ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಹೆಚ್ಚಿದ ಅಪರಾಧ ಪ್ರಕರಣ: ಸಿಸಿಟಿವಿ ಕ್ಯಾಮೆರಾಗಳಿದ್ದರೂ ಉಪಯೋಗ ಇಲ್ಲ

Last Updated 22 ಆಗಸ್ಟ್ 2021, 20:55 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಜುಲೈ ತಿಂಗಳ 28ರಂದು ದಕ್ಷಿಣ ವಲಯ ಐಜಿಪಿ ಪ್ರವೀಣ್‌ ಮಧುಕರ್‌ ಪವಾರ್‌ ಅವರು ಕೊಳ್ಳೇಗಾಲದ ವಿವಿಧ ಠಾಣೆಗಳಿಗೆ ಭೇಟಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ‘ನಗರದಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದರು.

ಆದರೆ, ನಗರದಲ್ಲಿ ವ್ಯವಸ್ಥಿತವಾದ ಕಣ್ಗಾವಲು ವ್ಯವಸ್ಥೆ ಇಲ್ಲದೆ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಾದರೂ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆ.

ಜನರು ಕೇಳುತ್ತಿರುವ ಪ್ರಶ್ನೆಯಲ್ಲಿ ಅರ್ಥವಿದೆ. ಗಡಿ ಜಿಲ್ಲೆ ಚಾಮರಾಜನಗರದ ವಾಣಿಜ್ಯ ನಗರವಾಗಿರುವ ಕೊಳ್ಳೇಗಾಲದಲ್ಲಿ ಉದ್ದಿಮೆ, ವಾಣಿಜ್ಯ ಚಟುವಟಿಕೆಗಳು ಹೆಚ್ಚು. ಪ್ರತಿ ದಿನ ದೊಡ್ಡ ಮಟ್ಟಿನ ವ್ಯವಹಾರಗಳು ನಡೆಯುತ್ತಿರುತ್ತಿವೆ. ನಗರವು ವೇಗವಾಗಿ ವಿಸ್ತಾರವಾಗುತ್ತಿದ್ದು, ಜನ ಸಂಖ್ಯೆ ಹೆಚ್ಚಾಗಿದೆ. ಹೊಸ ಹೊಸ ಬಡಾವಣೆಗಳು ಸೃಷ್ಟಿಯಾಗಿವೆ.

ಹೆಚ್ಚುತ್ತಿರುವ ಜನಸಂಖ್ಯೆ, ನಗರದ ಪ್ರದೇಶದ ವಿಸ್ತರಣೆಗೆ ಸರಿ ಸಮಾನದ ಸುರಕ್ಷತಾ, ಭದ್ರತಾ ವ್ಯವಸ್ಥೆ ಇಲ್ಲಿಲ್ಲ. ‌ಅಕ್ರಮ ಚಟುವಟಿಕೆಗಳು, ಅಪರಾಧ ಕೃತ್ಯಗಳ ಮೇಲೆ ನಿಗಾ ಇಡುವಂತಹ ಆಧುನಿಕ ತಂತ್ರಜ್ಞಾನದ ಆಧಾರದ ವ್ಯವಸ್ಥಿತ ಕಣ್ಗಾವಲು ಕೊರತೆ ನಗರವನ್ನು ಕಾಡುತ್ತಿದೆ.

ನಗರ ಹಾಗೂ ಪಟ್ಟಣಗಳಲ್ಲಿ ಅಪರಾಧ ಚಟುವಟಿಕೆಗಳ ಮೇಲೆ ನಿಗಾ ಇಡಲು ಸಿಸಿಟಿವಿ ಆಧರಿತ ಕಣ್ಗಾವಲು ವ್ಯವಸ್ಥೆ ಇರುತ್ತದೆ. ಕೊಳ್ಳೇಗಾಲದಲ್ಲಿ ಈ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ. ಇರುವ ವ್ಯವಸ್ಥೆಗೂ ಗರ ಬಡಿದಿದೆ.

ನಗರದಲ್ಲಿ ಇತ್ತೀಚೆಗೆ ಕಳ್ಳತನ, ವಾಹನ ಸಂಚಾರ ನಿಯಮ ಉಲ್ಲಂಘನೆ, ಅಪಘಾತಗಳಂತಹ ಪ್ರಕರಣಗಳು ಹೆಚ್ಚು ನಡೆಯುತ್ತಿವೆ. ಮನೆ ದರೋಡೆ, ಕಳ್ಳತನ, ವಾಹನಗಳ ಕಳ್ಳತನ ಪ್ರಕರಣಗಳು ಆಗಾಗ ವರದಿಯಾಗುತ್ತಿವೆ. ಕಣ್ಗಾವಲು ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣ ಎಂದು ಹೇಳುತ್ತಾರೆ ಸ್ಥಳೀಯ ನಿವಾಸಿಗಳು. ಪೊಲೀಸರು ಕೂಡ ಖಾಸಗಿಯಾಗಿ ಈ ಮಾತನ್ನು ಒಪ್ಪುತ್ತಾರೆ.

ಇದ್ದರೂ ಪ್ರಯೋಜನಕ್ಕೆ ಇಲ್ಲ: ನಗರದ ಪ್ರಮುಖ ವೃತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್‌ ಇಲಾಖೆಯು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೈಸೂರು ಮುಖ್ಯ ರಸ್ತೆಯ ವೃತ್ತದಲ್ಲಿ, ಬ್ರದರ್ ಚರ್ಚ್ ವೃತ್ತದಲ್ಲಿ ಹಾಗೂ ಕನ್ನಿಕಾಪರಮೇಶ್ವರಿ ವೃತ್ತದಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ. ಆದರೆ, ಹಲವು ತಿಂಗಳುಗಳಿಂದ ಅವುಗಳು ಕೆಟ್ಟು ನಿಂತಿವೆ. ಹಾಗಾಗಿ, ಇದ್ದರೂ ಪ್ರಯೋಜನ ಇಲ್ಲದಂತಾಗಿದೆ.

ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ವರದಿಯಾದ ನಂತರ ಕೆಲವು ಕಡೆಗಳಲ್ಲಿ ಪೊಲೀಸರು ತಾತ್ಕಾಲಿಕವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ಪ್ರಮುಖ ವೃತ್ತ, ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ನಿರ್ವಹಿಸದೇ ಇರುವುದರಿಂದ ಪೊಲೀಸರು ಅಪರಾಧ ಪ್ರಕರಣಗಳ ತನಿಖೆಗಾಗಿ ಪೊಲೀಸರು, ಖಾಸಗಿಯವರು ತಮ್ಮ ಅಂಗಡಿಗಳು, ಮನೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಅವಲಂಬಿಸಬೇಕಾಗಿದೆ.

ದಕ್ಷಿಣ ವಲಯ ಐಜಿಪಿ ಅವರು ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದರು.

‘ನಗರ ಹೆಚ್ಚುಚ್ಚು ವಿಸ್ತಾರ ಆಗುತ್ತಿರುವುದರಿಂದ ಹಾಗೂ ಜನ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತವೆ. ಇದಕ್ಕೆ ಕಡಿವಾಣ ಹಾಕುವುದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸಿಬ್ಬಂದಿ ನಿಯೋಜನೆಯನ್ನು ಹೆಚ್ಚಳ ಮಾಡಲಾಗಿದೆ. ಪ್ರತಿಯೊಂದು ಬಡಾವಣೆಯಲ್ಲೂ ಸಿಸಿಟಿವಿ ಕ್ಯಾಮೆರಾ ಹಾಕಿಸಲು ಯೋಜಿಸಿದ್ದೇವೆ’ ಎಂದು ಹೇಳಿದ್ದರು.

ಐಜಿಪಿ ಅವರು ನೀಡಿರುವ ಭರವಸೆ ಯಾವಾಗ ಈಡೇರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸರ್ಕಾರಿ ಕಚೇರಿಗಳಲ್ಲೂ ಇಲ್ಲ ಸಿಸಿಟಿವಿ ಕ್ಯಾಮೆರಾ

ಸರ್ಕಾರಿ ಕಚೇರಿಗಳದ್ದು ಇನ್ನೊಂದು ಕಥೆ. ನಗರದ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಸೌಲಭ್ಯ ಇಲ್ಲ.

ಕಚೇರಿಗಳ ಆವರಣದಲ್ಲಿ ರಾತ್ರಿ ವೇಳೆ ಕುಡುಕರು, ಪಡ್ಡೆ ಹುಡುಗರು ಮದ್ಯಪಾನ, ದೂಮಪಾನ ಮುಂತಾದ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳಿದ್ದರೆ ಇಂತಹ ಚಟುವಟಿಕೆಗಳ ಮೇಲೆ ನಿಗಾ ಇಡಬಹುದು.

ಇದಲ್ಲದೇ, ಕಚೇರಿಗಳಲ್ಲಿ ಸಿಬ್ಬಂದಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಕ್ಯಾಮೆರಾಗಳಿಲ್ಲದ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಮಿತಿ ಮೀತಿದೆ ಎಂಬ ಆರೋಪಗಳೂ ಇವೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೆ, ಮೇಲಿನ ಅಧಿಕಾರಿಗಳು ಗಮನಿಸುತ್ತಿದ್ದಾರೆ ಎಂಬ ಕಾರಣಕ್ಕೆ ಸಿಬ್ಬಂದಿ ಕೆಲಸಮಾಡಬಹುದು. ಲಂಚ ಪಡೆಯುವುದಕ್ಕೂ ಕಡಿವಾಣ ಬೀಳಲಿದೆ ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಕೆ.ಕುನಾಲ್‌ ಅವರು, ‘ತಾಲ್ಲೂಕಿನ ಕೆಲವು ಸರ್ಕಾರಿ ಕಚೇರಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳ ಕೊರತೆ ಇದೆ. ಕ್ಯಾಮೆರಾಗಳು ಅಗತ್ಯವಿರುವ ಕಡೆಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಸಿಸಿಟಿವಿ ಕ್ಯಾಮೆರಾ ಅಳವಡಿಸುವುದರಿಂದ ಕಚೇರಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ನಿಗಾ ಇರಿಸಬಹುದು’ ಎಂದರು.

––

ಸಾರ್ವಜನಿಕರು ಏನಂತಾರೆ?

ಕ್ಯಾಮೆರಾ ಸರಿಪಡಿಸಿ

ನಗರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ನಿಂತಿವೆ. ಜನರ ಸುರಕ್ಷತೆ ದೃಷ್ಟಿಯಿಂದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅವುಗಳನ್ನು ಸರಿಪಡಿಸಲು ಕ್ರಮ ವಹಿಸಬೇಕು

–ಉಮೇಶ್‌,ಸ್ಥಳೀಯ ನಿವಾಸಿ

ಜನರ ರಕ್ಷಣೆಗೆ ಕ್ರಮ ಕೈಗೊಳ್ಳಲಿ

ರಸ್ತೆ ಸುರಕ್ಷತೆ, ಸಂಚಾರ ದಟ್ಟಣೆ ನಿಯಂತ್ರಣ ಮತ್ತು ಅಪರಾಧ ಪ್ರಕರಣಗಳ ಪತ್ತೆಗೆ ಸಿಸಿಟಿವಿ ಕ್ಯಾಮೆರಾ ಸಹಕಾರಿ. ಹೀಗಾಗಿ, ಪೊಲೀಸ್‌ ಇಲಾಖೆ ನಗರದಲ್ಲಿ ಇನ್ನಷ್ಟು ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಿ ಸಾರ್ವಜನಿಕರ ರಕ್ಷಣೆ ಮಾಡಲು ಮುಂದಾಗಬೇಕು

–ಕುಮಾರ್,ಕೊಳ್ಳೇಗಾಲ ನಿವಾಸಿ

ಸರ್ಕಾರಿ ಕಚೇರಿಗಳಲ್ಲೂ ಅಳವಡಿಸಿ

ಕೆಲ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇಲ್ಲ. ಕ್ಯಾಮೆರಾ ಅಳವಡಿಸಿದರೆ, ತಮ್ಮ ಮೇಲೆ ನಿಗಾ ಇಡುತ್ತಿದ್ದಾರೆ ಎಂಬ ಭಯದಲ್ಲಿ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಾರೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು.

–ಜೀವನ್ ಸನ್,ಕೊಳ್ಳೇಗಾಲ

ಕಣ್ಗಾವಲು ವ್ಯವಸ್ಥೆ ಬೇಕು

ಕೊಳ್ಳೇಗಾಲದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಕಳ್ಳರಿಗೆ ಪೊಲೀಸರ ಭಯವಿಲ್ಲ. ಕಳ್ಳತನ ಮಾಡಿದರೂ ಗೊತ್ತಾಗುವುದಿಲ್ಲ ಎಂಬ ಧೈರ್ಯದಲ್ಲಿ ಕೃತ್ಯ ಎಸಗುತ್ತಾರೆ. ನಗರದಲ್ಲಿ ರಾತ್ರಿ ಹೊತ್ತು ನಡೆಯುವ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲು ವ್ಯವಸ್ಥಿತವಾದ ಕಣ್ಗಾವಲು ವ್ಯವಸ್ಥೆಯ ಅಗತ್ಯವಿದೆ

–ಮನು,ಕೊಳ್ಳೇಗಾಲ ನಿವಾಸಿ

–––

‘ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆ’

ನಗರದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ನಿಂತಿರುವುದು ನಿಜ. ಅವುಗಳನ್ನು ಕೂಡಲೇ ದುರಸ್ತಿಗೊಳಿಸಲು ಕ್ರಮ ವಹಿಸಲಾಗುವುದು. ಚಿನ್ನ ಬೆಳ್ಳಿ ಅಂಗಡಿ ಮಾಲೀಕರ ಜೊತೆ ನಾವು ಸಭೆ ನಡೆಸಿದ್ದೇವೆ. ನಗರದ ಪ್ರಮುಖ ರಸ್ತೆಗಳಲ್ಲಿ ಮತ್ತು ಬಡಾವಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ.

ನಗರದಲ್ಲಿ ನಡೆಯುತ್ತಿರುವ ಕಳ್ಳತನ ಹಾಗೂ ಅದನ್ನು ನಿಯಂತ್ರಿಸುವ ವಿಚಾರವಾಗಿ ಪೊಲೀಸ್‌ ಸಿಬ್ಬಂದಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ನಮ್ಮಲ್ಲಿ ಹೆಚ್ಚು ಕಳ್ಳತನ ಪ್ರಕರಣಗಳು ನಡೆಯುತ್ತಿರುವುದು ನಿಜ. ಆದರೆ, ಅಷ್ಟೇ ಪ್ರಕರಣಗಳನ್ನು ಭೇದಿಸಿದ್ದೇವೆ. ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ.

ನಾಗರಾಜು, ಡಿವೈಎಸ್‌ಪಿ,ಕೊಳ್ಳೇಗಾಲ ಉಪ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT