ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಕಾಫಿ ಬೆಳೆಗಾರರ ಬವಣೆ; ಬೇಕಿದೆ ಪೋಷಣೆ

ಬಿಆರ್‌ಟಿ: ಹವಾಮಾನ ಬದಲಾವಣೆಯ ಕಾಟ, ಕೊಯ್ಲಿನ ನಂತರ ಸೌಕರ್ಯಗಳ ಕೊರತೆ ಸಂಕಟ
Last Updated 21 ಫೆಬ್ರುವರಿ 2022, 3:07 IST
ಅಕ್ಷರ ಗಾತ್ರ

ಯಳಂದೂರು: ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿ, ಪೂರ್ವ, ಪಶ್ಚಿಮ ಘಟ್ಟಗಳು ಸಂಧಿಸುವ ಬಿಳಿಗಿರಿರಂಗನಬೆಟ್ಟದ ಜೀವ ವೈವಿಧ್ಯ ತಾಣದಲ್ಲೂ ನೆಲೆ ಕಂಡುಕೊಂಡಿದೆ.

ನಿಸರ್ಗದತ್ತವಾಗಿ ಇಲ್ಲಿ ಬೆಳೆಯುವ ಕಾಫಿಗೆ ತುಂಬಾ ಬೇಡಿಕೆ ಇದೆ. ಪುಣಜನೂರು, ಬೇಡಗುಳಿ, ಬಿಳಿಗಿರಿರಂಗನಬೆಟ್ಟ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತದೆ. ಪುಣಜನೂರು, ಬೇಡಗುಳಿ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಗಳು ಕಾಫಿ ಬೆಳೆದರೆ, ಬಿಳಿಗಿರಿರಂಗನ ಬೆಟ್ಟದಲ್ಲಿ ಬುಡಕಟ್ಟು ಸಮುದಾಯದವರು ಬೆಳೆಯುತ್ತಾರೆ. ಕಾಫಿಯ ಜೊತೆಗೆ ಕಿತ್ತಳೆ, ಕರಿಮೆಣಸು, ಏಲಕ್ಕಿಯನ್ನೂ ಬೆಳೆಯುತ್ತಾರೆ. ಈ ನಾಲ್ಕು ಬೆಳೆಗಳ ಪೈಕಿ ಕಾಫಿಯ ಪ್ರಮಾಣ ಹೆಚ್ಚು.

ಬಿಳಿಗಿರಿರಂಗನ ಬೆಟ್ಟದಲ್ಲಿರುವ ಸೋಲಿಗ ಸಮುದಾಯದ 625 ಕುಟುಂಬಗಳು ಅಂದಾಜು 500 ಎಕರೆಯಲ್ಲಿ ಕಾಫಿ ಬೆಳೆಯುತ್ತಿವೆ. ಎಲ್ಲರೂ ಸಣ್ಣ ಸಣ್ಣ ಹಿಡುವಳಿದಾರರು. ಹಾಗಾಗಿ ದೊಡ್ಡ ಪ್ರಮಾಣದಲ್ಲಿ ಇಳುವರಿ ಏನೂ ಬರುವುದಿಲ್ಲ. ತಕ್ಕಮಟ್ಟಿಗೆ ಆದಾಯವನ್ನೂ ಗಳಿಸುತ್ತಿದ್ದಾರೆ. ಕಾಫಿ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯು ವಿವಿಧ ರೂಪದಲ್ಲಿ ಈ ಬೆಳೆಗಾರರಿಗೆ ಸಣ್ಣ ಪ್ರಮಾಣದಲ್ಲಿ ಬೆಂಬಲ ನೀಡುತ್ತಿದ್ದರೂ, ಪೂರ್ಣ ಪ್ರಮಾಣದ ನೆರವು ಸಿಗುತ್ತಿಲ್ಲ. ಕಾಫಿ ಬೆಳೆಯಲ್ಲಿ ಅವರು ಇನ್ನಷ್ಟು ಸದೃಢರಾಗಬೇಕಾದರೆ, ‌ಇನ್ನಷ್ಟು ನೆರವಿನ ಅಗತ್ಯವಿದೆ. ಕೆಲವು ಮೂಲ ಸೌಕರ್ಯಗಳ ಕೊರತೆಯನ್ನೂ ಗಿರಿ ಜನರು ಎದುರಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹವಾಮಾನದಲ್ಲಿ ಬದಲಾವಣೆ ಕಂಡು ಬರುತ್ತಿದೆ. ಸಕಾಲದಲ್ಲಿಮಳೆಯಾಗುತ್ತಿಲ್ಲ. ಕಾಫಿ ಹೂ ಸರಿಯಾದ ಸಮಯಕ್ಕೆ ಅರಳುತ್ತಿಲ್ಲ. ಏಪ್ರಿಲ್– ಮೇನಲ್ಲಿಹದಮಳೆ ಬಾರದೆ, ಸೆಪ್ಟೆಂಬರ್– ಡಿಸೆಂಬರ್ ನಡುವೆ ವಿಪರೀತ ವರ್ಷಧಾರೆಯಾಗಿ ಬೆಳೆಗೆ ಕೊಳೆರೋಗ ಆವರಿಸುವುದು ಸಾಮಾನ್ಯವಾಗಿದೆ. ಇದರಿಂದ ಕಾಫಿ ಉತ್ಪಾದನೆ ಕುಸಿದು, ಕೃಷಿಕರವರಮಾನ ಇಳಿದಿದೆ.

ಚಿಕ್ಕ ಹಿಡುವಳಿದಾರರ ಬವಣೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಕಾಫಿ ಮಂಡಳಿ ಸರಿಯಾಗಿ ಯೋಜನೆ ರೂಪಿಸಬೇಕಿದೆ ಎಂದು ಹೇಳುತ್ತಾರೆ ಸೋಲಿಗ ಮುಖಂಡರು.

ಉತ್ಪಾದಕ ಕಂಪನಿ: ಕಾಫಿ ವಿಚಾರದಲ್ಲಿ ಬಿಳಿಗಿರಿರಂಗನಬೆಟ್ಟದಲ್ಲಿ ಉತ್ತಮ ಪ್ರಯೋಗಗಳು ನಡೆದಿವೆ. ಇಲ್ಲಿನ ಗಿರಿಜನರು ರೈತ ಉತ್ಪಾದಕ ಕಂಪನಿ ಸ್ಥಾಪಿಸಿದ್ದಾರೆ. ರಾಜ್ಯದಲ್ಲಿ ಸ್ಥಾಪನೆಗೊಂಡಿರುವ ಆರು ರೈತ ಉತ್ಪಾದಕ ಕಂಪನಿಗಳಲ್ಲಿ ಎರಡು ಕಂಪನಿಗಳು ಇಲ್ಲಿಯೇ ಇವೆ. ‘ಅಡವಿ’ ಎಂಬ ಕಾಫಿ ಬ್ರ್ಯಾಂಡ್‌ ಅನ್ನೂ ಇಲ್ಲಿನ ಗಿರಿಜನರು ಹೊರತಂದಿದ್ದಾರೆ.

ರೈತ ಉತ್ಪಾದಕ ಕಂಪನಿಗಳು ಸೋಲಿಗರ ಆರ್ಥಿಕ ಸುಸ್ಥಿರತೆಗೂ ವರವಾಗಿ ಪರಿಣಮಿಸಿವೆ. ಹೆಚ್ಚಿನಪ್ರದೇಶದಲ್ಲಿ ಅರೇಬಿಕಾ ತಳಿ ಹರಡಿಕೊಂಡಿದ್ದು, ಚಂದ್ರಗಿರಿ ಕಾಫಿ ಸಸಿಗಳಿಗೆ ಇತ್ತೀಚೆಗೆ ಬೇಡಿಕೆ ಕಂಡು ಬರುತ್ತಿದೆ.ವಾರ್ಷಿಕ 70 ಟನ್ ಕಾಫಿ ಉತ್ಪಾದನೆ ಆಗುತ್ತದೆ. 2020–21ನೇ ಸಾಲಿನಲ್ಲಿ 70 ಟನ್‌ಗಳಷ್ಟು ಕಾಫಿ ಮಾರಾಟವಾಗಿದೆ. ₹1.56 ಕೋಟಿ ವಹಿವಾಟು ಕೂಡ ನಡೆದಿದೆ.

ಇತ್ತೀಚಿನ ವರ್ಷಗಳಲ್ಲಿ ರೋಗಗಳ ಹಾವಳಿ ಹೆಚ್ಚಾಗಿದ್ದು, ಕಾಫಿ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ.ಇದರಿಂದ ಈ ಬಾರಿ ಇಳುವರಿ 40 ಟನ್‌ಗೆ ಕುಸಿದಿದೆ. ಕಾಫಿ ಬೆಳೆಗಾರರಿಗೆ ಹತ್ತು ಹಲವು ಸಮಸ್ಯೆಗಳು ಎದುರಾಗಿವೆ.

ಇಲ್ಲಿ ಕಾಫಿ ಸಂಸ್ಕರಣಾ ಘಟಕ ಇಲ್ಲ. ಡ್ರೈಯರ್‌, ಕಾಫಿ ಬೀಜ ಒಣಗಿಸಲು ವ್ಯವಸ್ಥಿತ ಕಣಗಳಿಲ್ಲ. ಈ ಬಾರಿ ಕಾಫಿ ಕೊಯ್ಲು ಆದ ನಂತರವೂ ತೇವದ ವಾತಾವರಣ ಇದ್ದುದರಿಂದ ಸೋಲಿಗರು ಕಾಫಿ ಬೀಜವನ್ನು ಒಣಗಿಸಲು ತುಂಬಾ ಕಷ್ಟಪಟ್ಟಿದ್ದರು.

ಕಾಫಿ ಸಂಸ್ಕರಣಾ ಘಟಕ ನಿರ್ಮಾಣದ ಪ್ರಸ್ತಾವ ಇದೆ. ಹಿಂದಿನ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಘಟಕ ನಿರ್ಮಾಣಕ್ಕೆ ಒಂದು ಎಕರೆ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ತಾಂತ್ರಿಕ ನೆರವು ಬೇಕು: ವೈಜ್ಞಾನಿಕ ರೀತಿಯಲ್ಲಿ ಕಾಫಿ ಬೆಳೆಯುವ ವಿಧಾನ ಸೋಲಿಗರಿಗೆ ಗೊತ್ತಿಲ್ಲ. ಕಾಫಿ ಮಂಡಳಿಯು ನೆರವಾಗುತ್ತಿದ್ದರೂ, ಇನ್ನಷ್ಟು ಜಾಗೃತಿಯ ಅಗತ್ಯವಿದೆ ಎಂದು ಹೇಳುತ್ತಾರೆ ಬೆಳೆಗಾರರು.

ಕಾಫಿ ನಶಿಸುವ ಎಚ್ಚರಿಕೆ: ಭಾರತದ ಹುಲಿ ಕಾಡಿನಲ್ಲಿ ಕಾಫಿ ಬೆಳೆಯುವ ಏಕೈಕ ತಾಣ ಬಿಆರ್‌ಟಿ. ರೊಬೊಸ್ಟಾಕ್ಕಿಂತಅರೇಬಿಕಾ ತಳಿಯ ಕಾಫಿಗೆ ಇಲ್ಲಿನ ಬೆಳೆಗಾರರು ಒತ್ತು ನೀಡಿದ್ದಾರೆ. ಇದು ಪೊದೆಯಾಗಿ ಬೆಳೆಯದು. ದೇಶಿವನಸುಮಗಳ ಆವಾಸಕ್ಕೆ ಹೊಂದಿಕೊಳ್ಳುತ್ತದೆ. ವನ್ಯಜೀವಿಗಳ ಆಶ್ರಯಕ್ಕೂ ಅನುಕೂಲ ಕಲ್ಪಿಸುತ್ತದೆ.ಇತ್ತೀಚಿಗೆ ಹಲವು ಕೀಟ,ರೋಗಗಳು ಗಿಡವನ್ನು ಕಾಡುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ 100 ವರ್ಷಗಳಲ್ಲಿ ಕಾಫಿ ಬೆಳೆ ನಾಶವಾಗಲಿದೆಎಂದು ಎಚ್ಚರಿಸುತ್ತಾರೆ ಏಟ್ರೀ ತಜ್ಞರು.

ಮುಖಂಡರು, ಬೆಳೆಗಾರರು ಏನಂತಾರೆ?

ಗಿರಿಜನರಿಗೆ ನೆರವಿಲ್ಲ

ಬಹುತೇಕ ಗಿರಿಜನರು ಕಾಫಿ ಸಾಗುವಳಿ ಮಾಡುತ್ತಿದ್ದಾರೆ. ಅರಣ್ಯ ವ್ಯಾಪ್ತಿಯಲ್ಲಿ ಕೃಷಿ ಕೈಗೊಂಡವರಿಗೆ ಸರ್ಕಾರ ಮತ್ತು ಕಾಫಿ ಬೋರ್ಡ್‌ನ ನೆರವು ಸಿಗುವುದಿಲ್ಲ. ಹವಾಮಾನವೈಪರೀತ್ಯ, ಕಾಫಿಯಲ್ಲಿ ರೋಗಬಾಧೆ, ಬೆಲೆ ಕುಸಿತ, ಇಳುವರಿ ಕುಸಿತ ಮುಂತಾದ ಸಮಸ್ಯೆಗಳು ಇವೆ. ಹಿಂಗಾರಿನಲ್ಲಿ ವಿಪರೀತ ಮಳೆ ಮತ್ತು ಉಷ್ಣಾಂಶದಲ್ಲಿ ಏರಿಕೆಯಿಂದ ಎಲೆ ತುಕ್ಕು ರೋಗ ಕಂಡು ಬರುತ್ತಿದೆ. ತೇವಾಂಶ ಹೆಚ್ಚು ದಿನ ಕಂಡು ಬಂದಿರುವುದರಿಂದ ಶಿಲೀಂಧ್ರ ರೋಗ ಕಾಡುತ್ತದೆ. ಅತಿಯಾದ ಬಿಸಿಲಿನಿಂದ ಜೇನುನೊಣಗಳು ಸಾಯುತ್ತವೆ. ಇದರಿಂದ ಕಾಫಿ ಗಿಡಗಳಪರಾಗಸ್ಪರ್ಶಕ್ಕೆ ಹಿನ್ನಡೆಯಾಗಿದ್ದು, ಇಳುವರಿ ಕುಸಿತವಾಗಿದೆ. ಕಾಫಿ ಮಂಡಳಿಯು ಪಲ್ಪಿಂಗ್ ಯಂತ್ರ ನೀಡಿದೆ. ಸಂಸ್ಕರಣೆಗೆ ಬೇಕಾದ ವ್ಯವಸ್ಥೆ ಇಲ್ಲ. ಒಣಗಿಸಲು ಅಗತ್ಯ ಡ್ರೈಯರ್ ಮತ್ತು ಬೀಜ ಒಣಗಿಸಲುಟಾರ್ಪಲ್ ಸೌಲಭ್ಯ ಬೇಕಿವೆ.

–ಸಿ.ಮಾದೇಗೌಡ,ಕಾರ್ಯದರ್ಶಿ, ಜಿಲ್ಲಾ ಬುಡಕಟ್ಟು ಸಂಘ, ಬಿಳಿಗಿರಿರಂಗನಬೆಟ್ಟ

***

ಗಮನ ಹರಿಸದ ಅಧಿಕಾರಿಗಳು

ಪಟ್ಟಾ ಭೂಮಿ ಹೊಂದಿರುವ ಅತಿ ಸಣ್ಣ ಬೇಸಾಯಗಾರರಿಗೆ ನೀರಾವರಿ ವ್ಯವಸ್ಥೆ ಅಗತ್ಯ ಇದೆ. ವಿದ್ಯುತ್‌ ಪಂಪ್‌ಸೆಟ್‌ ಮತ್ತು ಕೊಳವೆಬಾವಿ ಅಗತ್ಯ ಪೂರೈಸಲು ಸರ್ಕಾರನೆರವಾಗಬೇಕು. ಬೇಸಿಗೆಯಲ್ಲಿ ಸ್ಪ್ರಿಂಕ್ಲರ್ ಒದಗಿಸಬೇಕು. ವಿಜ್ಞಾನಿಗಳು ಕಾಲಕಾಲಕ್ಕೆ ಭೇಟಿ ನೀಡಿ ಸಲಹೆ ಸೂಚನೆ ನೀಡಬೇಕು. ಕೃಷಿ ಮತ್ತು ತೋಟಗಾರಿಕಾ ಇಲಾಖೆಯಅಧಿಕಾರಿಗಳು ಒಮ್ಮೆಯೂ ಕಾಫಿ ಬೆಳೆಗಾರರ ಸಮಸ್ಯೆ ನೀಗಿಸಲು ಭೇಟಿ ನೀಡಿಲ್ಲ.

– ನಂದಕುಮಾರ್, ಕಲ್ಯಾಣಿ ಬಡಾವಣೆ,ಬಿಳಿಗಿರಿರಂಗನಬೆಟ್ಟ

***

ತಾಂತ್ರಿಕ ನೆರವು ಅಗತ್ಯ

ದಿನಗೂಲಿ ಸತತ ಏರಿಕೆ ಕಂಡಿದೆ. ಬೆಳೆಗಾರರು ಅನಕ್ಷರಸ್ಥರಾಗಿದ್ದು, ಗಿಡ ನೆಡುವ ವೈಜ್ಞಾನಿಕ ವಿಧಾನ ತಿಳಿದಿಲ್ಲ. ಸಸಿ ಹಾಕುವ ಅಂತರ, ನೀರು, ಗೊಬ್ಬರ, ಕಾಲಕಾಲಕ್ಕೆಔಷಧ ಸಿಂಪಡಣೆ ಬಗ್ಗೆ ಇನ್ನೂ ಅರಿವಿಲ್ಲ. ಸೀರೆ ಬಳಸಿ ಬೀಜ ಒಣಗಿಸುತ್ತಾರೆ. ಮಳೆಸುರಿದರೆ, ಬೀಜದ ಗುಣಮಟ್ಟ ಹಾಳಾಗುತ್ತದೆ. ಉತ್ತಮ ತಳಿಯ ಸಸಿ ಮತ್ತು ಮುಂಗಾರು ಹಂಗಾಮಿನಲ್ಲಿ ಉತ್ತಮ ಜಾತಿಯ ಸಸಿ ವಿತರಿಸುವ ಬಗ್ಗೆ ಅಧಿಕಾರಿಗಳು ಹೆಚ್ಚಿನ ಒತ್ತುನೀಡಲಿ.

–ಕೇತಮ್ಮ,ಕಾಫಿ ಬೆಳೆಗಾರ, ಬಂಗ್ಲೇಪೋಡು, ಬಿಳಿಗಿರಿರಂಗನಬೆಟ್ಟ

***

ಮಂಡಳಿಯಿಂದ ಅಗತ್ಯ ನೆರವು

2021ರಲ್ಲಿ 15 ಕಾಫಿ ಕೃಷಿಕರಿಗೆ 30 ಔಷಧ ಸಿಂಪಡಣೆ ಯಂತ್ರ, ಬಾಧಿತ ಗಿಡಗಳಿಗೆ ಸಿಂಪಡಿಸಲು ಮೈಲುತುತ್ತು, ಸುಣ್ಣ ನೀಡಲಾಗಿದೆ. ಬೆಳೆ ವೈವಿಧ್ಯತೆಕಾಪಾಡಲು 2,300 ಕಿತ್ತಳೆ ಸಸಿ, 74,300 ಕಾಫಿಗಿಡ ವಿತರಿಸಲಾಗಿದೆ. ಸಸಿ ನೆಡಲು ತರಬೇತಿ, ಕಾಯಿಕೊರಕಮತ್ತು ಕಾಂಡಕೊರಕ ತಪ್ಪಿಸಲು ಕೈಗೊಳ್ಳಬೇಕಾದ ಎಚ್ಚರಿಕೆಗಳ ಬಗ್ಗೆ ಪ್ರಾತ್ಯಕ್ಷಿಕೆನೀಡಲಾಗಿದೆ. ಗಿರಿಜನರು ಉತ್ಪಾದಕ ಸಂಘ ರಚಿಸಿಕೊಂಡು ‘ಪೋಕ್ಲೋರ್’ ಮತ್ತು ‘ಟ್ರೈ’ ಬ್ರ್ಯಾಂಡ್‌ಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಸರ್ಕಾರ ಪ್ರತಿ ಸಂಘಕ್ಕೆ ₹15 ಲಕ್ಷ ಅನುದಾನ ನೀಡುತ್ತದೆ. ಕಾಫಿ ಮೌಲ್ಯವರ್ಧನೆ, ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಈ ಹಣಬಳಸಿಕೊಳ್ಳಬಹುದು. ಸಂಘದ ಸದಸ್ಯರು ಮಾರಾಟ ಮತ್ತು ದರ ನಿರ್ಧಾರದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಬಂಧನ್ ವಿಕಾಸ ಕೇಂದ್ರ ಗಿರಿಜನರ ಆರ್ಥಿಕ ಸುಸ್ಥಿರ ಅಭಿವೃದ್ಧಿಗೆನೆರವಾಗಿದೆ’ ಎಂದು ಕಾಫಿ ಬೋರ್ಡ್ ಸಂಪರ್ಕ ಅಧಿಕಾರಿಡಾ.ಕೆ.ಪ್ರಭುಗೌಡ ತಿಳಿಸಿದರು.

***

ರೈತ ಉತ್ಪಾದಕ ಸಂಘ ಸ್ಥಾಪನೆ

ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಕಾಫಿ ಮಂಡಳಿಯು ಕಾಫಿ ಕೃಷಿಕರ ಆರ್ಥಿಕತೆ ಚೇತರಿಕೆಗೆ ನೆರವು ನೀಡಿದೆ. ಸಾವಯವ ವಿಧಾನದಲ್ಲಿ ಕಾಫಿ ಕೃಷಿಗೆ ಹೇರಳ ಅವಕಾಶ ಇದ್ದು,ನಾಡಿನಾದ್ಯಂತ ಬಿಆರ್‌ಟಿ ಕಾಫಿಗೆ ಬೇಡಿಕೆ ಕಂಡು ಬರುತ್ತಿದೆ. ಅರೇಬಿಕಾ ಕಾಫಿ ಕೆ.ಜಿ.ಗೆ ₹275ರಿಂದ ₹300ರವರೆಗೆ ಬೆಲೆ ಇದೆ. ಕೊಲ್ಲಿಮಲೆ ಬಸವೇಶ್ವರ ಮತ್ತು ಬಿಳಿಗಿರಿ ಉತ್ಪಾದಕ ಸಂಘಗಳಮೂಲಕ 500ಕ್ಕೂ ಹೆಚ್ಚಿನ ಸದಸ್ಯರು ಉತ್ತಮ ಜೀವನ ಕಂಡುಕೊಂಡಿದ್ದಾರೆ. ಮಕ್ಕಳ ಶಿಕ್ಷಣಮತ್ತು ಸದಸ್ಯರ ಆರ್ಥಿಕತೆ ಸುಧಾರಿಸಿದೆ. ಕಾಫಿ ಕೃಷಿಕರಿಗೆ ನರೇಗಾ ಯೋಜನೆಯಲ್ಲಿ ಭೂಅಭಿವೃದ್ಧಿ ಸಾಧ್ಯವಾಗಿದೆ ಎಂದು ಬಿಳಿಗಿರಿ ಸೋಲಿಗ ಉತ್ಪಾದಕ ಕಂಪನಿ ಕಾರ್ಯದರ್ಶಿ ನಂಜೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT