ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಮಾದಪ್ಪನ ಕಾಡು ಶೀಘ್ರ ಹುಲಿ ಸಂರಕ್ಷಿತ ಪ್ರದೇಶ

ಗಡಿ ಜಿಲ್ಲೆಯಲ್ಲಿ ವ್ಯಾಘ್ರಗಳ ಮೂರನೇ ತಾಣ: ದೇಶದ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆ
Last Updated 22 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಹನೂರು: ಪವಾಡ ಪುರುಷ ಮಹದೇಶ್ವರ ಓಡಾಡಿದ, ನೆಲೆಸಿದ ಮಲೆ ಮಹದೇಶ್ವರ ಅರಣ್ಯ (ವನ್ಯಧಾಮ), ಹುಲಿ ಸಂರಕ್ಷಿತ ಪ್ರದೇಶ ಎಂಬ ಅಧಿಕೃತ ಘೋಷಣೆ ಹೊರಬೀಳುವ ಸಮಯ ಹತ್ತಿರವಾಗಿದ್ದು, ಸರ್ಕಾರ ಅಧಿಸೂಚನೆ ಹೊರಡಿಸುವುದೊಂದೇ ಬಾಕಿ ಇದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಅನುಮೋದನೆ ನೀಡಿದ ಬಳಿಕ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲು ಕಳಿಸಿರುವ ಪ್ರಸ್ತಾವನೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ, ಅರಣ್ಯ ಸಚಿವ ಉಮೇಶ ಕತ್ತಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದು, ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಲು ವೇದಿಕೆ ಸಿದ್ಧವಾದಂತಾಗಿದೆ.

ವನ್ಯಧಾಮವು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾಗುತ್ತಿದ್ದಂತೆಯೇ, ಚಾಮರಾಜನಗರವು ಮೂರು ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿರುವ ದೇಶದ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

1,224 ಚದರ ಕಿ.ಮೀ. ಪ್ರಾದೇಶಿಕ ಅರಣ್ಯದ ಪೈಕಿ 906.18 ಚದರ ಕಿ.ಮೀ. ಪ್ರದೇಶವನ್ನು 2013ರಲ್ಲಿ ಮಲೆ ಮಹದೇಶ್ವರ ವನ್ಯಧಾಮ ಎಂದು ಘೋಷಿಸಲಾಗಿತ್ತು. ವರ್ಷದಿಂದ ವರ್ಷಕ್ಕೆ ಅರಣ್ಯದಲ್ಲಿ ವ್ಯಾಘ್ರಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅರಣ್ಯ ಇಲಾಖೆಯು 2018ರಲ್ಲಿ ಈ ವನ್ಯಧಾಮವನ್ನೂ ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಲು ಪ್ರಯತ್ನ ಆರಂಭಿಸಿತ್ತು. ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವವನ್ನೂ ಸಲ್ಲಿಸಿತ್ತು. ವನ್ಯಧಾಮ ಎಂದು ಘೋಷಣೆಯಾದ ಎಂಟು ವರ್ಷದ ಬಳಿಕ ಹುಲಿ ಸಂರಕ್ಷಿತ ಪ್ರದೇಶವಾಗಿ ಬದಲಾಗುತ್ತಿದೆ.

ವನ್ಯಧಾಮದಲ್ಲಿ ಕೊಳ್ಳೇಗಾಲ ಬಫರ್, ಹನೂರು ಬಫರ್, ಪಿ.ಜಿ.ಪಾಳ್ಯ, ಹೂಗ್ಯಂ, ರಾಮಾಪುರ, ಮಹದೇಶ್ವರ ಬೆಟ್ಟ ಹಾಗೂ ಪಾಲಾರ್ ಸೇರಿ ಏಳು ವಲಯಗಳಿವೆ. ಬಿಆರ್‌ಟಿ ಹಾಗೂ ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶಗಳೊಂದಿಗೆ ಇದು ಗಡಿ ಹಂಚಿಕೊಂಡಿದೆ. ಹಾಗಾಗಿ ಈ ಭಾಗದಲ್ಲಿ ಹುಲಿಗಳ ಓಡಾಟ ಹೆಚ್ಚಿದೆ. ಇದಕ್ಕೆ ಪೂರಕವೆಂಬಂತೆ, ಎಡೆಯಾರಳ್ಳಿ ಕಾರಿಡಾರ್‌ನಲ್ಲಿ ಆಗಾಗ ಹುಲಿಗಳು ಕಾಣಿಸಿಕೊಳ್ಳುತ್ತಿವೆ.

2012ರ ಸೆಪ್ಟಂಬರ್‌ನಲ್ಲಿ ಹನೂರು ವಲಯದ ಹಳ್ಳದ ಬಳಿ ನೈಸರ್ಗಿಕವಾಗಿ ಮೃತಪಟ್ಟ ಹುಲಿಯ ಕಳೇಬರ ಪತ್ತೆಯಾಗಿತ್ತು. ಅಲ್ಲದೇ 2018ರಲ್ಲಿ ನಡೆದ ಹುಲಿಗಣತಿ ಸಂದರ್ಭದಲ್ಲೂ ಪಿ.ಜಿ.ಪಾಳ್ಯ, ರಾಮಾಪುರ ವಲಯಗಳಲ್ಲಿ ಮರಿಗಳ ಜೊತೆ ತಾಯಿ ಓಡಾಡುತ್ತಿರುವ ಚಿತ್ರಗಳು ಸೆರೆಯಾಗಿದ್ದವು. ಪ್ರಸ್ತುತ ವನ್ಯಧಾಮದಲ್ಲಿ 20ರಿಂದ 25ರಷ್ಟು ಹುಲಿಗಳು ಇರಬಹುದು ಎಂದು ಅಂದಾಜಿಸಲಾಗಿದೆ.

ರಾಜ್ಯದಲ್ಲಿ ನಾಗರಹೊಳೆ, ಕಾಳಿ, ಭದ್ರಾ, ಬಂಡೀಪುರ ಹಾಗೂ ಬಿಆರ್‌ಟಿ ಸೇರಿ ಐದು ಹುಲಿ ಸಂರಕ್ಷಿತ ಪ್ರದೇಶಗಳಿವೆ. ಮಲೆಮಹದೇಶ್ವರ ವನ್ಯಧಾಮ ಆರನೇಯದ್ದಾಗಲಿದೆ.

‘ಸರ್ಕಾರ ಅಧಿಕೃತವಾಗಿ ಇನ್ನಷ್ಟೇ ಘೋಷಣೆ ಮಾಡಬೇಕಿದೆ.ಮಲೆ ಮಹದೇಶ್ವರ ವನ್ಯಧಾಮ ಹುಲಿ ಸಂರಕ್ಷಿತ ಪ್ರದೇಶವಾದರೆ ವನ್ಯಜೀವಿ ಸಂರಕ್ಷಣೆ ಬಗ್ಗೆ ಹೆಚ್ಚಿನ ನಿಗಾ ವಹಿಸಲು ಅನುಕೂಲವಾಗಲಿದೆ. ಸರ್ಕಾರದ ಅನುದಾನ ಹಾಗೂ ಇರುವ ಸಿಬ್ಬಂದಿಯನ್ನು ಬಳಸಿಕೊಂಡು ವನ್ಯಜೀವಿ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗುವುದು’ ಎಂದು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ದೇಶದಲ್ಲೇ ಏಕೈಕ ಜಿಲ್ಲೆ…
‘ದೇಶದ 17 ರಾಜ್ಯಗಳಲ್ಲಿ 51 ಹುಲಿ ಸಂರಕ್ಷಿತ ಪ್ರದೇಶಗಳಿವೆ. ರಾಜ್ಯದಲ್ಲಿ ಸದ್ಯ 5 ಹುಲಿ ಸಂರಕ್ಷಿತ ಪ್ರದೇಶಗಳಿವೆ. ಜಿಲ್ಲೆಯಲ್ಲಿ ಈಗಾಗಲೇ ಎರಡು ಹುಲಿ ಸಂರಕ್ಷಿತ ಪ್ರದೇಶಗಳಿವೆ. ನಮ್ಮ ವನ್ಯಧಾಮ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆಯಾದರೆ ದೇಶದಲ್ಲೇ ಮೂರು ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿರುವ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಯನ್ನು ಚಾಮರಾಜನಗರ ಗಳಿಸಲಿದೆ’ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕುಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

**
ವನ್ಯಧಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಕಾಣಿಸಿಕೊಂಡಿವೆ. ಹುಲಿ ಸಂರಕ್ಷಿತ ಪ್ರದೇಶ ಘೋಷಣೆಯಾದರೆ ವ್ಯಾಘ್ರಗಳು ಹಾಗೂ ಇತರ ಪ್ರಾಣಿಗಳ ಸಂರಕ್ಷಣೆಗೆ ಅನುಕೂಲ.
–ಮನೋಜ್‌ ಕುಮಾರ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT