ಬುಧವಾರ, ಜುಲೈ 28, 2021
26 °C
ಮಹದೇಶ್ವರ ಬೆಟ್ಟ: 7,000ಕ್ಕೂ ಹೆಚ್ಚು ಭಕ್ತರಿಂದ ಸ್ವಾಮಿಯ ದರ್ಶನ

ಮಣ್ಣೆತ್ತಿ ಅಮಾವಾಸ್ಯೆ: ಭಕ್ತರ ಸಂಖ್ಯೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ದೇವರ ದರ್ಶನದ ಅವಧಿಯನ್ನು ವಿಸ್ತರಿಸಿರುವುದು ಭಕ್ತರಿಗೆ ಅನುಕೂಲವಾಗಿದ್ದು, ಶುಕ್ರವಾರ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂತು.

ಶುಕ್ರವಾರ ಮಣ್ಣೆತ್ತಿನ ಅಮಾವಾಸ್ಯೆ ದಿನವೂ ಆಗಿದ್ದರಿಂದ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಏಳೆಂಟು ಸಾವಿರಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದರು. 

ಮುಡಿ ಸೇವೆ, ಉತ್ಸವ, ಪ್ರಸಾದ ಸೌಲಭ್ಯಗಳು ಇಲ್ಲದಿದ್ದರೂ ವಿಶೇಷ ದಿನದಂದು ಭಕ್ತರು, ಕೋವಿಡ್‌ ನಿಯಮಗಳನ್ನು ಪಾಲಿಸುತ್ತಾ ಸ್ವಾಮಿಯ ದರ್ಶನ ಪಡೆದರು. 

‘ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದಿಲ್ಲ. ಸಂಜೆ ಆರು ಗಂಟೆಯ ಹೊತ್ತಿಗೆ ಸುಮಾರು 6,000 ಸಾವಿರ ಭಕ್ತರು ಬಂದಿದ್ದರು. ರಾತ್ರಿ 9 ಗಂಟೆಯವರೆಗೂ ದರ್ಶನಕ್ಕೆ ಅವಕಾಶ ಇದ್ದುದರಿಂದ 8000 ಸಾವಿರದಷ್ಟು ಭಕ್ತರು ಭೇಟಿ ನೀಡಿರುವ ಸಾಧ್ಯತೆ ಇದೆ’ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ದಾಸೋಹ, ಮುಡಿ ಸೇವೆ ಹಾಗೂ ಇತರ ಸೇವೆಗಳಿದ್ದರೆ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚು ಇರುತ್ತಿತ್ತು. ಮುಂದಿನ ಆದೇಶದವರೆಗೆ ಈ ಸೌಲಭ್ಯಗಳಿರುವುದಿಲ್ಲ’ ಎಂದು ಅವರು ಮಾಹಿತಿ ನೀಡಿದರು. 

‘ಬೆಟ್ಟದಲ್ಲಿ ಗುರುವಾರ ರಾತ್ರಿಯಿಂದ ಭಕ್ತರಿಗೆ ತಂಗಲು ಅವಕಾಶ ನೀಡಲಾಗಿದ್ದು, ಗುರುವಾರ 45 ಕೊಠಡಿಗಳನ್ನು ಭಕ್ತರು ಕಾಯ್ದಿರಿಸಿದ್ದರು’ ಎಂದು ಅವರು ಹೇಳಿದರು. 

ಕದ್ದುಮುಚ್ಚಿ ಮುಡಿ ಸೇವೆ: ಮಾದಪ್ಪನಿಗೆ ಮುಡಿ ಸಮರ್ಪಿಸುವುದಕ್ಕಾಗಿ ಸಾವಿರಾರು ಭಕ್ತರು ಬೆಟ್ಟಕ್ಕೆ ಬರುತ್ತಾರೆ. ಆದರೆ ಲಾಕ್‌ಡೌನ್‌ ಸಡಿಲಿಕೆ ಆದ ನಂತರ ಕ್ಷೇತ್ರದಲ್ಲಿ ಮುಡಿಸೇವೆಗೆ ಅವಕಾಶ ನೀಡಿಲ್ಲ. ಹೀಗಾಗಿ ಭಕ್ತರು ನಿರಾಸೆ ಅನುಭವಿಸುತ್ತಿದ್ದಾರೆ. ಕೆಲವು ಭಕ್ತರು ದೇವಾಲಯದ ಆವರಣದ ಹೊರಗಡೆ ಖಾಸಗಿಯಾಗಿ ₹200–₹300 ಪಾವತಿಸಿ ಮುಡಿ ತೆಗೆಸಿಕೊಂಡು ಬಂದು ದೇವರ ದರ್ಶನ ಮಾಡುತ್ತಿದ್ದಾರೆ.

ಸ್ಥಳೀಯ ಹೋಟೆಲ್‌ಗಳಿಗೆ ಹಬ್ಬ

ಬೆಟ್ಟದಲ್ಲಿ ದಾಸೋಹ ವ್ಯವಸ್ಥೆ ಇಲ್ಲದಿರುವುದು ಸ್ಥಳೀಯ ಹೋಟೆಲ್‌, ಫಾಸ್ಟ್‌ ಫುಡ್‌ ಅಂಗಡಿಗಳ ಮಾಲೀಕರಿಗೆ ವರವಾಗಿ ಪರಿಣಮಿಸಿದೆ. ಗ್ರಾಹಕರಿಂದ ಊಟ, ತಿಂಡಿಗೆ ಹೆಚ್ಚಿನ ಹಣ ವಸೂಲು ಮಾಡುತ್ತಿದ್ದಾರೆ ಎಂಬ ಆರೋಪವನ್ನು ಭಕ್ತರು ಮಾಡಿದ್ದಾರೆ. 

ದೇವಾಲಯದ ವತಿಯಿಂದ ದಾಸೋಹ ಇದ್ದಿದ್ದರೆ ತೊಂದರೆ ಇರುತ್ತಿರಲಿಲ್ಲ. ಇಡ್ಲಿ ಹಾಗೂ ಇನ್ನಿತರ ತಿಂಡಿ ತಿನಿಸುಗಳಿಗೆ ದುಪ್ಪಟ್ಟು ಬೆಲೆ ಕೊಟ್ಟು ತಿನ್ನಬೇಕಾದ ಪರಿಸ್ಥಿತಿ ಬಂದಿದೆ. ದುಪ್ಪಟ್ಟು ಕೊಟ್ಟರೂ ಹೊಟ್ಟೆ ತುಂಬುವುದಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು’ ಎಂದು ಹೆಸರು ಹೇಳಲು ಇಚ್ಛಿಸದ ಭಕ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೊದಲೆಲ್ಲ ನಾಲ್ಕು ಇಡ್ಲಿಗೆ ₹20 ದರ ಇದ್ದರೆ ಈಗ, ಮೂರಕ್ಕೆ ₹20, 5 ಇಡ್ಲಿಗೆ ₹30 ಹೀಗೆ... ಹಣ ತೆಗೆದುಕೊಳ್ಳುತ್ತಿದ್ದಾರೆ. 

‘ಹೋಟೆಲ್‌ಗಳಲ್ಲಿ ಊಟ ತಿಂಡಿ ಪೂರೈಸಬಹುದಾದರೆ, ದಾಸೋಹ ನೀಡಲು ಯಾಕೆ ಸಾಧ್ಯವಿಲ್ಲ’ ಎಂಬುದು ಭಕ್ತರ ಪ್ರಶ್ನೆ.

‘ದಾಸೋಹ ನೀಡಲು ನಾವು ಸಿದ್ಧರಿದ್ದೇವೆ. ಜಿಲ್ಲಾಡಳಿತದ ಆದೇಶಕ್ಕೆ ಕಾಯುತ್ತಿದ್ದೇವೆ’ ಎಂದು ಜಯವಿಭವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.