ಚಾಮರಾಜನಗರ: ನಗರದ ಪ್ರಮುಖ ವಾರ್ಡ್‌ಗಳಲ್ಲಿ ಒಂದಾದ 20ನೇ ವಾರ್ಡ್‌ನ ಬಡಾವಣೆಗಳಲ್ಲಿ ರಸ್ತೆ ಅವ್ಯವಸ್ಥೆ, ಕಸ, ಚರಂಡಿ ಸಮಸ್ಯೆ ನಿವಾಸಿಗಳನ್ನು ಕಾಡುತ್ತಿದೆ.
ಸಂತೇಮರಹಳ್ಳಿ ವೃತ್ತದ ಬಳಿಯ ನಂಜನಗೂಡು ರಸ್ತೆಯಿಂದ ಎಡಭಾಗಕ್ಕೆ ಭುಜಂಗೇಶ್ವರ ಬಡಾವಣೆ, ಮಾರಿಗುಡಿ, ಬಸದಿ ರಸ್ತೆ, ಮಹದೇಶ್ವರ ಕಾಲೊನಿವರೆಗೂ ಈ ವಾರ್ಡ್ ಹರಡಿದೆ.
ಬಡಾವಣೆಗಳ ಜೊತೆಗೆ ಪ್ರಮುಖ ವ್ಯಾಪಾರ ತಾಣವಾದ ಸಂಪಿಗೆ ರಸ್ತೆ, ಹಳೆಯ ಖಾಸಗಿ ಬಸ್ ನಿಲ್ದಾಣದ ಜಾಗ (ಮಾರಿಗುಡಿ) ಕೂಡ ಇದೇ ವಾರ್ಡ್‌ಗೆ ಸೇರುತ್ತದೆ.
500 ಮನೆಗಳಿವೆ. 1,500ಕ್ಕೂ ಹೆಚ್ಚು ಮತದಾರರು ಇಲ್ಲಿದ್ದಾರೆ. ಪ್ರಮುಖವಾದ ಸಂಪಿಗೆ ರಸ್ತೆ ಸ್ವಲ್ಪ ವ್ಯವಸ್ಥಿತವಾಗಿದೆ. ಅದು ಬಿಟ್ಟರೆ, ಬಡಾವಣೆಗಳಲ್ಲಿರುವ ರಸ್ತೆಗಳು ಅಷ್ಟಕ್ಕಷ್ಟೇ ಹಲವು ರಸ್ತೆಗಳಿಗೆ ಇನ್ನೂ ಡಾಂಬರೇ ಬಿದ್ದಿಲ್ಲ. ಕಲ್ಲು ಮಣ್ಣುಗಳಿಂದ ಕೂಡಿದೆ. ಭುಜಂಗೇಶ್ವರ ಬಡಾವಣೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ. ನಿವಾಸಿಗಳು ಕಚ್ಚಾ ರಸ್ತೆಯಲ್ಲೇ ಓಡಾಡಬೇಕಿದೆ. ವಾರ್ಡ್ ವ್ಯಾಪ್ತಿಯಲ್ಲಿ ಕಲ್ಯಾಣ ಮಂಪಟಗಳೂ ಬರುವುದರಿಂದ ಸಾರ್ವನಿಕರ ಓಡಾಟವೂ ಇಲ್ಲಿ ಹೆಚ್ಚು. ರಸ್ತೆಗಳು ಸರಿ ಇಲ್ಲದಿರುವುದರಿಂದ ಜನರು ಸಂಚಾರಕ್ಕೆ ಪ್ರಯಾಸ ಪಡಬೇಕು.
‘ನಗರದ ಪ್ರಮುಖ ಬಡಾವಣೆಗಳಲ್ಲಿ ಭುಜಂಗೇಶ್ವರ ಬಡಾವಣೆಯೂ ಒಂದು. ನಗರಸಭಾ ಸದಸ್ಯರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾದರೂ, ನಗರಸಭೆಯ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಬಡಾವಣೆಯ ಕೆಲವು ರಸ್ತೆಗಳು ಡಾಂಬರು ಕಂಡಿವೆ. ಆದರೆ, ಅವು ತುಂಬಾ ಕಿರಿದಾಗಿವೆ. ದೊಡ್ಡ ವಾಹನಗಳು ಓಡಾಡುವುದಕ್ಕೆ ಆಗುವುದಿಲ್ಲ. ಹಲವು ಕಡೆಗಳಲ್ಲಿ ಕಚ್ಚಾ ರಸ್ತೆಗಳೇ ಇವೆ. ಕೆಲವು ಕಡೆಗಳಲ್ಲಿ ಚರಂಡಿಯೇ ಇಲ್ಲ. ಕೆಲವು ಕಡೆ ಮುಚ್ಚಲಾಗಿದೆ. ಇರುವ ಕಡೆ ಹೂಳು ತುಂಬಿಕೊಂಡಿದ್ದು, ತೆಗೆಯುವ ಕೆಲಸ ಆಗುತ್ತಿಲ್ಲ’ ಎಂದು ಬಡಾವಣೆ ನಿವಾಸಿ ಚಾ.ವೆಂ.ರಾಜಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮಹದೇಶ್ವರ ಕಾಲೊನಿಯ ನಿವಾಸಿಗಳಾದ ವಿನುತಾ, ಸುಬ್ಬನಾಯಕ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು.
ಅಸಮರ್ಪಕ ಕಸ ವಿಲೇವಾರಿ: ವಾರ್ಡ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮರ್ಪಕ ಆಗುತ್ತಿಲ್ಲ ಎಂಬುದು ನಿವಾಸಿಗಳ ದೂರು. ಅಲ್ಲಲ್ಲಿ ಕಸದ ರಾಶಿಯೂ ಕಾಣಸಿಗುತ್ತದೆ.
ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಕಸದ ತ್ಯಾಜ್ಯವನ್ನು ಬಡಾವಣೆ ರಸ್ತೆಯಲ್ಲಿ ಎಸೆಯಲಾಗುತ್ತದೆ. ಬಡಾವಣೆಯ ಖಾಲಿ ಜಾಗಗಳಲ್ಲಿ ಕಟ್ಟಡದ ಅವಶೇಷಗಳು, ತ್ಯಾಜ್ಯದ ರಾಶಿಯೂ ಕಾಣಸಿಗುತ್ತವೆ.
ಅನಾರೋಗ್ಯದಿಂದ ಬಳುತ್ತಿರುವ ವಾರ್ಡ್ ಸದಸ್ಯ ಚಂದ್ರಶೇಖರ್ ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ. ನಗರಸಭಾ ಆಯುಕ್ತ ಎಸ್.ವಿ.ರಾಮದಾಸ್ ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.
ಕೊಳವೆ ಬಾವಿ ಅವಲಂಬನೆ
ವಾರ್ಡ್ ವ್ಯಾಪ್ತಿಯಲ್ಲಿ ಜನರು ನೀರಿಗಾಗಿ ಕೊಳವೆ ಬಾವಿಯನ್ನೇ ಹೆಚ್ಚು ಅವಲಂಬಿಸಿದ್ದಾರೆ. ಕಾವೇರಿ ನೀರು ನಿಯಮಿತವಾಗಿ ಪೂರೈಕೆಯಾಗುತ್ತಿಲ್ಲ. ‘ಕಾವೇರಿ ನೀರು ಯಾವಾಗ ಬರುತ್ತದೆಯೋ ಗೊತ್ತಾಗುವುದಿಲ್ಲ. 15 ದಿನಗಳಿಗೊಮ್ಮೆ ಬರುತ್ತದೆ. ಅದನ್ನು ನಂಬಿಕೊಂಡು ಇರಲು ಸಾಧ್ಯವಿಲ್ಲ. ಆದರೆ ಕೊಳವೆ ಬಾವಿಗಳಿರುವುದರಿಂದ ನಿವಾಸಿಗಳಿಗೆ ನೀರಿಗೆ ಸಮಸ್ಯೆಯಾಗುವುದಿಲ್ಲ. ವಿದ್ಯುತ್ ಇಲ್ಲದಿದ್ದರೆ ಪಂಪು ಹಾಳಾದರೆ ಮಾತ್ರ ನೀರಿಗೆ ತೊಂದರೆಯಾಗುತ್ತದೆ’ ಎಂದು ನಿವಾಸಿ ಮುರಳೀಧರ್ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.