ಬುಧವಾರ, ಆಗಸ್ಟ್ 17, 2022
28 °C
ಜಿಲ್ಲೆಯಲ್ಲಿ ನಡೆಯುತ್ತಿದೆ ಧಾನ್ಯಗಳ ಕಟಾವು, ಸಣ್ಣ ರೈತರಿಗೆ ಡಾಂಬರು ರಸ್ತೆಯೇ ಕಣ

ಕೊಳ್ಳೇಗಾಲ: ಮುಖ್ಯ ರಸ್ತೆಗಳಲ್ಲಿ ಒಕ್ಕಣೆ; ಸವಾರರಿಗೆ ಸಂಕಷ್ಟ

ಅವಿನ್‌ ಪ್ರಕಾಶ್‌ ವಿ. Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ರಾಗಿ, ಜೋಳ ಹಾಗೂ ಇನ್ನಿತರ ಧಾನ್ಯಗಳ ಕಟಾವು ಆರಂಭಗೊಂಡಿದ್ದು, ಗ್ರಾಮೀಣ ಭಾಗದಲ್ಲಿ ರೈತರು ಮುಖ್ಯ ರಸ್ತೆಗಳಲ್ಲೇ ಒಕ್ಕಣೆ ಮಾಡಲು ಆರಂಭಿಸಿದ್ದಾರೆ. 

ನಿಯಮಗಳ ಅನುಸಾರ ರಸ್ತೆಗಳಲ್ಲಿ ಒಕ್ಕಣೆ ಮಾಡುವಂತಿಲ್ಲ. ಕಣಗಳಲ್ಲಿ ಅಥವಾ ರೈತರು ತಮ್ಮ ಜಮೀನುಗಳಲ್ಲಿ ಒಕ್ಕಣೆ ಮಾಡಬೇಕು. ಆದರೆ, ಜಾಗ ಹಾಗೂ ಹೆಚ್ಚಿನ ಖರ್ಚಿನ ಕಾರಣವನ್ನು ನೀಡಿ ರೈತರು, ನೂರಾರು ವಾಹನಗಳು ಸಂಚರಿಸುವ ರಸ್ತೆಗಳ ಉದ್ದಕ್ಕೂ ಒಕ್ಕಣೆ ಮಾಡುತ್ತಿದ್ದಾರೆ. 

ಆದರೆ ರಸ್ತೆಯಲ್ಲೇ ಒಕ್ಕಣೆ ಮಾಡುವುದರಿಂದ ವಾಹನ ಸವಾರರು ತೊಂದರೆಗೆ ಸಿಲುಕುತ್ತಿದ್ದಾರೆ. ಒಣಹುಲ್ಲು ಹಾಗೂ ಧಾನ್ಯಗಳು ಜಾರುವುದರಿಂದ ದ್ವಿಚಕ್ರವಾಹನಗಳು ಅಪಘಾತಕ್ಕೆ ಈಡಾಗುತ್ತವೆ. ನಾಲ್ಕು ದಿನಗಳ ಹಿಂದೆ ತಾಲ್ಲೂಕಿನ ಸತ್ತೇಗಾಲ ಗ್ರಾಮದ ಹ್ಯಾಂಡ್‌ ಪೋಸ್ಟ್‌ ಬಳಿ ಹಾಗೂ ದೊಡ್ಡಿಂದುವಾಡಿಯಲ್ಲಿ ಇಬ್ಬರು ಸವಾರರು ರಾಗಿ ಒಕ್ಕಣೆಯ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಇದಲ್ಲದೇ ನಾಲ್ಕು ಚಕ್ರದ ವಾಹನಗಳು ಸಂಚರಿಸುವಾಗ ಒಣಹುಲ್ಲಿನ ದೂಳು ಏರ್‌ ಫಿಲ್ಟರ್‌ಗೆ ಸಿಕ್ಕಿ‌ ವಾಹನದ ಕಾರ್ಯನಿರ್ವಹಣೆಗೆ ತೊಂದರೆಯಾಗುತ್ತದೆ. ಜೊತೆಗೆ, ದೊಡ್ಡ ದೊಡ್ಡ ವಾಹನಗಳಲ್ಲಿ ಸೈಲನ್ಸರ್‌ನಿಂದ ಹೊರಬರುವ ಬೆಂಕಿಯ ಕಿಡಿ ದೊಡ್ಡ ಅನಾಹುತವನ್ನೇ ಸೃಷ್ಟಿಸುವ ಅಪಾಯವೂ ಇರುತ್ತದೆ.

‘ರಸ್ತೆಗಳಲ್ಲಿ ಒಕ್ಕಣೆಯ ಕಾರಣದಿಂದ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇದೆ. ಈ ಸಮಸ್ಯೆ ಬಗೆಹರಿಸಲು ಯಾರೂ ಮುಂದಾಗುತ್ತಿಲ್ಲ. ಪ್ರತಿ ವರ್ಷ ಕಟಾವಿನ ಸಂದರ್ಭದಲ್ಲಿ ರಸ್ತೆಗಳಲ್ಲಿ ಒಕ್ಕಣೆಯ ಕಾಟ ಇರುತ್ತದೆ’ ಎಂದು ದ್ವಿಚಕ್ರ ವಾಹನ ಸವಾರ ಪ್ರೀತಂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಕೃಷಿ ಇಲಾಖೆ, ಪೊಲೀಸರು ಹಾಗೂ ಸ್ಥಳೀಯ ಆಡಳಿತ ಒಕ್ಕಣೆಯಿಂದ ಆಗುವ ಅನಾಹುತಗಳ ಬಗ್ಗೆ ರೈತರಿಗೆ ತಿಳಿ ಹೇಳುವ ಕೆಲಸ ಮಾಡಬೇಕು. ಒಕ್ಕಣೆಗಾಗಿ ಸಾಕಷ್ಟು ಕಣಗಳನ್ನು ನಿರ್ಮಿಸಿಕೊಡಬೇಕು. ಇದರಿಂದಾಗಿ ರೈತರು ಈ ಉದ್ದೇಶಕ್ಕೆ ಮುಖ್ಯ ರಸ್ತೆಗಳನ್ನು ಬಳಸುವುದು ತಪ್ಪುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ ವಾಹನ ಸವಾರರು. 

‘ರಸ್ತೆಯಲ್ಲಿ ಮಾಡುವ ಒಕ್ಕಣೆಯ ಕಾರಣಕ್ಕೆ ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿರುವುದು ಗಮನಕ್ಕೆ ಬಂದಿದೆ. ರಸ್ತೆಗಳಲ್ಲಿ ಒಕ್ಕಣೆ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಸ್ಥಳೀಯ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ರಸ್ತೆಯಲ್ಲಿ ಒಕ್ಕಣೆಗೆ ತೊಡಗಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಗ್ರಾಮಗಳಲ್ಲಿ ನೀಡಲಾಗಿದೆ’ ಎಂದು ಕೊಳ್ಳೇಗಾಲದ ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀಕಾಂತ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಆರೋಗ್ಯಕ್ಕೂ ಹಾನಿ: ಒಕ್ಕಣೆ ಹಾಕಿದ ಜಾಗದಲ್ಲಿ ಉಂಟಾಗುವ ಧೂಳು ಹಾಗೂ ಧಾನ್ಯಗಳ ಹೊಟ್ಟಿನಿಂದ ಆರೋಗ್ಯಕ್ಕೂ ಹಾನಿಯಾಗುವ ಸಂಭವ ಇರುತ್ತದೆ. ಒಕ್ಕಣೆ ಮಾಡಿ ತೂರುವ ವೇಳೆ ಹೊಟ್ಟು ಕಣ್ಣು, ಮುಖಕ್ಕೆ ರಾಚುತ್ತದೆ. ಕಣ್ಣಿಗೆ ಬಿದ್ದರೆ ಹಾನಿ ಖಚಿತ. ಮುಖಕ್ಕೆ ರಾಚುವ ಧೂಳು, ಹೊಟ್ಟಿನಿಂದ ತುರಿಕೆಯೂ ಉಂಟಾಗಬಹುದು. 

ಅನಿವಾರ್ಯವಾಗಿ ಒಕ್ಕಣೆ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗೌಡೇ ಗೌಡ ಅವರು, ‘ಸಣ್ಣ ರೈತರಲ್ಲಿ ಒಕ್ಕಣೆ ಮಾಡಲು ಕಣ ಇಲ್ಲ. ಜಮೀನಿನಲ್ಲಿ ಕಣ ನಿರ್ಮಿಸಲು ಹೆಚ್ಚು ವೆಚ್ಚವಾಗುತ್ತದೆ. ಅಂತಹವರು ಅನಿವಾರ್ಯವಾಗಿ ರಸ್ತೆಗಳಲ್ಲೇ ಒಕ್ಕಣೆ ಮಾಡುತ್ತಿದ್ದಾರೆ. ಸರ್ಕಾರ ಕಣ ನಿರ್ಮಿಸಿಕೊಟ್ಟರೆ ಯಾರೂ ರಸ್ತೆಗಳಲ್ಲಿ ಒಕ್ಕಣೆ ಮಾಡುವುದಿಲ್ಲ’ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು