ಮಂಗಳವಾರ, ಜೂನ್ 28, 2022
28 °C
ಕಾರ್ಮಿಕರಿಗೆ ಲಾಕ್‌ಡೌನ್‌ ಪರಿಹಾರ ಪ್ಯಾಕೇಜ್‌, ಅರ್ಜಿ ಸಲ್ಲಿಕೆ ಬೇಡ, ನೇರ ಖಾತೆಗೆ ಹಣ ಜಮೆ

ಚಾಮರಾಜನಗರ: 34 ಸಾವಿರಕ್ಕೂ ಹೆಚ್ಚು ಮಂದಿಗೆ ಸಿಗಲಿದೆ ಪರಿಹಾರ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್ 2ನೇ ಅಲೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರ (₹3,000) ಜಿಲ್ಲೆಯಲ್ಲಿ 34 ಸಾವಿರಕ್ಕೂ ಹೆಚ್ಚು ಜನರಿಗೆ ಸಿಗಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಪರಿಹಾರ ಪಡೆಯಲು ಕಟ್ಟಡ ಕಾರ್ಮಿಕರು ಅರ್ಜಿ ಸಲ್ಲಿಸಬೇಕಾಗಿಲ್ಲ‌. ಕಾರ್ಮಿಕ ಇಲಾಖೆಯಲ್ಲಿ ಈಗಾಗಲೇ ನೋಂದಣಿಯಾದ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಜಮೆ ಆಗಲಿದೆ. 

ಕಾರ್ಮಿಕರಿಗೆ ಆನ್‌ಲೈನ್‌ನಲ್ಲಿ ಮಾತ್ರ ನೋಂದಣಿ ಮಾಡಲು ಅವಕಾಶವಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಮಾಡಬೇಕು.  ಲಾಕ್ಡೌ‌ನ್ ಅವಧಿ ಮುಗಿಯುವರೆಗೂ ನೋಂದಣಿ ಮಾಡಬಹುದು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 40 ಸಾವಿರದಷ್ಟು ಕಟ್ಟಡ ಕಾರ್ಮಿಕರಿದ್ದಾರೆ. ಇವರಲ್ಲಿ 60 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು (ಪಿಂಚಣಿ ಪಡೆಯುತ್ತಿರುವವರು) ಹಾಗೂ ಮೃತಪಟ್ಟವರೂ ಸೇರಿದ್ದಾರೆ. ಇವರನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.

ಕಳೆದ ವರ್ಷದ ಲಾಕ್‌ಡೌನ್ ಸಮಯದಲ್ಲೂ ರಾಜ್ಯ ಸರ್ಕಾರ, ಕಟ್ಟಡ ಕಾರ್ಮಿಕರಿಗೆ ₹5,000 ಪರಿಹಾರ ಘೋಷಿಸಿತ್ತು. ಜಿಲ್ಲೆಯ 16,265 ಸಾವಿರ ಮಂದಿಗೆ ಹಣದ ನೆರವು ಸಿಕ್ಕಿತ್ತು. 

ಒಂದು ವರ್ಷದ ಅವಧಿಯಲ್ಲಿ ಹೊಸದಾಗಿ 18 ಸಾವಿರ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಹಾಗಾಗಿ, ಕಳೆದ ವರ್ಷ ಪರಿಹಾರ ಪಡೆದವರು ಹಾಗೂ ಹೊಸದಾಗಿ ನೋಂದಣಿ ಮಾಡಿಕೊಂಡವರು ಸೇರಿದಂತೆ 34 ಸಾವಿರಕ್ಕೂ ಹೆಚ್ಚು ಜನರಿಗೆ ಪರಿಹಾರ ಬರಲಿದೆ. 

ಜೂನ್ 5ರಿಂದ ಅರ್ಜಿ ಆಹ್ವಾನ: ಬಡತನ ರೇಖೆಗಿಂತ ಕೆಳಗಿರುವ, ಅಸಂಘಟಿತ ವಲಯದ ಕಾರ್ಮಿಕರಿಗೂ ಸರ್ಕಾರ ₹2,000 ಪರಿಹಾರ ಘೋಷಿಸಿದ್ದು, ಕ್ಷೌರಿಕರು ಹಾಗೂ ಅಗಸರು ಬಿಟ್ಟು ಉಳಿದ ವಲಯಗಳಲ್ಲಿ ಗುರುತಿಸಿಕೊಂಡವರು (ಟೈಲರ್‌ಗಳು, ಹಮಾಲಿಗಳು, ಹಮಾಲಿಗಳು, ಚಿಂದಿ ಆಯುವವರು, ಕುಂಬಾರರು, ಭಟ್ಟಿ ಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕ್‌ಗಳು, ಕಮ್ಮಾರರು, ಗೃಹ ಕಾರ್ಮಿಕರು ಮತ್ತು ಚಮ್ಮಾರರು) ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಜೂನ್ 5 ರಿ‌ಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. 

'ನೋಂದಣಿ ಮಾಡಿಕೊಂಡಿರುವ ಅಗಸರು ಹಾಗೂ ಕ್ಷೌರಿಕರಿಗೆ ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಪರಿಹಾರ ಜಮೆ ಆಗಲಿದೆ. ಲಾಕ್‌ಡೌನ್ ಮುಗಿಯುವವರೆಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಲು ಅವಕಾಶ ಇದೆ. ಉಳಿದ ವಲಯದ ಕಾರ್ಮಿಕರು ಅರ್ಜಿ ಸಲ್ಲಿಸಬೇಕು. ಕುಟುಂಬದಲ್ಲಿ ಒಬ್ಬರ ಖಾತೆಗೆ ಮಾತ್ರ ಪರಿಹಾರ ಸಿಗಲಿದೆ' ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಮಹದೇವಸ್ವಾಮಿ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಕಳೆದ ವರ್ಷ ಅಗಸರು, ಕ್ಷೌರಿಕರಿಗೂ ₹5,000 ಪರಿಹಾರ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ 2,669 ಅಗಸರಿಗೆ, 841 ಕ್ಷೌರಿಕರಿಗೆ ಆರ್ಥಿಕ ನೆರವು ಸಿಕ್ಕಿತ್ತು. 

ಕಾರ್ಮಿಕ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2,950 ಅಗಸರು ಹಾಗೂ 1,057 ಕ್ಷೌರಿಕರು ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. 

ಬ್ಯಾಂಕ್‌ ಖಾತೆ ಚಾಲ್ತಿಯಲ್ಲಿರಬೇಕು

ಪರಿಹಾರದ ಹಣ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಆಗುತ್ತದೆ. ತಾಂತ್ರಿಕ ಸಮಸ್ಯೆಗಳಿದ್ದರೆ ಹಣ ಪಾವತಿ ಆಗುವುದಿಲ್ಲ. ಮೊದಲಿಗೆ ಬ್ಯಾಂಕ್‌ ಖಾತೆ ಚಾಲ್ತಿಯಲ್ಲಿರಬೇಕು. ಖಾತೆಗೆ ಆಧಾರ್‌ ಸಂಖ್ಯೆ, ಮೊಬೈಲ್‌ ಸಂಖ್ಯೆ ಜೋಡಣೆಯಾಗಿರಬೇಕು. ಐಎಫ್‌ಎಸ್‌ಸಿ ಕೋಡ್‌ ಸರಿಯಾಗಿ ಇರಬೇಕು. ಇಷ್ಟೆಲ್ಲ ಇದ್ದರೆ ಯಾವುದೇ ಸಮಸ್ಯೆ ಇಲ್ಲದೇ ಕಾರ್ಮಿಕರ ಖಾತೆಗೆ ಹಣ ಜಮೆಯಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು. 

--------

ಹಣ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ. ಕಟ್ಟಡ ಕಾರ್ಮಿಕರು ಮಧ್ಯವರ್ತಿಗಳ ಮೊರೆ ಹೋಗಬಾರದು, ಕಚೇರಿಗೂ ಬರಬೇಕಾಗಿಲ್ಲ. ನೇರವಾಗಿ ಅವರ ಖಾತೆಗೆ ಪರಿಹಾರ ಜಮೆ ಆಗಲಿದೆ

- ಎಂ.ಮಹದೇವಸ್ವಾಮಿ, ಜಿಲ್ಲಾ ಕಾರ್ಮಿಕ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು