ಮಂಗಳವಾರ, ನವೆಂಬರ್ 19, 2019
27 °C
ಚಾಮರಾಜನರ, ಕೊಳ್ಳೇಗಾಲ: ಬಾಡಿಗೆ ಕಟ್ಟಡಗಳಲ್ಲಿ ಬಹುತೇಕ ಅಂಗನವಾಡಿಗಳು– ಮೂಲಸೌಕರ್ಯ ವಂಚಿತ ಮಕ್ಕಳು

ಚಾಮರಾಜನಗರ | ನಗರಸಭೆ ವ್ಯಾಪ್ತಿಯ ಅಂಗನವಾಡಿಗಳ ಸ್ಥಿತಿ ಶೋಚನೀಯ

Published:
Updated:

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಗಳ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳು ಕನಿಷ್ಠ ಮೂಲಸೌಕರ್ಯಗಳ ಕೊರತೆಯಿಂದ ನಲುಗುತ್ತಿವೆ. ಮೂರು ವರ್ಷದಿಂದ ಆರು ವರ್ಷದವರೆಗಿನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಬೇಕಿದ್ದ ಈ ಕೇಂದ್ರಗಳು ಅವ್ಯಸ್ಥೆಯ ಆಗರವಾಗಿವೆ. 

ನಗರ ಪ್ರದೇಶದಲ್ಲಿ ಸೂಕ್ತ ಸ್ಥಳಾವಕಾಶದ ಕೊರತೆಯಿಂದಾಗಿ, ಬಾಲ್ಯದಲ್ಲೇ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸುವುದರ ಜೊತೆಗೆ ಚಿಣ್ಣರ ಸಮಗ್ರ ಅಭಿವೃದ್ಧಿ ಮಾಡುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಇಲಾಖೆಯ ಉದ್ದೇಶ ಈ ಎರಡೂ ನಗರಗಳ‌ಲ್ಲಿ ಸಾಕಾರವಾಗುತ್ತಿಲ್ಲ. 

ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ಅಂಗನವಾಡಿಗಳು ಚೆನ್ನಾಗಿವೆ. ಜಿಲ್ಲೆಯಾದ್ಯಂತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿಗಳಿಗೆ ಉತ್ತಮ ಗುಣಮಟ್ಟದ ಆಹಾರವನ್ನೇ ಪೂರೈಸುತ್ತಿದೆ. ಮಕ್ಕಳಿಗೂ ಅದು ಇಷ್ಟವಾಗಿದೆ. ಆದರೆ, ನಗರ ಪ್ರದೇಶಗಳ ಅಂಗನವಾಡಿಗಳ ಭೌತಿಕ ಸ್ಥಿತಿಗತಿಗಳು ಇಲಾಖೆಯ ಆಶಯವನ್ನೇ ಅಣಕಿಸುವಂತಿವೆ.

ಸ್ವಂತ ಕಟ್ಟಡ ಇಲ್ಲ: ಎರಡೂ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಅಂಗನವಾಡಿಗಳ ಪೈಕಿ ಬೆರಳೆಣಿಕೆಯಷ್ಟು ಬಿಟ್ಟರೆ ಬಹುತೇಕ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲ. ಬಾಡಿಗೆ ಕಟ್ಟಡ ಇಲ್ಲವೆ ಸಮುದಾಯವ ಭವನಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಚಾಮರಾಜನಗರ ನಗರಸಭೆಯ 31 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಒಟ್ಟು 80 ಅಂಗನವಾಡಿ ಕೇಂದ್ರಗಳಿವೆ. ಇಲ್ಲಿ ಮೂರರಿಂದ ಆರು ವರ್ಷ ವಯಸ್ಸಿನ 1,046 ಮಕ್ಕಳಿದ್ದಾರೆ. 19 ಅಂಗನವಾಡಿಗಳು ಮಾತ್ರ ಸ್ವಂತ ಕಟ್ಟಡ ಹೊಂದಿವೆ. 60 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯಾಚರಿಸುತ್ತಿವೆ. ಒಂದು ಸಮುದಾಯ ಭವನದಲ್ಲಿ ಕಾ‌ರ್ಯನಿರ್ವಹಿಸುತ್ತಿದೆ.

ಕೊಳ್ಳೇಗಾಲ ನಗರಸಭೆಯ 31 ವಾರ್ಡ್‌ ವ್ಯಾಪ್ತಿಯಲ್ಲಿ 50 ಅಂಗನವಾಡಿಗಳಿದ್ದು, 7 ಮಾತ್ರ ಸ್ವಂತ ಕಟ್ಟಡ ಹೊಂದಿವೆ. 32 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯಾಚರಿಸುತ್ತಿವೆ. 4 ಅಂಗನವಾಡಿಗಳು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಏಳು ಕೇಂದ್ರಗಳು ಸಮುದಾಯ ಭವನಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳ ಪರಿಸ್ಥಿತಿ ಪರವಾಗಿಲ್ಲ ಎಂದು ಹೇಳುವಂತಿದೆ. ಶೌಚಾಲಯ ಸೇರಿದಂತೆ ಕೆಲವು ಕನಿಷ್ಠ ಸೌಲಭ್ಯಗಳು ಇವೆ. ಆದರೆ, ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳು ಶೋಚನೀಯ ಸ್ಥಿತಿಯಲ್ಲಿವೆ. ಕೆಲವು ಕಡೆ ಉತ್ತಮ ಕಟ್ಟಡಗಳು ಸಿಕ್ಕಿದರೆ, ಇನ್ನೂ ಕೆಲವು ಕಡೆ ಸಣ್ಣ ಅಂಗಡಿ ಕಟ್ಟಡ, ಪುಟ್ಟ ಮನೆಯಲ್ಲಿ, ಒಂದೇ ಕೋಣೆ ಹೊಂದಿರುವ ಕಟ್ಟಡಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಕೆಲವು ಅಂಗನವಾಡಿಗಳಂತೂ ಗೂಡಿನ ರೀತಿಯಲ್ಲೇ ಇವೆ.

ಇಲ್ಲಿ ಸರಿಯಾದ ಬೆಳಕಿಲ್ಲ, ಶೌಚಾಲಯದ ಸೌಲಭ್ಯ ಇಲ್ಲ, ಬೆಂಚು– ಕುರ್ಚಿಗಳು ಇಲ್ಲವೇ ಇಲ್ಲ. ಮಕ್ಕಳಿಗೆ ಬೇಕಾದ ಆಟೋಟದ ಸಲಕರಣೆಗಳೂ ಇಲ್ಲ. ಅಂಗನವಾಡಿಯಲ್ಲಿ ಹೆಚ್ಚು ಮಕ್ಕಳಿದ್ದರೆ, ಕುಳಿತುಕೊಳ್ಳಲೂ ಸಾಧ್ಯವಿಲ್ಲದಂತಹ ಸ್ಥಿತಿ ಕೆಲವು ಕಡೆಗಳಲ್ಲಿ ಇದೆ. ಲಭ್ಯವಿರುವ ಸೌಲಭ್ಯದಲ್ಲೇ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಇರುವ ಜಾಗವನ್ನೇ ಸುಧಾರಿಸಿಕೊಂಡು ಮಕ್ಕಳಿಗೆ ಆಹಾರ ನೀಡಲಾಗುತ್ತಿದೆ.

ಸ್ವಚ್ಛತೆ ಮರೀಚಿಕೆ: ನಗರ ಪ್ರದೇಶಗಳಲ್ಲಿರುವ ಅಂಗನವಾಡಿಗಳ ಸುತ್ತಮುತ್ತ ಸ್ವಚ್ಛತೆ ಎಂಬುದೇ ಇಲ್ಲ. ಅಂಗನವಾಡಿಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಮಲ–ಮೂತ್ರ ವಿಸರ್ಜನೆ ಮಾಡಲಾಗುತ್ತದೆ. ಅಂಗನವಾಡಿ ಮಕ್ಕಳಲ್ಲದೇ ಸುತ್ತಮುತ್ತಲಿನ ಜನರಿಗೂ ಇದರಿಂದ ತೊಂದರೆಯಾಗಿದೆ. 

ಕಡಿಮೆ ಮಕ್ಕಳು: ನಗರ ಪ್ರದೇಶದಲ್ಲಿರುವ ಅಂಗನವಾಡಿಗಳಿಗೆ ದಾಖಲಾಗುವವರೆಲ್ಲ ಬಡವರ ಮಕ್ಕಳು. ಹಿಂದುಳಿದ ವರ್ಗಗಳ, ಕೊಳೆಗೇರಿಗಳಲ್ಲಿ ವಾಸವಿರುವವರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಿಲ್ಲಾ ಕೇಂದ್ರದ 20ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ 5 ಮಕ್ಕಳು ಇದ್ದಾರೆ. ಮಧ್ಯಮ ವರ್ಗ ಹಾಗೂ ಶ್ರೀಮಂತರ ಮಕ್ಕಳು ಕಾನ್ವೆಂಟ್‌, ಇತರೆ ಖಾಸಗಿ ಪೂರ್ವಪ್ರಾಥಮಿಕ ಶಾಲೆಗಳಿಗೆ (ಎಲ್‌ಕೆಜಿ,ಯುಕೆಜಿ) ಹೋಗುತ್ತಿದ್ದಾರೆ.

ಅಧಿಕಾರಿಗಳ ಅಸಹಾಯಕತೆ

ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಗರ ಪ್ರದೇಶದ ಅಂಗನವಾಡಿಗಳ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆದಿತ್ತು. ಶೌಚಾಲಯ ಹಾಗೂ ಇತರೆ ಮೂಲಸೌಕರ್ಯಗಳು ಇಲ್ಲ ಎಂದು ಸ್ವತಃ ಅಧಿಕಾರಿಗಳೇ ಒಪ್ಪಿಕೊಂಡಿದ್ದರು. ಶೌಚಾಲಯ ಸೌಲಭ್ಯ ಕಲ್ಪಿಸಲು ತಕ್ಷಣ ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದ್ದರು. 

ಉತ್ತಮ ಕಟ್ಟಡ ಬಾಡಿಗೆಗೆ ಸಿಗದಿರುವುದಕ್ಕೆ ಇಲಾಖೆಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಕಟ್ಟಡ ಚೆನ್ನಾಗಿದ್ದಾರೆ ಮಾಲೀಕರು ಬಾಡಿಗೆ ಹೆಚ್ಚು ಕೇಳುತ್ತಾರೆ. ಠೇವಣಿಯನ್ನೂ ಇಡಬೇಕು. ಆದರೆ, ಇಲಾಖೆ ಗರಿಷ್ಠ ಎಂದರೆ ₹ 4000ವರೆಗೆ ಬಾಡಿಗೆ ಕೊಡುತ್ತದೆ. ಠೇವಣಿ ಮೊತ್ತ ಕೊಡುವುದಿಲ್ಲ. ಹಾಗಾಗಿ, ಅಷ್ಟು ಹಣಕ್ಕೆ ಸಿಗುವ ಕಟ್ಟಡವನ್ನೇ ಬಾಡಿಗೆಗೆ ಪಡೆಯಬೇಕಾಗುತ್ತದೆ. ಬಾಡಿಗೆ ಹಣವೂ ತಿಂಗಳು ತಿಂಗಳು ಸರಿಯಾಗಿ ಬರುವುದಿಲ್ಲ. ಹಾಗಾಗಿ ಪಾವತಿಯೂ ವಿಳಂಬವಾಗುತ್ತದೆ. ಬಹುತೇಕ ಅಂಗನವಾಡಿಗಳು ಬಡವರು ವಾಸವಿರುವ ಪ್ರದೇಶದಲ್ಲಿವೆ. ಅಲ್ಲಿ ಮನೆಗಳು ಚಿಕ್ಕದಾಗಿರುತ್ತವೆ. ಜಾಗವೇ ಇರುವುದಿಲ್ಲ, ಶೌಚಾಲಯ ಎಲ್ಲಿಂದ ಬರಬೇಕು ಎಂದು ಪ್ರಶ್ನಿಸುತ್ತಾರೆ ಅಧಿಕಾರಿಗಳು.

ಸ್ವಂತ ಕಟ್ಟಡ ಇಲ್ಲದ ಅಂಗನವಾಡಿಗಳನ್ನು ಸ್ಥಳೀಯ ಸರ್ಕಾರಿ ಶಾಲೆಗಳಲ್ಲಿ ಆರಂಭಿಸುವ ಬಗ್ಗೆ ಕೆಡಿಪಿ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಈಗಾಗಲೇ ಕೊಳ್ಳೇಗಾಲದಲ್ಲಿ ನಾಲ್ಕು ಅಂಗನವಾಡಿ ಕೇಂದ್ರಗಳು ಶಾಲೆಗಳಲ್ಲಿ ನಡೆಯುತ್ತಿವೆ.  ಆದರೆ, ಕೆಲವು ಕಡೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶಾಲೆಯಲ್ಲಿ ಅಂಗನವಾಡಿಗೆ ಅವಕಾಶ ನೀಡಲು ವಿರೋಧಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ನಿವೇಶನ ಸಿಗುತ್ತಿಲ್ಲ: ಬಸವರಾಜು

ನಗರ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲು ‌ಜಾಗದ ಕೊರತೆ ಇರುವುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಬಸವರಾಜು ಒಪ್ಪಿಕೊಳ್ಳುತ್ತಾರೆ.

‘ಗ್ರಾಮೀಣ ಪ್ರದೇಶಗಳಲ್ಲಿ ನಮಗೆ ಅಂತಹ ಸಮಸ್ಯೆ ಏನಿಲ್ಲ. ಉತ್ತಮ ಕಟ್ಟಡಗಳು, ಶೌಚಾಲಯ ಸೇರಿದಂತೆ ಇನ್ನಿತರ ಸೌಕರ್ಯಗಳು ಇವೆ. ಆದರೆ, ನಗರ ಪ್ರದೇಶಗಳಲ್ಲಿ ನಮಗೆ ಕಟ್ಟಡ ನಿರ್ಮಿಸಲು ನಿವೇಶನ ಸಿಗುತ್ತಿಲ್ಲ. ಚಾಮರಾಜನಗರದಲ್ಲಿ 58 ಅಂಗನವಾಡಿಗಳಿಗೆ ನಮಗೆ ಬೇಕಾದ ಕಡೆ ನಿವೇಶನ ಸಿಕ್ಕಿಲ್ಲ. ನಾನು ಈಗಾಗಲೇ ನಗರಸಭೆ ಆಯುಕ್ತರು ಹಾಗೂ ಕೌನ್ಸಿಲರ್‌ಗಳೊಂದಿಗೆ ಮಾತನಾಡಿದ್ದೇನೆ. ಖಾಲಿ ನಿವೇಶನ ಇದ್ದರೆ ಕೊಡಿಸಿ ಎಂದು ಕೇಳಿದ್ದೇನೆ. ಜಿಲ್ಲಾಧಿಕಾರಿ ಕೂಡ ಆಯುಕ್ತರಿಗೆ ಪತ್ರ ಬರೆದು ನಿವೇಶನವನ್ನು ಗುರುತಿಸಿ ಎಂದು ಸೂಚಿಸಿದ್ದಾರೆ’ ಎಂದು ಅವರು ಹೇಳಿದರು.  ‘ಶೌಚಾಲಯಗಳಿಲ್ಲದ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳಿಗೆ ಮನೆಗಳಲ್ಲಿರುವ ಶೌಚಾಲಯ ಬಳಸಲು ಅವಕಾಶ ಕೊಡಿ ಎಂದು ಕಟ್ಟಡ ಮಾಲೀಕರಿಗೆ ಮನವಿ ಮಾಡಿದ್ದೇವೆ. ಕೆಲವರು ಒಪ್ಪಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‌‘ಅಂಗನವಾಡಿ ಎಂಬುದು ಸಮುದಾಯಕ್ಕೆ ಸಂಬಂಧಿಸಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಸ್ಥಳೀಯರ ಸಹಕಾರವೂ ನಮಗೆ ಮುಖ್ಯ’ ಎಂದು ಬಸವರಾಜು ‘ಪ್ರಜಾವಾಣಿ’ಗೆ ಹೇಳಿದರು.

ಜನ, ಸಿಬ್ಬಂದಿ ಏನಂತಾರೆ?

ಸ್ವಚ್ಛತೆಗೆ ಕ್ರಮವಹಿಸಬೇಕು

ನಮ್ಮ ಬೀದಿಯಲ್ಲಿ 2017–18ರಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡ ಆಗಿದೆ. ಆದರೆ, ಇಲ್ಲಿನ ಸುತ್ತಮುತ್ತ ಸ್ವಚ್ಛತೆ ಇಲ್ಲ. ಮಕ್ಕಳು ದಿನನಿತ್ಯ ಊಟ ಮಾಡುವಾಗ ಗಬ್ಬು ವಾಸನೆ ಮೂಗಿಗೆ ರಾಚುತ್ತದೆ. ಇಲಾಖೆ ಹಾಗೂ ನಗರಸಭೆ ಆಡಳಿತಕ್ಕೆ ಅನೇಕ ಬಾರಿ ಸ್ವಚ್ಛಗೊಳಿಸುವಂತೆ ಮನವಿ ಮಾಡಿದರೂ ಗಮನಹರಿಸಿಲ್ಲ 

–ಮಾದೇವಮ್ಮ, ಉಪ್ಪಾರ ಬೀದಿ, ಚಾಮರಾಜನಗರ

ಶಾಲೆಗಳೊಂದಿಗೆ ವಿಲೀನ ಮಾಡಿದರೆ ಉತ್ತಮ

ಅಂಗನವಾಡಿ ಕೇಂದ್ರಗಳು ಮೂಲಸೌಕರ್ಯಗಳಿಂದ ಸೊರಗುತ್ತಿವೆ. ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಮಕ್ಕಳ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಪ್ರಾಥಮಿಕ ಶಾಲೆಗಳೊಂದಿಗೆ ಅಂಗನವಾಡಿ ಕೇಂದ್ರಗಳು ವಿಲೀನವಾದರೆ ಅನುಕೂಲ. ಕನಿಷ್ಠ ಮೂಲಸೌಕರ್ಯಗಳು ಸಿಗುತ್ತವೆ. ಇಲ್ಲಿ ಶೌಚಕ್ಕಾಗಿ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುತ್ತಾರೆ. ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸುವುದಿಲ್ಲ. ನಾಲ್ಕೈದು ವರ್ಷದಿಂದ ಕತ್ತಲ ಕೋಣೆಯಲ್ಲೇ ನಮ್ಮ ಮಕ್ಕಳು ಪಾಠ ಕೇಳುವಂತಾಗಿದೆ. ನಾಮಫಲಕ ಸರಿಪಡಿಸಿ ನೇತು ಹಾಕುವಷ್ಟು ಜಾಗವೂ ಇಲ್ಲ.

–ಸುಂದರಮ್ಮ, ಚಾಮರಾಜನಗರ

ಸ್ವಂತ ಕಟ್ಟಡ ಬೇಕು

ಸ್ವಂತ ಕಟ್ಟಡವಾದರೆ ಮೂಲಸೌಕರ್ಯ ಸಿಗುತ್ತದೆ. ಚಿಣ್ಣರನ್ನು ಪಾಲನೆ ಮಾಡಲು ಅನುಕೂಲ. ಶೌಚಾಲಯ ಇರುವ ಉತ್ತಮ ಬಾಡಿಗೆ ಮನೆ ನೋಡಿ ಎಂದು ನಮಗೆ ಹೇಳುತ್ತಾರೆ. ಈಗ ಇರುವಂತಹ ಬಾಡಿಗೆ ಕಟ್ಟಡಕ್ಕೆ ತಿಂಗಳ ಬಾಡಿಗೆಯನ್ನೂ ನೀಡುತ್ತಿಲ್ಲ. ಎಲ್ಲ ಸೌಲಭ್ಯ ಇರುವ ಬಾಡಿಗೆ ಮನೆ  ₹ 50 ಸಾವಿರ ಮುಂಗಡ ಹಾಗೂ ₹ 3,000ದಿಂದ ₹ 4,000 ಕೇಳುತ್ತಾರೆ. 

–ಮಾದೇವಮ್ಮ, ಅಂಗನವಾಡಿಯೊಂದರ ಸಹಾಯಕಿ 

ಮೂಲಸೌಕರ್ಯ ಬೇಕು

ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ಸೇರಿದಂತೆ ಇನ್ನಿತರ ಮೂಲಸೌಕರ್ಯ ಅಗತ್ಯವಾಗಿ ಬೇಕು. ಚಿಕ್ಕ ಕೊಠಡಿಯಲ್ಲಿ ಮಕ್ಕಳ ಪಾಲನೆ ದುಸ್ತರ. ಹೊರಗೆ ಶೌಚಕ್ಕಾಗಿ ಮಕ್ಕಳನ್ನು ಕರೆದುಕೊಂಡು ಹೋಗಲು ತೊಂದರೆಯಾಗುತ್ತದೆ. ಮೂರು ವರ್ಷದಿಂದ ಐದು ವರ್ಷವರೆಗಿನ ಮಕ್ಕಳು ಅವರದೇ ಆಟದಲ್ಲಿ ನಿರತರಾಗಿರುತ್ತಾರೆ. ಅಂಗನವಾಡಿ ಕೇಂದ್ರದ ಕೊಠಡಿಯಲ್ಲೇ ಸಣ್ಣಪುಟ್ಟ ಆಟ ಆಡಲು ಬೇಕಾದಂತಹ ಪರಿಕರಗಳನ್ನು ಒದಗಿಸಬೇಕು

–ರತ್ನಮ್ಮ, ಅಂಗನವಾಡಿ ಸಹಾಯಕಿ, ಶಂಕರಪುರ, ಚಾಮರಾಜನಗರ  

ಜನಪ್ರತಿನಿಧಿಗಳು ಗಮನಹರಿಸಲಿ

ನಗರದಲ್ಲಿರುವ ಬಹುತೇಕ ಅಂಗನವಾಡಿಗಳಲ್ಲಿ ಸಮರ್ಪಕ ಕೊಠಡಿಗಳಿಲ್ಲ, ಮಕ್ಕಳು ಪ್ರತಿನಿತ್ಯ ಪರದಾಡುತ್ತಿದ್ದಾರೆ. ಸಕಲ ಸೌಕರ್ಯಗಳನ್ನು ಹೊಂದಿರುವ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಜನಪ್ರತಿನಿಧಿಗಳು ಗಮನಹರಿಸಬೇಕು

–ವಸೀಂ, ಅಹಮ್ಮದ್‌ಪುರ ಬಡಾವಣೆ, ಕೊಳ್ಳೇಗಾಲ 

ಅಧಿಕಾರಿಗಳು ಪ್ರಯತ್ನಿಸಲಿ

ನಮ್ಮ ಬಡಾವಣೆಯಲ್ಲಿರುವ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲ. ಹಾಗಾಗಿ ಮಕ್ಕಳು ಸಮುದಾಯ ಭವನದಲ್ಲಿ ಕುಳಿತುಕೊಳ್ಳುತ್ತಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ವಂತ ಕಟ್ಟಡ ಕೊಡಿಸಲು ಪ್ರಯತ್ನ ಪಡಬೇಕು

–ಮಹದೇವ, ಮೋಳೆ ಬಡಾವಣೆ, ಕೊಳ್ಳೇಗಾಲ

***

ಅಂಗನವಾಡಿಗಳ ಲೆಕ್ಕಾಚಾರ

1,421 – ಜಿಲ್ಲೆಯಲ್ಲಿರುವ ಅಂಗನವಾಡಿಗಳ ಸಂಖ್ಯೆ

80 – ಚಾಮರಾಜನಗರದಲ್ಲಿರುವ ಅಂಗನವಾಡಿಗಳು

1,046 – ಮಕ್ಕಳ ಸಂಖ್ಯೆ

50 – ಕೊಳ್ಳೇಗಾಲದಲ್ಲಿರುವ ಅಂಗನವಾಡಿ ಕೇಂದ್ರಗಳು

***

ನಗರ   ಅಂಗನವಾಡಿಗಳು ಸ್ವಂತ ಕಟ್ಟಡ ಬಾಡಿಗೆ ಇತರೆ

ಚಾಮರಾಜನಗರ 80   19   60   1 *

ಕೊಳ್ಳೇಗಾಲ 50     7   32  11 *

(*4–ಶಾಲೆಗಳು, 8–ಸಮುದಾಯ ಭವನ)

ಪ್ರತಿಕ್ರಿಯಿಸಿ (+)