ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ದೊಣ್ಣೆವರಸೆ- ಗಡಿಗ್ರಾಮದ ಚಿನ್ನದ ಸಾಧಕ ಗೋಪಿನಾಥಂನ ಮುರುಗನ್‌

ಅಪರೂಪದ ಸಮರ ಕಲೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬಂಗಾರ ಪದಕ
Last Updated 19 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ದಂತಚೋರ ವೀರಪ್ಪನ್‌ ಕಾರಣಕ್ಕೆ ಕುಖ್ಯಾತಿ ಪಡೆದಿದ್ದ, ಚಾಮರಾಜನಗರ ಜಿಲ್ಲೆಯ ಗಡಿಗ್ರಾಮ ಗೋಪಿನಾಥಂ ಈಗ ಕ್ರೀಡಾ ಸಾಧಕರೊಬ್ಬರ ಕಾರಣಕ್ಕೆ ಗಮನಸೆಳೆದಿದೆ. ತಮಿಳುನಾಡು ಮೂಲದ ಸಮರಕಲೆ ದೊಣ್ಣೆವರಸೆಯಲ್ಲಿ (ಸಿಲಂಬಮ್‌ ಅಥವಾ ಸಿಲಂಬಾಟ್ಟಮ್‌ ಎಂದು ತಮಿಳಿನಲ್ಲಿ ಹೇಳುತ್ತಾರೆ) ಗ್ರಾಮದ ಮುರುಗನ್‌ ಎಂಬುವವರು ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಕಳೆದ ತಿಂಗಳು ಗೋವಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ ಮುರುಗನ್‌, ಜನವರಿಯಲ್ಲಿ ನೇಪಾಳದ ಕಠ್ಮಂಡುವಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಆರು ವರ್ಷಗಳ ಅಭ್ಯಾಸ:ಗ್ರಾಮದ ರೈತ ಮುನಿಸ್ವಾಮಿ ಹಾಗೂ ತಂಗಮಣಿ ದಂಪತಿಯ ಎರಡನೇ ಮಗನಾಗಿರುವ ಮುರುಗನ್ (26) ಎಂ.ಕಾಂ ವ್ಯಾಸಂಗವನ್ನು ಮುಗಿಸಿ ಬೆಂಗಳೂರಿನ ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ದೊಣ್ಣೆವರಸೆ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಮುರುಗನ್‌ ಅವರು ಬಿಡುವಿನ ವೇಳೆ ಹಾಗೂ ರಜಾ ದಿನಗಳಲ್ಲಿ ಅದರ ಅಭ್ಯಾಸಕ್ಕೆ ಸಮಯವನ್ನು ಮೀಸಲಿಟ್ಟಿದ್ದಾರೆ. ಬೆಂಗಳೂರಿಗೆ ಸಮೀಪದ ಹೊಸೂರಿನ ಅರಸನ್ ಅಕಾಡೆಮಿಯಲ್ಲಿ ಆರು ವರ್ಷಗಳಿಂದ ನುರಿತ ಅಭ್ಯಾಸಕಾರರಿಂದ ದೊಣ್ಣೆ ವಸೆಯ ಪಟ್ಟುಗಳನ್ನು ಕಲಿಯುತ್ತಿದ್ದಾರೆ.

‘ಸಾಂಪ್ರದಾಯಿಕ ಕ್ರೀಡೆಯಾದ ದೊಣ್ಣೆವರಸೆ ಹೆಚ್ಚು ಜಪ್ರಿಯತೆ ಹೊಂದಿಲ್ಲ. ಈ ಆಟ ಅಳಿವಿನಂಚಿನಲ್ಲಿದೆ. ಈ ಆಟದಲ್ಲಿ ನನಗೆ ವಿಶೇಷ ಆಸಕ್ತಿ. ಗುರುಗಳಾದ ತಿರುಮಲೆ ಶಕ್ತಿ ಹಾಗೂ ಆಸಾನ್ ಅರಸನ್ ಅವರ ಮಾರ್ಗದರ್ಶನದಲ್ಲಿ ಆರು ವರ್ಷಗಳಿಂದ ಕಲಿಯುತ್ತಿದ್ದೇನೆ’ ಎಂದು ಮುರುಗನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದಕ್ಕೆ ಬಳಸುವ ದೊಣ್ಣೆಯ ತುದಿಯಲ್ಲಿ ಮೊನಚಾದ ಕಬ್ಬಿಣವನ್ನು ಅಳವಡಿಸಲಾಗುತ್ತದೆ. ಅದು ಈಟಿಯ ಮಾದರಿಯಲ್ಲಿರುತ್ತದೆ. ಚೋಳರ ಕಾಲದಲ್ಲಿ ಯುದ್ದ ಸಂದರ್ಭದಲ್ಲಿ ಈ ವಿದ್ಯೆಯನ್ನು ಬಳಸಲಾಗುತ್ತಿತ್ತು. ಈಗ ಇದು ಅಪರೂಪವಾಗಿದೆ. ತಮಿಳುನಾಡಿನಲ್ಲಿ ಈ ಕಲೆ ಈಗಲೂ ಪ್ರಚಲಿತದಲ್ಲಿದೆ. ಕಲವರು ಇಂದು ತಮ್ಮ ಆತ್ಮ ರಕ್ಷಣೆಗೆ ಈ ವಿದ್ಯೆಯನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಗೆಲ್ಲುವ ವಿಶ್ವಾಸ: ‘ಯೂತ್‌ ಅಂಡ್‌ ಸ್ಪೋರ್ಟ್ಸ್‌ ಡೆವಲಪ್‌ಮೆಂಟ್ ಅಸೋಸಿಯೇಷನ್ ಆಪ್‌ ಇಂಡಿಯಾ ನವೆಂಬರ್ 27 ರಿಂದ 29 ರವರೆಗೆ ಗೋವಾದಲ್ಲಿ ಆಯೋಜಿಸಿದ್ದ ರಾಷ್ಟೀಯ ಮಟ್ಟದ ಕ್ರೀಡಾಕೂಟದಲ್ಲಿ ತಮಿಳುನಾಡಿನ ಒಂಬತ್ತು ಮತ್ತು ನಾನು ಸೇರಿ 10 ಮಂದಿ ಕ್ರೀಡಾಪಟುಗಳು ಭಾಗವಹಿಸಿದ್ದೆವು. ಒಂಬತ್ತು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿದ್ದೇವೆ. ಜನವರಿ 15 ರಿಂದ 20 ರವರೆಗೆ ನೇಪಾಳದ ಕಠ್ಮಂಡುವಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಕ್ಭಾರೀಡಾಕೂಟದಲ್ಲೂ ಭಾಗವಹಿಸಿ, ಗೆಲ್ಲುವ ವಿಶ್ವಾಸವಿದೆ’ ಎಂದು ಮುರುಗನ್‌ ಹೇಳಿದರು.

ಕ್ರೀಡೆಗೆ ಬೇಕಿದೆ ಪ್ರೋತ್ಸಾಹ

ಪರೂಪದ ಈ ಸಮರ ಕ್ರೀಡೆಗೆ ಎಲ್ಲ ರೀತಿಯ ಪ್ರೋತ್ಸಾಹ ಅಗತ್ಯವಿದೆ ಎಂದು ಹೇಳುತ್ತಾರೆ ಮುರುಗನ್‌ ಅವರ ತರಬೇತುದಾರ ತಿರುಮಲೆ ಶಕ್ತಿ.

‘ಈ ಕ್ರೀಡೆಯನ್ನು ಬಲಪಡಿಸಲು ನಮ್ಮ ಬಳಿ ಆರ್ಥಿಕ ಶಕ್ತಿ ಇಲ್ಲ. ಈಗಾಗಲೇ ಹಲವಾರು ಬಡ ವಿಧ್ಯಾರ್ಥಿಗಳಿಗೆ ನಾವು ಉಚಿತವಾಗಿ ತರಬೇತಿಯನ್ನು ನೀಡುತ್ತಿದ್ದೇವೆ. ದೇಶಿಯ ಕ್ರೀಡೆಯನ್ನು ಪ್ರದರ್ಶಿಸಲು ಬೇರೆ ರಾಜ್ಯ ಹಾಗೂ ದೇಶಗಳಿಗೆ ತೆರಳಬೇಕಾಗಿರುವುದರಿಂದ ಅದಕ್ಕೆ ತಗಲುವ ವೆಚ್ಚವನ್ನು ಭರಿಸಲಾಗದ ಸ್ಥಿತಿಯಲ್ಲಿದ್ದೇವೆ. ಮುರುಗನ್ ಸೇರಿ ಒಂಬತ್ತು ಮಂದಿ ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೆ ನೇಪಾಳದ ಕಟ್ಮಂಡುವಿಗೆ ತೆರಳಬೇಕು. ಹೋಗಿಬರಲು ಲಕ್ಷಾಂತರ ರೂಪಾಯಿ ಬೇಕು. ಯಾರಾದರೂ ಪ್ರಾಯೋಜನರು ಮುಂದೆ ಬಂದರೆ, ಅಥವಾ ಕ್ರೀಡಾ ಪ್ರೇಮಿಗಳು ಧನ ಸಹಾಯ ಮಾಡಿದರೆ ನಮಗೆ ಅನುಕೂಲವಾಗುತ್ತದೆ’ ಎಂದು ತಿರುಮಲೆ ಶಕ್ತಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT