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿಯನ್ನು ಹಾಕಿಕೊಂಡಿದೆ. ಇದೂವರೆಗೆ 8,220 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೊಂಚ ಹೆಚ್ಚೇ ಬಿತ್ತನೆಯಾಗಿದೆ.

‘ಮಳೆ ಚೆನ್ನಾಗಿ ಆಗುತ್ತಿರುವುದರಿಂದ ಇನ್ನು 25 ದಿನದ ಅವಧಿಯಲ್ಲಿ ರೈತರು ಮತ್ತಷ್ಟು ಬಿತ್ತನೆ ಮಾಡಲಿದ್ದು, ಗುರಿಯ ಶೇ 40ರವರೆಗೂ ಬಿತ್ತನೆಯಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಜೂನ್‌ 1ರ ಬಳಿಕ ಮುಂಗಾರು ಹಂಗಾಮು ಆರಂಭವಾಗುವುದರಿಂದ, ಮುಂಗಾರು ಪೂರ್ವ ಅವಧಿಯ ಗುರಿಯನ್ನೂ ಸೇರಿಸಿ ಮುಂಗಾರು ಹಂಗಾಮಿನ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ನಿಗದಿ ಪಡಿಸುತ್ತದೆ. ಈ ಬಾರಿ ಮುಂಗಾರು ಹಂಗಾಮಿನಲ್ಲಿ 1.27 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗುವ ಗುರಿಯನ್ನು ಇಲಾಖೆ ಹಾಕಿಕೊಂಡಿದೆ.

ಗುಂಡ್ಲುಪೇಟೆಯಲ್ಲಿ ಹೆಚ್ಚು ಗುರಿ: ಐದು ತಾಲ್ಲೂಕುಗಳ ಪೈಕಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹೆಚ್ಚು ಬಿತ್ತನೆ ಗುರಿ ಇದೆ. 31,785 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, 4,314 ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 14,555 ಹೆಕ್ಟೇರ್‌ ಗುರಿಯ ಪೈಕಿ 890 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಕೊಳ್ಳೇಗಾಲದಲ್ಲಿ 3,760 ಹೆಕ್ಟೇರ್‌ ಪೈಕಿ 1,236 ಹೆಕ್ಟೇರ್‌, ಯಳಂದೂರಿನಲ್ಲಿ 3,630 ಹೆಕ್ಟೇರ್‌ ಪೈಕಿ 1,600 ಹೆಕ್ಟೇರ್‌ ಹಾಗೂ ಹನೂರು ತಾಲ್ಲೂಕಿನಲ್ಲಿ 1,485 ಹೆಕ್ಟೇರ್‌ ಗುರಿಯ ಪೈಕಿ 180 ಹೆಕ್ಟೇರ್‌ಗಳಲ್ಲಿ ಬಿತ್ತನೆ ನಡೆದಿದೆ.

ಸೂರ್ಯಕಾಂತಿಗೆ ಹೆಚ್ಚು ಬೇಡಿಕೆ
ಜಿಲ್ಲೆಯಲ್ಲಿ ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲ್ಲೂಕುಗಳಲ್ಲಿ ಹೆಚ್ಚಾಗಿ ಸೂರ್ಯಕಾಂತಿ ಬೆಳೆಯಲಾಗುತ್ತದೆ. 13,045 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಈವರೆಗೆ 1,902 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಗುರಿ ಮೀರಿ ಬಿತ್ತನೆಯಾಗುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ಅಧಿಕಾರಿಗಳು.

‘ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆಗೆ ಹೆಚ್ಚು ಬೆಲೆ ಇರುವುದರಿಂದ ಬೇಡಿಕೆ ಜಾಸ್ತಿಯಾಗಿದೆ. ಸೂರ್ಯಕಾಂತಿ ಬೆಳೆದರೆ ಉತ್ತಮ ಆದಾಯ ಬರಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ. ಇದುವರೆಗೆ ಬೆಳೆಯದವರು ಕೂಡ ಸೂರ್ಯಕಾಂತಿ ಬಿತ್ತನೆಗೆ ಮುಂದಾಗಿದ್ದಾರೆ. ಹೀಗಾಗಿ ಸೂರ್ಯಕಾಂತಿ ಬಿತ್ತನೆ ಬೀಜಕ್ಕೆ ರೈತರಿಂದ ಹೆಚ್ಚು ಬೇಡಿಕೆ ಬರುತ್ತಿದೆ. ಬೀಜ ಪೂರೈಸುವಂತೆ ಖಾಸಗಿ ಕಂಪನಿಗಳಿಗೆ ಸೂಚಿಸಿದ್ದೇವೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಸೆಣಬಿನ ಬೀಜಕ್ಕೂ ಬೇಡಿಕೆ: ‘ಹಸಿರೆಲೆ ಗೊಬ್ಬರವಾಗುವ ಸೆಣಬು ಬೆಳೆಯಲು ರೈತರು ಆಸಕ್ತಿ ತೋರುತ್ತಿದ್ದು, ಬಿತ್ತನೆ ಬೀಜಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಅದನ್ನು ಪೂರೈಸಲೂ ಕ್ರಮ ವಹಿಸಲಾಗುತ್ತಿದ್ದು, ಇನ್ನು ಮೂರ್ನಾಲ್ಕು ದಿನಗಳಲ್ಲಿ ಬಿತ್ತನೆ ಬೀಜ ಲಭ್ಯವಾಗಲಿದೆ’ ಎಂದು ಅವರು ಹೇಳಿದರು.

***

ಮಳೆ ಬರುತ್ತಿರುವುದರಿಂದ ರೈತರು ಬಿತ್ತನೆ ಆರಂಭಿಸಿದ್ದಾರೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ನೀಡಲಾಗುತ್ತಿದೆ. ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಸಾಕಷ್ಟಿದೆ.
-ಎಚ್‌.ಟಿ.ಚಂದ್ರಕಲಾ, ಜಂಟಿ ಕೃಷಿ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT