ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಹೊರೆ

ಕಾಳಜಿ ಕೋವಿಡ್‌ ಸಮಯಕ್ಕೆ ಮಾತ್ರ ಮೀಸಲು ಬೇಡ, ವೇತನ ಹೆಚ್ಚಿಸಿ ಸೌಲಭ್ಯ ನೀಡಲು ಆಗ್ರಹ
Last Updated 27 ಜೂನ್ 2021, 15:54 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ ಹಾವಳಿಯ ನಡುವೆ ಜೀವ ಭಯವನ್ನೂ ಲೆಕ್ಕಿಸಿದೆ ಕೋವಿಡ್‌ ಸೇನಾನಿಗಳಾಗಿ ಸೋಂಕಿನ ವಿರುದ್ಧ ಹೋರಾಟ ಮಾಡುತ್ತಿರುವವರಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕೂಡ ಮುಂಚೂಣಿಯಲ್ಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೆಲಸಗಳನ್ನು ಮಾಡುವುದರ ಜೊತೆಗೆ ಒಂದೂವರೆ ವರ್ಷದಿಂದ ಕೋವಿಡ್‌ ಕೆಲಸವೂ ಹೆಚ್ಚುವರಿಯಾಗಿ ಇವರ ಹೆಗಲೇರಿದೆ.

ತೀವ್ರ ಒತ್ತಡದ ನಡುವೆಯೇ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಕಾಲಾಳುಗಳಾಗಿ ಕೆಲಸ ಮಾಡುತ್ತಿರುವ ಇವರನ್ನು ಸರ್ಕಾರ ಕೋವಿಡ್‌ ಸೇನಾನಿ ಎಂದು ಘೋಷಿಸಿದೆ.ಕೋವಿಡ್‌ನಿಂದ ಮೃತಪಟ್ಟ ಕಾರ್ಯಕರ್ತೆಯರಿಗೆ ₹30 ಲಕ್ಷ ಪರಿಹಾರ ಘೋಷಿಸಿದೆ. ಈ ಬಾರಿ ಒಂದು ಬಾರಿಗೆ ₹2000 ಸಹಾಯಧನವನ್ನೂ ಘೋಷಿಸಿದೆ.

ಇದನ್ನು ಬಿಟ್ಟು, ಹೆಚ್ಚುವರಿ ವೇತನ, ಹೆಚ್ಚುವರಿ ಭತ್ಯೆ, ಸಾರಿಗೆಯಂತಹ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಲ್ಲ ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಅಳಲು.

ಕೋವಿಡ್‌ ಕಾರಣದಿಂದ ಮಕ್ಕಳು ಅಂಗನವಾಡಿಗೆ ಬರುವುದಿಲ್ಲ ಎಂಬುದನ್ನು ಬಿಟ್ಟರೆ, ಇವರ ಬೇರೆ ಯಾವ ಕೆಲಸವೂ ಕಡಿಮೆಯಾಗಿಲ್ಲ. ಮಾತೃವಂದನಾ ಅನುಷ್ಠಾನ, ಆರು ವರ್ಷದವರೆಗಿನ ಮಕ್ಕಳ ಕಡೆಗೆ ಗಮನ ನೀಡುವುದರ ಜೊತೆಗೆ ಮನೆಗಳಿಗೆ ಪೌಷ್ಟಿಕ ಆಹಾರವನ್ನು ತಲುಪಿಸುವುದು, ಚಿಣ್ಣರ ಆರೋಗ್ಯ ಮತ್ತು ಪೌಷ್ಟಿಕತೆಯ ಬಗ್ಗೆ ತಾಯಂದಿರಿಗೆ ತರಬೇತಿ, ಮಾರ್ಗದರ್ಶನ ನೀಡುವುದು, ಗ್ರಾಮೀಣ ಭಾಗಗಳಲ್ಲಿ ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು.

ಇದರ ಜೊತೆಗೆ, ಕೋವಿಡ್‌ ಆರಂಭಗೊಂಡ ನಂತರ ಆಶಾ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುವುದು, ಸೋಂಕಿತರನ್ನು ಗುರುತಿಸುವುದು, ಅವರನ್ನು ಹಾಗೂ ಸಂಪರ್ಕಿತರ ಪರೀಕ್ಷೆಗೆ ವ್ಯವಸ್ಥೆ ಮಾಡುವುದು, ಕೋವಿಡ್‌ ಕೇರ್‌ ಕೇಂದ್ರದಲ್ಲಿ ದಾಖಲು ಮಾಡುವುದು, ಕೋವಿಡ್‌ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವುದು ಮುಂತಾದ ಜವಾಬ್ದಾರಿಗಳನ್ನೂ ನಿರ್ವಹಿಸುತ್ತಿದ್ದಾರೆ.

ಕೋವಿಡ್‌ 3ನೇ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿರುವುದರಿಂದ ಇನ್ನೀಗ ಅಂಗನವಾಡಿ ಕಾರ್ಯಕರ್ತೆಯರ ಕೆಲಸ ಮತ್ತಷ್ಟು ಹೆಚ್ಚಾಗಲಿದೆ. ಈಗಾಗಲೇ ಅಪೌಷ್ಟಿಕ ಮಕ್ಕಳನ್ನು ಗುರುತಿಸುವ ಕೆಲಸ ಆಗಿದ್ದು, ಅವರ ಆರೋಗ್ಯ ತಪಾಸಣೆ ನಡೆಸಿ, ಪೌಷ್ಟಿಕ ಆಹಾರವನ್ನು ಒದಗಿಸುವ ಗುರುತರ ಹೊಣೆಯೂ ಇವರ ಮೇಲಿದೆ.

ಸಾರಿಗೆ ವೆಚ್ಚ ಸಿಗುವುದಿಲ್ಲ: ‘ಸಾಮಾನ್ಯವಾಗಿ ಆಶಾ ಕಾರ್ಯಕರ್ತರು ಬಹುತೇಕ ಆಯಾ ಊರಿನವರೇ ಆಗಿರುತ್ತಾರೆ. ಅಂಗನವಾಡಿ ಕಾರ್ಯಕರ್ತರು ಹಾಗಲ್ಲ. ಎಲ್ಲರೂ ಅದೇ ಊರಿನವರಾಗಿರುವುದಿಲ್ಲ. ಬೇರೆ ಊರು, ತಾಲ್ಲೂಕಿನವರು ಇರುತ್ತಾರೆ. ಕೋವಿಡ್‌, ಲಾಕ್‌ಡೌನ್‌ ಸಂದರ್ಭದಲ್ಲಿ ಅವರು ತಮ್ಮದೇ ಸ್ವಂತ ಖರ್ಚಿನಲ್ಲಿ ತಮ್ಮ ಅಂಗನವಾಡಿ ಕೇಂದ್ರ ಇರುವ ಊರಿಗೆ ಬಂದು ಕೆಲಸ ಮಾಡಿದ್ದಾರೆ. ಒಂದೂವರೆ ವರ್ಷದಿಂದ ಎಷ್ಟು ಒತ್ತಡ ಇದೆ ಎಂದರೆ, ನಮಗೆ ಸ್ವತಃ ಅನಾರೋಗ್ಯ ಆದರೂ ರಜೆ ಸಿಗುತ್ತಿಲ್ಲ. ಮಧುಮೇಹ ತೀವ್ರಗೊಂಡಿದ್ದರೂ ಸ್ವತಃ ನಾನೇ ಕೆಲಸ ಮಾಡಿದ್ದೇನೆ’ ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಕೆ.ಸುಜಾತ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆರಂಭದಲ್ಲಿ ಕೋವಿಡ್‌ ಎದುರಿಸಲು ಬೇಕಾದ ಮಾಸ್ಕ್‌, ಸ್ಯಾನಿಟೈಸರ್‌, ಫೇಸ್‌ಶೀಲ್ಡ್‌ನಂತಹ ಅಗತ್ಯ ಸುರಕ್ಷತಾ ಸಲಕರಣೆಗಳು ಇಲಾಖೆಯಿಂದ ಸಿಕ್ಕಿರಲಿಲ್ಲ. ಸ್ವಂತ ದುಡ್ಡಿನಿಂದ ಖರೀದಿ ಮಾಡಬೇಕಾಯಿತು. ಆ ಬಳಿಕ ಕೊಟ್ಟರು. ಈ ಬಾರಿ, ಗ್ರಾಮ ಪಂಚಾಯಿತಿ ವತಿಯಿಂದ ಮಾಸ್ಕ್‌, ಸ್ಯಾನಿಟೈಸರ್‌ ನೀಡಲಾಗಿದೆ ಎಂದು ಆಶಾ ಕಾರ್ಯಕರ್ತೆಯರು ಮಾಹಿತಿ ನೀಡಿದರು.

ಸಿಗದ ಸಹಕಾರ: ಗ್ರಾಮೀಣ ಭಾಗಗಳಲ್ಲಿ ಸೋಂಕಿತರ ಸಂಪರ್ಕಿತರ ಪರೀಕ್ಷೆ ನಡೆಸುವುದು, ಕೋವಿಡ್‌ ದೃಢಪಟ್ಟರೆ ಆಸ್ಪತ್ರೆ, ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಕಳುಹಿಸುವ ಜವಾಬ್ದಾರಿಯೂ ಇವರ ಮೇಲೆ ಇತ್ತು. ಕೋವಿಡ್‌ ಲಸಿಕೆ ಅಭಿಯಾನ ಆರಂಭಗೊಂಡ ನಂತರ, ಜನರು ಲಸಿಕೆ ಪಡೆಯುವಂತೆ ಪ್ರೇರೇಪಿಸುವ ಕೆಲಸವನ್ನೂ ಇವರು ಮಾಡಬೇಕಿತ್ತು. ಆದರೆ, ಎಲ್ಲ ಊರುಗಳಲ್ಲಿ ಜನರು ಇವರಿಗೆ ಸಹಕಾರ ನೀಡಿಲ್ಲ. ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ದೂರ ಸರಿಯುತ್ತಿದ್ದರು. ಮನೆಗೆ ಬರಬೇಡಿ ಎಂದು ನೇರವಾಗಿಯೇ ಹೇಳುತ್ತಿದ್ದರು. ಪರೀಕ್ಷೆ ಮಾಡಿಸಿಕೊಳ್ಳಲು, ಲಸಿಕೆ ಹಾಕಿಸಿಕೊಳ್ಳಲು ಒಪ್ಪುತ್ತಿರಲಿಲ್ಲ. ಇವರೊಂದಿಗೆ ಜಗಳವಾಡಿ ಬೆದರಿಕೆ ಹಾಕುತ್ತಿದ್ದರು.

ಐವರು ಮೃತ: ಜಿಲ್ಲೆಯಲ್ಲಿರುವ 1,421 ಅಂಗನವಾಡಿಗಳ ಪೈಕಿ 1,351 ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರಿದ್ದಾರೆ (70 ಅಂಗನವಾಡಿಗಳ ಹುದ್ದೆಗಳಿಗೆ ಈಗ ಅರ್ಜಿ ಆಹ್ವಾನಿಸಲಾಗಿದೆ). ಕೋವಿಡ್‌ ಎರಡನೇ ಅಲೆಯಲ್ಲಿ 20 ಮಂದಿ ಕಾರ್ಯಕರ್ತೆಯರಿಗೆ ಕೋವಿಡ್‌ ಆಗಿದೆ. ಈ ಪೈಕಿ ಮೂವರು ಮೃತಪಟ್ಟಿದ್ದಾರೆ. ಕಳೆದ ವರ್ಷ ಇಬ್ಬರು ಮೃತಪಟ್ಟಿದ್ದರು. ಇವರ ಕುಟುಂಬಗಳಿಗೆ ತಲಾ ₹30 ಲಕ್ಷ ಪರಿಹಾರ ಸರ್ಕಾರದಿಂದ ದೊರೆತಿತ್ತು.

ಕಾರ್ಯಕರ್ತೆಯರು ಏನಂತಾರೆ?

ನೌಕರರು ಎಂದು ಪರಿಗಣಿಸಿ
ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಈಗ ಒತ್ತಡದ ನಡುವೆ ಕಾಯಕ ಮಾಡಬೇಕಿದೆ. ನೌಕರರುಎಂದು ಇನ್ನೂ ಪೂರ್ಣವಾಗಿ ಒಪ್ಪಿಕೊಂಡಿಲ್ಲ. ಪ್ರತಿ ತಿಂಗಳು ₹15 ಸಾವಿರ ವೇತನ ನೀಡಬೇಕು.ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಗೌರವಧನವನ್ನು ಏಕಕಾಲಕ್ಕೆ ಅವರವರ ಖಾತೆಗೆ ಜಮಾಮಾಡಬೇಕು. ಶಾಲಾ ಸಿಬ್ಬಂದಿಗೆ ನೀಡುವ ರಜೆ ಸೌಲಭ್ಯವನ್ನು ನಮಗೂ ವಿಸ್ತರಿಸಬೇಕು. ಕೋವಿಡ್ ಜಾಗೃತಿ ಜತೆಗೆ ಮನೆಗಳಿಗೆ ಹೋಗಿ ಪಡಿತರ ವಿತರಿಸುವುದು, ಮಾತೃವಂದನಾ ಹಣವನ್ನು ಫಲಾನುಭವಿಗಳ ಖಾತೆಗೆ ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ. ಹಾಗಾಗಿ, ಹೆಚ್ಚುವರಿ ಭತ್ಯೆಯನ್ನು ಸರ್ಕಾರ ನೀಡಬೇಕು.
– ನಾಗರತ್ನ.ಎಸ್.,ಬಿಳಿಗಿರಿರಂಗನಬೆಟ್ಟ, ಯಳಂದೂರು ತಾಲ್ಲೂಕು

**
ವಿಮೆ ಮತ್ತು ಭತ್ಯೆ ಹೆಚ್ಚಿಸಿ
ಮೊದಲು ನಮ್ಮ ಕೆಲಸ ಶಾಲಾ ಸಮಯಕ್ಕೆ ಹೊಂದಿಕೊಂಡಿತ್ತು. ಈಗ ದಿನಪೂರ್ತಿ ದುಡಿಯಬೇಕಿದೆ. ಕೋವಿಡ್‌ ಸೋಂಕಿತರ ಪಟ್ಟಿ ತಯಾರಿ. ಅವರ ಚಲನವಲನದ ಮೇಲೆ ನಿಗಾ ಇಡುವುದು, ಕೋವಿಡ್ಲಸಿಕೆ ಪಡೆದವರ ಪಟ್ಟಿಯನ್ನು ತಲುಪಿಸುವುದು ಸೇರಿದಂತೆ, ಆರೈಕೆ ಕೇಂದ್ರಗಳಿಗೆಸೋಂಕಿತರನ್ನು ಸೇರಿಸುವುದು ಮತ್ತು ಮನವೊಲಿಸುವ ಕೆಲಸವನ್ನು ಮಾಡಬೇಕು. ನಮ್ಮ ಮನೆಯ ಜವಾಬ್ದಾರಿಯೂ ಹೆಚ್ಚಿದೆ. ಸದ್ಯ ಗ್ರಾಮ ಪಂಚಾಯಿತಿಗಳು ಕೋವಿಡ್ ಕಿಟ್, ಕೆಲವೆಡೆ ಆಹಾರದ ಕಿಟ್‌ ಅನ್ನು ನೀಡಿ ನೆರವಾಗಿವೆ. ವಿಮೆ ಮತ್ತು ಹೆಚ್ಚಿನ ಭತ್ಯೆ ಒದಗಿಸುವತ್ತಇಲಾಖೆ ಕಾಳಜಿ ವಹಿಸಬೇಕು.
–ಜಿ. ಭಾಗ್ಯ, ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ, ಉಪ್ಪಿನಮೋಳೆ ಯಳಂದೂರು

**
ಸರ್ಕಾರಕ್ಕೆ ಕಾಳಜಿ ಇಲ್ಲ
ಯಾವ ಸಂದರ್ಭದಲ್ಲೂ ನಾವು ಭಯ ಪಡೆದೆ ನಮ್ಮ ಕೆಲಸವನ್ನು ಶ್ರದ್ಥೆಯಿಂದ ಮಾಡಿದ್ದೇವೆ. ಕೋವಿಡ್ ಕಾಲದಲ್ಲಿ ಮನೆ ಮನೆಗೆ ತೆರಳಿ ಮಕ್ಕಳ ಆರೋಗ್ಯವನ್ನು ವಿಚಾರಣೆ ಮಾಡಿ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದೇವೆ. ಈ ಸಂಕಷ್ಟದ ಸಮಯದಲ್ಲಿ ಕಷ್ಟಗಳನ್ನು ಎದುರಿಸಿಯೂ, ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇವೆ. ಆದರೆ, ನಮ್ಮ ಬಗ್ಗೆ ಸರ್ಕಾರ ಕಾಳಜಿ ಮಾಡುವುದಿಲ್ಲ.
–ಎಲ್.ಸುಶೀಲ, ಕೊಳ್ಳೇಗಾಲ

**
ಹುದ್ದೆಗಳು ಖಾಲಿ
ಹನೂರು ತಾಲ್ಲೂಕಿನ ಕೆಲವು ಅಂಗನವಾಡಿಗಳಲ್ಲಿ ಕಾರ್ಯಕರ್ತೆಯರ ಹುದ್ದೆ ಖಾಲಿ ಇದೆ. ಹೀಗಾಗಿ ಎರಡು ಕೇಂದ್ರಗಳಿಗೆ ಒಬ್ಬರನ್ನೇ ನಿಯೋಜಿಸುತ್ತಿರುವುದರಿಂದಸಮಸ್ಯೆಯಾಗುತ್ತಿದೆ. ಕಾರ್ಯಕರ್ತೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿದರೆ ಉತ್ತಮ.
– ಉಮಾ, ಕೂಡ್ಲೂರು

‘ತಾತ್ಕಾಲಿಕ ಗೌರವ, ಸನ್ಮಾನ ಬೇಡ’
ಕೋವಿಡ್‌ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಅನಾರೋಗ್ಯವನ್ನು ಲೆಕ್ಕಿಸದೆ ನಮ್ಮ ಕರ್ತವ್ಯವನ್ನು ನಿರ್ವಹಿಸಿಸುತ್ತಿದ್ದೇವೆ.ಸೋಂಕಿನ ಭಯ ಇದ್ದರೂ, ನಮ್ಮ ಇಲಾಖೆಯ ಕೆಲಸದ ಜೊತೆಗೆ, ಬೈಗುಳ, ಬೆದರಿಕೆಗಳ ನಡುವೆಯೇ ಕೋವಿಡ್‌ ಕೆಲಸ ಮಾಡಿದ್ದೇವೆ.ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ನಮ್ಮ ಕೆಲಸ ಇನ್ನಷ್ಟು ಹೆಚ್ಚಾಗಲಿದೆ. ಕೋವಿಡ್‌ ಸಂದರ್ಭದಲ್ಲಿ ಸರ್ಕಾರ ನಮ್ಮ ಮೇಲೆ ಕಾಳಜಿ ವಹಿಸಿದೆ. ಕೋವಿಡ್‌ ಸೇನಾನಿಗಳು ಎಂದು ಘೋಷಿಸಿ ಪ್ರಾಣಕ್ಕೆ ಅಪಾಯವಾದ‌ಲ್ಲಿ ₹30 ಲಕ್ಷ ಪರಿಹಾರವನ್ನೂ ಘೋಷಿಸಿದೆ. ಕೋವಿಡ್‌ನಿಂದ ಮೃತಪಟ್ಟ ಇಬ್ಬರಿಗೆ ಈಗಾಗಲೇ ಪರಿಹಾರ ಸಿಕ್ಕಿದೆ.

ನಮಗೆ ತಾತ್ಕಾಲಿಕವಾದ, ಗೌರವ, ಸನ್ಮಾನ ಬೇಡ. ವೇತನ ಹೆಚ್ಚಳ, ಉದ್ಯೋಗ ಭದ್ರತೆ ಸೇರಿದಂತೆ ನಮ್ಮ ಬೇಡಿಕೆಗಳನ್ನು ಸರ್ಕಾರ ಇದುವರೆಗೆ ಈಡೇರಿಸಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ನಮ್ಮ ಕೂಗನ್ನೂ ಆಲಿಸಿ, ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದು ನಮ್ಮ ಆಗ್ರಹ
–ಕೆ.ಸುಜಾತ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ

**
ಅಧಿಕಾರಿಗಳು ಏನಂತಾರೆ?

ಅಪಾಯಕಾರಿ ಸ್ಥಿತಿಯಲ್ಲೂ ಅದ್ಭುತ ಕೆಲಸ

ಕೋವಿಡ್‌ ಅಪಾಯ ಹಾಗೂ ತೀವ್ರ ಒತ್ತಡದ ನಡುವೆಯೂ ಅಂಗನವಾಡಿ ಕಾರ್ಯಕರ್ತೆಯರು ತಳಮಟ್ಟದಲ್ಲಿ ಧೈರ್ಯವಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೋವಿಡ್‌ ನಿಯಂತ್ರಣದಲ್ಲಿ ಇವರ ಶ್ರಮವೂ ಇದೆ. ನಮ್ಮಲ್ಲಿ ಐವರು ಕಾರ್ಯಕರ್ತೆಯರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇಬ್ಬರ ಕುಟುಂಬಗಳಿಗೆ ಈಗಾಗಲೇ ತಲಾ ₹30 ಲಕ್ಷ ಪರಿಹಾರ ಕೊಡಿಸಲಾಗಿದೆ. ಉಳಿದ ಮೂವರು ಕಾರ್ಯಕರ್ತೆಯರಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದ್ದು, ಅವರಿಗೂ ಪರಿಹಾರ ಕೊಡಿಸಲಾಗುವುದು. ಕರ್ತವ್ಯ ನಿರತ ಕಾರ್ಯಕರ್ತೆಯರಿಗೆ ಮಾಸ್ಕ್‌, ಸ್ಯಾನಿಟೈಸರ್‌ಗಳನ್ನು ಇಲಾಖೆಯಿಂದ ಒದಗಿಸಲಾಗಿದೆ. ಈ ಬಾರಿ ₹2,000 ಸಹಾಯಧನವನ್ನೂ ಸರ್ಕಾರ ಘೋಷಿಸಿದೆ.
– ಬಿ.ಬಸವರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ

**
ಇಲಾಖೆಯ ಪ್ರೋತ್ಸಾಹ
ತಾಲ್ಲೂಕಿನಲ್ಲಿ 212 ಅಂಗನವಾಡಿ ಕೇಂದ್ರಗಳಿವೆ. ಒಟ್ಟು 198 ಮಂದಿ ಅಂಗನವಾಡಿಕಾರ್ಯಕರ್ತೆಯರು ಮತ್ತು ಸಹಾಯಕರು ಕೆಲಸ ನಿರ್ವಹಿಸುತ್ತಿದ್ದಾರೆ. ಮಹಿಳೆಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸವಲತ್ತುಗಳನ್ನು ತಾಯಿ-ಮಕ್ಕಳಿಗೆ ತಲುಪಿಸುವ ದೆಸೆಯಲ್ಲಿ ಅಂಗನವಾಡಿ ಸಿಬ್ಬಂದಿ ಸೇವೆ ಅಪಾರ.ಕೋವಿಡ್ ನಿರ್ವಹಣೆಯ ಸಂದರ್ಭದಲ್ಲಿ ಸರ್ಕಾರ ಇವರ ಸೇವೆಯನ್ನು ಮನಗಂಡಿದೆ. ಇವರ ಖಾತೆಗೆ ₹2,000 ಪ್ರೋತ್ಸಾಹಧನ ನೀಡಿದೆ.
–ದೀಪಾ,ಸಹಾಯಕ ನಿರ್ದೇಶಕಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಳಂದೂರು

––––

ಪ್ರಜಾವಾಣಿ ತಂಡ: ಸೂರ್ಯನಾರಾಯಣ ವಿ., ನಾ.ಮಂಜುನಾಥಸ್ವಾಮಿ, ಅವಿನ್‌ ಪ್ರಕಾಶ್‌ ವಿ., ಮಲ್ಲೇಶ ಎಂ, ಬಿ.ಬಸವರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT