ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಸ್ಪತ್ರೆ: ಜಾಗ, ಸ್ವಚ್ಛತೆಯದ್ದೇ ಸಮಸ್ಯೆ

ಪ್ರತಿ ದಿನ ಜನ ಹೈರಾಣ; ವೈದ್ಯಕೀಯ ಕಾಲೇಜಿನ ಬಳಿ ಹೊಸ ಆಸ್ಪತ್ರೆ ಆಗುವವರೆಗೂ ತಪ್ಪದು ಗೋಳು
Last Updated 25 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆಯ ಒಳಹೊಕ್ಕು ನೋಡಿದರೆ ಸಾಕು. ಕಿಕ್ಕಿರಿದ ಜನ ಸಂದಣಿಯೇ ಕಾಣುತ್ತದೆ. ಆವರಣದಲ್ಲಿ ಎಲ್ಲಿ ಬೇಕಾದರೂ ಸುತ್ತಾಡಿ. ಜನವೋ ಜನ. ಸೋಮವಾರ, ಮಂಗಳವಾರ ಮತ್ತು ಬುಧವಾರ ಕಾಲಿಡುವುದಕ್ಕೂ ಆಗದಂತ‌ಹ ಪರಿಸ್ಥಿತಿ.

ಜಿಲ್ಲೆಯಲ್ಲಿ ಬಹುತೇಕ ಮಂದಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಜಿಲ್ಲಾಸ್ಪತ್ರೆಯನ್ನು ಚಾಮರಾಜನಗರ ತಾಲ್ಲೂಕಿನವರು ಮಾತ್ರವಲ್ಲದೇ ಇಡೀ ಜಿಲ್ಲೆಯವರು ಅವಲಂಬಿಸಿರುವುದರಿಂದ ಇಲ್ಲಿಗೆ ಬರುವ ಜನರ ಸಂಖ್ಯೆ ಹೆಚ್ಚಿರುತ್ತದೆ.

ಬರುವ ರೋಗಿಗಳ ತಕ್ಕಂತೆ ಆಸ್ಪತ್ರೆ‌ಯಲ್ಲಿ ಹೆಚ್ಚಿನ ಜಾಗ ಇಲ್ಲದಿರುವುದರಿಂದ ಪರಿಸ್ಥಿತಿ ಬಿಗಡಾಯಿಸಿದೆ. ಇದರ ಜೊತೆಗೆ ಅನೈರ್ಮಲ್ಯವೂ ಸೇರಿ ಜಿಲ್ಲಾಸ್ಪತ್ರೆ ಎಂದರೆ ಜನಸಾಮಾನ್ಯರು ಮೂಗು ಮುರಿಯುವ ಸ್ಥಿತಿ ನಿರ್ಮಾಣವಾಗಿದೆ.

ಖಾಲಿ ಜಾಗವೇ ಇಲ್ಲ: 150 ಹಾಸಿಗೆ ಸಾಮರ್ಥ್ಯ ತಾಲ್ಲೂಕು ಆಸ್ಪತ್ರೆಯಾಗಿದ್ದ ಇದು, ಚಾಮರಾಜನಗರ ಜಿಲ್ಲೆಯಾದಾಗ ಜಿಲ್ಲಾಸ್ಪತ್ರೆ ಆಯಿತು. ಹಾಸಿಗೆ ಸಾಮರ್ಥ್ಯವನ್ನು 250ಕ್ಕೆ ಹೆಚ್ಚಿಸಲಾಯಿತು. ಆದರೆ, ಅಷ್ಟು ಸಾಮರ್ಥ್ಯದ ಆಸ್ಪತ್ರೆಗೆ ಬೇಕಾದ ಮೂಲಸೌಕರ್ಯಗಳನ್ನು ಸರ್ಕಾರ ಕೊಟ್ಟಿರಲಿಲ್ಲ. 2013-14ರಲ್ಲಿ ಹೊಸ ವೈದ್ಯಕೀಯ ಕಾಲೇಜು ಆರಂಭವಾದಾಗ ಜಿಲ್ಲಾಸ್ಪತ್ರೆ ಭೋದನಾ ಆಸ್ಪತ್ರೆ ಆಯಿತು. ಹಾಸಿಗೆಗಳ ಸಾಮರ್ಥ್ಯವನ್ನು ಮತ್ತೆ 50 ಹೆಚ್ಚಿಸಲಾಯಿತು. ಭಾರತೀಯ ವೈದ್ಯಕೀಯ ಮಂಡಳಿಯ ಮಾನದಂಡಗಳ ಆಧಾರದಲ್ಲಿ ವೈದ್ಯ ಸಿಬ್ಬಂದಿ ಎಲ್ಲ ನೇಮಕ ಆಯಿತು. ಆದರೆ, ಅಗತ್ಯವಾದ ಮೂಲಸೌಕರ್ಯ ಇರಲಿಲ್ಲ. ಅದೇ ಈಗಲೂ ಮುಂದುವರಿದಿದೆ.

ಆಸ್ಪತ್ರೆ ಇರುವ ಜಾಗದಲ್ಲಿ ಖಾಲಿ ಜಾಗವೇ ಇಲ್ಲ. ಹಳೆ ಕಟ್ಟಡಗಳನ್ನೂ ಒಂದಲ್ಲ ಒಂದು ಉದ್ದೇಶಕ್ಕೆ ಬಳಸಲಾಗಿದೆ. ದಾಖಲಾಗಲು ಬರುವ ರೋಗಿಗಳನ್ನು ಅದರಲ್ಲೂ ಹೆಚ್ಚಾಗಿ ಹೆರಿಗೆಗೆ ಬರುವ ಗರ್ಭಿಣಿಯರನ್ನು ಇರಿಸಲು ಹಾಸಿಗೆಯ ಕೊರತೆ ಉಂಟಾಗುತ್ತಿದೆ. ವೈದ್ಯಕೀಯ ಸಿಬ್ಬಂದಿಗೆ ಕುಳಿತುಕೊಳ್ಳಲೂ ಜಾಗವಿಲ್ಲ. ಬರುವ ರೋಗಿಗಳೂ ಜಾಗದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.ಹೊರ ರೋಗಿ ವಿಭಾಗಗಳಲ್ಲಿ ಜನದಟ್ಟಣೆ ಪ್ರತಿ ದಿನವೂ ಕಂಡು ಬರುತ್ತದೆ. ಗಂಟೆ ಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ರೋಗಿಗಳು ನಿಲ್ಲುವುದರಿಂದ ಅವರ ಜೊತೆಗೆ ಬರುವ ಆರೋಗ್ಯ ಇರುವ ವ್ಯಕ್ತಿಗೂ ಸೋಂಕು ತಗಲುವ ಆತಂಕ ಎದುರಾಗಿದೆ.

ವೈದ್ಯರ ಮೇಲೆ ಒತ್ತಡ: ಆಸ್ಪತ್ರೆಯಲ್ಲಿ 55ರಿಂದ 60 ವೈದ್ಯರಿದ್ದಾರೆ. ಜನರಲ್‌ ಮೆಡಿಸಿನ್‌, ಮೂಳೆ ವಿಭಾಗ ಹಾಗೂ ಪ್ರಸೂತಿ ವಿಭಾಗದಲ್ಲಿ ಒಬ್ಬಿಬ್ಬರು ವೈದ್ಯರ ಕೊರತೆ ಬಿಟ್ಟರೆ ಉಳಿದೆಲ್ಲಾ ವಿಭಾಗಗಳಲ್ಲಿ ವೈದ್ಯರು ಇದ್ದಾರೆ ಎಂದು ಹೇಳುತ್ತಾರೆ ವೈದ್ಯಾಧಿಕಾರಿಗಳು. ಆದರೆ, ಹೈಟೆಕ್‌ ಪ್ರಯೋಗಾಲಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಹಾಯಕ ಸಿಬ್ಬಂದಿ ಕೊರತೆ ಕಾಡುತ್ತಿದೆ.

‘ಪ್ರತಿ ದಿನ 1,300ರಿಂದ 1,400 ಹೊರರೋಗಿಗಳು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಾರೆ.ನಮ್ಮಲ್ಲಿ ಪ್ರತಿ ತಿಂಗಳೂ 400ಕ್ಕೂ ಹೆಚ್ಚು ಹೆರಿಗೆಗಳು ಆಗುತ್ತವೆ. ಹೆರಿಗೆಗೆ ಬರುವವರು, ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುವವರನ್ನು ನಾವು ದಾಖಲು ಮಾಡಿಕೊಳ್ಳಲೇ ಬೇಕಾಗುತ್ತದೆ. ಸಾಕಷ್ಟು ಜಾಗ ಇಲ್ಲದಿರುವುದರಿಂದ ಭಾರಿ ಕಷ್ಟವಾಗಿದೆ’ ಎಂದು ಆಸ್ಪತ್ರೆಯ ಮುಖ್ಯ ಸರ್ಜನ್‌ ಡಾ.ರಘುರಾಮ್‌ ಸರ್ವೇಗಾರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಡುವ ಅಸ್ವಚ್ಛತೆ: ಆಸ್ಪತ್ರೆಯ ವಾರ್ಡ್‌ಗಳು, ಶೌಚಾಲಯಗಳು, ಆವರಣ ಸ್ವಚ್ಛವಾಗಿರುವುದಿಲ್ಲ ಎಂಬುದು ಜನಸಾಮಾನ್ಯರು ಮಾಡುವ ಆರೋಪ‍. ಮೂತ್ರಾಲಯಗಳು ಶೌಚಾಲಯಗಳು ಗಬ್ಬೆದ್ದು ನಾರುತ್ತವೆ. ಜನರು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲ ಆಸ್ಪತ್ರೆಯ ಆಡಳಿತವೂ ಸ್ವಚ್ಛ ಮಾಡಲು ಗಮನ ಕೊಟ್ಟಿಲ್ಲ.

ಇಡೀ ಆಸ್ಪತ್ರೆಯನ್ನು ಸ್ವಚ್ಛಗೊಳಿಸಲು ಎಂಟು ಮಂದಿ ಮಾತ್ರ ಸಿಬ್ಬಂದಿ ಇದ್ದಾರೆ. ಅವರನ್ನೂ ಹೊರಗುತ್ತಿಗೆಯಲ್ಲಿ ತೆಗೆದುಕೊಳ್ಳಲಾಗಿದೆ. ಇಡೀ ಆಸ್ಪತ್ರೆಯನ್ನು ಸ್ವಚ್ಛಗೊಳಿಸಲು ಅವರಿಗೆ ಆಗುತ್ತಿಲ್ಲ. ಪ್ರಯೋಗಾಲಯ, ‌ಹೆರಿಗೆ ವಾರ್ಡ್‌ ಸೇರಿದಂತೆ ಕೆಲವು ಪ್ರಮುಖ ಸ್ಥಳಗಳಿಗೆ ಮಾತ್ರ ಅವರು ಮೀಸಲಾಗಿದ್ದಾರೆ.

‘ಸಫಾಯಿ ಕರ್ಮಾಚಾರಿ ಶಾಶ್ವತ ಹುದ್ದೆಗಳನ್ನು ನೀಡಲಾಗಿಲ್ಲ. ಹೊರಗುತ್ತಿಗೆಯಲ್ಲಿ ಎಂಟು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವರ್ಷ 15 ಮಂದಿಯನ್ನು ನೇಮಕ ಮಾಡಿಕೊಳ್ಳಲು ಟೆಂಡರ್‌ ಕರೆಯಲಾಗಿದೆ’ ಎಂದು ಡಾ.ರಘುರಾಮ್‌ ಅವರು ಹೇಳಿದರು.

ವೈದ್ಯರ ಮೇಲೆ ಆರೋಪ:ರಕ್ತ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಹೊರಗಡೆ ಖಾಸಗಿ ಪ್ರಯೋಗಾಲಗಳಲ್ಲಿ ಮಾಡುವಂತೆ ವೈದ್ಯರು ಸೂಚಿಸುತ್ತಾರೆ. ಶಸ್ತ್ರಚಿಕಿತ್ಸೆ ಅವಶ್ಯಕವಾಗಿರುವ ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಎಂದು ಹೇಳುತ್ತಾರೆ ಎಂಬ ಆರೋಪ ಇದೆ. ಔಷಧಿಗಳನ್ನು ಖಾಸಗಿ ಮೆಡಿಕಲ್‌ಗಳಲ್ಲಿ ಖರೀದಿಸುವಂತೆ ಹೇಳುತ್ತಾರೆ ಎಂಬ ದೂರೂ ಕೇಳಿ ಬರುತ್ತಿದೆ. ಖಾಸಗಿ ಪ್ರಯೋಗಾಲಯಗಳು ಹಾಗೂ ಆಸ್ಪತ್ರೆಗಳ ಲಾಬಿ ಇದರ ಹಿಂದಿದೆ ಎಂದು ಜನರ ಆರೋಪ.

ಆಮೆಗತಿಯಲ್ಲಿ ಕಾಮಗಾರಿ

ಯಡಬೆಟ್ಟದಲ್ಲಿರುವ ವೈದ್ಯಕೀಯ ಕಾಲೇಜು ಆವರಣದಲ್ಲಿ ₹110 ಕೋಟಿ ವೆಚ್ಚದಲ್ಲಿ 400 ಹಾಸಿಗೆ ಸಾಮರ್ಥ್ಯದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ತುಂಬಾ ನಿಧಾನವಾಗಿ ನಡೆಯುತ್ತಿದೆ. ಸದ್ಯ ಒಂದು ಅಂತಸ್ತಿನ ಕೆಲಸ ಮಾತ್ರ ಆಗಿದೆ.

ಈ ಆಸ್ಪ‍ತ್ರೆ ಸಾರ್ವಜನಿಕರ ಬಳಕೆಗೆ ಮುಕ್ತಗೊಂಡರೆ ಜಿಲ್ಲಾಸ್ಪತ್ರೆಯ ಮೇಲಿನ ಹೊರೆ ಇಳಿಯಬಹುದು ಎಂಬ ನಿರೀಕ್ಷೆಯಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ಇದೆ.

ವಾಹನಗಳ ಅವೈಜ್ಞಾನಿಕ ನಿಲುಗಡೆ

ಜಿಲ್ಲಾ ಆಸ್ಪತ್ರೆಯ ಒಳಗೆ ಹಾಗೂ ಹೊರಗೆ ದ್ವಿಚಕ್ರ ವಾಹನಗಳನ್ನು ಸವಾರರು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಾರೆ. ಇದರಿಂದ ಆಸ್ಪತ್ರೆಗೆ ಬರುವ ವೃದ್ದರು, ಮಕ್ಕಳಿಗೆ ತೊಂದರೆಯಾಗುತ್ತಿದೆ. ಅಲ್ಲದೆ, ಇಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಸಮರ್ಪಕವಾಗಿಲ್ಲ. ವಾಹನ ನಿಲುಗಡೆಯ ನಿಗದಿತ ಸ್ಥಳದಲ್ಲಿ ನಿಲ್ಲಿಸಿದರೂ ರಾತ್ರೋರಾತ್ರಿ ವಾಹನ ಕಳುವಾಗುವ ಪ್ರಕರಣವೂ ನಡೆದಿದೆ.

‘ಹಳೆ ಆಸ್ಪತ್ರೆಯಿಂದ ಹೊಸ ಆಸ್ಪತ್ರೆ ಕಟ್ಟಡಕ್ಕೆ ಕೂಗಳತೆ ದೂರವಿದ್ದರೂ ವಾಹನ ನಿಲುಗಡೆ ಸಮಸ್ಯೆಯಿಂದ ಸಾರ್ವಜನಿಕರು ನಡೆದಾಡಲು ತೊಂದರೆಯಾಗುತ್ತದೆ. ಸಾರ್ವಜನಿಕರು ವಿಶ್ರಮಿಸಲು ಇರುವಂತಹ ಕೊಠಡಿಯ ಹಿಂಭಾಗ ಸ್ವಚ್ಛತೆ ಇಲ್ಲ. ಸುತ್ತಲೂ ಸ್ವಚ್ಛಗೊಳಿಸಲು ಕೆಲಸಗಾರರನ್ನು ನೇಮಕ ಮಾಡಿಕೊಳ್ಳಬೇಕು. ಇಲ್ಲವಾದರೆ ರೋಗ ನಿವಾರಣೆಗೆಂದು ಬರುವ ಜನರಿಗೆ ರೋಗರುಜಿನ ಹರುಡುತ್ತದೆ’ ಎಂದು ಲಿಂಗನಪುರ ನಿವಾಸಿ ವೀರಪ್ಪಹೇಳಿದರು.

ಜನರು ಏನಂತಾರೆ?

ಆಸ್ಪತ್ರೆಯಲ್ಲಿ ಔಷಧಿ ಕೊಡಲಿ

ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನವರು ಬಡ ರೋಗಿಗಳೇ ಬರುತ್ತಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚಿನ ವ್ಯವಸ್ಥೆ ಮಾಡಿಕೊಡಬೇಕು. ಔಷಧಿಗಳನ್ನು ಸಾಧ್ಯವಾದಷ್ಟು ಇಲ್ಲಿಯೇ ಬರೆಯಲು ವೈದ್ಯರು ಕ್ರಮಕೈಗೊಳ್ಳಬೇಕು. ನಗರದ ಸುತ್ತಮುತ್ತ ಖಾಸಗಿ ಆಸ್ಪತ್ರೆಗಳಿದ್ದರೂ ಹಣ ಜಾಸ್ತಿ ಆಗಬಹುದು ಎಂಬ ಕಾರಣಕ್ಕೆ ನಾವು ಅಲ್ಲಿಗೆ ಹೋಗುವುದಿಲ್ಲ. ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯರನ್ನೇ ನಂಬಿ ಬರುತ್ತೇವೆ. ಅವರೂ ಕೂಡ ನಮಗೆ ಗುಣಮಟ್ಟದ ಚಿಕಿತ್ಸೆ ನೀಡಿದರೇ ಅದೇ ನಮಗೆ ಪುಣ್ಯ

–ಚಿಕ್ಕೀರಯ್ಯ, ದೇಮಹಳ್ಳಿ ಗ್ರಾಮ

ವೈದ್ಯರು ತಕ್ಷಣ ಸಿಗುವಂತಾಗಬೇಕು

ಅಂಗವಿಕಲರು, ವೃದ್ಧರು ಅನೇಕ ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳಲು ವೈದ್ಯರ ದೃಢೀಕರಣ ಅತ್ಯಗತ್ಯ. ಇಂತಹ ಸಂದರ್ಭದಲ್ಲಿ ಅವರನ್ನು ಹೆಚ್ಚು ಸಮಯ ಕಾಯಿಸದೇ ತ್ವರಿತವಾಗಿ ಸಹಿ ಮಾಡಿ ಅವರನ್ನು ಕಳುಹಿಸಬೇಕು. ವೈದ್ಯರನ್ನು ಕಾಣಲು ಗಂಟೆ ಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ವೃದ್ಧರು, ಅಂಗವಿಕಲರು, ಮಹಿಳೆಯರಿಗೆ ಕೊಂಚ ರಿಯಾಯಿತಿ ನೀಡಿ, ಆದಷ್ಟು ಬೇಗ ಆರೋಗ್ಯ ತಪಾಸಣೆ ಮಾಡಲು ಕ್ರಮ ಕೈಗೊಳ್ಳಬೇಕು

– ಶಿವಸ್ವಾಮಿ, ಉತ್ತುವಳ್ಳಿ ಗ್ರಾಮ

ಹೊರಗಡೆ ಕಳುಹಿಸಬಾರದು

ಸಣ್ಣ ಪುಟ್ಟ ಖಾಯಿಲೆ ಅಥವಾ ನರ ಸಂಬಂಧಿತ ಸ್ಕ್ಯಾನಿಂಗ್‌ಗಳನ್ನು ಸರ್ಕಾರಿ ಆಸ್ಪತ್ರೆಯಲ್ಲೇ ಇರುವಂತಾಗಬೇಕು. ಆರ್ಥಿಕವಾಗಿ ಸದೃಢರಲ್ಲದ ಕೂಲಿ ಕಾರ್ಮಿಕರು ಹೆಚ್ಚಿನ ಹಣ ನೀಡಿ ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್‌ಗಳಿಗೆ ಹೋಗಿ ಸ್ಕ್ಯಾನಿಂಗ್‌ ಅಥವಾ ಇತರ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಆಗುವುದಿಲ್ಲ. ಸಾಮಾನ್ಯ ಜನರ ಬಗ್ಗೆ ಆಸ್ಪತ್ರೆ ಆಡಳಿತ ಹಾಗೂ ವೈದ್ಯರು ನಿರ್ಲಕ್ಷ್ಯ ತೋರಬಾರದು

–ರಾಜಮ್ಮ, ಉತ್ತುವಳ್ಳಿ

ಅಂಕಿ ಅಂಶ

300

ಜಿಲ್ಲಾ ಆಸ್ಪತ್ರೆಯಲ್ಲಿರುವ ಹಾಸಿಗೆ ಸಾಮರ್ಥ್ಯ

1,300–1,400

ಪ್ರತಿ ದಿನ ಆಸ್ಪತ್ರೆಗೆ ಬರುವ ಹೊರ ರೋಗಿಗಳ ಸಂಖ್ಯೆ

60

ವೈದ್ಯರ ಸಂಖ್ಯೆ (ವೈದ್ಯಕೀಯ ಕಾಲೇಜಿನ ಬೋಧಕ ವೈದ್ಯರೂ ಸೇರಿ)

400ಕ್ಕೂ ಹೆಚ್ಚು

ಪ್ರತಿ ತಿಂಗಳು ಆಸ್ಪತ್ರೆಯಲ್ಲಿ ಆಗುತ್ತಿರುವ ಹೆರಿಗೆಗಳು

300

ಹೈಟೆಕ್‌ ಪ್ರಯೋಗಾಲಯದಲ್ಲಿ ಪ್ರತಿ ದಿನ ನಡೆಯುವ ವಿವಿಧ ಪರೀಕ್ಷೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT