ಬುಧವಾರ, ಜನವರಿ 20, 2021
16 °C

ಕೊಳ್ಳೇಗಾಲದಲ್ಲಿ ಬಿಎಸ್‌ಪಿ ಕಾರ್ಯಕರ್ತರ ಮೇಲೆ ಎನ್‌.ಮಹೇಶ್‌ ಬೆಂಬಲಿಗರಿಂದ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಶಾಸಕ ಎನ್.ಮಹೇಶ್ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ ಬಿಎಸ್‌ಪಿಯ ಮೂವರು ಕಾರ್ಯಕರ್ತರ ಮೇಲೆ ಶಾಸಕರ ಬೆಂಬಲಿಗರು ಬುಧವಾರ ಸಂಜೆ ಹಲ್ಲೆ ನಡೆಸಿದ್ದಾರೆ. 

ಬಿಎಸ್‌ಪಿ ಟೌನ್ ಉಪಾಧ್ಯಕ್ಷ ಹನುಮಂತು, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಕಾರ್ಯಕರ್ತ ಚೈನಾರಾಂ ಕಾಪಡಿ ಮೇಲೆ ಹಲ್ಲೆ ನಡೆಸಲಾಗಿದೆ. ಎನ್.ಮಹೇಶ್ ಬೆಂಬಲಿಗರು, ನಗರಸಭೆ ಸದಸ್ಯ ನಾಸೀರ್ ಶರೀಫ್ ಮತ್ತು ಜಾಕಾವುಲ್ಲಾ ಅವರು ಹಲ್ಲೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. 

ಈ ಸಂಬಂಧ ಠಾಣೆಯಲ್ಲಿ ರಾತ್ರಿವರೆಗೂ ಪ್ರಕರಣ ದಾಖಲಾಗಿರಲಿಲ್ಲ. ಪ್ರತಿಕ್ರಿಯೆಗಾಗಿ ಶಾಸಕರಿಗೆ ಕರೆ ಮಾಡಿದರೂ, ಸಂಪರ್ಕಕ್ಕೆ ಸಿಗಲಿಲ್ಲ. 

ಬಿಎಸ್‌ಪಿಯ ಕ್ಷೇತ್ರ ಅಧ್ಯಕ್ಷ ಎಸ್.ರಾಜಶೇಖರ್ ಮೂರ್ತಿ ಹಾಗೂ ಹನುಮಂತು, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಕಾರ್ಯಕರ್ತ ಚೈನಾರಾಂ ಕಾಪಡಿ ಅವರು ಬುಧವಾರ ಬೆಳಿಗ್ಗೆ ಪತ್ರಿಕಾಗೋಷ್ಠಿ ನಡೆಸಿ ಶಾಸಕ ಎನ್.ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದರು. 

ಇದರಿಂದ ಕೋಪಗೊಂಡ, ಶಾಸಕರ ಬೆಂಬಲಿಗರಾದ ನಾಸೀರ್ ಶರೀಫ್ ಮತ್ತು ಜಾಕಾವುಲ್ಲಾ ಬುಧವಾರ ಸಂಜೆ ಚೈನಾರಾಂ ಕಾಪಡಿ ಅವರ ರಾಘವೇಂದ್ರ ಬ್ಯಾಂಕರ್ ಮಳಿಗೆಗೆ ಹೋಗಿ ಹಲ್ಲೆ ಮಾಡಿದ್ದಾರೆ.

‘ನಿಮಗೆ ಪತ್ರಿಕಾಗೋಷ್ಠಿ ನಡೆಸಲು ಅನುಮತಿ ನೀಡಿದ್ದು ಯಾರು’ ಎಂದು ನಾಸೀರ್ ಶರೀಫ್ ಮತ್ತು ಜಾಕಾವುಲ್ಲಾ ಅವರು ಜಗಳವಾಡುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಗಾಯಾಳುಗಳು ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 

ಘಟನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ರಾಜಶೇಖರ ಮೂರ್ತಿ ಅವರು, ‘ಎನ್‌.ಮಹೇಶ್‌ ಬೆಂಬಲಿಗರು ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇದು ಅತ್ಯಂತ ಖಂಡನೀಯ. ಪಕ್ಷದ ಮುಂದಿನ ನಡೆಯಲು ರಾಜ್ಯ ಘಟಕದ ಅಧ್ಯಕ್ಷರು ತೀರ್ಮಾನಿಸುತ್ತಾರೆ’ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು