ಮಂಗಳವಾರ, ಮೇ 26, 2020
27 °C
ಕೋವಿಡ್‌–19 ತಡೆ: ಅಧಿಕಾರಿಗಳೊಂದಿಗೆ ಸಭೆ

ಬರದಿದ್ದರೂ, ಸದಾ ಸಂಪರ್ಕದಲ್ಲಿದ್ದೆ: ಸಂಸದ ವಿ.ಶ್ರೀನಿವಾಸ ಪ್ರಸಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ನನಗೀಗ 72 ವರ್ಷ. ಲಾಕ್‌ಡೌನ್‌ ಅವಧಿಯಲ್ಲಿ ಬರಬೇಡಿ ಎಂದು ಸೂಚಿಸಿದ್ದಕ್ಕೆ ಮನೆಯಲ್ಲೇ ಇದ್ದೆ. ಹಾಗಿದ್ದರೂ ಜಿಲ್ಲಾಧಿಕಾರಿ ಅವರೊಂದಿಗೆ ಸದಾ ಸಂಪರ್ಕದಲ್ಲಿದ್ದೆ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಶನಿವಾರ ಸ್ಪಷ್ಟಪಡಿಸಿದರು. 

ಲಾಕ್‌ಡೌನ್‌ ಜಾರಿಯಾದ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ಲಾಕ್‌ಡೌನ್‌ ಅವಧಿಯಲ್ಲಿ ಕ್ಷೇತ್ರಕ್ಕೆ ಸಂಸದರು ಬಂದಿಲ್ಲ ಎಂಬ ಆರೋಪ ಕೇಳಿಬರುತ್ತಿದೆಯಲ್ಲಾ ಎಂದು ಕೇಳಿದ್ದಕ್ಕೆ ಗರಂ ಆದರು. 

‘ಲಾಕ್‌ಡೌನ್‌ ಎಂದರೆ ಅರ್ಥ ಏನು? ಮನೆಯಲ್ಲೇ ಇರಬೇಕು ಎಂದು. ಹಾಗಿರುವಾಗ ಅರೆ ಹುಚ್ಚನ ರೀತಿಯಲ್ಲಿ ಇಲ್ಲಿಗೆ ಬಂದು ಅಲೆದಾಡಲೇ? ನನ್ನ ಕ್ಷೇತ್ರಕ್ಕೆ ಬರದೇ ಇರುವುದಕ್ಕೆ ನನಗೆ ಏನು ರೋಗ? ಜಿಲ್ಲಾಡಳಿತ ಉತ್ತಮವಾಗಿ ಕೆಲಸ ಮಾಡುತ್ತಿರುವಾಗ ನಾನು ಮಧ್ಯದಲ್ಲಿ ಬಂದು ತೊಂದರೆ ಕೊಡುವುದು ಏಕೆ ಎಂಬ ಕಾರಣಕ್ಕೆ ಮನೆಯಲ್ಲೇ ಇದ್ದೆ’ ಎಂದರು.

ಕೋವಿಡ್‌–19 ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದ ಅವರು, ‘ಇದು ಮನುಷ್ಯ ನಿರ್ಮಿತ ವೈರಸ್‌. ಸುಲಭವಾಗಿ ನಿಲ್ಲುವ ಕಾಯಿಲೆ ಅಲ್ಲ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದರು.

ಕಳೆದ ವರ್ಷ ಇದೇ ದಿನ ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದುದನ್ನು ಸ್ಮರಿಸಿದ ಅವರು, ‘ಜನರು ನನ್ನನ್ನು ಆಯ್ಕೆ ಮಾಡಿ ಒಂದು ವರ್ಷ ಆಯಿತು. ಕ್ಷೇತ್ರಕ್ಕೆ ಭೇಟಿ ನೀಡಬೇಕು ಎಂಬ ಉದ್ದೇಶದಿಂದ ಬಂದಿದ್ದೇನೆ. ನಾನು ಚುನಾವಣಾ ರಾಜಕೀಯದಿಂದ ನಿವೃತ್ತನಾಗಿದ್ದೆ. ಸೋತು ನಿವೃತ್ತಿ ಆಗಬಾರದು, ಚುನಾವಣೆಯಲ್ಲಿ ಗೆದ್ದು ನಿವೃತ್ತಿ ಪಡೆಯಬೇಕು ಎಂಬುದು ಬೆಂಬಲಿಗರು ಹಾಗೂ ಕ್ಷೇತ್ರದ ಜನರ ಆಶಯವಾಗಿತ್ತು. ಆರೋಗ್ಯ ಚೆನ್ನಾಗಿದ್ದರೆ ಇನ್ನಷ್ಟು ಕೆಲಸ ಮಾಡುತ್ತೇನೆ. ಎಲ್ಲರ ಸಹಕಾರ ಇರಲಿ’ ಎಂದು ತಿಳಿಸಿದರು. 

‘ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ, ಬೈಪಾಸ್‌ ರಸ್ತೆ ಕಾಮಗಾರಿ ಮತ್ತೆ ಆರಂಭವಾಗಲಿದೆ. ಸಂಸದರ ಕ್ಷೇತ್ರ ಅಭಿವೃದ್ಧಿ ನಿಧಿಯಿಂದ ನವೋದಯ ಶಾಲೆಗೆ ಸೋಲಾರ್‌ ವ್ಯವಸ್ಥೆಗೆ ₹ 16 ಲಕ್ಷ ನೀಡಲಾಗುತ್ತಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸುವ ಯೋಜನೆ ಜಾರಿಗೊಳ್ಳಲಿವೆ’ ಎಂದರು. 

ಇದೇ ಸಂದರ್ಭದಲ್ಲಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್‌ಸಿ, ಬಿ.ಇಡಿ ಸಂಯೋಜಿತ ಕೋರ್ಸ್‌ ಆರಂಭಕ್ಕಾಗಿ ಮೊದಲ ಹಂತದಲ್ಲಿ ₹ 20 ಸಾವಿರದ ಚೆಕ್‌ ಅನ್ನು ಪ್ರಾಂಶುಪಾಲರಾದ ಡಾ.ಎಚ್‌.ಎಸ್‌.ಪ್ರೇಮಲತಾ ಅವರಿಗೆ ಸಂಸದರು ಹಸ್ತಾಂತರಿಸಿದರು. 

ಕಿಟ್‌ ವಿತರಣೆ: ‘ಲಾಕ್‌ಡೌನ್‌ನಿಂದಾಗಿ ಸಂಕಷ್ಟ ಅನುಭವಿಸಿರುವ ನಗರದ ಆಟೊ, ಟ್ಯಾಕ್ಸಿ ಚಾಲಕರಿಗೆ ಆಹಾರ ಕಿಟ್ ವಿತರಣೆ ಮಾಡಲು ನಿರ್ಧರಿಸಲಾಗಿದೆ. ಚಾಲಕರ ಪಟ್ಟಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಅವರು ಹೇಳಿದರು.  

ಶಾಸಕ ಎನ್.ಮಹೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಎಸ್.‌ಮಹೇಶ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಉಪವಿಭಾಗಾಧಿಕಾರಿ ನಿಖಿತಾ ಎಂ. ಚಿನ್ನಸ್ವಾಮಿ, ಜಿಲ್ಲಾ ಅರೋಗ್ಯಾಧಿಕಾರಿ ಡಾ.ಎಂ.ಸಿ.ರವಿ ಇದ್ದರು.

ಜ್ಯುಬಿಲಿಯಂಟ್‌ ಕಾರ್ಖಾನೆ ನಿಯಮ ಉಲ್ಲಂಘಿಸಿಲ್ಲ
’ಮೈಸೂರು ಜಿಲ್ಲೆಯಲ್ಲಿ ಕೋವಿಡ್‌–19 ಪ್ರಕರಣ ಉಲ್ಭಣಿಸಲು ಕಾರಣವಾದ ನಂಜನಗೂಡಿನ ಜ್ಯುಬಿಲಿಯಂಟ್ ಔಷಧ ಕಾರ್ಖಾನೆ ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹಾಗಾಗಿ, ಸದ್ಯದ ಮಟ್ಟಿಗೆ ಉನ್ನತ ತನಿಖೆಯ ಅವಶ್ಯಕತೆ ಇಲ್ಲ‘ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಶನಿವಾರ ಹೇಳಿದರು.

‘ಕೋವಿಡ್‌ –19 ದೃಢಪಟ್ಟಿದ್ದ ಕಾರ್ಖಾನೆ ಉದ್ಯೋಗಿಗಳು ಎಲ್ಲ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಐಎಎಸ್‌ ಅಧಿಕಾರಿ ಹರ್ಷಗುಪ್ತ ಅವರಿಂದ ತನಿಖೆ ನಡೆಸಿತ್ತು. ಅವರು ಕೂಡ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ವರದಿಯಲ್ಲಿ ಹೇಳಿದ್ದಾರೆ’ ಎಂದು ಸಂಸದರು ತಿಳಿಸಿದರು. 

‘ಕಾರ್ಖಾನೆಯ ಸುತ್ತಮುತ್ತ ವಾಸಿಸುತ್ತಿರುವ 50 ಸಾವಿರ ಕುಟುಂಬಗಳಿಗೆ ಆಹಾರ ಕಿಟ್‌ ವಿತರಣೆ ಮಾಡುವುದು ಹಾಗೂ 10 ಗ್ರಾಮಗಳನ್ನು ದತ್ತು ತೆಗೆದುಕೊಳ್ಳಬೇಕು ಎಂಬ ಷರತ್ತು ಹಾಕಿ, ಕಾರ್ಖಾನೆ ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ. ಕಾರ್ಖಾನೆ ಆಡಳಿತ ಮಂಡಳಿಯೂ ಇದಕ್ಕೆ ಒಪ್ಪಿದೆ. ಶೀಘ್ರದಲ್ಲಿ ಕಾರ್ಖಾನೆ ಪುನರಾರಂಭವಾಗಲಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು