ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ಸಮಸ್ಯೆ; ಸಾವಿರಾರು ಮಂದಿ ಲಾಭ ವಂಚಿತ

ಗ್ಯಾರಂಟಿ ಯೋಜನೆಗಳಿಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ; ಪೂರ್ಣ ಅನುಷ್ಠಾನಕ್ಕೆ ಬೇಕಿದೆ ಸಮಯ
Published 1 ಅಕ್ಟೋಬರ್ 2023, 13:42 IST
Last Updated 1 ಅಕ್ಟೋಬರ್ 2023, 13:42 IST
ಅಕ್ಷರ ಗಾತ್ರ

//ನಮ್ಮ ಜನ ನಮ್ಮ ಧ್ವನಿ// ನಾಲ್ಕು ಬಾಕ್ಸ್‌ ಇದೆ

–––

ಚಾಮರಾಜನಗರ: ರಾಜ್ಯದ ಕಾಂಗ್ರೆಸ್‌ ಸರ್ಕಾರ ಅನುಷ್ಠಾನಕ್ಕೆ ತಂದಿರುವ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆಯಾದರೂ, ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಇನ್ನೂ ಸಾವಿರಾರು ಫಲಾನುಭವಿಗಳಿಗೆ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲ. 

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆ ಹಾಗೂ 200 ಯುನಿಟ್‌ಗಳವರೆಗೆ ಉಚಿತ ವಿದ್ಯುತ್‌ ನೀಡುವ ಗೃಹಜ್ಯೋತಿ ಯೋಜನೆ ಅನುಷ್ಠಾನದಲ್ಲಿ ಹೆಚ್ಚು ಸಮಸ್ಯೆಗಳಿಲ್ಲದಿದ್ದರೂ, ನೋಂದಾಯಿತ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಜಮೆಯಾಗುವ ಗೃಹಲಕ್ಷ್ಮಿ ಹಾಗೂ ಅನ್ನ ಭಾಗ್ಯ ಯೋಜನೆ ಶೇ 100ರಷ್ಟು ಅನುಷ್ಠಾನಗೊಂಡಿಲ್ಲ. 

ಶಕ್ತಿ ಯೋಜನೆ: ಜೂನ್‌ 11ರಂದು ರಾಜ್ಯದಾದ್ಯಂತ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಜಿಲ್ಲೆಯಲ್ಲಿ ಮಹಿಳೆಯರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದರ ಲಾಭ ಪಡೆಯುತ್ತಿದ್ದಾರೆ.  ಜೂನ್‌ 11ರಿಂದ ಸೆ.20ರವರೆಗೆ ಕೆಎಸ್‌ಆರ್‌ಟಿಸಿ ಚಾಮರಾಜನರ ವಿಭಾಗದಲ್ಲಿ (ನಂಜನಗೂಡು ಘಟಕವೂ ಸೇರಿ) 2.46 ಕೋಟಿ ಮಂದಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದು, ಈ ಪೈಕಿ 1.56 ಕೋಟಿ ಮಂದಿ ಮಹಿಳೆಯರು. ಈ ಅವಧಿಯಲ್ಲಿ ಕೆಎಸ್‌ಆರ್‌ಟಿಸಿಗೆ ₹83.34 ಕೋಟಿ ಆದಾಯ ಬಂದಿದ್ದು, ಮಹಿಳಾ ಪ್ರಯಾಣಿಕ‌ರಿಂದ ಬಂದ ಆದಾಯ ₹49.49 ಕೋಟಿ.

‘ನಮ್ಮಲ್ಲಿ ಮೊದಲು ಪ್ರತಿ ದಿನ 1.5 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಇದರಲ್ಲಿ 50 ಸಾವಿರಷ್ಟು ಮಹಿಳೆಯರಿದ್ದರು. ಈಗ ಪ್ರತಿ ದಿನ 2.4 ಲಕ್ಷದಷ್ಟು ಪ್ರಯಾಣಿಕರು ಸಂಚರಿಸುತ್ತಿದ್ದು, 1.40 ಲಕ್ಷದಷ್ಟು ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ ಬಳಸುತ್ತಾರೆ’ ಎಂದು ಹೇಳುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು. 

ಗ್ರಾಮೀಣ ಭಾಗದ ಮಹಿಳೆಯರು ವಂಚಿತ: ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಹೆಚ್ಚು ಸಂಚರಿಸದೇ ಇರುವುದರಿಂದ ಆ ಭಾಗದವರು ಸ್ಥಳೀಯವಾಗಿ ಶಕ್ತಿ ಯೋಜನೆಯಿಂದ ವಂಚಿತರಾಗಿದ್ದಾರೆ.  ಹನೂರು ತಾಲ್ಲೂಕು, ಚಾಮರಾಜನಗರ, ಗುಂಡ್ಲುಪೇಟೆ ತಾಲ್ಲೂಕುಗಳ ಕಾಡಂಚಿನ ಪ್ರದೇಶಗಳಲ್ಲಿ ಈ ಸಮಸ್ಯೆ ಹೆಚ್ಚಿದೆ. ಬಸ್‌, ಸಿಬ್ಬಂದಿ ಕೊರತೆಯ ಕಾರಣಕ್ಕೆ ಎಲ್ಲ ಕಡೆಗಳಿಗೂ ಪೂರ್ಣ ಪ್ರಮಾಣದಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸುವುದಕ್ಕೆ ಆಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.

ಅನ್ನಭಾಗ್ಯ: ಅಂತ್ಯೋದಯ, ಬಿಪಿಎಲ್‌ ಕುಟುಂಬಗಳಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯ ಬದಲಾಗಿ ಪ್ರತಿ ಕೆಜಿಗೆ ₹34ರಂತೆ ಐದು ಕೆಜಿಗೆ ₹170 (ಒಬ್ಬರಿಗೆ) ನಗದು ಪಾವತಿಸುವ ಅನ್ನಭಾಗ್ಯ ಯೋಜನೆಗೆ ರಾಜ್ಯ ಸರ್ಕಾರ ಜುಲೈ 10ಕ್ಕೆ ಚಾಲನೆ ನೀಡಿತ್ತು.  

ಜಿಲ್ಲೆಯಲ್ಲಿ 2,90,355 ಪಡಿತರ ಕಾರ್ಡ್‌ಗಳಿದ್ದು, 8,74,164 ಮಂದಿ ಫಲಾನುಭವಿಗಳಿದ್ದಾರೆ. ಈ ಪೈಕಿ 2.65 ಲಕ್ಷ ಪಡಿತರ ಕಾರ್ಡ್‌ಗಳು ಅನ್ನಭಾಗ್ಯ ಯೋಜನೆ ವ್ಯಾಪ್ತಿಗೆ ಬರುತ್ತವೆ. 

ಜುಲೈ ತಿಂಗಳಲ್ಲಿ 2,23,497 ಪಡಿತರ ಕಾರ್ಡ್‌ದಾರರ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ₹11.71 ಕೋಟಿ, ಆಗಸ್ಟ್ ತಿಂಗಳಲ್ಲಿ 2,35,349 ಮಂದಿಯ ಬ್ಯಾಂಕ್ ಖಾತೆಗೆ ₹11.92 ಕೋಟಿ ಜಮೆ ಮಾಡಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ 2,48,974 ಪಡಿತರ ಕಾರ್ಡ್‌ದಾರರ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ₹12.45 ಕೋಟಿಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಮೆ ಮಾಡಲು ಕ್ರಮ ಕೈಗೊಂಡಿದೆ. 

ಫಲಾನುಭವಿಗಳ ಬ್ಯಾಂಕ್‌ ಖಾತೆ ಸರಿ ಇಲ್ಲದಿರುವುದರಿಂದ ಹಣ ಜಮೆಯಾಗಿಲ್ಲ. ಜುಲೈ ತಿಂಗಳಿಗೆ ಹೋಲಿಸಿದರೆ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದೆ. ಇನ್ನೂ 16 ಸಾವಿರದಷ್ಟು ಪಡಿತರ ಕಾರ್ಡ್‌ದಾರರು ಖಾತೆ ಸರಿಪಡಿಸಬೇಕಾಗಿದೆ. ಅದಕ್ಕಾಗಿ ಫಲಾನುಭವಿಗಳು ಬ್ಯಾಂಕ್‌ಗಳಿಗೆ ಅಲೆದಾಡುತ್ತಿದ್ದಾರೆ.  

ಗೃಹಜ್ಯೋತಿ: ಆಗಸ್ಟ್‌ 5ರಿಂದ ಜಾರಿಗೆ ಬಂದಿರುವ ಗೃಹಜ್ಯೋತಿ ಯೋಜನೆಗೂ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಇದೆ. ವಿದ್ಯುತ್‌ ಬಳಕೆಯ ವಾರ್ಷಿಕ ಸರಾಸರಿಯನ್ನು ಪರಿಗಣಿಸಿ ಯೋಜನೆಗೆ ಅನ್ವಯಿಸಿರುವುದು ಬಳಕೆದಾರರಲ್ಲಿ ‌ಅಸಮಾಧಾನ ಉಂಟು ಮಾಡಿದೆ. ಚುನಾವಣೆಗೂ ಮುನ್ನ ಘೋಷಣೆ ಮಾಡಿದಂತೆ 200 ಯೂನಿಟ್‌ವರೆಗೂ ಉಚಿತವಾಗಿ ನೀಡಬೇಕಿತ್ತು ಎಂಬುದು ಅವರ ವಾದ.

ಸದ್ಯ, ವಾರ್ಷಿಕ ಸರಾಸರಿಗೆ ಹೆಚ್ಚುವರಿಯಾಗಿ ಶೇ 10ರಷ್ಟು ವಿದ್ಯುತ್‌ ಯುನಿಟ್‌ಗಳನ್ನು ಲೆಕ್ಕಹಾಕಿ ವಿದ್ಯುತ್‌ ಬಿಲ್‌ ನೀಡಲಾಗುತ್ತಿದ್ದು, ಯೋಜನೆ ವ್ಯಾಪ್ತಿಗೆ ಬರುವ ಯುನಿಟ್‌ಗಳ ದರವನ್ನು ಬಿಟ್ಟು ಉಳಿದ ಯುನಿಟ್‌ಗಳಿಗೆ ಮಾತ್ರ ಗ್ರಾಹಕರು ಬಿಲ್‌ ಪಾವತಿ ಮಾಡಿದರೆ ಸಾಕು. 

ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ (ಸೆಸ್ಕ್‌) ವ್ಯಾಪ್ತಿಗೆ ಬರುವ ಜಿಲ್ಲೆಯಲ್ಲಿ ಚಾಮರಾಜನಗರ ಹಾಗೂ ಕೊಳ್ಳೇಗಾಲ ಉಪವಿಭಾಗಗಳು ಇದ್ದು, ಒಟ್ಟು 2,74,459 ಗೃಹ ಸಂಪರ್ಕಗಳಿವೆ. ಈ ಪೈಕಿ 2.46 ಲಕ್ಷ ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.

‘30 ಸಾವಿರ ಗ್ರಾಹಕರು ನೋಂದಣಿ ಮಾಡಿಕೊಂಡಿಲ್ಲ. ಈ ಪೈಕಿ 5000 ಗ್ರಾಹಕರು ಪ್ರತಿ ತಿಂಗಳು 200 ಯುನಿಟ್‌ಗಳಿಗಿಂತ ಹೆಚ್ಚು ವಿದ್ಯುತ್‌ ಬಳಕೆ ಮಾಡುತ್ತಿರುವುದರಿಂದ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ. 25 ಸಾವಿರ ಗ್ರಾಹಕರು ನೋಂದಣಿ ಮಾಡಿಕೊಂಡರೆ ಯೋಜನೆ ಪ್ರಯೋಜನ ಸಿಗಲಿದೆ’ ಎಂದು ಹೇಳುತ್ತಾರೆ ಸೆಸ್ಕ್‌ ಅಧಿಕಾರಿಗಳು. 

ಗೃಹ ಲಕ್ಷ್ಮಿ: ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು ₹2000 ಜಮೆ ಮಾಡುವ ಗೃಹಲಕ್ಷ್ಮಿ ಯೋಜನೆ ಆಗಸ್ಟ್‌ 30ರಿಂದ ಜಾರಿಗೆ ಬಂದಿದೆ. ಜಿಲ್ಲೆಯಲ್ಲಿ 2,77,547 ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಈವರೆಗೆ 2,48,557 ಮಂದಿ ನೋಂದಣಿಯಾಗಿದ್ದಾರೆ. ಮೊದಲ ಕಂತು ಜಿಲ್ಲೆಗೆ ₹47.47 ಕೋಟಿ ಹಣ ಬಿಡುಗಡೆಯಾಗಿದ್ದು, 2,37,374 ಮಂದಿಯ ಖಾತೆಗೆ ಜಮೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ್ರಮ ಕೈಗೊಂಡಿದೆ. ₹2.16 ಲಕ್ಷ ಮಂದಿಯ ಖಾತೆಗೆ ಜಮೆ ಆಗಿದೆ. ಖಾತೆ ಸಮಸ್ಯೆಯಿಂದ ಉಳಿದವರ ಖಾತೆಗೆ ಹಣ ಜಮೆ ಆಗಿಲ್ಲ. 

ಯೋಜನೆಗೆ ನೋಂದಣಿ ಮಾಡುವ ಸಂದರ್ಭದಲ್ಲಿ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಲು ಮಹಿಳೆಯರು ತಾಲ್ಲೂಕು ಕಚೇರಿಗಳಲ್ಲಿ ಸಾಲು ಗಟ್ಟಿ ನಿಂತಿದ್ದರು. ಈಗ ಆಧಾರ್‌ ತಿದ್ದುಪಡಿ ಮಾಡಲು, ಬ್ಯಾಂಕ್‌ ಖಾತೆಗೆ ಎನ್.ಪಿ.ಸಿಐ ಮ್ಯಾಪಿಂಗ್, ಆಧಾರ್‌ ಸಂಖ್ಯೆ ಜೋಡಿಸಲು, ದೂರವಾಣಿ ಸಂಖ್ಯೆ ಜೋಡಿಸಲು ಬ್ಯಾಂಕ್‌, ಗ್ರಾಮ ಒನ್‌, ಸೇವಾ ಸಿಂಧು ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ. ಖಾತೆ ಸರಿಯಾಗುವವರೆಗೂ ಫಲಾನುಭವಿಗಳ ಖಾತೆ ಹಣ ಜಮೆಯಾಗುವುದಿಲ್ಲ. 

ನಿರ್ವಹಣೆ: ಸೂರ್ಯನಾರಾಯಣ ವಿ.

ಅಭಿ‌ಪ್ರಾಯ ಸಂಗ್ರಹ: ನಾ.ಮಂಜುನಾಥಸ್ವಾಮಿ, ಮಹದೇವ್‌ ಹೆಗ್ಗವಾಡಿಪುರ, ಬಸವರಾಜು ಬಿ. ಅವಿನ್‌ ಪ್ರಕಾಶ್‌ ವಿ., ಮಲ್ಲೇಶ ಎಂ.

ಬ್ಯಾಂಕ್‌ ಖಾತೆಗೆ ಆಧಾರ್‌ ಮೊಬೈಲ್‌ ಸಂಖ್ಯೆ ಜೋಡಿಸಲು ಫಲಾನುಭವಿಗಳು ಈಗ ಬ್ಯಾಂಕ್‌ಗಳಿಗೆ ಎಡತಾಕುತ್ತಿದ್ದಾರೆ 
ಬ್ಯಾಂಕ್‌ ಖಾತೆಗೆ ಆಧಾರ್‌ ಮೊಬೈಲ್‌ ಸಂಖ್ಯೆ ಜೋಡಿಸಲು ಫಲಾನುಭವಿಗಳು ಈಗ ಬ್ಯಾಂಕ್‌ಗಳಿಗೆ ಎಡತಾಕುತ್ತಿದ್ದಾರೆ 
ಶಕ್ತಿ ಯೋಜನೆ ಅನುಷ್ಠಾನಗೊಂಡ ನಂತರ ಪ್ರಯಾಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಬಳಸುವ ಮಹಿಳೆಯರ ಸಂಖ್ಯೆ ಹೆಚ್ಚಿದೆ
ಶಕ್ತಿ ಯೋಜನೆ ಅನುಷ್ಠಾನಗೊಂಡ ನಂತರ ಪ್ರಯಾಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಬಳಸುವ ಮಹಿಳೆಯರ ಸಂಖ್ಯೆ ಹೆಚ್ಚಿದೆ
ಬಹುತೇಕ ಬ್ಯಾಂಕ್‌ಗಳ ಕೌಂಟರ್‌ಗಳಲ್ಲಿ ಈಗ ಇಂತಹದ್ದೇ ದೃಶ್ಯ ಕಾಣಸಿಗುತ್ತದೆ
ಬಹುತೇಕ ಬ್ಯಾಂಕ್‌ಗಳ ಕೌಂಟರ್‌ಗಳಲ್ಲಿ ಈಗ ಇಂತಹದ್ದೇ ದೃಶ್ಯ ಕಾಣಸಿಗುತ್ತದೆ
ಶಕ್ತಿ ಯೋಜನೆ ನಂತರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ
ಶಕ್ತಿ ಯೋಜನೆ ನಂತರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ
ಸುನಂದಾ
ಸುನಂದಾ
ಶೋಭಾ
ಶೋಭಾ
ಪ್ರಿಯ
ಪ್ರಿಯ
ರವಿ
ರವಿ
ಲಕ್ಷ್ಮಿ
ಲಕ್ಷ್ಮಿ
ಕೆಂಪಲಕ್ಷ್ಮಿ
ಕೆಂಪಲಕ್ಷ್ಮಿ
ಭಾಗ್ಯ
ಭಾಗ್ಯ
ಅಂತೋಣಿಯಮ್ಮ
ಅಂತೋಣಿಯಮ್ಮ
ಆರ್‌.ಅಶೋಕ್‌ ಕುಮಾರ್‌
ಆರ್‌.ಅಶೋಕ್‌ ಕುಮಾರ್‌
ಗೀತಾಲಕ್ಷ್ಮಿ
ಗೀತಾಲಕ್ಷ್ಮಿ
ಯೋಗಾನಂದ
ಯೋಗಾನಂದ

ಜನರು ಏನಂತಾರೆ’?

ಬ್ಯಾಂಕ್‌ಗೆ ಅಲೆಯುವುದೇ ಕೆಲಸ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಖಾತೆಗೆ ಹಣ ಸಂದಾಯವಾಗಿಲ್ಲ. ಗ್ರಾಮ ಒನ್ ಕೇಂದ್ರದಲ್ಲಿ ವಿಚಾರಿಸಿದರೆ ಹಣ ಬಂದಿದೆ ಎಂದು ಹೇಳುತ್ತಾರೆ. ಬ್ಯಾಂಕ್‌ನಲ್ಲಿ ಆಧಾರ್ ಹಾಗೂ ಕೆವೈಸಿ ಸಮಸ್ಯೆ ಹೇಳುತ್ತಾರೆ. ಪ್ರತಿ ದಿನ ಕೆಲಸ ಬಿಟ್ಟು ಬ್ಯಾಂಕ್‌ಗೆ ಅಲೆಯುವುದೇ ಕೆಲಸವಾಗಿದೆ‌. –ಸುನಂದಾ ಹೆಗ್ಗವಾಡಿಪುರ ಚಾಮರಾಜನಗರ ತಾಲ್ಲೂಕು ಹಣ ಬಂದಿಲ್ಲ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿ ಒಂದೂವರೆ ತಿಂಗಳಾದರೂ ನನಗೆ ಹಣ ಬಂದಿಲ್ಲ. ಕೆಲವಷ್ಟೇ ಮಹಿಳೆಯರಿಗೆ ಇದರಿಂದ ಉಪಯೋಗವಾಗಿದೆ. ನಮ್ಮಂತಹ ಬಡವರಿಗೆ ಹಣ ಅಥವಾ ಯೋಜನೆಯ ಪ್ರಯೋಜನ ಸಿಗುವುದಿಲ್ಲ.  – ಭಾಗ್ಯ ಸಿದ್ದಯ್ಯನಪುರ ಕೊಳ್ಳೇಗಾಲ ತಾಲ್ಲೂಕು ಗೊಂದಲ ನಿವಾರಿಸಿ ಗ್ಯಾರಂಟಿಯಲ್ಲಿ ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಉಚಿತ ಎಂದು ಹೇಳಿದ್ದರು. ಆದರೆ ಈಗ 25 ಯುನಿಟ್‌ಗಳಿಗಳಿಗಿಂತ ಹೆಚ್ಚು ಬಳಸಿದರೆ ಹಣ ಪಾವತಿಸಬೇಕು ಎಂದು ಸೆಸ್ಕ್ ಸಿಬ್ಬಂದಿ ಹೇಳುತ್ತಿದ್ದಾರೆ. ಸರ್ಕಾರ ಉಚಿತ ವಿದ್ಯುತ್ ಬಗ್ಗೆ ಇರುವ ಗೊಂದಲ ನಿವಾರಿಸಬೇಕು. –ರವಿ ಹನೂರು ನಮ್ಮ ಭಾಗಕ್ಕೂ ಬಸ್‌ ಬೇಕು ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಅತ್ಯಂತ ಉಪಕಾರಿಯಾಗಿದೆ. ಆದರೆ ಮಾರ್ಟಳ್ಲಿ ಭಾಗದ ಜನರು ಈ ಯೋಜನೆ ಪ್ರಯೋಜ ಪಡೆಯಲು ವಡಕೆಹಳ್ಳ ಅಥವಾ ರಾಮಾಪುರಕ್ಕೆ ಹೋಗಬೇಕು. ಮಾರ್ಟಳ್ಳಿ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆ ಇದೆ. ಹಾಗಾಗಿ ನಾವು ಖಾಸಗಿ ಬಸ್‌ ಅಥವಾ ಆಟೊಗಳನ್ನು ಅವಲಂಬಿಸಬೇಕಿದೆ. ನಮ್ಮ ಭಾಗಕ್ಕೂ ಸಾರಿಗೆ ಬಸ್‌ ಸೌಲಭ್ಯ ಕಲ್ಪಿಸಬೇಕು. –ಅಂಥೋಣಿಯಮ್ಮ ಹಳೆ ಮಾರ್ಟಳ್ಳಿ ಹನೂರು ತಾಲ್ಲೂಕು ಗರಿಷ್ಠ ಜನರಿಗೆ ತಲುಪಲಿ ಗೃಹ ಜ್ಯೋತಿ ಮತ್ತು ಶಕ್ತಿ ಯೋಜನೆಯಿಂದ ಕೋಟ್ಯಂತರ ಮಹಿಳೆಯರಿಗೆ ಉಪಯೋಗವಾಗಿದೆ. ಇದರಿಂದ ರಾಜ್ಯದಲ್ಲಿ ಆರ್ಥಿಕ ಅಭಿವೃದ್ಧಿಗೂ ನೆರವಾಗುವ ನಿರೀಕ್ಷೆ ಇದೆ. ಇತಿಹಾಸದಲ್ಲೇ ಪ್ರಥಮ ಬಾರಿಗೆ ಇಂಥ ಯೋಜನೆ ನಮ್ಮ ರಾಜ್ಯದಲ್ಲಿರುವುದು ಹೆಮ್ಮೆಯ ಸಂಗತಿ. ಯೋಜನೆಯ ಪ್ರಯೋಜನ ಗರಿಷ್ಠ ಫಲಾನುಭವಿಗಳಿಗೆ  ತಲುಪುವಂತಾಗಬೇಕು.  –ಪ್ರಿಯಾ ಯಳಂದೂರು  ದಾಖಲೆಯದ್ದೇ ಸಮಸ್ಯೆ ಗೃಹಲಕ್ಷ್ಮಿ ನೊಂದಣಿಗೆ ಆಧಾರ್ ಮತ್ತು ರೇಷನ್ ಕಾರ್ಡ್ ಹೊಂದಿಸುವುದೇ ಸಮಸ್ಯೆಯಾಗಿದೆ. ಹೀಗಾಗಿ ತಾಲ್ಲೂಕು ಕೇಂದ್ರಕ್ಕೆ ಅಲೆಯುವುದು ತಪ್ಪಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ತೋರಿಸಿದರು ಪ್ರಯೋಜನವಾಗಿಲ್ಲ –ಲಕ್ಷ್ಮಿ ಅಂಬಳೆ ಯಳಂದೂರು ತಾಲ್ಲೂಕು ಹೆಚ್ಚು ಆಸೆ ಪಡಬಾರದು ಶಕ್ತಿ ಯೋಜನೆ ಹಾಗೂ ಗೃಹ ಲಕ್ಷ್ಮಿ ಯೋಜನೆಯಿಂದ ಮನೆಯಲ್ಲಿರುವ ಗೃಹಿಣಿಯರಿಗೆ ಅನುಕೂಲವಾಗಿದೆ. ಜತೆಗೆ ಈ ಯೋಜನೆ ಖುಷಿ ತಂದಿದೆ. ಇಷ್ಟಕ್ಕೆ ತೃಪ್ತಿ ಪಡಬೇಕು. ಹೆಚ್ಚು ಆಸೆ ಪಡಬಾರದು. –ಶೋಭಾ ಸಂತೇಮರಹಳ್ಳಿ ಚಾಮರಾಜನಗರ ತಾಲ್ಲೂಕು ಬಾರದ ಹಣ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿ ಎರಡು ತಿಂಗಳಾಗಿವೆ. ಆದರೂ ಇನ್ಮೂ ನನ್ನ ಖಾತೆಗೆ ₹2000 ಹಣ ಬಂದಿಲ್ಲ. ಪಡಿತರ ಹಣವೂ (ಹೆಚ್ಚುವರಿ ಐದು ಕೆಜಿ ಅಕ್ಕಿಯ ಹಣ) ಬಂದಿಲ್ಲ.  – ಕೆಂಪಲಕ್ಷ್ಮಿ ಮೇಲುಕಾಮನಹಳ್ಳಿ

Cut-off box - ತಾಂತ್ರಿಕ ಕಾರಣದಿಂದ ಜಮೆಯಾಗಿಲ್ಲ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಶೇ 90ರಷ್ಟು ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಮೊದಲ ಕಂತು ₹47.47 ಕೋಟಿ ಹಣ ಬಿಡುಗಡೆಯಾಗಿದ್ದು ಫಲಾನುಭವಿಗಳ ಖಾತೆಗೆ ಹಾಕಲಾಗುತ್ತಿದೆ. 2.16 ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಿದೆ. ಬ್ಯಾಂಕ್‌ ಖಾತೆಯ ಇ–ಕೆವೈಸಿ ಆಧಾರ್‌ ಸಂಖ್ಯೆ ಜೋಡಣೆ ಮಾಡದಿರುವುದು ಸೇರಿದಂತೆ ವಿವಿಧ ತಾಂತ್ರಿಕ ಕಾರಣಗಳಿಗೆ ಕೆಲವರಿಗೆ ಹಣ ಪಾವತಿಯಾಗಿಲ್ಲ. ಇದನ್ನು ಫಲಾನುಭವಿಗಳ ಗಮನಕ್ಕೆ ತರಲಾಗಿದೆ. ಇ–ಕೆವೈಸಿ ಮಾಡಿಸುವಂತೆ ಅವರಿಗೆ ಸೂಚಿಸಲಾಗುತ್ತಿದೆ. ಯೋಜನೆಯ ಪ್ರಯೋಜನವನ್ನು ಎಲ್ಲ ನೋಂದಾಯಿತ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ.  –ಗೀತಾ‌ಲಕ್ಷ್ಮಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ

Cut-off box - ಹೆಚ್ಚಿದ ಮಹಿಳಾ ಪ್ರಯಾಣಿಕರ ಸಂಖ್ಯೆ ಶಕ್ತಿ ಯೋಜನೆ ಅನುಷ್ಠಾನಗೊಂಡ ನಂತರ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಮಹದೇಶ್ವರ ಬೆಟ್ಟ ಬಿಳಿಗಿರಿರಂಗನಬೆಟ್ಟ ಸೇರಿದಂತೆ  ಧಾರ್ಮಿಕ ಕೇಂದ್ರಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ವಿಶೇಷವಾಗಿ ಹನೂರು ಭಾಗದ ಗ್ರಾಮೀಣ ಭಾಗಗಳಿಗೆ ಬಸ್‌ ಸಂಚಾರ ಕಡಿಮೆ ಇರುವುದರಿಂದ ಅಲ್ಲಿನ ಮಹಿಳೆಯರಿಗೆ ಯೋಜನೆಯ ಲಾಭ ಹೆಚ್ಚು ಸಿಕ್ಕಿಲ್ಲ ಎಂಬುದು ನಿಜ. ನಮ್ಮಲ್ಲಿ ಬಸ್‌ ಸಿಬ್ಬಂದಿ ಕೊರತೆ ಇದೆ. ಹನೂರಿನಲ್ಲಿ ಡಿಪೊ ಕೂಡ ಇಲ್ಲ. ಅಲ್ಲಿ ಡಿಪೊ ಆರಂಭಿಸುವ ಪ್ರಕ್ರಿಯೆ ಶುರುವಾಗಿದೆ.  –ಆರ್.ಅಶೋಕ್‌ಕುಮಾರ್‌ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ 

Cut-off box - ಬ್ಯಾಂಕ್ ಖಾತೆ ಸರಿಪಡಿಸಿಕೊಳ್ಳಬೇಕು ಜಿಲ್ಲೆಯಲ್ಲಿ ಮೂರು ತಿಂಗಳುಗಳಿಂದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹೆಚ್ಚುವರಿ ಐದು ಕೆಜಿ ಅಕ್ಕಿಗೆ ಪ್ರತಿಯಾಗಿ ಪಡಿತರ ಚೀಟಿದಾರರ (ಮನೆ ಯಜಮಾನ) ಖಾತೆಗೆ ನೇರವಾಗಿ ಹಣ ಹಾಕಲಾಗುತ್ತಿದೆ. ಬ್ಯಾಂಕ್‌ ಖಾತೆ ಸರಿ ಇಲ್ಲದಿರುವ ಕಾರಣಕ್ಕೆ ಕೆಲವು ಪಡಿತರದಾರರಿಗೆ ಹಣೆ ಜಮೆ ಆಗಿಲ್ಲ. ಮೊದಲ ತಿಂಗಳಲ್ಲಿ ಜಿಲ್ಲೆಯಲ್ಲಿ 24572 ಕಾರ್ಡ್‍ದಾರರ ಖಾತೆಗಳು ಸರಿಯಿಲ್ಲದ ಕಾರಣ ಹಣ ವರ್ಗಾವಣೆ ಸಾಧ್ಯವಾಗಿರಲಿಲ್ಲ. ಈಗ 13 ಸಾವಿರ ಮಂದಿಯ ಖಾತೆ ಸರಿಯಾಗಿದ್ದು ಈ ತಿಂಗಳು ಹಣ ಜಮೆಯಾಗಲಿದೆ. ಇನ್ನೂ ಖಾತೆ ಸರಿಮಾಡಿಸಿಕೊಳ್ಳದ ಫಲಾನುಭವಿಗಳಿಗೆ ನ್ಯಾಯ ಬೆಲೆ ಅಂಗಡಿಯವರ ಮೂಲಕ ಮಾಡಿಸುವಂತೆ ತಿಳಿಸಲಾಗುತ್ತದೆ. ನಿಗದಿತ ಎಲ್ಲ ಫಲಾನುಭವಿಗಳಿಗೆ ಅನ್ನಭಾಗ್ಯದ ಪ್ರಯೋಜನ ತಲುಪಿಸಲಾಗುವುದು. –ಯೋಗಾನಂದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT