ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಟಲು ನೋವು, ಕೆಮ್ಮು, ನೆಗಡಿ: 7 ದಿನ ಕ್ವಾರಂಟೈನ್‌, ಎಚ್ಚರದಿಂದಿರಲು ಸಲಹೆ

ಕೋವಿಡ್‌ ಸೋಂಕಿತರಲ್ಲಿ ಸೌಮ್ಯ ಲಕ್ಷಣ; ಐಸಿಯುನಲ್ಲಿ ಯಾರೂ ಇಲ್ಲ,
Last Updated 14 ಜನವರಿ 2022, 20:15 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ 3ನೇ ಅಲೆಯಲ್ಲಿ ಈವರೆಗೆ ಸೋಂಕಿತರಲ್ಲಿ ಗಂಭೀರ, ತೀವ್ರವಾದ ರೋಗ ಲಕ್ಷಣ ಕಂಡು ಬಂದಿಲ್ಲ. ಸಾಮಾನ್ಯ ಜ್ವರ, ಗಂಟಲು ಕೆರೆತ, ಕೆಮ್ಮು–ನೆಗಡಿ, ಕೆಲವು ಸಂದರ್ಭಗಳಲ್ಲಿ ಸುಸ್ತು ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಸದ್ಯ 545 ಮಂದಿ ಸೋಂಕಿತರಿದ್ದು, ಯಾರೊಬ್ಬರ ಆರೋಗ್ಯ ಸ್ಥಿತಿಯೂ ಗಂಭೀರವಾಗಿಲ್ಲ. ಮೊದಲ ಹಾಗೂ ಎರಡನೇ ಅಲೆಯಲ್ಲಿ ಕಂಡು ಬಂದಂತೆ ಶ್ವಾಸಕೋಶ ಸೋಂಕು, ಉಸಿರಾಟದ ತೊಂದರೆಯಂತಹ ಪ್ರಕರಣ ವರದಿಯಾಗಿಲ್ಲ.

ಮೂರನೇ ಅಲೆಯಲ್ಲಿ ಪ್ರತ್ಯೇಕ ವಾಸ ಅಥವಾ ಕ್ವಾರಂಟೈನ್‌ ಅವಧಿಯನ್ನು ಏಳು ದಿನಕ್ಕೆ ಇಳಿಸಲಾಗಿದ್ದು, ಐದಾರು ದಿನಗಳಲ್ಲಿ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯ ಶೀತ ಜ್ವರ, ಗಂಟಲು ನೋವಿಗೆ ಕೊಡುವ ಔಷಧಿಗಳನ್ನೇ ನೀಡಲಾಗುತ್ತಿದೆ ಎಂದು ಹೇಳುತ್ತಾರೆ ವೈದ್ಯಾಧಿಕಾರಿಗಳು.

‘ಕೋವಿಡ್‌ ಆಸ್ಪತ್ರೆಗೆ ದಾಖಲಾದವರಲ್ಲಿ ಬಹುತೇಕ ಸೋಂಕಿತರಲ್ಲಿ ಗಂಟಲು ಕೆರೆತ ಕಂಡು ಬಂದಿದೆ. ಕೆಮ್ಮು ಸ್ವಲ್ಪ ಜಾಸ್ತಿ ಇದೆ. ನೆಗಡಿಯೂ ಇದೆ. ಕೆಲವರು ಸಣ್ಣ ಪ್ರಮಾಣದಲ್ಲಿ ಜ್ವರದಿಂದ ಬಳಲಿದ್ದಾರೆ. ಸಾಮಾನ್ಯ ವಾರ್ಡ್‌ನಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಏಳು ದಿನ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತಿದೆ. ನಂತರ ಮನೆಗೆ ಕಳುಹಿಸಲಾಗುತ್ತಿದೆ. ಮೊದಲೆರಡು ಅಲೆಗಳಲ್ಲಿ ಇದ್ದ ಗಂಭೀರ ಪರಿಸ್ಥಿತಿ ಇದುವರೆಗೆ ಕಂಡು ಬಂದಿಲ್ಲ’ ಎಂದು ಜಿಲ್ಲಾ ಕೋವಿಡ್‌ ಆಸ್ಪತ್ರೆಯ ನೋಡೆಲ್‌ ಅಧಿಕಾರಿ ಡಾ.ಎಂ.ಮಹೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ 103 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರ ಆರೋಗ್ಯವೂ ಸ್ಥಿರವಾಗಿದೆ. ಉಸಿರಾಟದ ತೊಂದರೆ, ಶ್ವಾಸಕೋಶದ ಸೋಂಕು ಕಂಡು ಬಂದಿಲ್ಲ. ಯಾರಿಗೂ ಆಮ್ಲಜನಕ ನೀಡುವ ಅವಶ್ಯಕತೆಯೂ ಬಂದಿಲ್ಲ. ವೈದ್ಯಕೀಯ ಆಮ್ಲಜನಕ ಬಳಕೆಯಾಗದೆ ಉಳಿದಿದೆ. ಎಲ್ಲರಿಗೂ ಸಾಮಾನ್ಯ ಚಿಕಿತ್ಸೆಯನ್ನೇ ನೀಡಲಾಗುತ್ತಿದೆ’ ಎಂದು ಜಿಲ್ಲಾ ಸರ್ಜನ್‌ ಡಾ.ಶ್ರೀನಿವಾಸ ಮಾಹಿತಿ ನೀಡಿದರು.

ಹೊರಗಡೆಯೂ ಚಿಕಿತ್ಸೆ: ಒಂದು, ಎರಡನೇ ಅಲೆಯ ಸಂದರ್ಭದಲ್ಲಿ ಜನರಿಗೆ ಕೋವಿಡ್‌ ರೋಗ ಲಕ್ಷಣಗಳಿದ್ದರೆ ಖಾಸಗಿ ಕ್ಲಿನಿಕ್, ಖಾಸಗಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ, ಔಷಧಿ ನೀಡಲು ಹಿಂದೇಟು ಹಾಕುತ್ತಿದ್ದರು. ಈ ಬಾರಿ ಮಾಮೂಲಿ ಶೀತ, ಜ್ವರ, ಸುಸ್ತು ಕಂಡು ಬಂದಿರುವುದರಿಂದ ರೋಗಿಗಳನ್ನು ಪ‍ರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಎಚ್ಚರ ಅಗತ್ಯ: ಜಿಲ್ಲೆಯಲ್ಲಿ ಇದುವರೆಗೆ ಗಂಭೀರ ಪ್ರಕರಣ ವರದಿಯಾಗಿಲ್ಲ ಎಂಬ ಕಾರಣಕ್ಕೆ ಜನರು ಮೈಮರೆಯುವಂತಿಲ್ಲ. ಕೋವಿಡ್‌ ನಿಯಮಾವಳಿಗಳ ಉಲ್ಲಂಘನೆ ಅಪಾಯಕಾರಿಯಾಗಬಹುದು. 3ನೇ ಅಲೆಯಲ್ಲಿ ವೈರಸ್‌ ಅತ್ಯಂತ ವೇಗವಾಗಿ ಹರಡುತ್ತಿದೆ. ಹಾಗಾಗಿ, ಸದಾ ಎಚ್ಚರಿಕೆಯಿಂದ ಇರಬೇಕು ಎಂಬ ಸಲಹೆಯನ್ನು ವೈದ್ಯಾಧಿಕಾರಿಗಳು ನೀಡುತ್ತಾರೆ.

‘ಹಿಂದಿನ ಅಲೆಯಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದ ಪ್ರಾಥಮಿಕ ಅಥವಾ ದ್ವಿತೀಯ ಸಂಪರ್ಕಿತರಿಗೆ ಸೋಂಕು ತಗುಲದೇ ಇರುವ ಸಾಧ್ಯತೆ ಇತ್ತು. ಆದರೆ, ಈ ಬಾರಿ ಆಗಿಲ್ಲ. ಸಂಪರ್ಕಿತರೆಲ್ಲರಲ್ಲೂ ಕೋವಿಡ್‌ ದೃಢಪಡುತ್ತಿದೆ. ಹರಡುವಿಕೆ ವೇಗವೂ ಹೆಚ್ಚಾಗಿದೆ. ಮುಂದೆ ಪರಿಸ್ಥಿತಿ ಹೇಗೆ ಎಂದು ಹೇಳಲು ಸಾಧ್ಯವಿಲ್ಲ. ಆ ಕಾರಣಕ್ಕೆ ಎಲ್ಲರೂ ಎಚ್ಚರದಿಂದ ಇರುವುದು ಒಳಿತು’ ಎಂದು ಡಾ.ಶ್ರೀನಿವಾಸ ‘ಪ್ರಜಾವಾಣಿ’ಗೆ ತಿಳಿಸಿದರು.

ಓಮೈಕ್ರಾನ್‌ ಪ್ರಕರಣ ಇಲ್ಲ

ಜಿಲ್ಲೆಯಲ್ಲಿ ಇದುವರೆಗೆ ಒಂದೂ ಓಮೈಕ್ರಾನ್‌ ಪ್ರಕರಣ ವರದಿಯಾಗಿಲ್ಲ.

‘ಒಂದು ಪ್ರದೇಶದಲ್ಲಿ ಐದು ಪ್ರಕರಣ ವರದಿಯಾದರೆ ಆ ಪ್ರದೇಶವನ್ನು ಕ್ಲಸ್ಟರ್‌ ಎಂದು ಕರೆಯುತ್ತೇವೆ. ಅಂತಹ ಕಡೆಗಳಿಂದ ಗಂಟಲು ದ್ರವದ ಮಾದರಿಗಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗಾಗಿ ಬೆಂಗಳೂರಿನ ನಿಮ್ಹಾನ್ಸ್‌ಗೆ ಕಳುಹಿಸುತ್ತೇವೆ. ಇದುವರೆಗೆ 12 ಮಾದರಿ ಕಳುಹಿಸಿದ್ದೇವೆ. ಓಮೈಕ್ರಾನ್‌ ವೈರಸ್‌ ಸೋಂಕು ದೃಢಪಟ್ಟಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

16 ಕೋವಿಡ್‌ ಕೇಂದ್ರಗಳು: ‘ಪ್ರಕರಣಗಳು ಜಾಸ್ತಿಯಾದರೆ, ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ 16 ಕೋವಿಡ್‌ ಕೇರ್‌ ಕೇಂದ್ರ ಆರಂಭಿಸಲಾಗುತ್ತಿದೆ. ಇಲ್ಲಿ 2,025 ಹಾಸಿಗೆ ಲಭ್ಯವಿವೆ. ಆಸ್ಪತ್ರೆಗಳಲ್ಲಿ 1,152 ಹಾಸಿಗೆಗಳಿಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಜನರು ಎಚ್ಚರಿಕೆಯಿಂದ ಇರಬೇಕು. ಕೋವಿಡ್‌ ನಿಯಮ ಪಾಲನೆಯ ಜೊತೆಗೆ ಅರ್ಹರೆಲ್ಲರೂ ಲಸಿಕೆ ಪಡೆಯುವುದನ್ನು ಮರೆಯಬಾರದು.
ಡಾ.ಎಂ.ಮಹೇಶ್‌, ಜಿಲ್ಲಾಸ್ಪತ್ರೆ ನೋಡೆಲ್‌ ಅಧಿಕಾರಿ

ರೋಗ ಲಕ್ಷಣಗಳು ಸೌಮ್ಯವಾಗಿದ್ದರೂ; ವೈರಸ್‌ನ ಹರಡುವಿಕೆ ವೇಗವಾಗಿದೆ. ಹಾಗಾಗಿ, ಜನರು ಯಾವಾಗಲೂ ಜಾಗರೂಕರಾಗಿರಬೇಕು.
ಡಾ.ಶ್ರೀನಿವಾಸ, ಜಿಲ್ಲಾ ಸರ್ಜನ್‌

ಜಿಲ್ಲೆಯಲ್ಲಿ ಐಸಿಯುನಲ್ಲಿ ಯಾರೊಬ್ಬರೂ ಇಲ್ಲ. ಸೋಂಕಿತರ ಪರಿಸ್ಥಿತಿ ನೋಡಿಕೊಂಡು ಹೋಂ ಐಸೊಲೇಷನ್‌ಗೂ ಕಳುಹಿಸುತ್ತಿದ್ದೇವೆ.
ಡಾ.ಕೆ.ಎಂ.ವಿಶ್ವೇಶ್ವರಯ್ಯ, ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT