ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಹಿಜಾಬ್ ಪರ ಮುಸ್ಲಿಂ ಮಹಿಳೆಯರ ಪ್ರತಿಭಟನೆ

ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನಿರಾಕರಣೆಗೆ ಖಂಡನೆ
Last Updated 7 ಫೆಬ್ರುವರಿ 2022, 13:32 IST
ಅಕ್ಷರ ಗಾತ್ರ

ಚಾಮರಾಜನಗರ: ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನಿರಾಕರಿಸುವುದನ್ನು ಖಂಡಿಸಿ ಜಿಲ್ಲಾ ಮಹಿಳಾ ಒಕ್ಕೂಟದ ವತಿಯಿಂದ ಮುಸ್ಲಿಂ ವಿದ್ಯಾರ್ಥಿನಿಯರು, ಮಹಿಳೆಯರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ನಗರದ ಡೀವಿಯೇಷನ್‌ ರಸ್ತೆಯ ಲಾರಿ ನಿಲ್ದಾಣದಿಂದ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿ, ಅಲ್ಲಿ ಪ್ರತಿಭಟನೆ ನಡೆಸಿದರು.

ಮೆರವಣಿಗೆಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸರ್ಕಾರವು ಹಿಜಾಬ್‌ ಧರಿಸಲು ಅವಕಾಶ ನೀಡದಿರುವ ಮೂಲಕ ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

’ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಎಲ್ಲರಿಗೂ ಧಾರ್ಮಿಕ ಹಕ್ಕನ್ನು ನೀಡಿದ್ದಾರೆ. ಹಿಜಾಬ್‌ ಧರಿಸುವುದು ನಮ್ಮ ಹಕ್ಕು. ಅದನ್ನು ತಡೆಯಲು ಸರ್ಕಾರಕ್ಕೆ ಅಧಿಕಾರ ಇಲ್ಲ. ಕೇಂದ್ರ ಸರ್ಕಾರ ಬೇಟಿ ಬಚಾವ್‌, ಬೇಟಿ ಪಡಾವೊ ಅಂತ ಹೇಳುತ್ತಿದೆ. ಅದರಲ್ಲಿ ಮುಸ್ಲಿಂ ಹೆಣ್ಣುಮಕ್ಕಳನ್ನು ಬಿಟ್ಟು ಹಿಂದೂ ಹೆಣ್ಣುಮಕ್ಕಳಿಗೆ ಮಾತ್ರ ಎಂದು ಹೇಳಿದೆಯೇ‘ ಎಂದು ಪ್ರಶ್ನಿಸಿದರು.

’ಪದವಿಪೂರ್ವ ಶಿಕ್ಷಣ ಇಲಾಖೆಯ 2021-22 ರ ಮಾರ್ಗಸೂಚಿಯ ಅನುಸಾರವಾಗಿ ಸಮವಸ್ತ್ರ ಕಡ್ಡಾಯವಲ್ಲ. ಸಮವಸ್ತ್ರವನ್ನು ಆಯಾಯ ಕಾಲೇಜಿನ ಆಡಳಿತ ಮಂಡಳಿ ಅಥವಾ ಪ್ರಾಂಶುಪಾಲರು ಕಡ್ಡಾಯಗೊಳಿದರೆ, ಅದು ಕಾನೂನು ಬಾಹಿರ ಎಂದು ಉಲ್ಲೇಖಿಸಲಾಗಿದೆ‘ ಎಂದರು.

’ಉಡುಪಿ ಪದವಿಪೂರ್ವ ಕಾಲೇಜಿನಲ್ಲಿ ಸಮವಸ್ತ್ರದ ನೆಪವನ್ನಿಟ್ಟುಕೊಂಡು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿದ ಏಕೈಕ ಕಾರಣಕ್ಕಾಗಿ ಅವರಿಗೆ ಒಂದು ತಿಂಗಳಿಂದ ತರಗತಿ ನಿರ್ಬಂಧಿಸಲಾಗಿದೆ. ಕುಂದಾಪುರ ಸರ್ಕಾರಿ ಕಾಲೇಜಿನಲ್ಲೂ ಪ್ರಾಂಶುಪಾಲರು ಹಲವು ದಿನಗಳಿಂದ ಹಿಜಾಜ್ ಧರಿಸಿದ ವಿದ್ಯಾರ್ಥಿನಿಯರನ್ನು ಗೇಟಿನ ಹೊರ ಹಾಕಿ ತರಗತಿಗೆ ಅವಕಾಶ ನೀಡದೆ ಸುಡು ಬಿಸಿಲಿನ ಬೇಗೆಯಲ್ಲಿ ನಿಲ್ಲುವಂತೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ‘ ಎಂದು ದೂರಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರು ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು.

ಬಿ.ಬಿ.ಅಯೀಷಾ, ಸುಮೀಯಾ, ಅಸ್ಮಾ, ಫರ್ಹಿನ್ ತಾಜ್, ತೌಸೀಯ ಬಾನು, ಹಸೀಬ, ರೇಷ್ಮಾ, ಅತಿಕ, ಹಸೀನಾ ಬೇಗಂ ಸೇರಿದಂತೆ ಹಲವರು ಇದ್ದರು.

ರಾಜಕೀಯ ಷಡ್ಯಂತ್ರ

’ಈ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರ ಇದೆ.ಹಿಜಾಬ್ ನಮ್ಮಸಂವಿಧಾನ ಬದ್ಧವಾದ ಹಕ್ಕು. ನಮಗೆ ಸಂವಿಧಾನ ನೀಡಿದಹಕ್ಕುಗಳನ್ನು ಮನುವಾದಿಗಳು ಕಸಿಯುವ ಕೆಲಸವನ್ನು ಮಾಡುತ್ತಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ನಿರಾಕರಣೆ ಶಿಕ್ಷಣದ ನಿರಾಕರಣೆಯಾಗಿದ್ದು, ಸಂವಿಧಾನದ, ಪ್ರಜಾಪ್ರಭುತ್ವ ನಿರಾಕರಣೆ ಕೂಡ ಆಗಿದೆ‘ ಎಂದು ಪ್ರತಿಭಟನಕಾರರು ದೂರಿದರು.

’ಇಸ್ಲಾಂ ಧರ್ಮದ ಧಾರ್ಮಿಕ ಮೂಲಭೂತ ತತ್ವಗಳ ಅನುಗುಣವಾಗಿ ಹೆಣ್ಣು ಹಿಜಾಬ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದರೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಸಮವಸ್ತ್ರದ ಭಾಗವಾಗಿರುವ ಶಾಲನ್ನು ಬಳಸಿ ಹಿಜಾಬ್‌ ಧರಿಸಲು ಅವಕಾಶ ನೀಡಬೇಕು‘ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT