ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರಕ್ಕೆ ಸಚಿವ ಜಗದೀಶ ಶೆಟ್ಟರ್‌ ಭೇಟಿ, ಹೆಚ್ಚಿದ ನಿರೀಕ್ಷೆ

ಗುರುವಾರ ಕೈಗಾರಿಕಾ ಪ್ರದೇಶದ ಪರಿಶೀಲನೆ, ಅಧಿಕಾರಿಗಳು, ಉದ್ಯಮಿಗಳೊಂದಿಗೆ ಚರ್ಚೆ
Last Updated 6 ಜನವರಿ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್‌ ಅವರು ನಗರಕ್ಕೆ ಗುರುವಾರ ಭೇಟಿ ನೀಡಲಿದ್ದು, ಕೆಲ್ಲಂಬಳ್ಳಿ, ಬದನಗುಪ್ಪೆಯಲ್ಲಿರುವ ಕೈಗಾರಿಕಾ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೈಗಾರಿಕಾ ಸಚಿವರು ಜಿಲ್ಲೆಗೆ ನೀಡುತ್ತಿರುವ ಮೊದಲ ಭೇಟಿ ಇದು.ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಚಿವರ ಭೇಟಿ ಮಹತ್ವ ಪಡೆದಿದ್ದು, ಕೈಗಾರಿಕೆಗಳ ಅಭಿವೃದ್ಧಿಗಾಗಿ ಅಗತ್ಯ ಕ್ರಮ ಕೈಗೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಉದ್ಯಮಿಗಳು ಹಾಗೂ ಜನರಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಬದನಗುಪ್ಪೆ–ಕೆಲ್ಲಂಬಳ್ಳಿ ಪ್ರದೇಶದಲ್ಲಿ ಹಾದು ಹೋಗುವ ನಂಜನಗೂಡು ರಸ್ತೆಯ ಬದಿಯಲ್ಲಿ 1,460 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಿದೆ. 2015ರಲ್ಲೇ ಕೈಗಾರಿಕಾ ಪ್ರದೇಶದ ಉದ್ಘಾಟನೆಯಾಗಿದ್ದರೂ,ಸ್ಥಳೀಯ ಗ್ರ್ಯಾನೈಟ್‌ ಕಾರ್ಖಾನೆಗಳು ಸೇರಿದಂತೆ ಬೆರಳೆಣಿಕೆಯಷ್ಟು ಕೈಗಾರಿಕೆಗಳನ್ನು ಬಿಟ್ಟರೆ ನಿರೀಕ್ಷಿತ ಪ್ರಮಾಣದಲ್ಲಿ ಉದ್ದಿಮೆಗಳು ಬಂದಿಲ್ಲ.

ಮೂಲಸೌಕರ್ಯಗಳ ಕೊರತೆ: ಕೈಗಾರಿಕಾ ಪ್ರದೇಶ ಆರಂಭವಾಗಿ ಐದು ವರ್ಷಗಳು ಕಳೆದರೂ, ಮೂಲಸೌಕರ್ಯ ಕೊರತೆಗಳು ಕಾಡುತ್ತಿವೆ. ವಿದ್ಯುತ್‌ ವ್ಯವಸ್ಥೆ ಲಭ್ಯವಿದೆ. ಆದರೆ, ಉದ್ದಿಮೆಗೆ ಅತಿ ಅಗತ್ಯವಾದ ನೀರಿನ ಸೌಲಭ್ಯ ಇಲ್ಲ.

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಕೆ.ಜೆ.ಜಾರ್ಜ್‌ ಅವರು 2018ರ ಜುಲೈ 23ರಂದು ಜಿಲ್ಲೆಗೆ ಭೇಟಿ ನೀಡಿ ಕೈಗಾರಿಕೆಗಳ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದರು. ಮೂಲಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.ನಂಜನಗೂಡಿನಿಂದ ಪೈಪ್‌ಲೈನ್‌ ಮೂಲಕ ನೀರು ಪೂರೈಸುವ ಯೋಜನೆ ಜಾರಿಯಲ್ಲಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ನೀರು ಹರಿದಿಲ್ಲ.

‘ಕೈಗಾರಿಕಾ ಪ್ರದೇಶ ಸಾಕಷ್ಟು ವಿಶಾಲವಾಗಿದೆ. ಮೂಲಸೌಕರ್ಯಗನ್ನು ಒದಗಿಸಿದರೆ ಉದ್ದಿಮೆಗಳು ಬಂದೇ ಬರುತ್ತವೆ. ಆ ಜಾಗದಲ್ಲಿ ಭದ್ರತಾ ಸಮಸ್ಯೆ ಇದ್ದು, ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚಾಗಿದೆ. ಪ್ರದೇಶಕ್ಕೆ ಭದ್ರತೆ ಒದಗಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಪೊಲೀಸ್‌ ಹೊರ ಠಾಣೆ ಸ್ಥಾಪಿಸಿದರೆ ಅನುಕೂಲ’ ಎಂದು ಜಿಲ್ಲಾ ಸಣ್ಣ ಕೈಗಾರಿಕಾ ಸಂಘಗಳ ಪ್ರತಿನಿಧಿ ಜಯಸಿಂಹ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೈಪ‍್‌ಲೈನ್‌ ಕಾಮಗಾರಿಗೆ ಕೆಲವು ಕಡೆಗಳಲ್ಲಿ ತೊಂದರೆಯಾಯಿತು. ರಾಷ್ಟ್ರೀಯ ಹೆದ್ದಾರಿಯನ್ನು ದಾಟಬೇಕಾಗಿತ್ತು. ಬದನಗುಪ್ಪೆ ಬಳಿ ಶಾಲೆಯ ಕಾಂ‍ಪೌಂಡ್‌ ತೆರೆವುಗೊಳಿಸಬೇಕಾಗಿತ್ತು. ಹಾಗಾಗಿ ಸ್ವಲ್ಪ ವಿಳಂಬವಾಗಿತ್ತು. ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಈಗ ಎಲ್ಲ ಸಮಸ್ಯೆಯೂ ಬಗೆಹರಿದಿದೆ. ಇನ್ನು 100 ಮೀಟರ್‌ ಕೆಲಸ ಬಾಕಿ ಇದ್ದು ಶೀಘ್ರದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ’ ಎಂದು ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಸಿ.ಚೌಡಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಎರಡು ಮೂರು ಕಂಪನಿಗಳು ಜಿಲ್ಲೆಯಲ್ಲಿ ಘಟಕ ಸ್ಥಾಪಿಸಲು ಮುಂದೆ ಬಂದಿವೆ. ವೈದ್ಯಕೀಯ, ರಕ್ಷಣಾ, ಗ್ರಾಹಕ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ತಯಾರಿಸುವ ಸಂಸ್ಥೆಯೊಂದು ಘಟಕ ಸ್ಥಾಪಿಸಲು ಉತ್ಸುಕತೆ ತೋರಿದೆ. ಮೈಸೂರಿನ ಕೆ.ಎಸ್‌.ಟೆಕ್ನಾಲಜಿಸ್‌ ಸಂಸ್ಥೆ ಏಳು ಎಕರೆ ಜಾಗವನ್ನು ಖರೀದಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಕೈಗಾರಿಗಳು ಬರಲಿವೆ’ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಉದ್ಯಮಿಗಳು, ಜನರಲ್ಲಿ ಆಶಾಭಾವನೆ

ನವೆಂಬರ್‌ ತಿಂಗಳ 23ರಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ನೇತೃತ್ವದಲ್ಲಿಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಏಕಗವಾಕ್ಷಿ ಸಮಿತಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿತ್ತು.

ಜಿಲ್ಲೆಯಲ್ಲಿ ತಯಾರಾಗುವ ಉತ್ಪನ್ನಗಳನ್ನು ರಫ್ತು ಮಾಡಲು ಇರುವ ಅವಕಾಶಗಳು, ಉತ್ತೇಜನ ಹಾಗೂ ರಫ್ತುದಾರರ ಮಾಹಿತಿಯುಳ್ಳ ಸಮಗ್ರ ಜಿಲ್ಲಾ ಕ್ರಿಯಾ ಯೋಜನೆಯನ್ನು ತಯಾರಿಸುವಂತೆ ಜಿಲ್ಲಾಧಿಕಾರಿ ಅವರು ಆ ಸಭೆಯಲ್ಲಿ ಸೂಚನೆಯನ್ನೂ ನೀಡಿದ್ದರು.

ಈ ಸಭೆ ನಡೆದು ಒಂದೂವರೆ ತಿಂಗಳಲ್ಲಿ ಕೈಗಾರಿಕಾ ಸಚಿವರು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಜನರಲ್ಲಿ ಹಾಗೂ ಉದ್ದಿಮೆದಾರರಲ್ಲಿ ಆಶಾಭಾವನೆ ಮೂಡಿಸಿದೆ.

‘ಜಿಲ್ಲಾಧಿಕಾರಿಗಳ ಸೂಚನೆಯಂತೆ ನಾವು ವರದಿ ಸಿದ್ಧಪಡಿಸಿ ಸಲ್ಲಿಸಿದ್ದೆವು. ಜಿಲ್ಲಾಧಿಕಾರಿ ಅವರು ಅದನ್ನು ಸರ್ಕಾರಕ್ಕೆ ರವಾನಿಸಿದ್ದು, ಕೈಗಾರಿಕಾ ಪ್ರದೇಶದ ಪರಿಶೀಲನೆ ಹಾಗೂ ಕೈಗಾರಿಕೆಗಳ ಅಭಿವೃದ್ಧಿ ಬಗ್ಗೆ ಅಧಿಕಾರಿಗಳು ಹಾಗೂ ಉದ್ಯಮಿಗಳೊಂದಿಗೆ ಚರ್ಚಿಸಲು ಸಚಿವರು ಬರುತ್ತಿದ್ದಾರೆ’ ಎಂದು ಚೌಡಯ್ಯ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT