ಭಾನುವಾರ, ಜನವರಿ 19, 2020
24 °C
ಸಂಸದರ ನಿಧಿಯ ಮೊದಲ ಕಂತು ₹ 2.5 ಕೋಟಿ ಬಿಡುಗಡೆ, ಶಿಕ್ಷಣಕ್ಕೆ ಆದ್ಯತೆ– ಸಂಸದ

ದೇಶದ ಭದ್ರತೆಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ: ಶ್ರೀನಿವಾಸ ಪ್ರಸಾದ್ ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮೋದಿ ಅಥವಾ ಅಮಿತ್‌ ಶಾ ಅವರ ಕಾಯ್ದೆ ಅಲ್ಲ. ಅದು ಸಂಸತ್ತಿನ ಕಾಯ್ದೆ. ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಈ ಕಾಯ್ದೆಯನ್ನು ರೂಪಿಸಲಾಗಿದೆ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಬಲವಾಗಿ ಸಮರ್ಥಿಸಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ಯಾರೊಬ್ಬರಿಗೂ ತೊಂದರೆ ಇಲ್ಲ ಎಂಬುದನ್ನು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಮುಸ್ಲಿಂ, ಕ್ರಿಶ್ಚಿಯನ್‌ ಇತರ ಅಲ್ಪಸಂಖ್ಯಾತರ ಪೌರತ್ವಕ್ಕೆ ಯಾವುದೇ ಧಕ್ಕೆ ಇಲ್ಲ. ಹಾಗಿದ್ದರೂ ದೇಶದಾದ್ಯಂತ ವಿರೋಧ ವ್ಯಕ್ತವಾಗಿದೆ’ ಎಂದರು. 

‘ಲೋಕಸಭೆಯಲ್ಲಿ ವಿಸ್ತೃತ ಚರ್ಚೆಯಾಗಿದೆ. ಬಹುಮತದಿಂದ ಅಂಗೀಕಾರವಾಗಿದೆ. ರಾಜ್ಯಸಭೆಯಲ್ಲಿ ಚರ್ಚೆಯಾಗಿ, ಅಂಗೀಕಾರಗೊಂಡು, ರಾಷ್ಟ್ರಪತಿ ಅಂಕಿತ ಹಾಕಿ, ಕಾಯ್ದೆಯಾಗಿದೆ’ ಎಂದು ಹೇಳಿದರು. 

ಸಂಸದರ ನಿಧಿ ಬಿಡುಗಡೆ: ‘ಕೇಂದ್ರ ಸರ್ಕಾರ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಗೆ ವರ್ಷಕ್ಕೆ ನೀಡು ₹ 5 ಕೋಟಿಯಲ್ಲಿ ಮೊದಲ ಕಂತಿನಲ್ಲಿ ₹ 2.5 ಕೋಟಿ ಬಿಡುಗಡೆಯಾಗಿದೆ. ಇದನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸದ್ಬಳಕೆ ಮಾಡಲು ಯೋಜಿಸಲಾಗಿದೆ’ ಎಂದರು.

‘ಬಿಡುಗಡೆಯಾಗಿರುವ ಅನುದಾನದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು. ತಾಲ್ಲೂಕಿನ ಹೊಂಡರಬಾಳು ನವೋದಯ ಶಾಲೆಗೆ ಸೋಲಾರ್‌ ಅಳವಡಿಕೆ ಹಾಗೂ ನೀರಿನ ಸೌಲಭ್ಯಕ್ಕೆ ಹಣ ಬಿಡುಗಡೆ ಮಾಡಲಾಗುವುದು. ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬಿಎಸ್‌ಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಸಿಬಿಜಡ್‌ ಪ್ರಾರಂಭಿಸಿ ಪ್ರಯೋಗಾಲಯ ನಿರ್ಮಿಸಲು ಒತ್ತು ನೀಡಲಾಗುವುದು. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಶಿಕ್ಷಣ ಸಂಸ್ಥೆಗಳಿಗೆ ವಿವಿಧ ಸೌಲಭ್ಯಕ್ಕೆ ಹಾಗೂ ಅಂಬೇಡ್ಕರ್‌ ಭವನ ಹೆಚ್ಚುವರಿ ಅಭಿವೃದ್ಧಿಗೆ ಹಣ ವಿನಿಯೋಗಿಸಲಾಗುವುದು’ ಎಂದು ವಿವರಿಸಿದರು.

 ₹ 12.75 ಕೋಟಿ: ‘ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗೆ ಹೆದ್ದಾರಿ ಪ್ರಾಧಿಕಾರದಿಂದ ₹ 12.75 ಕೋಟಿ ಬಿಡುಗಡೆಯಾಗಿದೆ. ತಾಲ್ಲೂಕಿನ ಅಟ್ಟುಗೂಳಿಪುರದಿಂದ ತಮಿಳುನಾಡು ಗಡಿಭಾಗದವರೆಗೆ ರಸ್ತೆ ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ತಿಂಗಳ ಕೊನೆಯಲ್ಲಿ ಟೆಂಡರ್ ಕರೆಯಲಾಗುವುದು’ ಎಂದರು.

‘8.4 ಕಿ.ಮೀ ಉದ್ದದ ಮೂಗೂರು ಕ್ರಾಸ್‌– ಸಂತೇಮರಹಳ್ಳಿ ರಸ್ತೆ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರುವುದಿಲ್ಲ. ಈ ರಸ್ತೆ ಹಲವು ದಿನಗಳಿಂದ ಹದಗೆಟ್ಟು ಸಂಚಾರಕ್ಕೆ ತೊಂದರೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಂಬಂಧ ಲೋಕೋಪಯೋಗಿ ಇಲಾಖೆ ಎಂಜಿನಿಯರಗಳ ಜೊತೆ ಮಾತನಾಡಿದ್ದು ಶೀಘ್ರದಲ್ಲೇ ದುರಸ್ತಿ ಮಾಡಿಸಲಾಗುವುದು’ ಎಂದು ಭರವಸೆ ನೀಡಿದರು.

ಮುಖಂಡರಾದ ಸಿ.ಗುರುಸ್ವಾಮಿ, ಆರ್‌.ಬಾಲರಾಜು, ರಾಮಚಂದ್ರು, ಬಸವೇಗೌಡ, ಶಿವಕುಮಾರ್, ಹನುಮಂತಶೆಟ್ಟಿ, ನಂಜುಂಡಸ್ವಾಮಿ ಇದ್ದರು.

ಚಾಮುಲ್‌ ಅವ್ಯವಹಾರ: ವರದಿ ನಂತರ ನಿರ್ಧಾರ 

‘ಕುದೇರು ಚಾಮುಲ್‌ನಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ದೂರಿನ ಅನ್ವಯ ತನಿಖೆಗೆ ತಂಡ ರಚಿಸಿದ್ದಾರೆ. ಹೊರನೋಟಕ್ಕೆ ಅವ್ಯವಹಾರ ನಡೆದಿರುವುದು ಕಂಡು ಬಂದಿದೆ. ವರದಿ ಬಂದ ನಂತರ ಕ್ರಮದ ಬಗ್ಗೆ ನಿರ್ಧರಿಸಲಾಗುವುದು’ ಎಂದರು. 

‘ನೇಮಕಾತಿಯಲ್ಲಿ ಸ್ವಜನ ಪಕ್ಷಪಾತ ನಡೆದಿದೆ. ಪ್ರತಿಭಾವಂತರನ್ನು ವಂಚಿಸಿ ಬೇರೆಯವರನ್ನು ನೇಮಿಸಿಕೊಳ್ಳಲಾಗಿದೆ ಎಂಬ ಆರೋಪ ಇದೆ. ವರದಿ ಬಳಿಕ ಸಿಒಡಿ ಇಲ್ಲವೆ ಬೇರೊಂದು ಸೂಕ್ತ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು. ಚಾಮುಲ್‌ನಲ್ಲಿ ಇಂತಹ ಅವ್ಯವಹಾರ ನಡೆದಿರುವ ಬಗ್ಗೆ ಆರೋಪ ಕೇಳಿ ಬರಬಾರದಿತ್ತು’ ಎಂದರು. 

ಬಿಜೆಪಿ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದರೂ ಸಚಿವ ಸಂಪುಟ ರಚನೆ ಮಾಡಿಲ್ಲ ಎಂದು ಕಾಂಗ್ರೆಸ್‌ ಶಾಸಕ ಕೃಷ್ಣೆಬೈರೇಗೌಡ ಆರೋಪಕ್ಕೆ ತಿರುಗೇಟು ನೀಡಿದ ಅವರು, ‘ಮೈತ್ರಿ ಸರ್ಕಾರ 15 ತಿಂಗಳು ಆಡಳಿತ ನಡೆಸಿ ಯಾವ ಅಭಿವೃದ್ಧಿ ಕಾರ್ಯ ಮಾಡಿತ್ತು’ ಎಂದು ಪ್ರಶ್ನಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು