ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟದಲ್ಲಿ ಭಕ್ತರ ಸೇವೆ: ದಾಖಲೆಯ ಹಣ ಸಂಗ್ರಹ

ಮಹದೇಶ್ವರ ಬೆಟ್ಟ ದೀಪಾವಳಿ ಜಾತ್ರೆ: ಕಳದ ವರ್ಷಕ್ಕಿಂತ ಭಕ್ತರ ಸಂಖ್ಯೆ ಕಡಿಮೆ, ಚಿನ್ನದ ತೇರಿನ ಉತ್ಸವದ ದಾಖಲೆ
Last Updated 30 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇತಿಹಾಸ ಪ್ರಸಿದ್ಧ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ರಾತ್ರಿ ಮುಕ್ತಾಯಗೊಂಡ ದೀಪಾವಳಿ ಜಾತ್ರೆಯ ಸಂದರ್ಭದಲ್ಲಿ ಸಹಸ್ರಾರು ಭಕ್ತರು, ವಿವಿಧ ಸೇವೆಗಳ ರೂಪದಲ್ಲಿ ದಾಖಲೆ ಪ್ರಮಾಣದಲ್ಲಿ ಮಾದಪ್ಪನಿಗೆ ಕಾಣಿಕೆ ಸಂದಾಯ ಮಾಡಿದ್ದಾರೆ.

ಚಿನ್ನದ ತೇರು, ವಿವಿಧ ಸೇವೆಗಳು, ಲಾಡು ಪ್ರಸಾದಗಳಿಂದಾಗಿ ಐದು ದಿನಗಳಲ್ಲಿ ₹ 1.22 ಕೋಟಿಯಷ್ಟು ಆದಾಯ ದೇವಾಲಯಕ್ಕೆ ಬಂದಿದೆ.

ಚಿನ್ನದ ತೇರಿನ ದಾಖಲೆ: ಅ.25ರಿಂದ 29ರ ವರೆಗೆ 2,022 ಮಂದಿ ಚಿನ್ನದ ತೇರಿನ ಉತ್ಸವದ ಹರಕೆ ತೀರಿಸಿದ್ದಾರೆ. ಒಂದು ಚಿನ್ನದ ತೇರಿನ ಉತ್ಸವಕ್ಕೆ 2,501 ಶುಲ್ಕ ಇದೆ. ಇದರಿಂದಾಗಿಯೇ ₹ 50,57,022 ಸಂಗ್ರಹವಾಗಿದೆ. ದೀಪಾವಳಿ ಅಮಾವಾಸ್ಯೆ ದಿನವಾದ ಸೋಮವಾರ ಒಂದು ದಿನವೇ 872 ಮಂದಿ ಚಿನ್ನದ ತೇರಿನ ಉತ್ಸವ ಮಾಡಿಸಿದ್ದಾರೆ.

ಚಿನ್ನದ ತೇರು ಬಿಟ್ಟು,ರುದ್ರಾಕ್ಷಿ ಮಂಟಪ, ಬಸವ ವಾಹನ, ಹುಲಿವಾಹನ ಉತ್ಸವಗಳ ಮೂಲಕ ₹ 27,16,245 ಸಂಗ್ರಹವಾಗಿದೆ. ಲಾಡು, ಕಲ್ಲು ಸಕ್ಕರೆ, ತೀರ್ಥ ಪ್ರಸಾದದಿಂದಾಗಿ ₹ 34,43,595 ಸಂಗ್ರಹವಾಗಿದೆ.ಮಾದಪ್ಪನಿಗೆ ಭಕ್ತರು ಸಲ್ಲಿಸಿರುವ ಅಭಿಷೇಕ ಸೇವೆಗಳಿಂದಾಗಿ ₹ 6,66,800 ಬಂದಿದೆ.

ಅಥಿತಿಗೃಹಗಳಿಂದಾಗಿ ₹ 3,23,965 ಆದಾಯ ಬಂದಿದೆ ಎಂದು ಮಲೆಮಹದೇಶ್ವರwಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಹುಂಡಿಗಳಲ್ಲಿ ಸಂಗ್ರಹವಾಗಿರುವ ಕಾಣಿಕೆ ಹಣವನ್ನು ಇನ್ನಷ್ಟೇ ಎಣಿಸಬೇಕಿದೆ. ದೇವರ ವಿಶೇಷ ದರ್ಶನಕ್ಕಾಗಿ ಟಿಕೆಟ್‌ ನೀಡುವ ವ್ಯವಸ್ಥೆ ದೇವಾಲಯದಲ್ಲಿದ್ದು, ಎಷ್ಟು ಮಂದಿ ದುಡ್ಡು ತೆತ್ತು ಮಾದಪ್ಪನ ದರ್ಶನ ಪಡೆದಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ತಿಳಿದು ಬಂದಿಲ್ಲ.

ನಿರಂತರ ಅನ್ನದಾಸೋಹ: ಜಾತ್ರೆ ಸಮಯದಲ್ಲಿ ಗಮನಸೆಳೆದಿದ್ದು ನಿರಂತರ ಅನ್ನದಾಸೋಹ ಕಾರ್ಯಕ್ರಮ. ಬಂದಿದ್ದ ಲಕ್ಷಾಂತರ ಭಕ್ತರಿಗೆ ಅನ್ನ ಪ್ರಸಾದವನ್ನು ವಿತರಣೆ ಮಾಡುವಲ್ಲಿ ಪ್ರಾಧಿಕಾರ ಯಶಸ್ವಿಯಾಗಿದೆ.

ಪ್ರಸಾದ ತಯಾರಿಸಲು ಐದು ದಿನಗಳಲ್ಲಿ 222 ಕ್ವಿಂಟಲ್‌ ಅಕ್ಕಿಯನ್ನು ಬಳಸಲಾಗಿದೆ. ಅದಕ್ಕೆ ಅಗತ್ಯವಿರುವಷ್ಟು ಸಾಂಬಾರ ಪದಾರ್ಥಗಳನ್ನು ಉಪಯೋಗಿಸಲಾಗಿದೆ.

ದಾನಿಗಳ ಕೊಡುಗೆ: ಜಾತ್ರಾ ಮಹೋತ್ಸವದಲ್ಲಿ ನಡೆದ ವಿಶೇಷ ಅನ್ನದಾಸೋಹಕ್ಕಾಗಿ ದಾನಿಗಳು ಅಕ್ಕಿ ಹಾಗೂ ಇನ್ನಿತರ ವಸ್ತುಗಳನ್ನು ದೇವಾಲಯಕ್ಕೆ ನೀಡಿದ್ದಾರೆ.28ರಂದು ತಿ.ನರಸಿಪುರದ ಬಿ.ಟಿ.ಮಾದೇವ ಎಂಬುವವರು 80 ಕ್ವಿಂಟಲ್ ಅಕ್ಕಿಯನ್ನು ನೀಡಿದರೆ, ಜಾತ್ರೆಯ ಕೊನೆಯ ದಿನ ಮಂಗಳವಾರ ಚನ್ನಪಟ್ಟಣದ ರಾಜೇಶ್ ಎಂಬುವವರು 30 ಕ್ವಿಂಟಲ್ ಅಕ್ಕಿ ನೀಡಿ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ.

ವ್ಯವಸ್ಥಿತ: ಮಳೆಯು ಭಕ್ತರನ್ನು ಕಾಡಿದ್ದು ಬಿಟ್ಟರೆ, ಜಾತ್ರೆ ವ್ಯವಸ್ಥೆಗಳೆಲ್ಲ ಅಚ್ಚುಕಟ್ಟಾಗಿತ್ತು. ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದ್ದುದರಿಂದ ಪ್ರಾಧಿಕಾರ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮಾಡಿತ್ತು. ಅವ್ಯವಸ್ಥೆಯ ಬಗ್ಗೆ ಹೆಚ್ಚು ದೂರುಗಳೂ ಕೇಳಿಬರಲಿಲ್ಲ.

ಊರಿಗೆ ಮರಳಿದ ಭಕ್ತರು

26ರಿಂದ ಆರಂಭಗೊಂಡ ಜಾತ್ರೆ ನಾಲ್ಕು ದಿನಗಳ ಕಾಲ ಅದ್ಧೂರಿಯಾಗಿ ಜರುಗಿದೆ. ಮಂಗಳವಾರ ರಾತ್ರಿ ಮಹದೇಶ್ವರ ಸ್ವಾಮಿ ತೆಪ್ಪೋತ್ಸವ ನಡೆಯುವುದರ ಮೂಲಕ ಜಾತ್ರೆಗೆ ತೆರೆ ಬಿದ್ದಿದೆ. ಅಲಂಕೃತ ತೆಪ್ಪದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಇರಿಸಿ ಕೆರೆಯಲ್ಲಿ ಸಾಗಿದ ದೃಶ್ಯಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಜಾತ್ರೆ ಮುಗಿಸಿಕೊಂಡು ಬಹುತೇಕ ಭಕ್ತರು ಮಂಗಳವಾರವೇ ತಮ್ಮ ಊರುಗಳಿಗೆ ತೆರಳಿದ್ದಾರೆ. ಬುಧವಾರ ದೇವಾಲಯದ ಆವರಣ ಖಾಲಿ ಖಾಲಿಯಾಗಿತ್ತು. ಭಕ್ತರ ಸಂಖ್ಯೆ ತುಂಬಾ ಕಡಿಮೆಯಿತ್ತು.

ಭಕ್ತರ ಸಂಖ್ಯೆ ಕಡಿಮೆ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಕಡಿಮೆ ಎಂದು ಹೇಳುತ್ತಾರೆ ಸ್ಥಳೀಯರು. ನಿರಂತರವಾಗಿ ಸುರಿಯುತ್ತಿದ್ದ ಮಳೆ ಇದಕ್ಕೆ ಕಾರಣ ಎಂದು ಹೇಳುತ್ತಾರೆ ಅವರು. ಎರಡೂವರೆಯಿಂದ ಮೂರು ಲಕ್ಷ ಭಕ್ತರು ಬಂದಿರಬಹುದು ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT