ಸೋಮವಾರ, ಸೆಪ್ಟೆಂಬರ್ 27, 2021
22 °C
ಗುಂಡ್ಲುಪೇಟೆ: ಕಾಡಂಚಿನ ಗ್ರಾಮಗಳಲ್ಲಿ ಬೆಳೆ ನಾಶ, ಜಮೀನಿನಲ್ಲಿ ಕಾದರೂ ಇರದ ಪ್ರಯೋಜನ

ಕಾಡುಹಂದಿ ಉಪಟಳಕ್ಕೆ ರೈತರು ಸುಸ್ತು

ಮಲ್ಲೇಶ ಎಂ.‌ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡು ಹಂದಿಗಳು ರೈತರನ್ನು ಕೃಷಿಯಿಂದ ವಿಮುಖರಾಗುವಂತೆ ಮಾಡುತ್ತಿವೆ. ಶ್ರಮ‍ ಪಟ್ಟು ಬೆಳೆದ ಬೆಳೆಗಳೆಲ್ಲ ಹಂದಿಗಳ ಉಪಟಳಕ್ಕೆ ನಾಶವಾಗುತ್ತಿದ್ದು, ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ. 

ಬಂಡೀ‍ಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಆನೆ, ಹಂದಿ, ಜಿಂಕೆ, ನವಿಲು ಮುಂತಾದ ಸಸ್ಯಾಹಾರಿ ಪ್ರಾಣಿಗಳ ಕಾಟ ಮೊದಲಿನಿದಲೂ ಇದೆ. ಆದರೆ, ಕಾಡು ಹಂದಿಗಳಿಗೆ ಹೋಲಿಸಿದರೆ ಉಳಿದ ಪ್ರಾಣಿಗಳ ಹಾವಳಿ ಗೌಣ. 

ಕಾಡಂಚಿನ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಕಾಡು ಹಂದಿಗಳು ಸುಳಿದಾಡುತ್ತಿದ್ದು, ರಾತ್ರಿ ಹೊತ್ತು ರೈತರ ಜಮೀನುಗಳಲ್ಲೇ ಆಹಾರಕ್ಕಾಗಿ ಹುಡುಕಾಡುತ್ತಾ ಕಾಲ ಕಳೆಯುತ್ತವೆ. ಬೆಳಿಗ್ಗೆಯಾದ ತಕ್ಷಣ ಕಣ್ಣಿಗೆ ಬೀಳದಂತೆ ಕಾಡಿನೊಳಕ್ಕೆ ಮಾಯವಾಗುತ್ತವೆ. 

ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಂತಿರುವ ಗೋಪಾಲಪುರ, ದೇವರಹಳ್ಳಿ , ಹಂಗಳ, ಮೇಲುಕಾಮನಹಳ್ಳಿ, ಶಿವಪುರ, ಕಲ್ಲಿಗೌಡನಹಳ್ಳಿ, ಬಾಚಹಳ್ಳಿ, ಮಗುವಿನಹಳ್ಳಿ, ಮದ್ದೂರು, ಹೊಂಗಳ್ಳಿ, ವಡ್ಡಗೆರೆ, ಹುಂಡೀಪುರ, ಕುಂದಕೆರೆ ಮತ್ತಿತರ ಕಾಡಂಚಿನ ಗ್ರಾಮಗಳಲ್ಲಿ ಹಂದಿಗಳ ಉಪಟಳ ಮಿತಿ ಮೀರಿದೆ.

ಈ ಭಾಗದಲ್ಲಿ ರೈತರು ಟೊಮೆಟೊ, ಆಲೂಗಡ್ಡೆ, ಬೀನ್ಸ್, ಮುಸುಕಿನ ಜೋಳ, ಸಣ್ಣ ಈರುಳ್ಳಿ, ಸೂರ್ಯಕಾಂತಿ, ನೆಲಗಡಲೆ ಸೇರಿದಂತೆ ವಿವಿಧ ಬೆಳೆ, ತರಕಾರಿಗಳನ್ನು ಬೆಳೆಯುತ್ತಾರೆ. ಇವೆಲ್ಲವೂ ಹಂದಿಗಳ ದಾಳಿಗೆ ಸಿಕ್ಕಿ ಬೆಳೆಗಾರರಿಗೆ ನಷ್ಟ ಉಂಟು ಮಾಡುತ್ತಿವೆ. ಹಂದಿಗಳಿಂದ ಬೆಳೆ ಹಾನಿಯಾದರೆ ಅರಣ್ಯ ಇಲಾಖೆ ಪರಿಹಾರವನ್ನೂ ನೀಡುವುದಿಲ್ಲ. ಇದರಿಂದಾಗಿ ರೈತರು ಕೃಷಿ ಮಾಡುವುದಕ್ಕೆ ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಮನುಷ್ಯರ ಮೇಲೆಯೂ ದಾಳಿ: ‘ಬೆಳೆ ಮಾತ್ರ ಅಲ್ಲ; ಮನುಷ್ಯರೂ ವರಾಹಗಳ ದಾಳಿಗೆ ಸಿಲುಕಿದವರೇ. ಹೊಲವನ್ನು ಹಸನು ಮಾಡಲು, ಬಿತ್ತನೆ ಬೀಜ, ಗೊಬ್ಬರ, ಬಿತ್ತನೆ ಕೂಲಿಗಾಗಿ ಎಕರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಬಿತ್ತನೆ ಮಾಡಿದ ದಿನದಿಂದ ಅಕ್ಕ ಪಕ್ಕದ ರೈತರೊಂದಿಗೆ ಹೊಲಗಳಿಗೆ ಹೋಗಿ ಹಗಲು ರಾತ್ರಿ ಪಾಳಿಯಾಗಿ ಹಂದಿಗಳನ್ನು ಕಾಯುತ್ತೇವೆ. ಹಾಗಿದ್ದರೂ ಯಾವುದೋ ಸಮಯದಲ್ಲಿ ಹಿಂಡು ಹಿಂಡಾಗಿ ಹೊಲಗಳಿಗೆ ದಾಳಿ ಇಟ್ಟು, ಮಣ್ಣನ್ನು ಕೆದಕಿ ಒಂದು ಕಾಳನ್ನೂ ಬಿಡದೆ ತಿಂದು ಹಾಕುತ್ತಿವೆ. ಕೃಷಿ ಮಾಡಲು ಮತ್ತೆ ಸಾಲ ಮಾಡಿ ಬಿತ್ತನೆ ಮಾಡುವುದು ಅನಿವಾರ್ಯವಾಗಿದೆ’ ಎಂದು ಮಗುವಿನಹಳ್ಳಿ ರೈತ ಚಿನ್ನಸ್ವಾಮಿ ಅವರು ‘ಪ್ರಜಾವಾಣಿ’ ಜೊತೆ ಅವಲತ್ತುಕೊಂಡರು.  

‘ಬಂಡೀಪುರ ವ್ಯಾಪ್ತಿಗೆ ಬರುವ ಕುಂದುಕೆರೆ, ಗೋಪಾಲಸ್ವಾಮಿ ಬೆಟ್ಟ , ಓಂಕಾರ ಮತ್ತು ಮದ್ದೂರು ವಲಯಯಗಳಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ. ಗೋಪಾಲ ಸ್ವಾಮಿ ಬೆಟ್ಟ ಮತ್ತು ಕುಂದುಕೆರೆ ವಲಯದ ಭಾಗದಲ್ಲಿ ರೆಸಾರ್ಟ್‌, ಹೋಂ ಸ್ಟೇಗಳು ಹೆಚ್ಚಾಗಿವೆ. ಇಲ್ಲಿ ಆಹಾರ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಎಸೆಯುತ್ತಿರುವುದರಿಂದ ಹಂದಿಗಳು ಸದಾ ಪಕ್ಕದಲ್ಲಿ ಬೀಡುಬಿಟ್ಟಿರುತ್ತವೆ. ಬೆಳಿಗ್ಗೆಯೆಲ್ಲ ತ್ಯಾಜ್ಯ ತಿನ್ನುತ್ತ ಕೆಸರಿನಲ್ಲಿ ಇರುವುದು, ರಾತ್ರಿಯಾಗುತ್ತಿದ್ದಂತೆ ರೈತರ ಜಮೀನುಗಳಿಗೆ ಲಗ್ಗೆ ಇಡುತ್ತವೆ’ ಎಂದು ಮಂಗಲ ಗ್ರಾಮದ ಉಮೇಶ್ ಅವರು ದೂರಿದರು. 

ಈ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗುತ್ತಿಲ್ಲ. ಕಾಡು ಹಂದಿಗಳ ತಡೆಗೆ ತಾವು ಏನೇ ಪ್ರಯೋಗ ಮಾಡಿದರೂ ಅವುಗಳನ್ನು ತಡೆಯುವುದಕ್ಕೆ ಆಗುತ್ತಿಲ್ಲ ಎಂದು ಸ್ಥಳೀಯ ರೈತರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. 

ಕೊಲ್ಲಲು ಅವಕಾಶ ಕೊಡಿ: ರೈತರ ಒತ್ತಾಯ

‘ನೆರೆಯ ರಾಜ್ಯ ಕೇರಳದಂತೆ ನಮಗೂ ಬೆಳೆ ಹಾಳು ಮಾಡುವ ಹಂದಿಗಳನ್ನು ಕೊಲ್ಲಲು ಅವಕಾಶ ಮಾಡಿಕೊಡಿ’ ಎಂದು ರೈತರು ಮತ್ತು ರೈತ ಸಂಘಟನೆಯ ಪದಾಧಿಕಾರಿಗಳು ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

‘ಕಾಡಂಚಿನ ಗ್ರಾಮದಲ್ಲಿ ಸಂಜೆ, ಬೆಳಿಗ್ಗೆ ಸಮಯದಲ್ಲಿ ಮನೆಗಳ ಮುಂದೆಯೇ ಹಂದಿಗಳ ಹಿಂಡು ಇರುತ್ತವೆ. ಜನರೂ ಹೊರ ಹೋಗಲು ಭಯಪಡುವಂತಾಗಿದೆ. ಮಳೆಯ ಸಂದರ್ಭದಲ್ಲಂತೂ ಜಮೀನಿನಲ್ಲಿ ಬಿತ್ತನೆ ಮಾಡಿದ ಯಾವ ಬೆಳೆಗಳು ಕೈ ಸೇರುವುದಿಲ್ಲ. ಜಮೀನನ್ನೇ ಉಳುಮೆ ಮಾಡಿದಂತೆ ಬಗೆದು ಹಾಕುತ್ತವೆ. ಕೆಲ ಬೆಳೆಗಳನ್ನು ಅವು ತಿನ್ನದೇ ಇದ್ದರೂ, ನೆಲವನ್ನು ಅಗೆದು ಹಾಕುತ್ತವೆ. ಒಮ್ಮೆ ಹಂದಿಗಳ ಹಿಂಡು ದಾಳಿ ಮಾಡಿದರೆ,  ಒಂದು ಆನೆಯಿಂದ ಆಗುವ ಹತ್ತರಷ್ಟು ಬೆಳೆ ನಾಶ ವಾಗುತ್ತದೆ’ ಎಂದು ರೈತ ಹಂಗಳ ಮಾಧು ತಿಳಿಸಿದರು.

-----

ರೈತರು ಏನಂತಾರೆ?

ಕೃಷಿ ಮಾಡಲು ತೊಂದರೆ 

ಕಾಡಂಚಿನಲ್ಲಿ ವಾಸವಾಗಿರುವ ನಮಗೆ ಆನೆಗಳಿಗಿಂತ ಹಂದಿಗಳ ಹಾವಳಿ ಹೆಚ್ಚಾಗಿದೆ. ನಷ್ಟವೂ ಹೆಚ್ಚು. ಅವುಗಳನ್ನು ತಡೆಯಲು ಇಲಾಖೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಾಡಂಚಿನ ಗ್ರಾಮದ ಜನರಿಗೆ ಕೃಷಿ ಮಾಡುವುದಕ್ಕೆ ತೊಂದರೆಯಾಗುತ್ತದೆ.

– ಚಿನ್ನಸ್ವಾಮಿ, ರೈತ, ಮಗುವಿನಹಳ್ಳಿ

ಇಲಾಖೆಯ ಸಬೂಬು

ಹಂದಿಗಳಿಂದ ಬೆಳೆ ಹೆಚ್ಚು ನಾಶವಾಗುತ್ತಿದೆ. ಆದರೆ, ಹಂದಿಗಳಿಂದ ಬೆಳೆ ನಾಶವಾದರೆ ಪರಿಹಾರ ಇಲ್ಲ ಎಂದು ಇಲಾಖೆ ಅಧಿಕಾರಿಗಳು ಸಬೂಬು ಹೇಳುತ್ತಾರೆ.  ಆದರೆ ರಾಜಕೀಯ ಮುಖಂಡರು ಹೋಗಿ ಗಲಾಟೆ ಮಾಡಿ ಪರಿಹಾರ ಕೇಳಿದರೆ ಇಲಾಖೆಯವು ಸ್ಥಳ ಪರಿಶೀಲನೆ ಮಾಡಿ ಪರಿಹಾರ ನೀಡುತ್ತಾರೆ. ಜನ ಸಾಮಾನ್ಯರಿಗೆ ಪರಿಹಾರ ಸಿಗುತ್ತಿಲ್ಲ.

– ದಿಲೀಪ್, ಹಂಗಳ

ಜಮೀನಿಗೆ ಹೋಗಲು ಹೆದರಿಕೆ

ಕಾಡಂಚಿನ ಭಾಗದಲ್ಲಿ ಕಾಡು ಹಂದಿಗಳ ಕಾಟ ನಮ್ಮನ್ನು ಹೈರಾಣು ಮಾಡಿದೆ. ಗ್ರಾಮದ ರೈತರ ಬೆಳೆಗಳನ್ನು ತಿಂದು ನಾಶಗೊಳಿಸುತ್ತಿವೆ. ಇವುಗಳಿಂದ ಆಗುತ್ತಿರುವ ಬೆಳೆನಷ್ಟ ಒಂದೆಡೆಯಾದರೆ, ಹಂದಿಗಳ ಉಪಟಳದಿಂದ ಮಹಿಳೆಯರು, ಮಕ್ಕಳು ಜಮೀನುಗಳಿಗೆ ತೆರಳಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

–ಸ್ವಾಮಿ, ಬಾಚಹಳ್ಳಿ 

ಯಾವ ಬೆಳೆಯನ್ನೂ ಬಿಡುತ್ತಿಲ್ಲ

ಕಾಡು ಹಂದಿಗಳ ಹಿಂಡು ಕಡಲೆ, ಸೂರ್ಯಕಾಂತಿ, ಮೆಕ್ಕೆಜೋಳ, ಶೇಂಗಾ.. ಹೀಗೆ ಯಾವ ಬೆಳೆಯನ್ನೂ ಬಿಡದೆ ಹಾಳು ಮಾಡುತ್ತಿವೆ. ಇದರಿಂದ ಕೃಷಿಕರು ನರಳಾಡುವಂತಾಗಿದೆ. ಅರಣ್ಯ ಇಲಾಖೆ ಹಂದಿಗಳ ಹಾವಳಿಗೆ ಬ್ರೇಕ್‌ ಹಾಕಿ, ಅನ್ನದಾತರ ಬೆಳೆ ಉಳಿಸಬೇಕಿದೆ. ಇಲ್ಲದಿದ್ದರೆ, ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳುವುದು ನಮಗೆ ಅನಿವಾರ್ಯವಾಗುತ್ತದೆ. 

–ಬಸವರಾಜು, ಕಲ್ಲಿಗೌಡನಹಳ್ಳಿ

-----

‘ಪರಿಹಾರ ನೀಡುವುದಕ್ಕೆ ಅವಕಾಶ ಇಲ್ಲ’

 ಹಂದಿಗಳಿಂದ ಬೆಳೆ ನಾಶವಾಗುತ್ತಿರುವ ಬಗ್ಗೆ ರೈತರಿಂದ ಹೆಚ್ಚು ದೂರು ಬರುತ್ತಿವೆ. ಹುಲಿ, ಆನೆ ಇತರೆ ಪ್ರಾಣಿಗಳಿಂದ ಬೆಳೆ, ಪ್ರಾಣ ಹಾನಿ ಸಂಭವಿಸಿದರೆ ಪರಿಹಾರ ನೀಡುವುದಕ್ಕೆ ಅವಕಾಶ ಇದೆ. ಆದರೆ, ಹಂದಿಗಳಿಂದ ಬೆಳೆ ನಷ್ಟವಾಗಿದ್ದರೆ ಪರಿಹಾರ ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಕೊಡುವುದಿದ್ದರೂ ಮಾನವೀಯತೆ ದೃಷ್ಟಿಯಿಂದ ನೀಡಬಹುದಷ್ಟೆ

–ನವೀನ್ ಕುಮಾರ್, ಗೋಪಾಲಸ್ವಾಮಿ ಬೆಟ್ಟ ವಲಯಾರಣ್ಯಧಿಕಾರಿ

-----

ಕಾಡು ಹಂದಿ ಕೊಲ್ಲಲು ಅವಕಾಶ ನೀಡಬೇಕು ಎಂಬ ಮನವಿ ರೈತರಿಂದ ಬಂದಿದೆ. ಇದನ್ನು ಮೇಲಾಧಿಕಾರಿಗಳ ಮತ್ತು ಸರ್ಕಾರದ ಗಮನಕ್ಕೆ ತರಲಾಗಿದೆ. ಇದುವರೆಗೆ ಪ್ರತಿಕ್ರಿಯೆ ಬಂದಿಲ್ಲ
ಎಸ್.ಆರ್.ನಟೇಶ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ

--------

ಕಾಡು ಹಂದಿಗಳಿಂದ ರೈತರಿಗೆ ಹೆಚ್ಚು ಹೆಚ್ಚು ನಷ್ಟ ಆಗುತ್ತಿರುವ ಬಗ್ಗೆ ಹಿಂದೆ ಸದನದಲ್ಲಿ ಅರಣ್ಯ ಸಚಿವರ ಗಮನ ಸೆಳೆದಿದ್ದೆ. ಈ ಬಾರಿಯೂ ಇದೇ ವಿಚಾರವನ್ನು ಪ್ರಸ್ತಾಪಿಸುತ್ತೇನೆ
ಸಿ.ಎಸ್.ನಿರಂಜನ ಕುಮಾರ್, ಗುಂಡ್ಲುಪೇಟೆ ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು