ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಹದಗೆಟ್ಟ ರಸ್ತೆಯಲ್ಲಿ ಸಂಚಾರ ಸರ್ಕಸ್‌

ಗುಂಡ್ಲುಪೇಟೆ: ವರ್ಷಗಳಿಂದ ಡಾಂಬರು ಕಾಣದ ಪಟ್ಟಣದ ರಸ್ತೆಗಳು, ಜನರಿಗೆ ದಿನನಿತ್ಯ ತೊಂದರೆ
Last Updated 21 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆಯ ಗಡಿ ಪಟ್ಟಣವಾಗಿರುವ ಗುಂಡ್ಲುಪೇಟೆಯು ನೆರೆಯ ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕೊಂಡಿ. ದಿನನಿತ್ಯ ಸಾವಿರಾರು ಜನರು ಸಂಚರಿಸುವ ಈ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಬಿಟ್ಟರೆ, ಉಳಿದ ರಸ್ತೆಗಳ ಸ್ಥಿತಿ ಗ್ರಾಮೀಣ ಭಾಗದ ರಸ್ತೆಗಳಿಗಿಂತಲೂ ಕಡೆಯಾಗಿವೆ.

ಪಟ್ಟಣದಲ್ಲಿರುವ ಬಹುತೇಕ ರಸ್ತೆಗಳು ಡಾಂಬರು ಕಂಡು ವರ್ಷಗಳೇ ಕಳೆದಿವೆ. ದಿನನಿತ್ಯದ ವ್ಯವಹಾರಕ್ಕಾಗಿ ಪಟ್ಟಣಕ್ಕೆ ಬರುವ ಜನರು ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಮಳೆಗಾಲದಲ್ಲಿ ರಸ್ತೆಗಳು ಕೆಸರು ಮಯವಾದರೆ, ಬೇಸಿಗೆಯಲ್ಲಿ ದೂಳುಮಯವಾಗಿರುತ್ತದೆ. ಜನರಿಗೆ ಒಂದೋ ಕೆಸರಿನ ಇಲ್ಲಾ ದೂಳಿನ ಮಜ್ಜನ ಖಚಿತ.

ಕೆಆರ್‌ಸಿ ರಸ್ತೆ, ವೀರ ಮದಕರಿ ನಾಯಕ ರಸ್ತೆ, ಪೋಲೀಸ್ ಠಾಣೆಯ ರಸ್ತೆ,ಕೊಡಹಳ್ಳಿ ವೃತ್ತದಿಂದ ಹೊಸೂರು ಬಡಾವಣೆಯ ರಸ್ತೆಯ, ಹಳೆ ಆಸ್ಪತ್ರೆಯ ರಸ್ತೆಗಳು ಹೆಚ್ಚು ಜನರು ಸಂಚರಿಸುವ ಮತ್ತು ವ್ಯವಹಾರ ಮಾಡುವ ರಸ್ತೆಗಳು. ಎಲ್ಲವೂ ಪೂರ್ಣವಾಗಿ ಹದಗೆಟ್ಟಿವೆ‌. ಜನರು ಓಡಾಡಲು ಪ್ರತಿ ದಿನ ತೊಂದರೆ ಅನುಭವಿಸುತ್ತಿದ್ದಾರೆ.

ಇದರ ಮಧ್ಯೆ,ರಾಷ್ಟ್ರೀಯ ಹೆದ್ದಾರಿಯ ಚರಂಡಿ ಕಾಮಗಾರಿ ನಡೆಯುತ್ತಿದೆ. ಅಲ್ಲಿ ಸೃಷ್ಟಿಯಾಗುವ ತ್ಯಾಜ್ಯಗಳೆಲ್ಲ ಲಿಂಕ್ ರಸ್ತೆಗಳಿಗೆ ಸೇರಿ ಪಟ್ಟಣವೇ ದೂಳುಮಯವಾಗಿದೆ.

ಸಂಚಾರಕ್ಕೆ ತೊಂದರೆ: ರಸ್ತೆ ಹಾಳಾಗಿರುವುದರಿಂದ ಸಂಚಾರಕ್ಕೂ ತೊಂದರೆಯಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಪ್ರತಿ ದಿನ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನನಿಬಿಡ ರಸ್ತೆಗಳಲ್ಲಿ ದೂಳಿನ ನಡುವೆ ಸಂಚಾರ ಮಾಡುವುದೇ ದೊಡ್ಡ ಸವಾಲು.ಒಮ್ಮೆ ಮಳೆಯಾದರೆ ಪೊಲೀಸ್ ಠಾಣೆ ರಸ್ತೆಯ ನೀರು ಹರಿದು ಮಡಹಳ್ಳಿ ವೃತ್ತದ ನಿಲ್ಲುತ್ತದೆ. ಇದರಿಂದಾಗಿ ಜನರ ಸಂಚಾರಕ್ಕೆ ತೊಡಕಾಗುತ್ತದೆ.

ರಸ್ತೆಗಳು ಹಾಳಾಗಿರುವುದರಿಂದ ಸಂಚಾರ ಮೊದಲ ಕಷ್ಟ. ಇದರ ಜೊತೆಯಲ್ಲಿ ಅಂಗಡಿ ಮುಂಗಟ್ಟುಗಳ ಬದಿ ಸರಕು ವಾಹನಗಳು ಹಾಗೂ ಆಟೊಗಳು ನಿಲ್ಲುವುದರಿಂದ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಮತ್ತಷ್ಟು ತೊಂದರೆಯಾಗುತ್ತದೆ ಎಂಬುದು ಸಾರ್ವಜನಿಕರ ದೂರು.

ಹೆಚ್ಚು ಅನುದಾನ ತನ್ನಿ:‘ಪುರಸಭೆಯ ಪ್ರತಿ ಸಭೆಗಳಲ್ಲೂ ರಸ್ತೆಯನ್ನು ಸರಿಪಡಿಸಲು ಒತ್ತಾಯಿಸಿದದೂ ಪ್ರಯೋಜನವಾಗಿಲ್ಲ. ನಮ್ಮ ವಾರ್ಡ್ಗಳ ಅಭಿವೃದ್ಧಿಗೆ ಸಹ ಬಿಡುಗಡೆ ಮಾಡುವ ಹಣ ಸಾಲುವುದಿಲ್ಲ. ಕೇವಲ ಪುರಸಭೆಗೆ ಸಿಗುವ ಅನುದಾನದಲ್ಲಿ ಎಲ್ಲ ರಸ್ತೆಗಳ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಹೆಚ್ಚುವರಿ ಅನುದಾನ ತರಲು ಶಾಸಕರು ಹಾಗೂ ಅಧಿಕಾರಿಗಳು ಪ್ರಯತ್ನ ಪಡಬೇಕು’ ಎಂದು ಎಂದು ಪುರಸಭೆ ಸದಸ್ಯ ಕುಮಾರ್ ನಾಯಕ್ ತಿಳಿಸಿದರು.

ಶೀಘ್ರ ಆರಂಭ: ‘ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಈಗಾಗಲೇ ಕೆಆರ್‌ಸಿ ರಸ್ತೆ ಅಭಿವೃದ್ಧಿಗೆ ಟೆಂಡರ್‌ ಕರೆಯಲಾಗಿದೆ. ತಿಂಗಳಲ್ಲಿ ಕಾಮಗಾರಿ ಆರಂಭವಾಗುತ್ತದೆ’ ಎಂದು ಪುರಸಭೆ ಮುಖ್ಯಾಧಿಕಾರಿ ರಮೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

₹ 5 ಕೋಟಿ ಅನುದಾನಕ್ಕೆ ಬೇಡಿಕೆ

ರಸ್ತೆಗಳ ಅಭಿವೃದ್ಧಿಗಾಗಿ ಈಗಾಗಲೇ₹ 1.90 ಕೋಟಿಗೆ ಟೆಂಡರ್‌ ಆಗಿದೆ. ಕೆಲಸ ಆರಂಭಿಸಬೇಕಾಗಿದೆ.ಇನ್ನೂ ₹ 5 ಕೋಟಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಅನುದಾನ ಸಿಕ್ಕಿದ ತಕ್ಷಣ ರಾಷ್ಟ್ರೀಯ ಹೆದ್ದಾರಿಯಿಂದ ಕೆಆರ್‌ಸಿ ರಸ್ತೆ ಮುಖಾಂತರ ಅಂಬೇಡ್ಕರ್ ವೃತ್ತ... ಹೀಗೆ ಮೆರವಣಿಗೆ ಮಾಡುವ ರಸ್ತೆಗಳನ್ನು ಕಾಂಕ್ರೀಟ್‌ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಟೆಂಡರ್‌ ಆಗಿರುವ ಕಾಮಗಾರಿಯನ್ನು ಶೀಘ್ರದಲ್ಲಿ ಆರಂಭಿಸಲಾಗುವುದು.

- ಪಿ.ಗಿರೀಶ್,ಪುರಸಭೆ ಅಧ್ಯಕ್ಷ

***

ಜನರು ಏನಂತಾರೆ?

ಗಮನವನ್ನೇ ಹರಿಸುತ್ತಿಲ್ಲ

ಪಟ್ಟಣದ ಹೃದಯ ಭಾಗದಲ್ಲಿರುವ ರಸ್ತೆಗಳು ಪೂರ್ಣವಾಗಿ ಹದಗೆಟ್ಟಿವೆ. ಸ್ವಲ್ಪ ಹೊರಭಾಗದಲ್ಲಿರುವ ರಸ್ತೆಗಳ ಸ್ಥಿತಿಯಂತು ಹೇಳಲು ಸಾಧ್ಯವೇ ಇಲ್ಲ. ಪ್ರತಿ ದಿನ ಜನರು ಇದರಲ್ಲೇ ಓಡಾಡಬೇಕು. ನಾವು ದೂಳು ತಿಂದುಕೊಂಡೇ ವ್ಯಾಪಾರ ಮಾಡಬೇಕು. ರಸ್ತೆ ಅಭಿವೃದ್ಧಿ ಪಡಿಸದೆ ವರ್ಷಗಳೇ ಉರುಳಿವೆ. ಸ್ಥಳೀಯ ಆಡಳಿತ ಈ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ‌

- ರಂಗಸ್ವಾಮಿ,ವ್ಯಾಪಾರಿ

***

ಗುಂಡಿ ಮುಚ್ಚಿಸಿ

ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ದುರಸ್ತಿ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ. ಆದರೆ, ಗುಂಡಿಗಳು ಬಿದ್ದ ತಕ್ಷಣ ಅವುಗಳನ್ನು ಮುಚ್ಚಲು ಪುರಸಭೆ ಕ್ರಮ ವಹಿಸುವುದಿಲ್ಲ. ಇದರಿಂದಾಗಿ ಗುಂಡಿಗಳು ವರ್ಷದಿಂದ ವರ್ಷಕ್ಕೆ ದೊಡ್ಡದಾಗುತ್ತಿವೆ

- ಶಂಭುಲಿಂಗ,ಪಟ್ಟಣದ ನಿವಾಸಿ

-----------

ಪಟ್ಟಣದ ಅಂಗಡಿ ಬೀದಿಗಳನ್ನು ಕಾಂಕ್ರೀಟ್ ರಸ್ತೆಗಳಾಗಿ ಅಭಿವೃದ್ಧಿ ಪಡಿಸಲು ಟೆಂಡರ್ ಕರೆಯಲಾಗಿದೆ. ಶೀಘ್ರವಾಗಿ ಕೆಲಸ ಆರಂಭವಾಗಲಿದೆ
ಸಿ.ಎಸ್.ನಿರಂಜನಕುಮಾರ್, ಶಾಸಕ

-----------

ಶಾಸಕರಿಗೆ ಪಟ್ಟಣದ ಮೇಲೆ ಒಲವಿಲ್ಲ ಎಂದೆನಿಸುತ್ತದೆ. ದಶಕಗಳಿಂದ ರಸ್ತೆಗಳು ಗುಂಡಿ ಬಿದ್ದಿದ್ದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ.
ಕುಮಾರ್ ನಾಯಕ್, ಪುರಸಭೆ ಸದಸ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT