ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಮನೆ ಬಿಟ್ಟು ಬಂದಿದ್ದ ಮಹಿಳೆ, ಮಗು ರಕ್ಷಣೆ

ಪ್ರಾಧಿಕಾರದ ಅಧಿಕಾರಿ, ಸಿಬ್ಬಂದಿ ಮಾದರಿ ಕೆಲಸ
Last Updated 12 ಅಕ್ಟೋಬರ್ 2020, 13:39 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಮನೆಯಲ್ಲಿ ಯಾರಿಗೂ ಮಾಹಿತಿ ನೀಡದೆ ಮೂರು ವರ್ಷದ ಮಗಳೊಂದಿಗೆ ಮನೆ ಬಿಟ್ಟು ಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ಮೈಸೂರಿನ ಮಹಿಳೆಯೊಬ್ಬರನ್ನು ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿ ಪತ್ತೆ ಹಚ್ಚಿಮನೆಯವರಿಗೆ ಒಪ್ಪಿಸಿದ್ದಾರೆ.

ಭಾನುವಾರ ಈ ಪ್ರಕರಣ ನಡೆದಿದೆ. ನಡೆದಿರುವ ಘಟನೆಯನ್ನು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಾಲಯದ ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಮೈಸೂರಿನ ಹಾರೋಹಳ್ಳಿ ಗ್ರಾಮದ 25 ವರ್ಷದ ಮಹಿಳೆ ಶನಿವಾರ (ಅ.10) ಮಗಳೊಂದಿಗೆ ಬೆಟ್ಟಕ್ಕೆ ಬಂದಿದ್ದರು. ಮನೆಯಲ್ಲಿ ಯಾರಿಗೂ ವಿಷಯ ತಿಳಿಸಿರಲಿಲ್ಲ. ಬೆಟ್ಟದ ಖಾಸಗಿ ಹೋಟೆಲ್‌ನಲ್ಲಿ ರಾತ್ರಿ ತಂಗಿದ್ದರು.

ಮಹಿಳೆಯನ್ನು ಕಾಣದೇ ಗಾಬರಿಗೊಂಡ ಮನೆಯವರು, ಸಂಬಂಧಿಕರು ಪೊಲೀಸರಿಗೆ ದೂರು ನೀಡುವ ನಿರ್ಣಯ ಕೈಗೊಂಡಿದ್ದರು. ಭಾನುವಾರ ಬೆಳಿಗ್ಗೆ ಮನೆಗೆ ಕರೆ ಮಾಡಿದ್ದ ಮಹಿಳೆ, ಮಹದೇಶ್ವರ ಬೆಟ್ಟಕ್ಕೆ ಬಂದಿರುವುದಾಗಿ, ಸುರಕ್ಷಿತವಾಗಿದ್ದು ಯಾರೂ ಹುಡುಕುವುದಕ್ಕೆ ಪ್ರಯತ್ನಿಸಬಾರದು ಎಂದು ಹೇಳಿ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದರು.

ಮಹಿಳೆಯ ಮೈದುನ, ವಾಣಿಜ್ಯ ತೆರಿಗೆಯ ಹೆಚ್ಚುವರಿ ಕಮಿಷನರ್‌ ಆಗಿ ನಿವತ್ತರಾಗಿರುವ ಬಸವಣ್ಣ ಅವರಿಗೆ ಈ ವಿಚಾರವನ್ನು ತಿಳಿಸಿದ್ದರು. ತಕ್ಷಣ ಬಸವಣ್ಣ ಅವರು, ತಮ್ಮ ಸ್ನೇಹಿತ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿ ಹುಡುಕಲು ಸಹಾಯ ಮಾಡುವಂತೆ ಕೇಳಿಕೊಂಡರು.

ಮಹಿಳೆ ಮತ್ತು ಮಗುವಿನ ಫೋಟೊ ತರಿಸಿಕೊಂಡ ಜಯವಿಭವ ಸ್ವಾಮಿ ಅವರು, ಪ್ರಾಧಿಕಾರದ ಅಧಿಕಾರಿ ಹಾಗೂ ನೌಕರರ ವಾಟ್ಸ್‌ಆ್ಯಪ್‌ ಗ್ರೂಪ‍್‌ಗೆ ಹಾಕಿ ಹುಡುಕಲು ತಿಳಿಸಿದರು. ಅಲ್ಲದೇ ಸ್ಥಳೀಯ ಠಾಣೆಗೂ ಸುದ್ದಿ ಮುಟ್ಟಿಸಿದರು.

ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜು ಸೇರಿದಂತೆ ಭದ್ರತಾ ಮೇಲ್ವಿಚಾರಕರು ಹಾಗೂ 40 ಮಂದಿ ಭದ್ರತಾ ಸಿಬ್ಬಂದಿ ಕೂಡ ಹುಡುಕಾಟದಲ್ಲಿ ತೊಡಗಿದರು.

ಗೋಪುರದ ಬಳಿ ಪತ್ತೆ: ‘ದೇವಸ್ಥಾನದ ರಾಜಗೋಪುರದ ಮುಂಭಾಗದ ರಸ್ತೆಯಲ್ಲಿದ್ದ ತಾಯಿ ಮತ್ತು ಮಗಳನ್ನು ಬಸವರಾಜು ಅವರು ಗುರುತಿಸಿದರು. ನಂತರ ಮನೆಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿ, ಅಧಿಕಾರಿಗಳು ಇಬ್ಬರಿಗೂ ಪ್ರಾಧಿಕಾರದ ಗಿರಿದರ್ಶಿನಿ ವಸತಿಗೃಹದಲ್ಲಿ ಆಶ್ರಯ, ಊಟ ನೀಡಿ ಕೌನ್ಸೆಲಿಂಗ್‌ ಕೂಡ ಮಾಡಲಾಯಿತು’ ಎಂದು ಜಯವಿಭವಸ್ವಾಮಿ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

‘ಮಹಿಳೆಯ ಸಂಬಂಧಿಕರು ಭಾನುವಾರ ಮಧ್ಯಾಹ್ನ ಬೆಟ್ಟಕ್ಕೆ ಬಂದು ಇಬ್ಬರನ್ನೂ ಕರೆದೊಯ್ದಿದ್ದಾರೆ’ ಎಂದು ಜಯವಿಭವ ಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT