ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜಿಲ್ಲೆಯಾದ್ಯಂತ ಈದ್‌ ಉಲ್‌ ಫಿತ್ರ್‌ ಸಡಗರ

Last Updated 3 ಮೇ 2022, 13:19 IST
ಅಕ್ಷರ ಗಾತ್ರ

ಚಾಮರಾಜನಗರ: ತ್ಯಾಗ, ಶಾಂತಿ, ಪ್ರೀತಿಯ ಸಂಕೇತವಾದಈದ್‌–ಉಲ್‌–ಫಿತ್ರ್‌ (ರಂಜಾನ್‌ಹಬ್ಬ) ಅನ್ನು ಜಿಲ್ಲೆಯಾದ್ಯಂತ ಮುಸ್ಲಿಮರು ಮಂಗಳವಾರ ಸಂಭ್ರಮ, ಸಡಗರದಿಂದ ಆಚರಿಸಿದರು.

ಹಬ್ಬದ ಅಂಗವಾಗಿ ಈದ್ಗಾ ಮೈದಾನಗಳು, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದವು.

ಜಿಲ್ಲಾ ಕೇಂದ್ರದಲ್ಲಿ ಸೋಮವಾರಪೇಟೆ ಬಳಿ ಇರುವ ಈದ್ಗಾ ಮೈದಾನದಲ್ಲಿ ಹಾಗೂ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ ಮೈದಾನದಲ್ಲಿ ಮುಸ್ಲಿಮ್‌ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಚಿಣ್ಣರು, ಯುವಕರು, ವೃದ್ಧರು ಸೇರಿದಂತೆ ಎಲ್ಲ ವಯಸ್ಸಿನವರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಸಾಮೂಹಿಕ ಪ್ರಾರ್ಥನೆಯ ನಂತರ ನಗರದ ಕೆಲವು ರಸ್ತೆಗಳಲ್ಲಿ ಮೆರವಣಿಗೆಯನ್ನೂ ನಡೆಸಿದರು.

ಹಬ್ಬದ ಸಡಗರ: ಮುಸ್ಲಿಂ ಕುಟುಂಬಗಳಲ್ಲಿ ಮಂಗಳವಾರಹಬ್ಬದ ಸಡಗರ ಮನೆ ಮಾಡಿತ್ತು. ಕೋವಿಡ್‌ ಕಾರಣಕ್ಕೆ ಎರಡು ವರ್ಷಗಳಿಂದ ಈದ್‌ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರಲಿಲ್ಲ.

ಈ ಬಾರಿ, ನಿರ್ಬಂಧ ಇಲ್ಲದೇ ಇದ್ದುದರಿಂದ ಮುಸ್ಲಿಮರು ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಿದರು.

ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಹೊಸ ಬಟ್ಟೆತೊಟ್ಟು, ಸುಗಂಧ ದ್ರವ್ಯ ಲೇಪಿಸಿಕೊಂಡು ಸಂಭ್ರಮಿಸಿದರು. ಸಂಬಂಧಿಕರು, ಸ್ನೇಹಿತರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಆರ್ಥಿಕವಾಗಿ ಸದೃಢರಾಗಿರುವವರು ಬಡವರಿಗೆ ದಾನವನ್ನೂ ಮಾಡಿದರು.

ಮನೆಗಳಲ್ಲಿ ಹಬ್ಬದ ವಿಶೇಷ ಊಟ ಸಿದ್ಧಪಡಿಸಿದ ಮಹಿಳೆಯರು ಕುಟುಂಬದವರು, ನೆಂಟರಿಷ್ಟರು ಮತ್ತು ಸ್ನೇಹಿತರಿಗೆ ಬಡಿಸಿದರು.

ಅಂಗಡಿಗಳು ಬಂದ್: ಹಬ್ಬದ ಅಂಗವಾಗಿ ಮುಸ್ಲಿಮರ ಮಾಲೀಕತ್ವದ ಅಂಗಡಿಗಳು ಮುಚ್ಚಿದ್ದವು.

ಸಿಹಿ ವಿನಿಮಯ
ಈದ್‌ ಅಂಗವಾಗಿ ಮುಸ್ಲಿಂ ಮುಖಂಡರು ಹಾಗೂ ಧರ್ಮಗುರುಗಳು ಸಾರ್ವಜನಿಕರಿಗೆ ಸಿಹಿ ಹಂಚಿದರು.

ಬಸವ ಜಯಂತಿ ಅಂಗವಾಗಿ ನಗರದಲ್ಲಿ ನಡೆದ ಬಸವಣ್ಣ ಭಾವಚಿತ್ರದ ಮೆರವಣಿಗೆಯ ಸಂದರ್ಭದಲ್ಲಿ ಗುಂಡ್ಲುಪೇಟೆ ವೃತ್ತದಲ್ಲಿ ಮುಸ್ಲಿಂ ಮುಖಂಡರು ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಸಿಹಿ ತಿನ್ನಿಸಿ ಬಸವ ಜಯಂತಿ ಶುಭಾಶಯ ಹೇಳಿದರು. ಹಿಂದೂಗಳು ಕೂಡ ಮುಸ್ಲಿಮರಿಗೆ ಸಿಹಿ ವಿತರಿಸಿ ಈದ್‌ ಉಲ್‌ ಫಿತ್ರ್‌ ಶುಭಾಶಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT