ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಇಲ್ಲಿ ನೋಡಿ... ಮಾದರಿ ಅಂಗನವಾಡಿ ಕೇಂದ್ರಗಳು!

ಬಸಪ್ಪನದೊಡ್ಡಿಯಲ್ಲಿ ಮಾದರಿ ಅಂಗನವಾಡಿಗಳು, ಗ್ರಾಮಸ್ಥರ ಮೆಚ್ಚುಗೆ
Last Updated 24 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಹನೂರು:ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಕೈತೋಟ, ಗೋಡೆಯ ಮೇಲೆ ಬಿಡಿಸಿರುವ ಬಣ್ಣ ಬಣ್ಣದ ಪ್ರಾಣಿ ಪಕ್ಷಿ, ಹೂ ಹಣ್ಣುಗಳ ಚಿತ್ರಪಟಗಳು, ನಿಶ್ಯಬ್ದದ ಜತೆಗೆ ತಂಪಾದ ವಾತಾವರಣ...

ಯಾವುದೋ ಖಾಸಗಿ ಕಿಂಡರ್ ಗಾರ್ಡನ್ನಿನ ಚಿತ್ರಣ ಇದಲ್ಲ. ಸರ್ಕಾರಿ ಅಂಗನವಾಡಿ ಕೇಂದ್ರಗಳ ಚಿತ್ರಣ!ಅಂಗನವಾಡಿ ಕೇಂದ್ರಗಳೆಂದರೆ ಹೇಗೋ ಏನೋ ಎಂದು ಯೋಚನೆ ಮಾಡುವ ಪೋಷಕರು ಇಲ್ಲಿಗೆ ಬಂದು ನೋಡಬೇಕು.

ತಾಲ್ಲೂಕಿನ ಬಸಪ್ಪನದೊಡ್ಡಿ ಗ್ರಾಮದಲ್ಲಿ ಒಂದೇ ಆವರಣದಲ್ಲಿರುವ ಎರಡು ಅಂಗನವಾಡಿ ಕೇಂದ್ರಗಳು ತಮ್ಮ ಸೌಂದರ್ಯದ ಮೂಲಕ ಮಕ್ಕಳನ್ನು ತಮ್ಮತ್ತ ಆಕರ್ಷಿಸುತ್ತಿವೆ.

ಎರಡೂ ಕೇಂದ್ರಗಳು ಒಂದನ್ನೊಂದು ಮೀರಿಸುವಂತಹ ವಾತಾವರಣ ಹೊಂದಿವೆ. ಚಿತ್ರ ಪಟಗಳು, ಮಕ್ಕಳನ್ನು ಕೈ ಬೀಸಿ ಕರೆಯುತ್ತಿವೆ. ಎರಡು ಕೇಂದ್ರಗಳಲ್ಲಿ 25 ಮಕ್ಕಳಿದ್ದಾರೆ. ಕಾರ್ಯಕರ್ತೆಯಾಗಿ ಎಸ್ ಮಮತಾ, ಹಾಗೂ ಸಹಾಯಕಿಯಾಗಿ ಚಂದ್ರಮ್ಮ ಅವರ ಪ್ರಾಮಾಣಿಕ ಕೆಲಸ ಇಂದು ಅಂಗನವಾಡಿ ಇಷ್ಟು ಸುಂದರವಾಗಿ ರೂಪುಗೊಳ್ಳಲು ಕಾರಣವಾಗಿದೆ.

ಕೇಂದ್ರದ ಹೊರಗೆ ಹಾಗೂ ಒಳಗೆ ಇರುವ ಬಣ್ಣ ಬಣ್ಣದ ಚಿತ್ರಗಳು, ಪರಿಸರ ಮಕ್ಕಳನ್ನು ಆಕರ್ಷಿಸುತ್ತದೆ ಪೂರ್ವ ಪ್ರಾಥಮಿಕ ಶಿಕ್ಷಣದ ಹಂತವಾಗಿ ಮಕ್ಕಳ ವಯಸ್ಸಿಗನುಗುಣವಾಗಿ ಗೋಡೆಗಳ ಮೇಲೆ ಚಿತ್ರಗಳನ್ನು ಬರೆಯಲಾಗಿದೆ ಮಕ್ಕಳೇ ಪ್ರಾಣಿಗಳ ಚಿತ್ರವನ್ನು ಗುರುತಿಸಿ ಅವುಗಳ ಹೆಸರನ್ನು ಹೇಳಲು ಅನುಕೂಲವಾಗುವಂತೆ ಗೋಡೆಗಳ ಮೇಲೆ ಪ್ರಾಣಿಗಳ ಚಿತ್ರಗಳನ್ನು ಬಿಡಿಸಲಾಗಿದೆ.

ಕೈ ತೋಟ: ಮಕ್ಕಳಿಗೆ ಮಧ್ಯಾಹ್ನ ಊಟಕ್ಕೆ ಬಳಸಿಕೊಳ್ಳಲು ಸ್ವತಃ ತಾವೇ ಕೈತೋಟ ನಿರ್ಮಾಣ ಮಾಡಿ ಬೀನ್ಸ್, ಬೆಂಡೆಕಾಯಿ, ಟೊಮೆಟೊ, ವಿವಿಧ ರೀತಿಯ ಸೊಪ್ಪಗಳನ್ನು ಬೆಳೆಯಲಾಗುತ್ತಿದೆ. ಇರುವ ಖಾಲಿ ಜಾಗವನ್ನು ಮಕ್ಕಳಿಗಾಗಿ ಬಳಸಿಕೊಳ್ಳುತ್ತಿರುವ ಇಲ್ಲಿನ ಕಾರ್ಯಕರ್ತೆ ಹಾಗೂ ಸಹಾಯಕಿಯ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

‘ಗ್ರಾಮೀಣ ಭಾಗದಲ್ಲಿ ಮಕ್ಕಳನ್ನು ಶಾಲೆಗೆ ಕರೆತರಲು ಸರ್ಕಾರ ನಾನಾ ರೀತಿಯ ಯೋಜನೆಗಳನ್ನು ಜಾರಿಗೊಳಿಸುತ್ತಾ ಬಂದಿದೆ. ಆದರೂ ಸರ್ಕಾರಿ ಯೋಜನೆಗಳು ಸಮರ್ಪಕವಾಗಿ ಜಾರಿಗೊಳ್ಳಲು ವಿಫಲವಾಗುತ್ತಿರುವ ಈಗಿನ ಕಾಲದಲ್ಲಿ ನಮ್ಮ ಗ್ರಾಮದಲ್ಲಿ ಸಣ್ಣ ಮಕ್ಕಳನ್ನು ಆಕರ್ಷಿಸಲು ಅಂಗನವಾಡಿ ಸಿಬ್ಬಂದಿ ಮಾಡಿರುವ ಕಾರ್ಯ ಶ್ಲಾಘನೀಯ. ಇವು ತಾಲ್ಲೂಕಿಗೆ ಮಾದರಿ ಅಂಗನವಾಡಿ ಕೇಂದ್ರಗಳಾಗಿ ಹೊರಹೊಮ್ಮಲಿವೆ’ ಎಂದು ಗ್ರಾಮದ ಮಾದೇವ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶದ್ಧೆಯ ಕೆಲಸ, ಎಲ್ಲರ ಸಹಕಾರ’

ಅಂಗನವಾಡಿ ಗಮನ ಸೆಳೆಯುವುದು ಒಪ್ಪ, ಓರಣದಿಂದ. ಸಿಬ್ಬಂದಿ ಆವರಣದ ಸ್ವಚ್ಛತೆಗೆ ಗಮನ ನೀಡುತ್ತಾರೆ. ಕೇಂದ್ರಗಳ ಮೂಲಸೌಕರ್ಯ ಚೆನ್ನಾಗಿದೆ.

‘ನಾವು ನಮ್ಮ ಕೆಲಸವನ್ನು ಶ್ರದ್ದೆಯಿಂದ ಮಾಡಿದ್ದೇವೆ. ಅದರ ಪ್ರತಿಫಲದಿಂದಾಗಿ ಕೇಂದ್ರಗಳು ಸ್ವಚ್ಛ ಹಾಗೂ ವರ್ಣರಂಜಿತವಾಗಿದೆ. ಇದು ನಮಗೂ ಖುಷಿ ಕೊಡುವುದರ ಜೊತೆಗೆ ಇತರರಿಗೂ ಖುಷಿ ಕೊಡುತ್ತಿದೆ. ಇದರಲ್ಲಿ ಅಧಿಕಾರಿಗಳು, ಗ್ರಾಮಸ್ಥರು ಸೇರಿದಂತೆ ಎಲ್ಲರ ಸಹಕಾರ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT