ಬುಧವಾರ, ಮಾರ್ಚ್ 29, 2023
32 °C
ಮಹದೇಶ್ವರ ಬೆಟ್ಟ: ಸಾವಿರಾರು ಭಕ್ತರಿಂದ ಪ್ರತಿದಿನ ಸೇವೆ

ಮಹದೇಶ್ವರ ಬೆಟ್ಟ: ಹೆಚ್ಚಿದ ಭಕ್ತರ ಸಂಖ್ಯೆ, ಆದಾಯವೂ ವೃದ್ಧಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ ಹಾವಳಿಯ ಕಾರಣಕ್ಕೆ ನಿರ್ಬಂಧಿಸಲಾಗಿದ್ದ ಸೇವೆಗಳನ್ನು ಅಕ್ಟೋಬರ್‌ 17ರಿಂದ ಪುನರಾರಂಭಗೊಳಿಸಿದ ನಂತರ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. 

ಚಿನ್ನದ ರಥ ಸೇರಿದಂತೆ ವಿವಿಧ ಸೇವೆಗಳನ್ನು ಮಾಡುಸುತ್ತಿರುವವರ ಭಕ್ತರ ಸಂಖ್ಯೆಯೂ ಹಿಗ್ಗುತ್ತಿದೆ. ಅಮಾವಾಸ್ಯೆ, ವಾರಾಂತ್ಯ ಹಾಗೂ ವಿಶೇಷ ರಜಾ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಹದೇಶ್ವರನ ದರ್ಶನ ಪಡೆಯುತ್ತಿದ್ದಾರೆ. 

‘ಕೋವಿಡ್‌ ಆರಂಭವಾಗುವುದಕ್ಕೂ ಮುನ್ನ ಇದ್ದಷ್ಟು ಭಕ್ತರು ಈಗಲೂ ದೇವಾಲಯಕ್ಕೆ ಭೇಟಿ ನೀಡುತ್ತಿಲ್ಲ. ಆದರೆ, ಪರಿಸ್ಥಿತಿ ಸುಧಾರಿಸಿದೆ. ಹೆಚ್ಚಿನ ಭಕ್ತರು ಭೇಟಿ ನೀಡುತ್ತಿದ್ದಾರೆ. ಸೇವೆಗಳನ್ನೂ ಮಾಡಿಸುತ್ತಿದ್ದಾರೆ. ಕೋವಿಡ್‌ ಪರಿಸ್ಥಿತಿ ಇದೇ ಸ್ಥಿತಿಯಲ್ಲಿದ್ದರೆ ಇನ್ನೂ ನಿಯಂತ್ರಣಕ್ಕೆ ಬಂದರೆ, ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಭಾನುವಾರ 25 ಸಾವಿರದಿಂದ 30 ಸಾವಿರ ಮಂದಿ ಸ್ವಾಮಿ ದರ್ಶನ ಪಡೆದಿದ್ದಾರೆ’ ಎಂದು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ದೀಪಾವಳಿ ಸಮಯದಲ್ಲಿ ಮುಂಜಾಗ್ರತಾ ಕ್ರಮವಾಗಿ ದರ್ಶನಕ್ಕೆ ಮಾತ್ರ ಅವಕಾಶ ನೀಡಿದ್ದೆವು. ಯಾವುದೇ ಸೇವೆಗಳಿಗೆ ಅವಕಾಶ ಇರಲಿಲ್ಲ. ಹಾಲರವೆ ಉತ್ಸವದ ಕಾರಣಕ್ಕೆ ಒಂದು ದಿನ (ನ.3ರ ಮಧ್ಯಾಹ್ನದಿಂದ 4ರ ಮಧ್ಯಾಹ್ನ) ಭಕ್ತರ ಪ್ರವೇಶವನ್ನು ನಿರ್ಬಂಧಿಸಿದ್ದೆವು. ಹಾಗಾಗಿ, ಭಕ್ತರ ಸಂಖ್ಯೆ ಸ್ವಲ್ಪ ಕಡಿಮೆ ಇತ್ತು. ನ.5ರ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು. 

ಆದಾಯ ಹೆಚ್ಚಳ:  ದೀಪಾವಳಿ, ಬಲಿ ಪಾಡ್ಯಮಿಯ ದಿನವಾದ ಶುಕ್ರವಾರ (ನ.5) 149 ಮಂದಿ ಚಿನ್ನದ ತೇರಿನ ಉತ್ಸವ ನೆರವೇರಿಸಿದ್ದರು. ಬಸವವಾಹನ ಸೇವೆಯನ್ನು 80 ಮಂದಿ, ಹುಲಿ ವಾಹನ ಸೇವೆಯನ್ನು 534 ಮಂದಿ, ರುದ್ರಾಕ್ಷಿ ವಾಹನ ಸೇವೆಯನ್ನು 34 ಮಂದಿ ಸ್ವಾಮಿಗೆ ಸಲ್ಲಿಸಿದ್ದರು.  

ಬಲಿ ಪಾಡ್ಯಮಿಯ ದಿನ ಉತ್ಸವಗಳು, ವಿವಿಧ ಸೇವೆಗಳು, ಅಕ್ಕಿ ಸೇವೆ, ವಸತಿ ಸೇವೆ, ವಿಶೇಷ ಪ್ರವೇಶ ಶುಲ್ಕ ಸೇರಿದಂತೆ ವಿವಿಧ ಮೂಲಗಳಿಂದ ಪ್ರಾಧಿಕಾರಕ್ಕೆ ₹19.91 ಲಕ್ಷ ಆದಾಯ ಬಂದಿದೆ. ಶನಿವಾರವೂ (ನ.6) ಉತ್ಸವ, ಸೇವೆಗಳು ಹಾಗೂ ವಿವಿಧ ಮೂಲಗಳಿಂದ ₹19.17 ಲಕ್ಷ ಸಂಗ್ರಹವಾಗಿದೆ. 

ಭಾನುವಾರ 200ಕ್ಕೂ ಹೆಚ್ಚು ಮಂದಿ ಚಿನ್ನದ ತೇರಿನ ಉತ್ಸವ ಮಾಡಿದ್ದು, ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಹಾಗಾಗಿ, ಈ ಎರಡು ದಿನಗಳಿಗಿಂತಲೂ ಹೆಚ್ಚು ಆದಾಯ ಬಂದಿರುವ ಸಾಧ್ಯತೆ ಇದೆ. ನಿಖರ ಮಾಹಿತಿ ಸೋಮವಾರ ಬೆಳಿಗ್ಗೆಯಷ್ಟೇ ತಿಳಿಯಲಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. 

ಕಾರ್ತಿಕ ಮಾಸ ಆರಂಭವಾಗಿದ್ದು ಪ್ರತಿ ಸೋಮವಾರ ವಿಶೇಷ ಪೂಜೆಗಳು ನಡೆಯುತ್ತವೆ. ಕಡೆ ಕಾರ್ತಿಕ ಸೋಮವಾರದಂದು ಪ್ರತಿ ವರ್ಷ ಜಾತ್ರೆ, ದೀಪೋತ್ಸವ ನೆರವೇರುತ್ತದೆ. ಕಾರ್ತಿಕ ಮಾಸದಲ್ಲಿ ಬೆಟ್ಟಕ್ಕೆ ಬರುವವರ ಸಂಖ್ಯೆ ಹೆಚ್ಚಿರುತ್ತದೆ. ಹೀಗಾಗಿ, ಇನ್ನು ಒಂದು ತಿಂಗಳ ಕಾಲ ಮಹದೇಶ್ವರನ ಸನ್ನಿಧಿಯಲ್ಲಿ ಭಕ್ತರ ಸಂದಣಿ ಕಂಡು ಬರುವ ನಿರೀಕ್ಷೆ ಇದೆ.

ಮೊದಲ ಕಾರ್ತಿಕ ಸೋಮವಾರ 

ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರ ಕಾರ್ತಿಕ ಮಾಸದ ಮೊದಲ ಸೋಮವಾರ ವಿಶೇಷ ಪೂಜೆ ನಡೆಯಲಿದೆ. ಇದೇ 29ರಂದು ಕಡೆ ಕಾರ್ತಿಕ ಸೋಮವಾರ ಪೂಜೆ, ಮಹಾಜ್ಯೋತಿ ದರ್ಶನ ನಡೆಯಲಿದೆ. 

ಕಾರ್ತಿಕ ಸೋಮವಾರಗಳಂದು ಮಹದೇಶ್ವ‌ರನಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿದೆ. 

ಮಹಾ ದೀಪೋತ್ಸವ: ಕಡೆ ಕಾರ್ತಿಕ ಸೋಮವಾರದಂದು ಮಹದೇಶ್ವರ ಬೆಟ್ಟದಲ್ಲಿರುವ ದೀಪದ ಗಿರಿ ಒಡ್ಡಿನಲ್ಲಿ ಮಹಾ ದೀಪ ಬೆಳಗಿಸಲಾಗುತ್ತದೆ. 

ಮಹಾ ದೀಪೋತ್ಸವವು ಮಹದೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿನ ಜನರು ಸುಖ ಶಾಂತಿಯಿಂದ ಬದುಕುವ ಸಂಕೇತ ಎಂಬ ನಂಬಿಕೆ ಸ್ಥಳೀಯರದ್ದು.

ಕಾರ್ತಿಕ ಸೋಮವಾರದ ವಿಶೇಷ ಪೂಜೆಗಳಂದು ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಹಾಗಾಗಿ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಸಕಲ ಸಿದ್ಧತೆ ನಡೆಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು