ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: 2,534 ವಿದ್ಯಾರ್ಥಿಗೆ ₹69.50 ಲಕ್ಷ

ಮುಖ್ಯಮಂತ್ರಿ ವಿದ್ಯಾನಿಧಿ; ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ, ಖಾತೆಗೆ ಜಮೆ
Last Updated 20 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದ ‘ಮುಖ್ಯಮಂತ್ರಿ ರೈತ ವಿದ್ಯಾ ನಿಧಿ’ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಇದುವರೆಗೆ ಅರ್ಜಿ ಸಲ್ಲಿಸಿದ 2,534 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಲಭಿಸಿದೆ.

ರಾಜ್ಯ ಸರ್ಕಾರ ಇಷ್ಟು ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ₹69.50 ಲಕ್ಷ ಜಮೆ ಮಾಡಿದೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಮೊದಲ ಸಚಿವ ಸಂಪುಟ ಸಭೆ ನಡೆಸಿದ ನಂತರ ಈ ಮಹತ್ವಾಕಾಂಕ್ಷೆ ಯೋಜನೆಯನ್ನು ಘೋಷಿಸಿದ್ದರು. ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣ ಪಡೆಯುವ ರೈತರ ಮಕ್ಕಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ.

ಯಾರಿಗೆ, ಎಷ್ಟು?: ಪಿಯುಸಿ, ಐಟಿಐ, ಡಿಪ್ಲೊಮಾ ಕೋರ್ಸ್‌ ಮಾಡುವ ವಿದ್ಯಾರ್ಥಿಗಳಿಗೆ ₹2,500 ಹಾಗೂ ವಿದ್ಯಾರ್ಥಿನಿಯರಿಗೆ (ಲೈಂಗಿಕ ಅಲ್ಪಸಂಖ್ಯಾತರೂ ಸೇರಿ) ₹3,000 ವಿದ್ಯಾರ್ಥಿ ವೇತನ ನಿಗದಿ ಪಡಿಸಲಾಗಿದೆ. ಪದವಿ ಓದುತ್ತಿರುವ ಪುರುಷರಿಗೆ ₹5,000 ಹಾಗೂ ಮಹಿಳೆಯರಿಗೆ ₹5,500, ಕಾನೂನು, ಪ್ಯಾರಾ ಮೆಡಿಕಲ್‌, ಬಿ.ಫಾರ್ಮ, ನರ್ಸಿಂಗ್‌ ಓದುವ ಯುವಕ ₹7,500 ಹಾಗೂ ಯುವತಿಯರಿಗೆ ₹8,000 ಎಂಬಿಬಿಎಸ್‌, ಬಿಇ, ಸ್ನಾತಕೋತ್ತರ ಕೋರ್ಸ್‌ ಓದುತ್ತಿರುವ ಪುರುಷರಿಗೆ ₹10 ಸಾವಿರ, ಮಹಿಳೆಯರಿಗೆ ₹11 ಸಾವಿರ ವಿದ್ಯಾರ್ಥಿ ವೇತನ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತದೆ.

‘ವಿದ್ಯಾರ್ಥಿ ವೇತನ ಪಡೆಯುವುದಕ್ಕೆ ರೈತರ ಮಕ್ಕಳು ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.ಯಾವಾಗ ಬೇಕಾದರೂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಬಹುದು. ಇದಕ್ಕೆ ಗಡುವು ಏನಿಲ್ಲ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಿರಂತರವಾಗಿರುತ್ತದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು ’ಪ್ರಜಾವಾಣಿ’ಗೆ ತಿಳಿಸಿದರು.

‘ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆಯಾಗದಿದ್ದರೆ, ಆಧಾರ್‌ನಲ್ಲಿ ಹೆಸರು ಸರಿಯಾಗಿಲ್ಲದಿದ್ದರೆ, ಅರ್ಜಿ ಸಲ್ಲಿಸುವುದಕ್ಕೆ ಆಗುವುದಿಲ್ಲ. ಈ ಕಾರಣಕ್ಕೆ 90 ವಿದ್ಯಾರ್ಥಿಗಳ ಅರ್ಜಿಗಳನ್ನು ಪೋರ್ಟಲ್‌ ಪರಿಗಣಿಸಿಲ್ಲ’ ಎಂದು ಅವರು ಹೇಳಿದರು.

ಎಲ್ಲವೂ ಆನ್‌ಲೈನ್‌ನಲ್ಲೇ ಆಗುವುದರಿಂದ ಎಷ್ಟು ಅರ್ಜಿ ಸಲ್ಲಿಕೆಯಾಗಿದೆ ಎಂಬ ಮಾಹಿತಿ ಜಿಲ್ಲಾ ಮಟ್ಟದಲ್ಲಿ ಗೊತ್ತಾಗುವುದಿಲ್ಲ. ಸರ್ಕಾರವೇ ನೇರವಾಗಿ ಖಾತೆಗೆ ಹಣ ಹಾಕುವುದರಿಂದ ಇಲ್ಲಿ ಇಲಾಖೆಯ ಪಾತ್ರ ಕಡಿಮೆ ಇರುತ್ತದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಚಾಮರಾಜನಗರ ತಾಲ್ಲೂಕಿನಲ್ಲಿ ಹೆಚ್ಚು: ಕೃಷಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ವಿದ್ಯಾರ್ಥಿ ವೇತನ ಪಡೆದಿರುವವರಲ್ಲಿ ಚಾಮರಾಜನಗರ ತಾಲ್ಲೂಕಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 887 ಮಂದಿ ವಿದ್ಯಾರ್ಥಿಗಳಿಗೆ ₹24.4 ಲಕ್ಷದಷ್ಟು ವಿದ್ಯಾರ್ಥಿವೇತನ ಬಂದಿದೆ.

ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕು ಒಟ್ಟಾಗಿ 834 ವಿದ್ಯಾರ್ಥಿಗಳಿಗೆ ₹22.81 ಲಕ್ಷ ಹಣ ಜಮೆ ಆಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 733 ಮಂದಿಗೆ ₹19.97 ಲಕ್ಷ ಜಮೆಯಾಗಿದೆ. ಯಳಂದೂರು ತಾಲ್ಲೂಕಿನಲ್ಲಿ ಅತಿ ಕಡಿಮೆ ಅಂದರೆ 80 ವಿದ್ಯಾರ್ಥಿಗಳಿಗೆ ಮಾತ್ರ ₹2.26 ಲಕ್ಷ ವಿದ್ಯಾರ್ಥಿ ವೇತನ ಬಂದಿದೆ.

ನಿಯಮಗಳು ಇನ್ನಷ್ಟು ಸರಳ
ಯೋಜನೆ ಘೋಷಣೆಯಾದಾಗ ಸರ್ಕಾರ, ವಿದ್ಯಾರ್ಥಿ ವೇತನಕ್ಕಾಗಿ ಹಲವು ಷರತ್ತುಗಳನ್ನು ಹಾಕಿತ್ತು.

ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ ಸೇರಿದಂತೆ ಇತರ ಶಿಷ್ಯವೇತನ ಪಡೆದ ವಿದ್ಯಾರ್ಥಿಗಳು ಮುಖ್ಯಮಂತ್ರಿ ವಿದ್ಯಾನಿಧಿಗೆ ಅರ್ಜಿ ಹಾಕುವಂತಿರಲಿಲ್ಲ. ಶೈಕ್ಷಣಿಕ ವರ್ಷ/ಸೆಮಿಸ್ಟರ್‌ನಲ್ಲಿ ಅನುತ್ತೀರ್ಣವಾದರೆ ಪುನಃ ಅದೇ ಸೆಮಿಸ್ಟರ್‌ ಅಥವಾ ಶೈಕ್ಷಣಿಕ ವರ್ಷದಲ್ಲಿ ಮುಂದುವರಿದರೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಹೇಳಲಾಗಿತ್ತು.

ಡಿಸೆಂಬರ್‌ 10ರಂದು ಈ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದ್ದು, ಬೇರೆ ವಿದ್ಯಾರ್ಥಿ ವೇತನ ಪಡೆಯುವ ರೈತರ ಮಕ್ಕಳು ಕೂಡ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು, ಅನುತ್ತೀರ್ಣರಾದವರು ಕೂಡ ಮತ್ತೆ ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಅಧಿಕೃತ ಆದೇಶ ಇನ್ನಷ್ಟೇ ಬರಬೇಕಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.

ನಿಯಮಗಳು ಸಡಿಲಿಕೆಯಾಗಿರುವುದರಿಂದ ಇನ್ನಷ್ಟು ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಸೌಲಭ್ಯ ಸಿಗಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT