ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿ ಹಬ್ಬದಲ್ಲಿ 150ಕ್ಕೂ ಹೆಚ್ಚು ಪಕ್ಷಿಗಳು ಗೋಚರ

7ನೇ ಹಕ್ಕಿ ಹಬ್ಬಕ್ಕೆ ತೆರೆ, ಕಣ್ಣಿಗೆ ಬಿದ್ದ ರಾಯಭಾರಿ ಹದ್ದು
Last Updated 7 ಜನವರಿ 2021, 16:34 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಏಳನೇ ಹಕ್ಕಿ ಹಬ್ಬಕ್ಕೆ ಗುರುವಾರ ತೆರೆ ಬಿದ್ದಿದ್ದು, ಪಕ್ಷಿ ವೀಕ್ಷಕರು 150ಕ್ಕೂ ಹೆಚ್ಚು ಹಕ್ಕಿಗಳನ್ನು ಗುರುತಿಸಿದ್ದಾರೆ.

ಹಬ್ಬದ ರಾಯಭಾರಿ ಹಕ್ಕಿಯಾಗಿದ್ದ ರೂಫಸ್‌ ಬೆಲ್ಲೀಡ್‌ ಹದ್ದು ಪಕ್ಷಿ ವೀಕ್ಷಕರ ತಂಡವೊಂದರ ಕಣ್ಣಿಗೆ ಬಿದ್ದಿದ್ದು, ಈ ಬಾರಿ ಹಕ್ಕಿ ಹಬ್ಬದ ವಿಶೇಷ. ಪಕ್ಷಿ ತಜ್ಞ ಎಸ್‌.ಸುಬ್ರಹ್ಮಣ್ಯ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್‌ ಕುಮಾರ್‌ ಅವರಿದ್ದ ತಂಡಕ್ಕೆಈ ಹದ್ದು ಕಾಣಿಸಿಕೊಂಡಿದೆ. ಬೂದಿಪಡಗ ಪ್ರದೇಶದಲ್ಲಿ ರೂಫಸ್‌ ಬೆಲ್ಲೀಡ್‌ ಹದ್ದು ಗೋಚರಿಸಿದೆ.

ಕಾಡಿದ ಮಳೆ: ಬೆಳಿಗ್ಗೆ 6.30ಕ್ಕೆಪಕ್ಷಿ ವೀಕ್ಷಣೆಗೆ 85 ಮಂದಿ ಸಜ್ಜಾಗಿದ್ದರು. ಸುರಿಯುತ್ತಿದ್ದ ಮಳೆ ಅವರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿತು. 8.30ರವರೆಗೂ ಅವರಿಗೆ ಕಾಡಿಗೆ ಹೋಗಲು ಸಾಧ್ಯವಾಗಲಿಲ್ಲ. ಮಳೆ ನಿಂತ ನಂತರವೇ ವಿವಿಧ ತಂಡಗಳಾಗಿ ಪಕ್ಷಿ ವೀಕ್ಷಣೆಗೆ ತೆರಳಿದರು. ಮಧ್ಯಾಹ್ನ 12.30ರವೆಗೂ ಸುತ್ತಾಡಿ ಪಕ್ಷಿಗಳ ವಿವರಗಳನ್ನು ದಾಖಲಿಸಿದರು.

ಅಪರೂಪದ ಹಕ್ಕಿಗಳ ದರ್ಶನ: ಬ್ಲ್ಯಾಕ್‌ ನೇಪ್ಡ್‌ ಮೊನಾರ್ಕ್‌ (ಕಪ್ಪು ಕತ್ತಿನ ರಾಜಹಕ್ಕಿ), ಕಪ್ಪು ಬಿಳಿ ಕೀಚುಗ, ಸ್ಪಾಟ್‌ ಬೆಲ್ಲೀಡ್‌ ಈಗಲ್‌ ಓವುಲ್ ಸೇರಿದಂತೆ ಹಲವು ಅಪರೂಪದ ಪಕ್ಷಿಗಳು ವೀಕ್ಷಕರಿಗೆ ದರ್ಶನ ನೀಡಿವೆ.

ಸಮಯ ಬೇಕು:ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಕ್ಷಿ ತಜ್ಞ ಎಸ್‌.ಸುಬ್ರಹ್ಮಣ್ಯ ಅವರು, ‘ಹಬ್ಬವು ಚೆನ್ನಾಗಿ, ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ. 150 ಕ್ಕೂ ಹೆಚ್ಚು ಪಕ್ಷಿಗಳನ್ನು ಗುರುತಿಸಲಾಗಿದೆ. ಕೆಲವು ಅಪರೂಪದ ಪಕ್ಷಿಗಳೂ ಕಂಡು ಬಂದಿವೆ. ಹೊಸ ಪ್ರಭೇದದ ಪಕ್ಷಿಗಳು ಪತ್ತೆಯಾಗಿವೆ ಎಂಬುದನ್ನು ದೃಢಪಡಿಸಲು ಸ್ವಲ್ಪ ಸಮಯ ಬೇಕು. ಈ ಹಿಂದಿನ ದಾಖಲೆಗಳು ಹಾಗೂ ಈಗ ಸಿಕ್ಕಿರುವ ಪಕ್ಷಿಗಳ ವಿವರಗಳನ್ನು ಹೋಲಿಕೆ ಮಾಡಿ ನೋಡಬೇಕಾಗುತ್ತದೆ. ಇದಕ್ಕೆ ಮೂರ್ನಾಲ್ಕು ದಿನಗಳು ಹಿಡಿಯಬಹುದು’ ಎಂದು ಹೇಳಿದರು.

‘ಹಬ್ಬದ ರಾಯಭಾರಿಯಾಗಿರುವ ರೂಫಸ್‌ ಬೆಲ್ಲೀಡ್‌ ಹದ್ದು ಕಂಡು ಬಂದಿದ್ದು ಎಲ್ಲರಿಗೂ ಸಂತೋಷವನ್ನು ಉಂಟು ಮಾಡಿದೆ. ದಟ್ಟಾರಣ್ಯದಲ್ಲಿ ಹೆಚ್ಚಾಗಿ ಕಂಡು ಬರುವ ಈ ಪಕ್ಷಿ ಅಳಿವಿನಂಚಿನಲ್ಲಿದೆ’ ಎಂದು ಮಾಹಿತಿ ನೀಡಿದರು.

‘ಗುರುವಾರ ಬೆಳಿಗ್ಗೆ ಸ್ವಲ್ಪ ಸಮಯ ಮಳೆ ಬಂದು ಪಕ್ಷಿ ವೀಕ್ಷಣೆಗೆ ಅಡಚಣೆಯಾಯಿತು. ಆದರೆ, ವೀಕ್ಷಕರ ಉತ್ಸಾಹಕ್ಕೆ ಧಕ್ಕೆಯಾಗಲಿಲ್ಲ. ಮಳೆ ಬರುತ್ತಿದ್ದರೂಒಂದು ತಂಡ ಪಕ್ಷಿ ವೀಕ್ಷಣೆಗೆ ತೆರಳಿತು’ ಎಂದು ಅವರು ಹೇಳಿದರು.

ಅರಣ್ಯ ಇಲಾಖೆಗೆ ಮೆಚ್ಚುಗೆ: ‘ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮ ನಡೆಸುವುದು ಸುಲಭವಲ್ಲ. ಅರಣ್ಯ ಇಲಾಖೆ ಅತ್ಯಂತ ವ್ಯವಸ್ಥಿತವಾಗಿ ನಡೆಸಿದೆ. ಹಬ್ಬದಲ್ಲಿ ಭಾಗವಹಿಸಿದವರಿಗೆ ಯಾರಿಗೂ ಏನೂ ತೊಂದರೆಯಾಗಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಕಾಳಜಿ ವಹಿಸಿ, ಎಲ್ಲರನ್ನೂ ಸುರಕ್ಷಿತವಾಗಿ ಕಾಡಿನಲ್ಲಿ ಸುತ್ತಾಡಿಸಿದ್ದಾರೆ’ ಎಂದು ಸುಬ್ರಹ್ಮಣ್ಯ ಅವರು ಮೆಚ್ಚುಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT