ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವನಾಥ್‌ಗೆ ಸಚಿವ ಸ್ಥಾನ ಸಿಗದಿದ್ರೆ ಜಗತ್ತು ಮುಳುಗುತ್ತಾ: ಶ್ರೀನಿವಾಸ ಪ್ರಸಾದ್

Last Updated 2 ನವೆಂಬರ್ 2020, 14:49 IST
ಅಕ್ಷರ ಗಾತ್ರ

ಚಾಮರಾಜನಗರ: ವಿಧಾನಪರಿಷತ್‌ ಸದಸ್ಯ ಅಡಗೂರು ಎಚ್‌.ವಿಶ್ವನಾಥ್‌ ಅವರಿಗೆ ಸಚಿವ ಸ್ಥಾನ ಸಿಗದೇ ಹೋದರೆ ಜಗತ್ತು ಮುಳುಗಿ ಹೋಗುತ್ತದೆಯೇ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಪ್ರಶ್ನಿಸಿದರು.

ನಗರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ವಿಶ್ವನಾಥ್‌ ಅವರು ಸಚಿವ ಸಂಪುಟಕ್ಕೆ ಸೇರುತ್ತಾರೋ ಇಲ್ಲವೋ ಎಂಬ ಭವಿಷ್ಯ ಹೇಳುವುದಕ್ಕೆ ಆಗುವುದಿಲ್ಲ. ಇದು ಮುಖ್ಯವಾದ ಪ್ರಶ್ನೆ ಅಲ್ಲ. ಒಂದು ವೇಳೆ ಸಚಿವ ಸ್ಥಾನ ಸಿಗದಿದ್ದರೆ ಏನಾಗುತ್ತದೆ? ರಾಜ್ಯದ ಮುಂದೆ ತುಂಬಾ ಸಂಕಷ್ಟ ಇದೆ. ಅದರ ಬಗ್ಗೆ ಯೋಚನೆ ಮಾಡಿ. ಎಲ್ಲರ ಸಹಕಾರ ಪಡೆದು ಅದನ್ನು ನಿಭಾಯಿಸಬೇಕಾಗಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಸುಭದ್ರ ಸರ್ಕಾರ ಇದೆ. ಇನ್ನೂ ಎರಡೂವರೆ ವರ್ಷಗಳ ಕಾಲ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಇರಲಿದೆ’ ಎಂದರು.

ಸಾಮಾನ್ಯಜ್ಞಾನ ಬೇಡವೇ: ರಾಜ್ಯದ ಬೊಕ್ಕಸ ಬರಿದಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀನಿವಾಸ ಪ್ರಸಾದ್‌ ಅವರು, ‘ವಿರೋಧ ಪಕ್ಷದ ನಾಯಕರಾಗಿ ಸಿದ್ಧರಾಮಯ್ಯ ಅವರಿಗೆ ಜವಾಬ್ದಾರಿ ಇಲ್ಲವೇ? ಸಾಮಾನ್ಯ ಜ್ಞಾನ ಸ್ವಲ್ಪವಾದರೂ ಬೇಡವೇ? ಕೋವಿಡ್‌ ಕಾರಣದಿಂದ ಇಡೀ ಜಗತ್ತು ಆರ್ಥಿಕವಾಗಿ ತತ್ತರಿಸಿ ಹೋಗಿದೆ. ಜನಸಾಮಾನ್ಯರಿಗೆ ಪರಿಸ್ಥಿತಿ ಅರ್ಥವಾಗಿದೆ. ಅಂತಹದ್ದರಲ್ಲಿ ಹಣಕಾಸು ಸಚಿವರು, ಮುಖ್ಯಮಂತ್ರಿಯಾಗಿದ್ದವರಿಗೆ ಅರ್ಥವಾಗುವುದಿಲ್ಲವೇ? ಸಿದ್ದರಾಮಯ್ಯ ಅವರಿಗೆ ಶೋಭೆ ತರುವಂತಹ ಹೇಳಿಕೆ ಅಲ್ಲ ಇದು. ಪರಿಸ್ಥಿತಿ ನಿಭಾಯಿಸಲು ಅವರು ಸರ್ಕಾರದ ಜೊತೆ ಕೈಜೋಡಿಸಲಿ’ ಎಂದರು.

ಕೇಂದ್ರ ಸಚಿವ ಸ್ಥಾನ ಬೇಡ:‘ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ರಾಮ‌ ವಿಲಾಸ್‌ ಪಾಸ್ವಾನ್ ಅವರ ಖಾತೆ ನನಗೆ ಬೇಕಾಗಿಲ್ಲ. ನಾನು ಆಕಾಂಕ್ಷಿಯೂ ಅಲ್ಲ. ಒಂದು ವೇಳೆ ನೀಡಿದರೂ ಅದನ್ನು ನಿರ್ವಹಿಸಲು ಕಷ್ಟವಾಗುತ್ತದೆ. ನನಗೆ ವಿಶ್ರಾಂತಿ ಬೇಕಾಗಿದೆ’ ಎಂದು ಸಂಸದರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ವಿರೋಧಿಗಳಿಗೆ ಪಾಠ ಕಲಿಸಬೇಕು ಎಂದು ಎಲ್ಲರೂ ಒತ್ತಾಯ ಮಾಡಿದ್ದಕ್ಕೆ ಲೋಕಸಭಾ ಚುನಾವಣೆಯ ಕೊನೆ ಕ್ಷಣದಲ್ಲಿ ನಾಮಪತ್ರ ಸಲ್ಲಿಸಿದೆ. ಜನರು ಅವರಿಗೆ ಬುದ್ಧಿ ಕಲಿಸಿದ್ದಾರೆ. ಆದರೆ, ಅವರು ಇನ್ನೂ ಪಾಠ ಕಲಿತಿಲ್ಲ. ಕಲಿಯುವುದಕ್ಕೆ ತುಂಬಾ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT