ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕಿಗೊಂದು ಮಾದರಿ ಕೆರೆ ಅಭಿವೃದ್ಧಿ

ಹನೂರು, ಕೊಳ್ಳೇಗಾಲ, ಯಳಂದೂರು ತಾಲ್ಲೂಕುಗಳ 12 ಕೆರೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ಭೇಟಿ
Last Updated 12 ಸೆಪ್ಟೆಂಬರ್ 2020, 14:42 IST
ಅಕ್ಷರ ಗಾತ್ರ

ಕೊಳ್ಳೇಗಾಲ/ಯಳಂದೂರು: ಕೊಳ್ಳೇಗಾಲ, ಹನೂರು ಹಾಗೂ ಯಳಂದೂರು ತಾಲ್ಲೂಕುಗಳಲ್ಲಿ ತಲಾ ಒಂದೊಂದು ಕೆರೆಗಳನ್ನು ಮಾದರಿ ಕೆರೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಹೇಳಿದರು.

ಹನೂರು ತಾಲ್ಲೂಕಿನ ಪಾಳ್ಯ ಕೆರೆ, ಕೊಳ್ಳೇಗಾಲದ ಚಿಕ್ಕರಂಗನಾಥಕೆರೆ ಮತ್ತು ಯಳಂದೂರು ತಾಲ್ಲೂಕಿನ ಹೊನ್ನೂರು ಕೆರೆಗಳನ್ನು ಆಯ್ಕೆ ಮಾಡಲಾಗಿದೆ.

ಸೆ.7ರಂದು ರೈತಮುಖಂಡರೊಂದಿಗೆ ನಡೆಸಿದ ಸಂದರ್ಭದಲ್ಲಿ ಮೂರು ತಾಲ್ಲೂಕುಗಳ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಸುರೇಶ್‌ ಕುಮಾರ್‌ ಅವರು ಹೇಳಿದ್ದರು. ಅದರಂತೆ ಶನಿವಾರ ರೈತ ಮುಖಂಡರು, ಶಾಸಕರಾದ ಆರ್‌.ನರೇಂದ್ರ, ಎನ್‌.ಮಹೇಶ್‌ ಹಾಗೂ ಅಧಿಕಾರಿಗಳೊಂದಿಗೆ 12 ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆರೆಗಳಿಗೆ ಭೇಟಿ ನೀಡಿದ ನಂತರ ಕೊಳ್ಳೇಗಾಲದ ಪ್ರವಾಸಿ ಮಂದಿರದಲ್ಲಿ ರೈತರೊಂದಿಗೆ ಕೆಲ ಹೊತ್ತು ಚರ್ಚೆ ನಡೆಸಿದರು.

ನಂತರ ಮಾತನಾಡಿದ ಅವರು, ‘ರೈತರ ಅನುಕೂಲಕ್ಕಾಗಿ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ಅಭಿವೃದ್ಧಿ ಮಾಡುತ್ತೇವೆ. ಮೊದಲ ಹಂತವಾಗಿ ಈಗ ನಾವು ತಾಲ್ಲೂಕಿನ ಚಿಕ್ಕರಂಗನಾಥನ ಕೆರೆ, ಹನೂರು ತಾಲ್ಲೂಕಿನ ಪಾಳ್ಯ ಕೆರೆ ಮತ್ತು ಯಳಂದೂರಿನ ಹೊನ್ನೂರು ಕೆರೆಯನ್ನು ಮಾದರಿ ಕೆರೆಗಳನ್ನಾಗಿ ಅಭಿವೃದ್ಧಿ ಮಾಡುತ್ತೇವೆ. ಮೂರು ಕೆರೆಗಳ ಅಭಿವೃದ್ಧಿಗೆ ಎಷ್ಟು ಹಣ ಬೇಕಾಗುತ್ತದೆ ಎಂದು ಸೆ. 21 ರೊಳಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸೆ. 21ರಿಂದ 30ರವರೆಗೆ ಅಧಿವೇಶನ ನಡೆಯುತ್ತದೆ. ಅಲ್ಲಿ ನಾವು ನೀರಾವರಿ ಸಚಿವರ ಜೊತೆ ಚರ್ಚೆ ನಡೆಸಿ, ಅದರ ಅಭಿವೃದ್ಧಿಗೆ ಎಷ್ಟು ವೆಚ್ಚ ಆಗುತ್ತದೂ ಅಷ್ಟು ಹಣವನ್ನು ಬಿಡುಗಡೆ ಮಾಡಿಸಿ ಅವರನ್ನು ಮಾದರಿ ಕೆರೆ ಮಾಡಿದ ನಂತರ ಕೆರೆಯ ಉದ್ಘಾಟನೆಗೆ ಕರೆತರುವ ಕೆಲಸವಾಗಬೇಕು’ ಎಂದರು.

ಕೆರೆ ಒತ್ತುವರಿ ತೆರವು: ‘ಜಿಲ್ಲಾಧ್ಯಂತ ಅನೇಕ ಕೆರೆಗಳು ಒತ್ತುವರಿಯಾಗಿದೆ ಎಂಬ ಮಾಹಿತಿಯನ್ನು ಅನೇಕ ರೈತರು ನೀಡಿದ್ದಾರೆ. ಎಲ್ಲ ತಾಲ್ಲೂಕುಗಳ ಕೆರೆಗಳನ್ನು ಸರ್ವೆ ನಡೆಸಿ, ಒತ್ತುವರಿ ಇದ್ದರೆ ಅದನ್ನು ಪಟ್ಟಿ ಮಾಡಿ, ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸುರೇಶ್‌ ಕುಮಾರ್‌ ಅವರು ಹೇಳಿದರು.

ಬಾಗಿನ:ಕೊಳ್ಳೇಗಾಲ ತಾಲ್ಲೂಕಿನ ಹೊಂಡರಬಾಳು ಗ್ರಾಮದ ಹೂಳಕೆರೆಗೆ, ಶಾಸಕರೊಂದಿಗೆ ಸೇರಿ ಸಚಿವರು ಬಾಗಿನವನ್ನೂ ಅರ್ಪಿಸಿದರು.

ರೈತರೊಂದಿಗೆ ಸವಾರಿ: ಸಚಿವರು ಯಳಂದೂರಿನ ಹೊನ್ನೂರು ಕೆರೆಗೆ ಕೊನೆಗೆ ಭೇಟಿ ನೀಡಿದರು. ಅದಲ್ಲಿಂದ ಕೊಳ್ಳೇಗಾಲಕ್ಕೆ ಬರುವಾಗ ರೈತರಿಗಾಗಿ ವ್ಯವಸ್ಥೆ ಮಾಡಲಾಗಿದ್ದ ವಾಹನದಲ್ಲಿ ಹತ್ತಿದ ಸುರೇಶ್‌ ಕುಮಾರ್‌ ಹಾಗೂ ಎನ್‌.ಮಹೇಶ್‌ ಅವರು, ರೈತರೊಂದಿಗೆ ಪ್ರಯಾಣಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭೋಯರ್ ಹರ್ಷಲ್ ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್,ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್, ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬರೋಲೆ, ತಹಶೀಲ್ದಾರ್ ಕುನಾಲ್, ಡಿವೈಎಸ್‌ಪಿ ಜಿ.ನಾಗರಾಜು, ಸಿಪಿಐ ಶ್ರೀಕಾಂತ್, ನೀರಾವರಿ ಅಧಿಕಾರಿಗಳು, ಕೃಷಿ ಅಧಿಕಾರಿಗಳು ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌, ಹೊನ್ನೂರು ಬಸವಣ್ಣ, ಅಂಬಳೆ ಶಿವಕುಮಾರ್‌, ಅಣಗಳ್ಳಿ ಬಸವರಾಜು, ಕುಣಗಳ್ಳಿ ರಂಗಸ್ವಾಮಿ ಇತರ ರೈತ ಮುಖಂಡರು ಇದ್ದರು.

ಹಂತ ಹಂತವಾಗಿ ಕೆರೆಗಳಿಗೆ ನೀರು

ಯಳಂದೂರು ತಾಲ್ಲೂಕಿನ ಕಬಿನಿ ಬಲದಂಡೆ ನಾಲೆಯಿಂದ ನೀರು ಪೂರೈಕೆ ಆಗುತ್ತಿರುವ ಹೊನ್ನೂರು, ಕೆಸ್ತೂರು, ಹಿರಿಯೂರು ಮತ್ತು ಅಗರ-ಮಾಂಬಳ್ಳಿ ಕೆರೆಗಳಿಗೆ ಸುರೇಶ್‌ ಕುಮಾರ್‌ ಅವರು ಭೇಟಿ ನೀಡಿದರು.

‘ಮೈಸೂರು ರಾಜ-ಮಹಾರಾಜರ ದೂರದೃಷ್ಟಿಯ ಯೋಜನೆಗಳು ಸುಗಮ ನೀರಾವರಿ ವ್ಯವಸ್ಥೆ ರೂಪುಗೊಳ್ಳಲು ಕಾರಣವಾಗಿದೆ. ಎರಡು ಶತಮಾನ ಪೂರೈಸಿದ್ದರೂ, ಕೆರೆಗಳಿಗೆ ಜಲಮೂಲಗಳ ಸಂಪರ್ಕ ಸಮರ್ಪಕವಾಗಿದೆ. ಇದೇ ಮಾದರಿಯಲ್ಲಿ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಹಂತ-ಹಂತವಾಗಿ ಪೂರೈಸಲಾಗುವುದು. ಇದರಿಂದ ಅಂತರ್ಜಲ ಮತ್ತು ಕೃಷಿ ಅಭಿವೃದ್ಧಿಯ ವೇಗ ಹೆಚ್ಚಾಗಲಿದೆ’ ಎಂದರು.

ನೀರಾವರಿ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ರೈತರ ಸಮಸ್ಯೆಗಳನ್ನು ಸಕಾಲದಲ್ಲಿ ನಿವಾರಿಸುವುದಿಲ್ಲ. ನೀರು ತುಂಬಿದರೂ, ಕೆರೆಯ ತೂಬು ಎತ್ತಲು ಮುಂದಾಗುವುದಿಲ್ಲ. ಕೋಡಿ ಬೀಳುವ ಸ್ಥಳವನ್ನು ಸರಿಯಾಗಿ ನಿರ್ವಹಿಸುವುದಿಲ್ಲ. 10 ವರ್ಷಗಳು ಕಳೆದರೂ ಕೆರೆಗಳ ಹೂಳು ತೆಗೆಯಲು ಯಾರು ಮುಂದಾಗಿಲ್ಲ. ಹೀಗಾಗಿ, ಕಬಿನಿ ಜಲಾಶಯದಿಂದ ಹರಿಯುವ ನೀರನ್ನು ವರ್ಷ ಪೂರ್ತಿ ಕೆರೆಯಲ್ಲಿ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಕೃಷಿಕರು ಸಚಿವರಿಗೆ ದೂರು ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT