ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ | ಗುಂಡಿಗಳ ರಸ್ತೆ: ಮಾದಪ್ಪನ ಭಕ್ತರು ಸುಸ್ತು

ನಿರಂತರ ಮಳೆಗೆ ಮಹದೇಶ್ವರ ಮಖ್ಯ ರಸ್ತೆಯಲ್ಲಿ ಹೊಂಡಗಳ ಸೃಷ್ಟಿ
Last Updated 5 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ನಿರಂತರ ಮಳೆಯಿಂದಾಗಿ ಪ್ರಸಿದ್ಧ ಯಾತ್ರಾ ಸ್ಥಳಮಹದೇಶ್ವರ ಬೆಟ್ಟಕ್ಕೆ ಬರುವಂತಹ ರಸ್ತೆ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ.

ಹನೂರು ತಾಲ್ಲೂಕಿನ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗಿನ 18 ಕಿ.ಮೀ ರಸ್ತೆಯ ತುಂಬೆಲ್ಲ ಗುಂಡಿಗಳು ಸೃಷ್ಟಿಯಾಗಿದ್ದು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ದ್ವಿಚಕ್ರವಾಹನ ಸವಾರರು ಈ ರಸ್ತೆಯಲ್ಲಿ ಓಡಾಡಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಪ್ರಮುಖವಾಗಿರುವ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಭೇಟಿ ನೀಡುವವರ ಸಂಖ್ಯೆಯೇ ಹೆಚ್ಚಿರುತ್ತದೆ.ಹೀಗಾಗಿ ಈ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿರುತ್ತದೆ. ತಿರುವುಗಳಿಂದ ಕೂಡಿದ ಹಾದಿಯಲ್ಲಿ ವಾಹನ ಸಂಚಾರ ಮೊದಲೇ ಕಷ್ಟ, ಈಗ ಹೊಂಡ ಗುಂಡಿಗಳು ಸೃಷ್ಟಿಯಾಗಿರುವುದರಿಂದ ಭಕ್ತರಿಗೆ ಸಂಚಾರ ಮಾಡುವುದು ಇನ್ನಷ್ಟು ತ್ರಾಸದಾಯಕವಾಗಿದೆ.

ದೇವಾಲಯಕ್ಕೆ ಮಾತ್ರವಲ್ಲದೇ, ಪಾಲಾರ್‌ ಮೂಲಕ ತಮಿಳುನಾಡನ್ನು ಸಂಪರ್ಕಿಸುವ ಅಂತರರಾಜ್ಯ ರಸ್ತೆಯೂ ಇದಾಗಿದೆ. ಹಾಗಾಗಿ, ತಮಿಳುನಾಡು ಭಾಗಕ್ಕೆ ಹೋಗುವ ಸರಕು ಸಾಗಣೆ ವಾಹನಗಳು ಕೂಡ ಇಲ್ಲಿಯೇ ಸಂಚರಿಸುತ್ತವೆ.

ಈ ರಸ್ತೆಯು ಪೂರ್ಣ ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿಯಾಗದೆ ವರ್ಷಗಳೇ ಉರುಳಿವೆ. ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯರು ಬರುವಾಗ ರಸ್ತೆಯ ದುರಸ್ತಿ ಕೆಲಸ ನಡೆಯುತ್ತದೆ. ಇಲ್ಲದಿದ್ದರೆ, ಸಂಚರಿಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾದಾಗ ಹೊಂಡ ಗುಂಡಿಗಳನ್ನು ಮುಚ್ಚಲಾಗುತ್ತದೆ.

ಗುಣಮಟ್ಟದ ಕಾಮಗಾರಿ ಬೇಕು: ಈ ರಸ್ತೆಯು ಮಲೆ ಮಹದೇಶ್ವರ ವನ್ಯಧಾಮದ ಮೂಲಕ ಹಾದುಹೋಗುತ್ತದೆ. ಪರಿಸರ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ನಿರ್ಬಂಧವಿದೆ. ಆದರೆ, ಈಗಿನ ರಸ್ತೆ ಕೆಲವು ಕಡೆಗಳಲ್ಲಿ ಬಿಟ್ಟು ಉಳಿದ ಕಡೆಗಳಲ್ಲಿ ಸಾಕಷ್ಟು ಅಗಲವಾಗಿದೆ. ಇರುವ ರಸ್ತೆಯನ್ನೇ ದುರಸ್ತಿ ಮಾಡಲು ಅಥವಾ ಅಭಿವೃದ್ಧಿ ಮಾಡಲು ಸಮಸ್ಯೆ ಇಲ್ಲ. ಆದರೆ, ದುರಸ್ತಿ ಮಾಡುವಾಗ ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ ಎಂಬುದು ಸವಾರರ ದೂರು.

ಬೆಟ್ಟದ ಪ್ರದೇಶ ಆಗಿರುವುದರಿಂದ ಮಳೆಯ ಪ್ರಮಾಣ ಹೆಚ್ಚು. ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಬೇಕು, ಅಂತಹ ವ್ಯವಸ್ಥೆ ಇಲ್ಲ. ಡಾಂಬರೀಕರಣ ಮಾಡುವಾಗಲೂ ನಿಗದಿತ ಪ್ರಮಾಣದ ಟಾರು ಹಾಕುವುದಿಲ್ಲ ಎಂದು ಹೇಳುತ್ತಾರೆ ಚಾಲಕರು, ಕ್ಷೇತ್ರಕ್ಕೆ ಬರುವ ಭಕ್ತರು.

‘ರಾಜ್ಯ ಅಲ್ಲದೆ ಹೊರ ರಾಜ್ಯಗಳಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ. ಕ್ಷೇತ್ರದಲ್ಲಿ ಸಾಕಷ್ಟು ಆದಾಯವೂ ಇದೆ. ಇಂತಹ ಸ್ಥಳಕ್ಕೆ ಬರುವ ರಸ್ತೆ ಚೆನ್ನಾಗಿಲ್ಲ ಎಂದರೆ ಹೇಗೆ? ರಸ್ತೆ ಗುಂಡಿ ಬಿದ್ದಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕು’ ಎಂದು ಕನಕಪುರದಿಂದ ಬಂದಿದ್ದ ಭಕ್ತರಾದ ಮಹದೇವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಸ್ತೆ ದುರಸ್ತಿಗೆ ಕ್ರಮ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಹದೇಶ್ವರ ಬೆಟ್ಟ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸತೀಶ್ ಚಂದ್ರ ಅವರು, ‘ನಿರಂತರ ಮಳೆಯಿಂದಾಗಿ ಮಹದೇಶ್ವರಬೆಟ್ಟ ಮುಖ್ಯರಸ್ತೆಯಲ್ಲಿ ಗುಂಡಿ ಬಿದ್ದಿದೆ. ವಾಹನ ಸವಾರರಿಗೆ ಅನುಕೂಲ ಕಲ್ಪಿಸಲು ತಕ್ಷಣ ಕ್ರಮ ವಹಿಸಲಾಗುವುದು. ಇದಲ್ಲದೇ, ತಾಳಬೆಟ್ಟದಿಂದ ಬೆಟ್ಟದವರೆಗೆ 17 ಕಿ.ಮೀ ಶಾಶ್ವತ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT