ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ಬೆಂಬಲ ಬೆಲೆ; ರೈತರು ದೂರ, ಹೊರಗಡೆಯೇ ಉತ್ತಮ ಬೆಲೆ

ಜಿಲ್ಲೆಯಲ್ಲಿ ಐದು ಭತ್ತ, ರಾಗಿ ಖರೀದಿ ಕೇಂದ್ರಗಳು,
Last Updated 2 ಜನವರಿ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಭತ್ತ ಮತ್ತು ರಾಗಿ ಬೆಳೆಯನ್ನು ಖರೀದಿಸಲು ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆದಿದೆ.

ಭತ್ತ ಖರೀದಿ ಕೇಂದ್ರಗಳನ್ನು ತೆರೆದು ಮೂರು ವಾರಗಳು ಕಳೆದಿವೆ. ನೋಂದಣಿ ಪ್ರಕ್ರಿಯೆ ಚಾಲನೆಯಲ್ಲಿದ್ದು, ಭತ್ತ ಬೆಳೆಗಾರರು ನಿರೀಕ್ಷಿತ ಪ್ರಮಾಣದಲ್ಲಿ ಖರೀದಿ ಕೇಂದ್ರಗಳತ್ತ ಹೋಗುತ್ತಿಲ್ಲ. ಹೊರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಸರ್ಕಾರವು ಒಂದು ಕ್ವಿಂಟಲ್‌ ಸಾಮಾನ್ಯ ಭತ್ತಕ್ಕೆ ಕ್ವಿಂಟಲ್‌ಗೆ ₹1,940 ಹಾಗೂ ‘ಎ’ ದರ್ಜೆಯ ಭತ್ತಕ್ಕೆ ₹1,960 ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಿದೆ.

ಸದ್ಯ ಹೊರಗಿನ ಮಾರುಕಟ್ಟೆಯಲ್ಲಿಪೆನ್ನಾಸೂಪರ್‌, ಪದ್ಮಾವತಿ, ಆರ್‌ಎನ್‌ಆರ್‌, ಅಮ್ಮನ್‌ ಭತ್ತದ ತಳಿಗಳಿಗೆ ಕ್ವಿಂಟಲ್‌ಗೆ ₹1,900–₹1,950ರವರೆಗೆ ಬೆಲೆ ಸಣ್ಣ ಭತ್ತಕ್ಕೆ ₹1950, ಐಆರ್ 64 ತಳಿಗೆ ₹1,750, ಜ್ಯೋತಿ ಭತ್ತದ ತಳಿಗೆ ₹2,600ರಿಂದ ₹2,800ರವರೆಗೂ ಬೆಲೆ ಇದೆ.

ಗದ್ದೆಗಳಲ್ಲಿ ಭತ್ತದ ಕಟಾವು ಆದ ತಕ್ಷಣ ಅಕ್ಕಿ ಗಿರಣಿ ಮಾಲೀಕರು ಇಲ್ಲವೇ ದಲ್ಲಾಳಿಗಳು ನೇರವಾಗಿ ಹೊಲಕ್ಕೆ ಬಂದು ಭತ್ತವನ್ನು ತೂಕ ಹಾಕಿ ಖರೀದಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿ, ಯಳಂದೂರು ತಾಲ್ಲೂಕು ಹಾಗೂ ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಹೆಚ್ಚು ಭತ್ತ ಬೆಳೆಯುತ್ತಾರೆ. ಶೇ 60ರಿಂದ 70ರಷ್ಟು ಭಾಗದಲ್ಲಿ ಕೊಯ್ಲು ಈಗಾಗಲೇ ಮುಗಿದಿದೆ. ಕಟಾವಿನ ಹಂತದಲ್ಲಿ ಮಳೆಯಾಗಿದ್ದರಿಂದ ಬಹುತೇಕ ಕಡೆಗಳಲ್ಲಿ ಇಳುವರಿ ಕುಸಿದಿದೆ. ಶೇ 30ರಿಂದ 40ರಷ್ಟು ಫಸಲು ಕಡಿಮಯಾಗಿದೆ ಎಂದು ಹೇಳುತ್ತಾರೆ ರೈತರು.

ಈ ಬಾರಿ ಸರ್ಕಾರ ಭತ್ತ ಖರೀದಿ ಕೇಂದ್ರಗಳನ್ನು ಕೊಯ್ಲು ಆರಂಭಿಸುವ ಹಂತದಲ್ಲೇ ತೆರೆದಿದೆ.ಗುಂಡ್ಲುಪೇಟೆ ಬಿಟ್ಟು ಉಳಿದ ನಾಲ್ಕೂ ತಾಲ್ಲೂಕುಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಹಾಗಿದ್ದರೂ, ರೈತರು ಕೇಂದ್ರಗಳಿಗೆ ಬಂದು ನೋಂದಣಿ ಮಾಡುತ್ತಿಲ್ಲ. ಶನಿವಾರದವರೆಗೆ 36 ಮಂದಿ ಮಾತ್ರ (ಕೊಳ್ಳೇಗಾಲದಲ್ಲಿ 26, ಯಳಂದೂರಿನಲ್ಲಿ 9 ಮತ್ತು ಸಂತೇಮರಹಳ್ಳಿಯಲ್ಲಿ ಒಬ್ಬರು) ಕನಿಷ್ಠ ಬೆಂಬಲ ಬೆಲೆಗೆ ಭತ್ತ ಮಾರಾಟ ಮಾಡುವುದಾಗಿ ನೋಂದಣಿ ಮಾಡಿದ್ದಾರೆ.

ಹೊರಗಡೆಯೇ ಹೆಚ್ಚು ಬೆಲೆ: ಕಳೆದ ವರ್ಷ ಕನಿಷ್ಠ ಬೆಂಬಲ ಬೆಲೆಯ ಅಡಿಯಲ್ಲಿ ಖರೀದಿ ಕೇಂದ್ರ ತೆರೆಯಲು ಸರ್ಕಾರ ವಿಳಂಬ ಮಾಡಿತ್ತು. ಇದರಿಂದ ಕಡಿಮೆ ಬೆಲೆಗೆ ರೈತರು ಖಾಸಗಿಯವರಿಗೆ ಭತ್ತ ಮಾರಾಟ ಮಾಡಿದ್ದರು. ಖರೀದಿ ಕೇಂದ್ರ ತೆರೆದ ಬಳಿಕ ಹೊರ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿತ್ತು. ಈ ಬಾರಿ ಕೊಯ್ಲಿನ ಆರಂಭದಲ್ಲೇ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಗಿಂತ ಸ್ವಲ್ಪ ಹೆಚ್ಚೇ ಬೆಲೆ ಹೊರ ಮಾರುಕಟ್ಟೆಯಲ್ಲಿದೆ. ಹಾಗಾಗಿ, ರೈತರು ನೇರವಾಗಿ ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ.

ಹಿಂದೇಟು ಏಕೆ?: ರೈತರು ಸರ್ಕಾರಕ್ಕೆ ಭತ್ತ ಮಾರಾಟ ಮಾಡದಿರಲು ಹಲವು ಕಾರಣಗಳನ್ನು ನೀಡುತ್ತಾರೆ. ಖರೀದಿ ಕೇಂದ್ರದಲ್ಲಿ ಆರಂಭದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇದಕ್ಕಾಗಿ ಪಹಣಿ ಸೇರಿದಂತೆ ಹಲವು ದಾಖಲೆಗಳನ್ನು ನೀಡಬೇಕು. ಅದಲ್ಲದೇ, ಭತ್ತದ ಗುಣಮಟ್ಟ ಉತ್ತಮವಾಗಿರಬೇಕು. ಉತ್ತಮ ಗೋಣಿ ಚೀಲದಲ್ಲಿ ಭತ್ತ ಹಾಕಿ, ನಿಗದಿತ ಅಕ್ಕಿ ಗಿರಣಿಗೆ ತೆಗೆದುಕೊಂಡು ಹಾಕಬೇಕು. ಒಂದು ವೇಳೆ ನೋಂದಣಿ ಮಾಡಿದರೂ, ಹಲವು ದಿನಗಳ ನಂತರ ಭತ್ತವನ್ನು ನೀಡಬೇಕಾಗುತ್ತದೆ. ಅಷ್ಟು ದಿನ ಭತ್ತವನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಇಷ್ಟೆಲ್ಲ ಆದರೂ ತಕ್ಷಣಕ್ಕೆ ಹಣ ಬರುವುದಿಲ್ಲ ಎಂಬುದು ರೈತರ ಮಾತು. ಅಧಿಕಾರಿಗಳು ಕೂಡ ಇದನ್ನು ಒಪ್ಪುತ್ತಾರೆ.

ಖಾಸಗಿಯವರಿಗೆ ಮಾರಾಟ ಮಾಡುವುದಾದರೆ ಇಂತಹ ಯಾವ ಸಮಸ್ಯೆಯೂ ಇಲ್ಲ. ಹೊಲದ ಬಳಿಯಿಂದಲೇ ಅವರು ನೇರವಾಗಿ ಭತ್ತ ಖರೀದಿಸುತ್ತಾರೆ. ಭತ್ತ ಹಸಿ ಇದ್ದರೂ, ಗುಣಮಟ್ಟ ಸ್ವಲ್ಪ ಕಡಿಮೆ ಇದ್ದರೂ ಸಮಸ್ಯೆ ಇಲ್ಲ. ಅವರೇ ಬಂದು ತೂಕ ಹಾಕಿ ತೆಗೆದುಕೊಂಡು ಹೋಗುವುದರಿಂದ ಭತ್ತದ ಸಾಗಣೆ ವೆಚ್ಚ, ಸಂಗ್ರಹಿಸಿಕೊಳ್ಳುವ ಅಗತ್ಯ ಯಾವುದೂ ಇಲ್ಲ. ಹಣವೂ ಸ್ಥಳದಲ್ಲೇ ಸಿಗುತ್ತದೆ. ಇಲ್ಲ ಎಂದರೆ 10 ದಿನಗಳ ಒಳಗಾಗಿಯಾದರೂ ಸಿಗುತ್ತದೆ ಎಂದು ಹೇಳುತ್ತಾರೆ ರೈತರು.

ಈಡೇರಿದ ಉದ್ದೇಶ: ರೈತರಿಗೆ ನಷ್ಟವಾಗಬಾರದು ಎಂಬುದು ಕನಿಷ್ಠ ಬೆಂಬಲ ಬೆಲೆಯ ಉದ್ದೇಶ. ಸರ್ಕಾರ ಖರೀದಿ ಕೇಂದ್ರ ತೆರೆದ ತಕ್ಷಣ ಹೊರ ಮಾರುಕಟ್ಟೆಯಲ್ಲೂ ಉತ್ಪನ್ನಗಳ ಬೆಲೆ ಹೆಚ್ಚಾಗುತ್ತದೆ. ಇದರಿಂದಾಗಿ ರೈತರಿಗೆ ಲಾಭವಾಗುತ್ತದೆ. ರೈತರು ಸರ್ಕಾರಕ್ಕೆ ಭತ್ತ ಮಾರಾಟ ಮಾಡದಿದ್ದರೂ, ಅವರಿಗೆ ಉತ್ತಮ ಬೆಲೆ ಸಿಗುವುದರಿಂದ ಯೋಜನೆಯ ಉದ್ದೇಶ ಈಡೇರಿದಂತಾಗುತ್ತದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ: ಈ ಮಧ್ಯೆ, ಜಿಲ್ಲೆಯಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆದಿದೆ. ಪ್ರಕ್ರಿಯೆ ಆರಂಭಗೊಂಡಿದ್ದು, ಮುಂದಿನ ವಾರದಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ರಾಗಿಗೆ ₹3,377 ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಲಾಗಿದೆ

ಜಿಲ್ಲೆಯಲ್ಲಿ ಹನೂರು, ಚಾಮರಾಜನಗರ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆಯಲಾಗಿದೆ. ನವೆಂಬರ್‌ನಲ್ಲಿ ಸುರಿದ ನಿರಂತರ ಮಳೆಗೆ2,100.6 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿರುವ ರಾಗಿ ಬೆಳೆಗೆ ಹಾನಿಯಾಗಿದೆ. ಇದರಿಂದಾಗಿ ಇಳುವರಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.

ಬಹುತೇಕ ಕಡೆಗಳಲ್ಲಿ ರಾಗಿ ಕಟಾವು ಮುಗಿದಿದ್ದು, ಹೆಚ್ಚಿನ ರೈತರು ಮಾರಾಟ ಮಾಡಿದ್ದಾರೆ. ಹೊರ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ರಾಗಿಗೆ ₹2,000ದಿಂದ ₹2,600ರವರೆಗೆ ಬೆಲೆ ಇದೆ. ರಾಗಿಯನ್ನು ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ಹೊಂದಿರುವ ರೈತರು ಬೆಳೆಯನ್ನು ಸಂಗ್ರಹಿಸಿಟ್ಟುಕೊಂಡಿದ್ದು, ಕನಿಷ್ಠ ಬೆಂಬಲ ಬೆಲೆಯಲ್ಲಿ ಅವರಿಗೆ ಉತ್ತಮ ಬೆಲೆ ಸಿಗಲಿದೆ.

ಎಲ್ಲೆಲ್ಲಿ ಖರೀದಿ ಕೇಂದ್ರ?

ಚಾಮರಾಜನಗರದ ಎಪಿಎಂಸಿ ಯಾರ್ಡ್‌ ಆವರಣ (ಭತ್ತ ಮತ್ತು ರಾಗಿ), ಸಂತೇಮರಹಳ್ಳಿಯ ಎಪಿಎಂಸಿ ಆವರಣ (ಭತ್ತ ಮತ್ತು ರಾಗಿ) ಕೊಳ್ಳೇಗಾಲದ ಎಪಿಎಂಸಿ ಯಾರ್ಡ್‌ ಆವರಣ (ಭತ್ತ ಮತ್ತು ರಾಗಿ), ಯಳಂದೂರಿನ ಟಿಎಪಿಸಿಎಂಎಸ್‌ ಆವರಣ (ಭತ್ತ ಮತ್ತು ರಾಗಿ) ಹಾಗೂ ಹನೂರಿನ ಎಪಿಎಂಸಿ ಯಾರ್ಡ್‌ ಆವರಣ (ಭತ್ತ ಮತ್ತು ರಾಗಿ), ಗುಂಡ್ಲುಪೇಟೆ ಎಪಿಎಂಸಿ ಯಾರ್ಡ್‌ ಆವರಣ (ರಾಗಿ)

ರೈತರು ಏನಂತಾರೆ?

ಮಳೆಯಿಂದ ನಷ್ಟ

ಒಂದೂವರೆ ಎಕರೆಯಲ್ಲಿ 16 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ ರಾಗಿ ಬೆಳೆದಿದ್ದೆ. ಆದರೆ ಈಗ ಮಾಡಿರುವ ಖರ್ಚು ಕೂಡ ಸಿಗದಂತಾಗಿದೆ. ಹೆಚ್ಚಿನ ಇಳುವರಿ ಬಂದಿದ್ದರೆ ಸ್ವಲ್ಪ ಮಾರಿ ಖರ್ಚು ಸರಿದೂಗಿಸಬಹುದಿತ್ತು. ಆದರೆ ಈಗ ಬೆಳದಿರುವ ರಾಗಿ ಮನೆ ಬಳಕೆಗೆ ಮಾತ್ರ ಆಗುತ್ತದೆ.

–ಶಿವಮಲ್ಲಪ್ಪ, ಶಿವಪುರ, ಹನೂರು ತಾಲ್ಲೂಕು

***

ಬೆಲೆ ಸಿಗುವುದಿಲ್ಲ

ನಾವು ಸಾಲ ಮಾಡಿ ಬೆಳೆಯನ್ನು ಬೆಳೆದಿರುತ್ತೇವೆ. ಫಸಲು ಖರೀದಿ ಕೇಂದ್ರದಲ್ಲಿ ಸರಿಯಾದ ಬೆಲೆಯನ್ನು ನೀಡುವುದಿಲ್ಲ. ಹಾಗಾಗಿ, ನಾವು ಖರೀದಿ ಕೇಂದ್ರ ತೆರೆದರೂ ಹೋಗುವುದಿಲ್ಲ.

– ಶಿವರಾಮು,ರೈತ, ಕೊಳ್ಳೇಗಾಲ

***

ಇಳುವರಿ ಕಡಿಮೆ

2 ಎಕರೆಯಲ್ಲಿ ಭತ್ತ ಬೆಳೆದಿದ್ದು, ಅತಿಯಾದ ಮಳೆಯ ಕಾರಣಕ್ಕೆ ಇಳುವರಿ 50 ಕ್ವಿಂಟಲ್‌ಗೆ ಕುಸಿತವಾಗಿದೆ. ಸಣ್ಣ ಭತ್ತ ಕ್ವಿಂಟಲ್‌ಗೆ ₹1,950 ಹಾಗೂ ಆರ್‌ಎನ್‌ಆರ್‌ ಕ್ವಿಂಟಲ್‌ಗೆ ₹1,950ಕ್ಕೆ ಮಾರಾಟವಾಗುತ್ತಿದೆ. ವ್ಯಾಪಾರಿಗಳು ಗದ್ದೆಯ ಬಳಿ ತೆರಳಿ ಖರೀದಿಸುತ್ತಾರೆ. ಹಣವು ಒಂದೆರಡು ವಾರದಲ್ಲಿ ಕೈ ಸೇರುತ್ತದೆ. ಹಾಗಾಗಿ, ಖರೀದಿ ಕೇಂದ್ರದತ್ತ ತೆರಳುವ ಅಗತ್ಯವಿಲ್ಲ.

- ವೆಂಕಟೇಗೌಡ ರೈತ,ಗುಂಬಳ್ಳಿ, ಯಳಂದೂರು ತಾಲ್ಲೂಕು

***

ಶೀಘ್ರ ವಿಲೇವಾರಿ

ಚಿಕ್ಕ ಹಿಡುವಳಿದಾರರು ಭತ್ತವನ್ನು ಕಟಾವು ಮಾಡಿ ಸಂಗ್ರಹಿಸಲು ಸ್ಥಳವಿಲ್ಲದೆ ಪರಿತಪಿಸುತ್ತಿದ್ದಾರೆ. ತಕ್ಷಣ ಮಾರಾಟವಾದರೆ, ಹಣ ಬೇಗ ಕೈ ಸೇರುತ್ತದೆ. ಹೊಲ ಗದ್ದೆ ಉಳುಮೆ, ಸಂಸಾರದ ನಿರ್ವಹಣೆ ಶೀಘ್ರ ಮುಗಿಸಬಹುದು. ವ್ಯವಸಾಯಕ್ಕೆ ಮಾಡಿದ ಸಾಲವನ್ನು ತೀರಿಸಬಹುದು. ತಕ್ಷಣ ಮುಂಗಡ ಸಿಗುವುದರಿಂದ ಸಣ್ಣಪುಟ್ಟ ಕೆಲಸಗಳ ನಿರ್ವಹಣೆ ಸಾಧ್ಯವಾಗುತ್ತದೆ. ಹಾಗಾಗಿ, ಫಸಲು ಮನೆ ಸೇರುವ ಮುನ್ನವೇ ಮಾರಾಟ ಮಾಡುತ್ತೇವೆ.

- ಶಿವಣ್ಣ, ಆಲ್ಕೆರೆ ಅಗ್ರಹಾರ, ಯಳಂದೂರು ತಾಲ್ಲೂಕು

***

ನಿರೀಕ್ಷಿತ ಬೆಳೆ ಬಂದಿಲ್ಲ

ಕೊಯ್ಲಿನ ಯಂತ್ರಗಳು ಬರುವುದು ತಡವಾಗಿದೆ. ಮಳೆಯೂ ಹೆಚ್ಚಾಗಿದೆ. ಇದರ ನಡುವೆಯೇ, ಕೊಟ್ಟಷ್ಟು ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದೇವೆ. ಈ ಬಾರಿ ನಿರೀಕ್ಷೆಯಂತೆ ಭತ್ತದ ಫಸಲು ಬಂದಿಲ್ಲ.

- ಬಸವಣ್ಣ, ಯರಿಯೂರು ಯಳಂದೂರು ತಾಲ್ಲೂಕು

***

ಭತ್ತ ಖರೀದಿ ವಿಳಂಬ

ಭತ್ತ ಖರೀದಿ ಕೇಂದ್ರದಲ್ಲಿ ಹಣ ನಿಧಾನವಾಗಿ ನೀಡಿದರೂ ಪಡೆದುಕೊಳ್ಳುತ್ತೇವೆ. ಆದರೆ, ಭತ್ತ ಖರೀದಿಸುವುದು ವಿಳಂಬ ಮಾಡುತ್ತಾರೆ. ಮಳೆ, ಇಬ್ಬನಿಯ ಕಾರಣದಿಂದ ಭತ್ತವನ್ನು ಶೇಖರಿಸಿಡಲು ಆಗುವುದಿಲ್ಲ. ಖಾಸಗಿಯವರಿಗೆ ಮಾರಾಟ ಮಾಡುವುದರಿಂದ ಯಾವುದೇ ಗೋಜಲು ಇರುವುದಿಲ್ಲ.‌

– ಮಹದೇವಯ್ಯ, ದೇಶವಳ್ಳಿ, ಚಾಮರಾಜನಗರ

***

ಖರೀದಿಗೆ ನಿಧಾನ

ಭತ್ತ ಖರೀದಿ ಕೇಂದ್ರದವರು ಸ್ಥಳಕ್ಕೆ ಬಂದು ಖರೀದಿಸಿದರೆ ಭತ್ತ ಮಾರಾಟ ಮಾಡುತ್ತೇವೆ. ಅವರು ನಿಧಾನ ಮಾಡುತ್ತಾರೆ. ಜತೆಗೆ ಕ್ವಿಂಟಲ್‍ಗೆ ಕಡಿಮೆ ಹಣ ನೀಡುತ್ತಾರೆ. ಖಾಸಗಿಯವರು ಸ್ಥಳದಲ್ಲಿ ಭತ್ತ ಖರೀದಿಸಿ ಹಣ ನೀಡುತ್ತಾರೆ. ಇದು ನಮಗೆ ಅನುಕೂಲ.

– ಮಾದಯ್ಯ, ಕಮರವಾಡಿ, ಚಾಮರಾಜನಗರ

***

ನೇರವಾಗಿ ಖರೀದಿಸಲಿ

ಖರೀದಿ ಕೇಂದ್ರದಲ್ಲಿ ಕೇಳುವಷ್ಟು ಗುಣಮಟ್ಟವನ್ನು ರೈತರು ಕೊಡಲು ಸಾಧ್ಯವಿಲ್ಲ. ಸರ್ಕಾರದ ಹಲವು ಷರತ್ತುಗಳಿಂದ ದಲ್ಲಾಳಿಗಳಿಗೆ ಹೆಚ್ಚಿನ ಲಾಭ ಆಗುತ್ತದೆ. ಸರ್ಕಾರ ನೇರವಾಗಿ ರೈತರ ಬಳಿಗೆ ಬಂದು ಖರೀದಿಸಿದರೆ ಮಾತ್ರ ನಮಗೆ ಅನುಕೂಲ

–ಶಿವಪುರ ಮಹದೇವಪ್ಪ, ಗುಂಡ್ಲುಪೇಟೆ

***

ವೈಜ್ಞಾನಿಕ ಬೆಲೆ ಸಿಕ್ಕಿದರೆ ಲಾಭ

ಸಮೃದ್ಧವಾಗಿ ಬೆಳೆದಿದ್ದ ರಾಗಿ ಫಸಲು ಮಳೆಗೆ ಸಿಲುಕಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸಿಕ್ಕಿರುವ ಅಲ್ಪಸ್ವಲ್ಪ ರಾಗಿಗೆ ಸರ್ಕಾರ ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಿ ಖರೀದಿಸಿದರೆ ರೈತರಿಗೆ ಅನುಕೂಲವಾಗಲಿದೆ.

– ಶಿವರಾಜು, ಹನೂರು

***

ಹೆಚ್ಚು ರೈತರಿಂದ ಖರೀದಿಗೆ ಪ್ರಯತ್ನ

ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಭತ್ತ ಮತ್ತು ರಾಗಿ ಖರೀದಿ ಕೇಂದ್ರಗಳನ್ನು ಎಲ್ಲ ತೆರೆಯಲಾಗಿದೆ. ಭತ್ತಕ್ಕೆ ಇದುವರೆಗೆ 36 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಹೊರ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ ಎಂದು ರೈತರು ಹೇಳುತ್ತಿದ್ದಾರೆ. ಸರ್ಕಾರದ ಸೂಚನೆಯಂತೆ ರೈತರನ್ನು ನೋಂದಣಿ ಮಾಡಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.

ರಾಗಿ ಖರೀದಿಯ ಪ್ರಕ್ರಿಯೆ ಕೂಡ ಆರಂಭಗೊಂಡಿದ್ದು, ರೈತರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಕ್ರಮವಹಿಸಲಾಗುತ್ತಿದೆ. ರೈತರು ಕನಿಷ್ಠ ಬೆಂಬಲ ಬೆಲೆ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು

–ಯೋಗಾನಂದ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ

***

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಬಿ.ಬಸವರಾಜು, ಮಹದೇವ್‌ ಹೆಗ್ಗವಾಡಿಪುರ, ಮಲ್ಲೇಶ ಎಂ., ಅವಿನ್‌ ಪ್ರಕಾಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT