ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಕಾರ್ಯವೈಖರಿಗೆ ಶಾಸಕರ ಅಸಮಾಧಾನ

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ
Last Updated 27 ಜನವರಿ 2020, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿ 209 ಹಾಗೂ ಜಿಲ್ಲಾಕೇಂದ್ರದ ಬಿ.ರಾಚಯ್ಯ ಜೋಡಿರಸ್ತೆ ಕಾಮಗಾರಿಗಳು ಇನ್ನೂ ಪೂರ್ಣವಾಗದಿರುವುದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಹಾಗೂ ಎನ್‌.ಮಹೇಶ್‌ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿ 209ರ ಕೆಲಸವನ್ನು ಮೇ 20ರೊಳಗೆ ಪೂರ್ಣಗೊಳಿಸುವಂತೆ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಸೋಮವಾರ, ಸಂಸದ ವಿ.ಶ್ರೀನಿವಾಸ ಪ್ರಸಾದ್‌ ನೇತೃತ್ವದಲ್ಲಿ ನಡೆದಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಇಬ್ಬರೂ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಭೆಯ ಆರಂಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕ ಶ್ರೀಧರ್‌ ಮಾತನಾಡಿ, ‘ಜಿಲ್ಲೆಯಲ್ಲಿ ಒಟ್ಟು 68 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಇದರಲ್ಲಿ 30 ಕಿ.ಮೀ. ಉದ್ದದ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ’ ಎಂದರು.

ತಕ್ಷಣ ಶಾಸಕರಾದ ಮಹೇಶ್‌, ಪುಟ್ಟರಂಗಶೆಟ್ಟಿ ಅವರು, ‘ಯಾವ ಹೆದ್ದಾರಿ ಪೂರ್ಣಗೊಂಡಿದೆ ಎನ್ನುವುದನ್ನು ಸಭೆಗೆ ತಿಳಿಸಿ. ಆಗಸ್ಟ್‌ 2017ರಲ್ಲಿ ಆರಂಭಗೊಂಡ ಕಾಮಗಾರಿ ಮೂರು ವರ್ಷಗಳಿಂದ ನಡೆಯುತ್ತಿದೆ. ಹೋದ ವರ್ಷದ ಆಗಸ್ಟ್‌ಗೆ ಮುಗಿಯಬೇಕಿತ್ತು. ಈವರೆಗೂ ಮುಗಿದಿಲ್ಲ. ಅರ್ಧದಷ್ಟು ಕಾಮಗಾರಿಗಳು ಇನ್ನೂ ಉಳಿದಿವೆ. ಕಾಮಗಾರಿ ಕೈಗೊಳ್ಳಲು ಭೂ ಸ್ವಾಧೀನ ಕಾರ್ಯ ಕೂಡ ಮುಗಿದಿಲ್ಲ. ಹೀಗಿರುವಾಗ ಕಾಮಗಾರಿ ಮುಗಿಯಲು ಹೇಗೆ ಸಾಧ್ಯ’ ಎಂದು ಖಾರವಾಗಿಯೇ ಪ್ರಶ್ನಿಸಿದರು.

‘ನಗರದ ಬಿ.ರಾಚಯ್ಯ ಜೋಡಿರಸ್ತೆಯ ಕಾಮಗಾರಿ ರಾಮಸಮುದ್ರದ ಭಾಗದಲ್ಲಿ ಪೂರ್ಣಗೊಂಡಿಲ್ಲ. ಚರಂಡಿನಿರ್ಮಾಣ ಮಾಡದೆ ತೊಂದರೆಯಾಗುತ್ತಿದೆ. ನಾನೇ ಪರಿಶೀಲಿಸಿ ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರೂ ಈವರೆಗೆ ಕೆಲಸ ಶುರುವಾಗಿಲ್ಲ.ಉಳಿದ₹ 3.85 ಕೋಟಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಸುರೇಂದ್ರ ಮಾತನಾಡಿ, ‘1,200 ಮೀಟರ್‌ ಉದ್ದದ ಚರಂಡಿ ಕಾಮಗಾರಿ ಬಾಕಿ ಉಳಿದಿದೆ. 3 ಕಿ.ಮೀ. ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಚರಂಡಿ ಕಾಮಗಾರಿ ಕೈಗೆತ್ತಿಕೊಂಡಿಲ್ಲ’ ಎಂದರು. ಇದಕ್ಕೆ ಪುಟ್ಟರಂಗಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಪ್ರಕರಣ ಒಂದು ಕಡೆ ಇದ್ದರೆ ಉಳಿದ ಕಡೆಗಳಲ್ಲಿ ಚರಂಡಿ ನಿರ್ಮಾಣಕ್ಕೆ ಅವಕಾಶವಿದ್ದರೂ ಮಾಡಿಲ್ಲವಲ್ಲ? ಅಲ್ಲದೆ, ರಾಮಸಮುದ್ರದಿಂದ ಮುಂದಕ್ಕೆ ನಿಗದಿತ ಅಳತೆಯಲ್ಲಿ ಕಾಂಕ್ರೀಟ್‌ ರಸ್ತೆ ಇನ್ನೂ ನಿರ್ಮಿಸಿಲ್ಲ. ಈ ಬಗ್ಗೆ ಗಮನ ಕೊಡಿ. ಸಭೆಗೆ ಸುಳ್ಳು ಮಾಹಿತಿ ಕೊಡಬೇಡಿ. ನಿಮ್ಮ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಕೆಲಸ ಪಡೆದುಕೊಳ್ಳಿ’ ಎಂದು ತಾಕೀತು ಮಾಡಿದರು.

ಶಾಸಕ ಎನ್‌.ಮಹೇಶ್ ಮಾತನಾಡಿ, ‘ಕೊಳ್ಳೇಗಾಲ ನಗರ ಅಭಿವೃದ್ಧಿಪಡಿಸುತ್ತಿರುವ ಹೆದ್ದಾರಿಯಲ್ಲಿ ಅವೈಜ್ಞಾನಿಕ ವಿಭಜಕಗಳನ್ನು ಹಾಕಲಾಗಿದೆ. ಇದರಿಂದ ಜನರಿಗೆ ಹಾಗೂ ವಾಹನ ಸಂಚಾರಕ್ಕೆ ಅನನುಕೂಲವಾಗುತ್ತಿದೆ. ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅವರೊಂದಿಗೆ ಸಮನ್ವಯಪಡೆದುಕೊಂಡು ಕೆಲವು ಕಡೆಗಳಲ್ಲಿ ವಿಭಜಕಗಳನ್ನು ತೆರವುಗೊಳಿಸಬೇಕು. ಅಗತ್ಯವಿರುವ ಕಡೆ ಸೂಚನಾ ಫಲಕಗಳು, ಸಂಚಾರ ದೀಪಗಳನ್ನು ಅಳವಡಿಸಬೇಕು’ ಎಂದರು.

ಶ್ರೀನಿವಾಸ ಪ್ರಸಾದ್‌ ಮಾತನಾಡಿ, ‘ವಿಳಂಬಾಗಿರುವ ರಾಷ್ಟ್ರೀಯ ಹೆದ್ದಾರಿ 209ರ ಕಾಮಗಾರಿಗಳನ್ನು ಮೇ 20ರೊಳಗೆ ಪೂರ್ಣಗೊಳಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ಹೇಳಿದರು.

ಉದ್ಯೋಗ ಖಾತ್ರಿ ಯೋಜನೆ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಜನರು ಕೆಲಸ ಅರಸಿ ಗುಳೆ ಹೋಗುವುದನ್ನು ತಪ್ಪಿಸಿ ಸ್ಥಳೀಯವಾಗಿ ಉದ್ಯೋಗ ಒದಗಿಸಬೇಕು. ನರೇಗಾ ಯೋಜನೆಯ ಉದ್ದೇಶವೇ ಸ್ಥಳೀಯವಾಗಿ ಗ್ರಾಮೀಣರಿಗೆ ಕೆಲಸ ನೀಡುವುದು ಆಗಿದೆ. ಸಕಾಲದಲ್ಲಿ ನರೇಗಾ ಯೋಜನೆಯ ಕೂಲಿ ಹಣ ಪಾವತಿ ಮಾಡುವಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಹೇಳಿದರು.

ವಾರದೊಳಗೆ ಸಿಗಬೇಕು: ‘ನರೇಗಾ ಯೋಜನೆಯಡಿ ಕೂಲಿ ನೀಡುವಾಗ 2 ತಿಂಗಳುಗಳಾದರೆ ಕೂಲಿಗಾರರಿಗೆ ತೊಂದರೆಯಾಗುತ್ತದೆ. ವಾರದೊಳಗೆ ಸರ್ಕಾರ ಹಣ ಬಿಡುಗಡೆಗೊಳಿಸುವಂತೆ ಆಗಬೇಕು. ಇದನ್ನು ಸರ್ಕಾರದ ಗಮನಕ್ಕೆ ತರಬೇಕು’ ಎಂದು ಸಂಸದರಿಗೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಮನವಿ ಮಾಡಿದರು.

ಜಿಲ್ಲಾ ಪಂಚಾಯತಿ ಅಧ್ಯಕ್ಷೆಶಿವಮ್ಮ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ್ ಕುಮಾರ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಪೈಪ್‌ ಇಳಿಸಿದರೆ ಕೆಲಸ ಆದಂಗಲ್ಲ: ಎನ್‌. ಮಹೇಶ್

ಕುಡಿಯುವ ನೀರಿನ ಯೋಜನೆ ಪ್ರಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶ್ರೀನಿವಾಸ ಪ್ರಸಾದ್‌ ಅವರು, ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಸಮರ್ಪಕವಾಗಿ ಹಾಗೂ ಶೀಘ್ರವಾಗಿ ಅನುಷ್ಠಾನಗೊಳಿಸಬೇಕು. ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕೆಲಸಗಳೂ ಚುರುಕಿನಿಂದ ಆಗುವಂತೆ ನೋಡಿಕೊಳ್ಳಬೇಕು’ ಎಂದರು.

‘ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಹನೂರು ಮತ್ತು ಕೊಳ್ಳೇಗಾಲದಲ್ಲಿ ಕಾಮಗಾರಿ ಆರಂಭವಾಗಿದೆ’ ಎಂದು ಗ್ರಾಮೀಣ ಮತ್ತು ಕುಡಿಯುವ ನೀರು ವಿಭಾಗದಅಧಿಕಾರಿಗಳು ಸಭೆಗೆ ತಿಳಿಸಿದರು.

ಮಧ್ಯಪ್ರವೇಶಿಸಿದ ಶಾಸಕ ಎನ್‌.ಮಹೇಶ್‌ ಮಾತನಾಡಿ, ‘ಕಾಮಗಾರಿ ಎಲ್ಲಿ ನಡೆಯುತ್ತಿದೆ? ಉದ್ಘಾಟನೆಯೇ ಆಗಿಲ್ಲವಲ್ಲ’ ಎಂದರು.

‘ಕೆಲಸ ನಡೆಯುತ್ತಿದೆ.₹ 18 ಕೋಟಿ ವೆಚ್ಚದಲ್ಲಿ 76 ಹಳ್ಳಿಗಳಿಗೆ ಈ ಯೋಜನೆ ಇದೆ. ಈಗ ಕೊಳ್ಳೇಗಾಲದಲ್ಲಿ ಪೈಪ್‌ ಹಾಕಲಾಗಿದೆ’ ಎಂದು ಅಧಿಕಾರಿ ಸಮಜಾಯಿಷಿ ನೀಡಿದರು.

ಮಹೇಶ್‌ ಮಾತನಾಡಿ, ‘ಪೈಪ್‌ಗಳನ್ನು ಖರೀದಿ ಮಾಡಿ ಇಟ್ಟಿದ್ದೀರಾ ಅಷ್ಟೆ. ಕೆಲಸ ಆರಂಭವಾಗಿಲ್ಲ. ಪೈಪ್‌ಗಳನ್ನು ಇಡಲಾದ ಮಾತ್ರಕ್ಕೆ ಕೆಲಸ ಆರಂಭವಾಗುವುದಿಲ್ಲ. ಶೀಘ್ರವೇ ಕಾಮಗಾರಿ ಆರಂಭಿಸಿ’ ಎಂದರು.

ವಿಡಿಯೊ ಗೇಮ್ ಆಡುತ್ತಿದ್ದ ಆಯುಕ್ತ

ವಿ.ಶ್ರೀನಿವಾಸ ಪ್ರಸಾದ್‌ ಅವರು ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ನಡೆದ ಮೊದಲಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಇದು. 10.30ಗೆ ಆರಂಭವಾಗಬೇಕಿದ್ದ ಸಭೆ ಒಂದೂವರೆ ಗಂಟೆ ವಿಳಂಬವಾಗಿ ಆರಂಭಗೊಂಡಿತು.

ಸಭೆ ನಡೆಯುತ್ತಿದ್ದ ಸಂದರ್ಣದಲ್ಲಿ ಕೆಲವು ಅಧಿಕಾರಿಗಳು ತೂಕಡಿಸುತ್ತಿದ್ದರೆ, ಚಾಮರಾಜನಗರ ನಗರಸಭೆ ಆಯುಕ್ತ ಎಂ.ರಾಜಣ್ಣ ಅವರು ಮೊಬೈಲ್‌ನಲ್ಲಿ ವಿಡಿಯೊ ಗೇಮ್‌ ಆಡುತ್ತಿದ್ದರು. ದೃಶ್ಯ ಮಾಧ್ಯಮದವರ ಕ್ಯಾಮೆರಾಗಳಲ್ಲಿ ಇದು ಸೆರೆಯಾಯಿತು. ಮೊಬೈಲ್‌ ಹಿಡಿದುಕೊಂಡು, ಮೇಜಿನ ಮೇಲಿಟ್ಟು ‘ಕ್ಯಾಂಡಿ ಕ್ರಶ್‌’ ಆಟವನ್ನು ಆಡುತ್ತಿದ್ದುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT