ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು, ವರ್ತಕರ ಜೊತೆ ಸಮಾಲೋಚನೆ

ಗುಂಡ್ಲುಪೇಟೆ, ಚಾಮರಾಜನಗರ ಎಪಿಎಂಸಿಗೆ ಸಚಿವ ಸೋಮಶೇಖರ್‌ ಭೇಟಿ
Last Updated 22 ಏಪ್ರಿಲ್ 2020, 15:42 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ: ಸಹಕಾರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಎಸ್.ಟಿ.ಸೋಮಶೇಖರ್ ಅವರು ಬುಧವಾರ ಗುಂಡ್ಲುಪೇಟೆ ಮತ್ತು ಚಾಮರಾಜನಗರ ಎಪಿಎಂಸಿಗಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ವಹಿವಾಟು ಪರಿಶೀಲನೆ ನಡೆಸಿದರು.

ಕೇರಳ ಹಾಗೂ ತಮಿಳುನಾಡಿಗೆ ಉತ್ಪನ್ನಗಳ ಸಾಗಾಣಿಕೆ ವೇಳೆ ತೊಂದರೆ ನೀಡದಂತೆ ಈಗಾಗಲೇ ಸೂಚಿಸಲಾಗಿದೆ. ಒಂದು ವೇಳೆ ಸಮಸ್ಯೆಯಾದರೆ ತಕ್ಷಣವೇ ಗಮನಕ್ಕೆ ತನ್ನಿ ಎಂದು ಸಚಿವರು ಗುಂಡ್ಲುಪೇಟೆಯ ರೈತರು ಹಾಗೂ ವರ್ತಕರಿಗೆ ಮನವಿ ಮಾಡಿದರು.

ಮಾರುಕಟ್ಟೆಯಲ್ಲಿ ತರಕಾರಿ ಉತ್ಪನ್ನಗಳ ಮಾರಾಟ ಸ್ಥಿತಿಗತಿಗಳ ಬಗ್ಗೆ ಪ್ರತಿ ಮಳಿಗೆಗೆ ಭೇಟಿ ಕೊಟ್ಟು ಮಾಹಿತಿ ಪಡೆದರು. ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದರು.

‘ರೈತರ ಬೆಳೆಗೆ ಉತ್ತಮ ದರ ಸಿಗುತ್ತಿಲ್ಲ ಎಂಬ ದೂರುಗಳು ಬಂದಿರುವುದರಿಂದ ಬೇಕಾಬಿಟ್ಟಿ ದರಗಳ ಮಾರಾಟಕ್ಕೆ ಕಡಿವಾಣ ಬೀಳಬೇಕು. ರೈತರಿಗೆ ಉತ್ತಮ ದರ ಸಿಗಬೇಕು. ಅ ದರದ ಮೇಲೆ ಹಾಗೂ ಮಾರಾಟ ದರದ ಮೇಲೂ ನಿಗಾ ವಹಿಸಬೇಕು. ರೈತರಿಗೆ ನಷ್ಟವಾಗಿ ಮಧ್ಯವರ್ತಿಗಳಿಗೆ ಲಾಭವಾಗುವಂತೆ ಮಾಡುವುದು ಸರಿಯಲ್ಲ. ಇದಕ್ಕೆ ಎಪಿಎಂಸಿ ಯಿಂದ ಕಡಿವಾಣ ಬೀಳಬೇಕು. ಈ ಬಗ್ಗೆ ಕೂಡಲೇ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳ ಮೂಲಕ ಆದೇಶ ಹೊರಡಿಸಲಾಗುವುದು. ಹಾಗೆಯೇ ಕೃಷಿ ಉತ್ಪನ್ನ ಮಾರುಕಟ್ಟೆಗೆ ಶೀತಲೀಕರಣ ವ್ಯವಸ್ಥೆ ಮಂಜೂರು ಮಾಡಲಾಗುವುದು’ ಎಂದು ಅವರು ತಿಳಿಸಿದರು.

ಬೆಲ್ಲ ಮಾರಾಟ ಹೇಗಿದೆ?: ಚಾಮರಾಜನಗರದ ಎಪಿಎಂಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತರಕಾರಿಗಳ ಕೊಳ್ಳುವಿಕೆಯಲ್ಲಿ ತೊಂದರೆಯಾಗುತ್ತಿದೆಯೇ ಎಂದು ವಿಚಾರಿಸಿದರು.

ರೈತರು ಹಾಗೂ ವರ್ತಕರ ಬಳಿ ತೆರಳಿ ವಹಿವಾಟಿನ ಬಗ್ಗೆ ಮಾಹಿತಿ ಪಡೆದ ಸಚಿವರು ಮಾರುಕಟ್ಟೆಗೆ ಉತ್ಪನ್ನಗಳ ಸಾಗಾಟ ವೇಳೆ ಚೆಕ್‌ಪೋಸ್ಟ್ ಇಲ್ಲವೇ ಪೊಲೀಸರಿಂದ ತೊಂದರೆಯಾದರೇ ನನ್ನ ಗಮನಕ್ಕೆ ತಂದರೆ ಕ್ರಮ ವಹಿಸುತ್ತೇನೆ ಎಂದರು.

ನಂತರ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದರು.ಎಪಿಎಂಸಿ ಆವರಣದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅಲ್ಲದೆ, ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳನ್ನು ರೈತರು ಹಾಗೂ ವರ್ತಕರಿಗೆ ಕಡ್ಡಾಯವಾಗಿ ವಿತರಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಸಿ.ಎಸ್.ನಿರಂಜನಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್, ಚಾಮರಾಜನಗರ ಎಪಿಎಂಸಿ. ಅಧ್ಯಕ್ಷ ಶಂಕರಮೂರ್ತಿ, ಸದಸ್ಯ ಬಿ.ಕೆ.ರವಿಕುಮಾರ್ ನಿರ್ದೇಶಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT