ಸಂತೇಮರಹಳ್ಳಿ: ಸಮೀಪದ ಕಣ್ಣೇಗಾಲ ಗ್ರಾಮದ ಸರ್ಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಜಲ ಜೀವನ್ ಮಿಷನ್ ಯೋಜನೆ ಹಾಗೂ ಸ್ವಚ್ಛ ಭಾರತ್ ಯೋಜನೆ ವತಿಯಿಂದ ವಿದಾರ್ಥಿಗಳಿಗೆ ನೀರಿನ ಸಂರಕ್ಷಣೆ ಬಗ್ಗೆ ಪ್ರಬಂಧ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆ ಮಂಗಳವಾರ ನಡೆಯಿತು.
ಶಿಕ್ಷಕಿ ಎಂ.ಎಸ್.ಶೋಭಾ ಮಾತನಾಡಿ, ನೀರಿನ ಸಂರಕ್ಷಣೆ ಇಂದು ಅತ್ಯಂತ ಮಹತ್ವದಾಗಿದೆ. ಪ್ರತಿ ನೀರಿನ ಹನಿಯೂ ಪೋಲಾಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು. ಗಣಿಗಾರಿಕೆ ಹಾಗೂ ತಾಪಮಾನದ ಹಿನ್ನೆಲೆಯಲ್ಲಿ ಇಂದು ಅಂತರ್ಜಲದ ಮಟ್ಟ ಕುಸಿಯುತ್ತಾ ಬಂದಿದೆ. ನೀರನ್ನು ಉಳಿಸದಿದ್ದರೇ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಮುಂದಿನ ಪೀಳಿಗೆಗಾಗಿ ಅಂತರ್ಜಲವನ್ನು ಹೆಚ್ಚಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ನೀರನ್ನು ಪೋಲು ಮಾಡದೇ ಸಂರಕ್ಷಿಸಬೇಕು ಎಂದರು.
ಪರಿಸರವನ್ನು ಶುದ್ಧವಾಗಿ ಕಾಪಾಡಿಕೊಳ್ಳಬೇಕು. ನೀರಿನಲ್ಲಿ ತ್ಯಾಜ್ಯ ವಸ್ತುಗಳು ವಿಲೀನವಾಗದಂತೆ ನೋಡಿಕೊಳ್ಳಬೇಕು. ಪ್ಲಾಸ್ಟಿಕ್ ಬಾಟಲಿಗಳು ಹಾಗೂ ತ್ಯಾಜ್ಯ ವಸ್ತುಗಳು ಪರಿಸರದಲ್ಲಿ ಬಿಸಾಡದಂತೆ ನೋಡಿಕೊಳ್ಳಬೇಕು. ಸುಂದರ ಪರಿಸರ ಕಾಪಾಡಿಕೊಂಡಾಗ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಸರ ಸ್ವಚ್ಛತೆ ಬಗ್ಗೆ ಇತರರಿಗೂ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಪ್ರಬಂಧ ಸ್ಪರ್ದೆ ಹಾಗೂ ಚರ್ಚಾ ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಲಜೀವನ್ ಮಿಷನ್ ಯೋಜನೆಯ ಮೊಹನ್ ಕುಮಾರ್, ರಂಗಸ್ವಾಮಿ, ಶಿಕ್ಷಕರಾದ ಮಂಜುಶ್ರೀ, ಮಹೇಶ್ವರಿ ಹಾಜರಿದ್ದರು.