ಭಾನುವಾರ, ಜೂನ್ 20, 2021
24 °C
ಎರಡು ದಿನ ಚಾಮರಾಜನಗರ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿದ ಸಚಿವ ಸುರೇಶ್‌ಕುಮಾರ್

ಪಿಪಿಇ ಕಿಟ್ ಧರಿಸಿ ರೋಗಿಗಳೊಂದಿಗೆ ಮಾತುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ಅವರು ಬುಧವಾರ ಪಿಪಿಇ ಕಿಟ್ ಧರಿಸಿ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್‌ ರೋಗಿಗಳನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.

’ಭಯವನ್ನು ಬಿಟ್ಟುಬಿಡಿ, ನಾನೂ ಕೋವಿಡ್ ಗೆದ್ದು ಬಂದಿದ್ದೇನೆ. ನಿಮಗೆ ಏನೂ ಆಗಲ್ಲ’ ಎಂದು ಅವರು ರೋಗಿಗಳಿಗೆ ಧೈರ್ಯ ತುಂಬಿದರು.

ಜಿಲ್ಲಾಸ್ಪತ್ರೆಯಲ್ಲಿ 167 ಕೋವಿಡ್ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು, 26 ಜನ ವೆಂಟಿಲೇಟರ್‌ನಲ್ಲಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 47 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವರು ಪ್ರತಿಯೊಬ್ಬರ ಬಳಿ ತೆರಳಿ ಸಮಸ್ಯೆಗಳನ್ನು ಆಲಿಸಿದರು. ಕೆಲವು ಸೋಂಕಿತರ ಆಮ್ಲಜನಕ ಮಟ್ಟವನ್ನು ತಾವೇ ಪರೀಕ್ಷಿಸಿದರು.

ಬೆಳಿಗ್ಗೆಯಷ್ಟೇ ಮಗುವಿಗೆ ಜನ್ಮ ನೀಡಿದ್ದ ಕೊರೊನಾ ಸೋಂಕಿತ ಮಹಿಳೆಯನ್ನು ಭೇಟಿ ಮಾಡಿದ ಸಚಿವರು, ‘ಮಗುವಿಗೆ ಒಳ್ಳೆಯ ಹೆಸರಿಡಿ’ ಎಂದರು.

ಆಸ್ಪತ್ರೆಯ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲ ಎಂಬ ವಿಷಯವನ್ನು ಈ ವೇಳೆ ಕೆಲವು ರೋಗಿಗಳು ಸಚಿವರ ಗಮನಕ್ಕೆ ತಂದರು. ‘ಕೂಡಲೇ ಸ್ವಚ್ಛಗೊಳಿಸಬೇಕು, ನಿತ್ಯ ನೈರ್ಮಲ್ಯ ಕಾಪಾಡಬೇಕು’ ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.

ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ‘ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತಪಟ್ಟ ಘಟನೆ ಅತ್ಯಂತ ವೇದನೆ ತರಿಸಿದೆ. ಸರ್ಕಾರವು ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರನ್ನು ನೇಮಕ ಮಾಡಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಇದೊಂದು ಎಚ್ಚರಿಕೆಯ ಗಂಟೆಯಾಗಬೇಕು’ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಚಿವರು ಬುಧವಾರ ಮತ್ತು ಗುರುವಾರ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿ ಕೋವಿಡ್ ನಿಯಂತ್ರಣ ಕುರಿತು ನಿರಂತರ ಸಭೆಗಳನ್ನು ನಡೆಸಲಿದ್ದಾರೆ.

ವಿಚಾರಣಾ ಆಯೋಗದ ಮುಂದೆ ಹೇಳಿಕೆ ನೀಡಲು ಸಲಹೆ: ‘ಮೈಸೂರು ಮತ್ತು ಚಾಮರಾಜನಗರದ ಜಿಲ್ಲಾಧಿಕಾರಿಗಳು ಸಾರ್ವಜನಿಕವಾಗಿ ಹೇಳಿಕೆ ನೀಡುವುದಕ್ಕಿಂತ ವಿಚಾರಣಾ ಆಯೋಗದ ಮುಂದೆ ಹೇಳಿಕೆ ನೀಡುವುದು ಸೂಕ್ತ ಎಂದು ಮುಖ್ಯ ಕಾರ್ಯದರ್ಶಿಗೆ ಹೇಳಿದ್ದೇನೆ’ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲಿನ ಎಲ್ಲ ಬೆಡ್‌ಗಳೂ ಭರ್ತಿಯಾಗಿವೆ. ಇನ್ನೆರಡು ದಿನಗಳಲ್ಲಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು