ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕೋವಿಡ್‌ ಆಸ್ಪತ್ರೆ ಮೇಲೆ ಹೆಚ್ಚಿದ ಒತ್ತಡ

ಏರಿಕೆ ಕಂಡ ಕೋವಿಡ್‌ ಗಂಭೀರ‌ ಪ್ರಕರಣಗಳು, ಸಾವಿನ ಸಂಖ್ಯೆಯೂ ಹೆಚ್ಚಳ
Last Updated 30 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಇರುವ ಏಕೈಕ ಕೋವಿಡ್‌ ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ರೋಗಿಗಳಿಗೆ ಹಾಸಿಗೆ ವ್ಯವಸ್ಥೆ ಮಾಡಲು ವೈದ್ಯರು ಹರಸಾಹ‌ಸ ಪಡುತ್ತಿದ್ದಾರೆ.

ಗಂಭೀರ ಆರೋಗ್ಯ ಸಮಸ್ಯೆ ಎದುರಿಸುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಕೋವಿಡ್‌ ಆಸ್ಪತ್ರೆಯಲ್ಲಿರುವ 38 ಐಸಿಯು ಬೆಡ್‌ಗಳು ಭರ್ತಿಯಾಗಿವೆ. ಬುಧವಾರದ ಅಂಕಿ ಅಂಶಗಳ ಪ್ರಕಾರ ಆಸ್ಪತ್ರೆಯ ಐಸಿಯುನಲ್ಲಿ 39 ಮಂದಿ ಚಿಕಿತ್ಸೆ ಪಡೆಯುತ್ತಿದ್ದರು. ಅದಕ್ಕೂ ಹಿಂದಿನ ಮೂರು ದಿನಗಳ ಕಾಲ 45 ಮಂದಿ ಐಸಿಯುನಲ್ಲಿದ್ದರು.

ಜಿಲ್ಲಾಸ್ಪತ್ರೆಯ ಹಳೆಯ ಕಟ್ಟಡವನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಇಲ್ಲಿ 98 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿತ್ತು. ಈ ಪೈಕಿ 38 ಹಾಸಿಗೆಗಳು ತೀವ್ರ ನಿಗಾ ಘಟಕದಲ್ಲಿದ್ದರೆ, ಉಳಿದವು ಸಾಮಾನ್ಯ ಹಾಸಿಗೆಗಳು. ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಹೆಚ್ಚುವರಿಯಾಗಿ 17 ಹಾಸಿಗೆಗಳಿಗೆ ವೈದ್ಯರು ವ್ಯವಸ್ಥೆ ಮಾಡಿದ್ದಾರೆ. ಹಾಗಾಗಿ, ಸದ್ಯ 115 ಹಾಸಿಗೆಗಳು ಲಭ್ಯವಿವೆ.

ಇತ್ತೀಚೆಗೆ ಸೋಂಕಿನಿಂದಾಗಿ ತೀವ್ರತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ದಿನ ನಡೆಸುತ್ತಿರುವ ಕೋವಿಡ್‌ ಪರೀಕ್ಷೆಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ವರದಿಯಾಗುತ್ತಿರುವ ಕೋವಿಡ್‌–19 ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆ ಕಂಡು ಬರುತ್ತಿದೆ. ಮಂಗಳವಾರ 99 ಪ್ರಕರಣಗಳು ವರದಿಯಾಗಿದ್ದರೆ, ಬುಧವಾರ 113 ಮಂದಿಗೆ ಸೋಂಕು ದೃಢಪಟ್ಟಿದೆ.

ಸದ್ಯ ಜಿಲ್ಲೆಯಲ್ಲಿ 732 ಸಕ್ರಿಯ ಪ್ರಕರಣಗಳಿವೆ.ಹಾಸಿಗೆಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಮೂರ್ನಾಲ್ಕು ದಿನಗಳ ಚಿಕಿತ್ಸೆ ನೀಡುವ ವೈದ್ಯರು ನಂತರ ಅವರನ್ನುನಗರದ ಹೊರ ವಲಯದಲ್ಲಿರುವ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಕೋವಿಡ್‌ ಕೇರ್‌ ಸೆಂಟರ್‌ಗೆ ಕಳುಹಿಸುತ್ತಿದ್ದಾರೆ. ಐಸಿಯುನಲ್ಲೂ ಅಷ್ಟೇ, ಒಂದು ಹಾಸಿಗೆ ಖಾಲಿಯಾದ ತಕ್ಷಣ, ಭರ್ತಿಯಾಗುತ್ತಿದೆ.

ರೋಗ ಲಕ್ಷಣ ಹೊಂದಿಲ್ಲದ ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ಗೆ ಕಳುಹಿಸಲಾಗುತ್ತಿದೆ. ಇಲ್ಲಿ 450 ಹಾಸಿಗೆಗಳಿವೆ. ಮನೆಯಲ್ಲೇ ಇರಲು ಬಯಸಿದವರಿಗೆ ಹೋಂ ಐಸೊಲೇಷನ್‌ ಮಾಡಲಾಗುತ್ತಿದೆ (ಬುಧವಾರದವರೆಗೆ 310 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ).

ವಿಳಂಬ: ಪೂರ್ತಿ ಜಿಲ್ಲಾಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಮಾಡುವ ಸಲುವಾಗಿ ಜೆಎಸ್‌ಎಸ್‌ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಸಂತೇಮರಹಳ್ಳಿಯಲ್ಲಿರುವ ತಾಯಿ ಮತ್ತು ಮಗುವಿನ ಆಸ್ಪತ್ರೆಯನ್ನು ಎರಡನೇ ಕೋವಿಡ್‌ ಆಸ್ಪತ್ರೆಯನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಡಳಿತ ಈ ಹಿಂದೆ ಹೇಳಿತ್ತು. ಆದರೆ, ಈ ಎರಡು ಪ್ರಕ್ರಿಯೆ ವಿಳಂಬವಾಗಿದ್ದರಿಂದ ಇರುವ ಏಕೈಕ ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚಾಯಿತು ಎಂದು ಹೇಳುತ್ತಾರೆ ವೈದ್ಯರು.

ಜೆಎಸ್‌ಎಸ್‌ ಆಸ್ಪತ್ರೆಯೊಂದಿಗೆ ಆಗಸ್ಟ್‌ ಮೊದಲ ವಾರದಲ್ಲಿ ಒಪ್ಪಂದ ಆಗಿದ್ದರೂ, ಕೋವಿಡ್‌ಯೇತರ ವಿಭಾಗಗಳನ್ನು ಸ್ಥಳಾಂತರಿಸುವ ಕೆಲಸ ನಡೆದಿರಲಿಲ್ಲ. ಈಗ ಆ ಕಾರ್ಯ ಆರಂಭವಾಗಿದೆ. ಮೂಳೆ ಚಿಕಿತ್ಸೆ ವಿಭಾಗವನ್ನು ಅಲ್ಲಿಗೆ ವರ್ಗಾಯಿಸಲಾಗಿದೆ.

ಸಂತೇಮರಹಳ್ಳಿಯ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡಲಾಗಿದ್ದರೂ, ಇನ್ನೂ ಕೋವಿಡ್‌ ಆಸ್ಪತ್ರೆಯನ್ನಾಗಿ ಮಾಡಿಲ್ಲ. ಈ ಆಸ್ಪತ್ರೆಯನ್ನು ಕೂಡ ಕೋವಿಡ್‌ಯೇತರ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲು ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಕಡಿಮೆ ಇದ್ದು, ಇರುವ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡಲಾಗುತ್ತಿಲ್ಲ. ಸೋಂಕು ದೃಢಪಟ್ಟವರೆಲ್ಲರೂ ನಗರದಲ್ಲಿರುವ ಕೋವಿಡ್‌ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗಿದೆ. ಇದರಿಂದಾಗಿಯೂ ಒತ್ತಡ ಹೆಚ್ಚಾಗಿದೆ ಎಂದು ಹೇಳುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ಇನ್ನೂ 100 ಹಾಸಿಗೆ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ‍್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು, ‘ಕೋವಿಡ್‌ಯೇತರ ವಿಭಾಗಗಳನ್ನು ಜೆಎಸ್‌ಎಸ್‌ ಆಸ್ಪತ್ರೆಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ 50 ಹಾಸಿಗೆಗಳನ್ನು ಅಲ್ಲಿಗೆ ವರ್ಗಾಯಿಸಲಾಗಿದೆ. ಸಂತೇಮರಹಳ್ಳಿ ಆಸ್ಪತ್ರೆಗೂ ಕೋವಿಡ್‌ಯೇತರ ವಿಭಾಗಗಳನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಎಲ್ಲವೂ ಹಂತ ಹಂತವಾಗಿ ನಡೆಯಲಿದೆ’ ಎಂದು ಹೇಳಿದರು.

‘ಜಿಲ್ಲಾಸ್ಪತ್ರೆಯ ಹೊಸ ಕಟ್ಟಡದಲ್ಲಿರುವ ಕೋವಿಡ್‌ಯೇತರ ವಿಭಾಗಗಳು ಸ್ಥಳಾಂತರಗೊಂಡರೆ 100 ಹಾಸಿಗೆಗಳು ಲಭ್ಯವಾಗುತ್ತವೆ. ಅದನ್ನು ಕೂಡ ಕೋವಿಡ್‌ ಚಿಕಿತ್ಸೆಯ ಉದ್ದೇಶಕ್ಕೆ ಬಳಸಲು ತೀರ್ಮಾನಿಸಲಾಗಿದೆ. ಈಗಿನ 98 ಹಾಸಿಗೆ ಆಸ್ಪತ್ರೆಯನ್ನು ಪೂರ್ತಿಯಾಗಿ ಐಸಿಯು ಆಗಿ ಬದಲಾಯಿಸಲಾಗುವುದು. ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಬುಧವಾರ ಈ ಸಂಬಂಧ ಸಭೆ ನಡೆಸಿ, ಸೂಚನೆಗಳನ್ನು ನೀಡಿದ್ದಾರೆ. ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು.

ಸಾವಿನ ಸಂಖ್ಯೆ ಹೆಚ್ಚಳ

ಈ ಮಧ್ಯೆ, ಜಿಲ್ಲೆಯಲ್ಲಿ ಮೃತಪಡುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಬುಧವಾರದವರೆಗೆ ಕೋವಿಡ್‌ನಿಂದಾಗಿ 66, ಕೋವಿಡ್‌ಯೇತರ ಕಾರಣದಿಂದ 28 ಮಂದಿ ಮೃತಪಟ್ಟಿದ್ದಾರೆ.ಒಂದು ವಾರದ ಅವಧಿಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ. ಕೆಲವು ಸಂದರ್ಭದಲ್ಲಿ, ಸೋಂಕಿತರು ಆಸ್ಪತ್ರೆಗೆ ದಾಖಲಾದ ದಿನವೇ ಕೊನೆಯುಸಿರೆಳೆದಿದ್ದಾರೆ.

ಜನರು ವಿಳಂಬವಾಗಿ ಪರೀಕ್ಷೆಗೆ ಬರುತ್ತಿರುವುದು ಇದಕ್ಕೆ ಕಾರಣ. ಶೀತ ಜ್ವರ ಬಂದರೆ ಜನರು ನಿರ್ಲಕ್ಷ್ಯ ಮಾಡುತ್ತಿದ್ದಾರೆ.

‘ರೋಗ ಲಕ್ಷಣ ಕಂಡು ಬಂದ ತಕ್ಷಣ ಜನರು ತಪಾಸಣೆ‌ ಮಾಡಿಸಿಕೊಳ್ಳಬೇಕು. ಆರಂಭದಲ್ಲೇ ಚಿಕಿತ್ಸೆ ಸಿಕ್ಕಿದರೆ ಸೋಂಕಿನಿಂದ ಪಾರಾಗುವುದು ಸುಲಭ’ ಎಂದು ಡಾ.ಎಂ.ಸಿ.ರವಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT