ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಬಂದ್‌: ಚಾಮರಾಜನಗರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

Last Updated 27 ಸೆಪ್ಟೆಂಬರ್ 2021, 11:18 IST
ಅಕ್ಷರ ಗಾತ್ರ

ಚಾಮರಾಜನಗರ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರೀಯ ಸಂಯುಕ್ತ ಕಿಸಾನ್‌ ಮೋರ್ಚಾ ಕರೆ ನೀಡಿದ್ದ ಸೋಮವಾರದ ಭಾರತ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಲಿಲ್ಲ. ಸಾಂಕೇತಿಕ ಪ್ರತಿಭಟನೆಗಷ್ಟೇ ಬಂದ್‌ ಸೀಮಿತವಾಗಿತ್ತು. ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆಯಲ್ಲಿ ಜನರು ಮಿಶ್ರವಾಗಿ ಪ್ರತಿಕ್ರಿಯಿಸಿದರು.

ಚಾಮರಾಜನಗರದಲ್ಲಿ ರೈತ ಸಂಘಟನೆಗಳು, ಕನ್ನಡ, ಕಾರ್ಮಿಕ ಸಂಘಟನೆಗಳು, ಬಿಎಸ್‌ಪಿ, ಎಸ್‌ಡಿಪಿಐ ಪಕ್ಷಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರೆ, ವರ್ತಕರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಕೆಲವು ಮಳಿಗೆಗಳ ಮಾಲೀಕರಷ್ಟೇ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಕೊಂಡು ಬಂದ್‌ ಬೆಂಬಲಿಸಿದರು. ಬಸ್‌ಗಳು, ಆಟೊಗಳು ಸೇರಿದಂತೆ ವಾಹನಗಳ ಸಂಚಾರ ಎಂದಿನಂತೆ ಇತ್ತು.

ಸರ್ಕಾರಿ ಕಚೇರಿಗಳು, ಬ್ಯಾಂಕುಗಳು, ಶಾಲಾ ಕಾಲೇಜುಗಳು, ಆಸ್ಪತ್ರೆ, ಕ್ಲಿನಿಕ್‌ಗಳು ತೆರೆದಿದ್ದವು. ಸಾರ್ವಜನಿಕರ ಓಡಾಟ ಸಹಜವಾಗಿದ್ದರೂ, ಸಂಖ್ಯೆ ಕಡಿಮೆ ಇತ್ತು.ಕೊಳ್ಳೇಗಾಲದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್‌ ಆಗಿದ್ದರೂ, ವಾಹನಗಳ ಓಟಾಟಕ್ಕೆ ಅಡಚಣೆಯಾಗಲಿಲ್ಲ.

ಭಾರತಬಂದ್‌ ಅಂಗವಾಗಿ ರೈತ, ಕನ್ನಡ, ಕಾರ್ಮಿಕ ಸಂಘಟನೆಗಳ, ಬಿಎಸ್‌ಪಿ ಹಾಗೂ ಎಸ್‌ಡಿಪಿಐನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೋಮವಾರ ಚಾಮರಾಜನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು
ಭಾರತಬಂದ್‌ ಅಂಗವಾಗಿ ರೈತ, ಕನ್ನಡ, ಕಾರ್ಮಿಕ ಸಂಘಟನೆಗಳ, ಬಿಎಸ್‌ಪಿ ಹಾಗೂ ಎಸ್‌ಡಿಪಿಐನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೋಮವಾರ ಚಾಮರಾಜನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು

ಬಸ್‌ಗಳ ಸಂಚಾರ: ಜಿಲ್ಲೆಯಾದ್ಯಂತ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಪ್ರಯಾಣಿಕರಿಗೆ ಸೇವೆ ಒದಗಿಸಿದವು. ಬಸ್‌ಗಳು ಹಾಗೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು.

‘ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಮಧ್ಯಾಹ್ನದವರೆಗೆ ಬಸ್‌ಗಳು ಸಂಚರಿಸಲಿಲ್ಲ. ಚಾಮರಾಜನಗರದಿಂದ ಬೆಳಿಗ್ಗೆಯಿಂದಲೇ ಎಲ್ಲ ಕಡೆಗಳಿಗೂ ಬಸ್‌ ಸಂಚಾರ ಇತ್ತು. ಸೋಮವಾರ ನಮ್ಮ ವ್ಯಾಪ್ತಿಯಲ್ಲಿ 221 ಬಸ್‌ಗಳು ಸಂಚಾರ ನಡೆಸಿವೆ’ ಎಂದು ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರದ ವಿರುದ್ಧ ಆಕ್ರೋಶ: ಬಂದ್‌ ಅಂಗವಾಗಿ ಜಿಲ್ಲೆಯ ರೈತ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು, ಬಿಎಸ್‌ಪಿ, ಎಸ್‌ಡಿಪಿಐ ಕಾರ್ಯಕರ್ತರುಸೋಮವಾರ ಮುಂಜಾನೆಯೇ ನಗರದ ಭುವನೇಶ್ವರಿ ವೃತ್ತ, ಕೆಎಸ್‌ಆರ್‌ಟಿಸಿ ನಿಲ್ದಾಣ ಹಾಗೂ ಗುಂಡ್ಲುಪೇಟೆ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.ಟೈರ್‌ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಪ್ರತಿಭಟನಕಾರರು ನಗರದ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಜೋಡಿರಸ್ತೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬೈಕ್ ರ‍್ಯಾಲಿ ನಡೆಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ‘ಕೇಂದ್ರ ಸರ್ಕಾರ ರೈತಪರ ಕೆಲಸ ಮಾಡುತ್ತಿಲ್ಲ. ರೈತ, ದಲಿತ, ಕಾರ್ಮಿಕ ವಿರೋಧಿ ನೀತಿಗಳು ಜಾರಿಗೆ ತಂದು, ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಿ ಬಂಡವಾಳ ಶಾಹಿಗಳ ಗುಲಾಮಗಿರಿ ಆಡಳಿತ ನಡೆಸುತ್ತಿದೆ’ ಎಂದು ದೂರಿದರು.

‘ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಣ ಹಾಗೂ ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೆ ತರುವಲ್ಲಿ ವಿಫಲವಾಗಿದೆ. ಚುನಾವಣೆ ಸಂದರ್ಭದಲ್ಲಿ ಮೋದಿಯವರು ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೆ ತಂದು ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದರು. ಆದರೆ, ಈಗ ಆದಾಯ ದ್ವಿಗುಣವಾಗುತ್ತಿರುವುದು ಅದಾನಿ, ಅಂಬಾನಿ ಹಾಗೂ ಬಂಡವಾಳ ಶಾಹಿಗಳದ್ದೇ ವಿನಾ ರೈತರದ್ದಲ್ಲ’ ಎಂದರು.

ಪಟೇಲ್ ಶಿವಮೂರ್ತಿ, ನಿಜಧ್ವನಿಗೋವಿಂದರಾಜು, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್ ಅಹಮ್ಮದ್, ಉಪಾಧ್ಯಕ್ಷ ಸಿ.ಎಸ್.ಸೈಯದ್ ಆರೀಫ್, ಪ್ರಧಾನ ಕಾರ್ಯದರ್ಶಿ ಎಂ.ಮಹೇಶ್, ಮರಿಯಾಲ ಮಹೇಶ್, ಕಮರವಾಡಿ ಶಿವಸ್ವಾಮಿ, ಬನ್ನೂರು ಕೃಷ್ಣ, ಹೆಗ್ಗೋಠಾರ ಶಿವಸ್ವಾಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT