ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಸ್ವಚ್ಛತೆ, ಮೂಲಸೌಕರ್ಯ ಕೊರತೆ, ರೋಗಿಗಳಿಗೆ ಕಷ್ಟ

ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಅವ್ಯವಸ್ಥೆಗಳ ತಾಂಡವ, ಗಮನ ಹರಿಸದ ಅಧಿಕಾರಿಗಳು, ಜನಪ್ರತಿನಿಧಿಗಳು
Last Updated 20 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ಕೊಳ್ಳೇಗಾಲದಲ್ಲಿರುವ ಸರ್ಕಾರಿ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಅವ್ಯವಸ್ಥೆಗಳು ತಾಂಡವವಾಡುತ್ತಿದ್ದು, ಪ್ರತಿ ನಿತ್ಯ ರೋಗಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ.

ಅನೈರ್ಮಲ್ಯ ಹಾಗೂ ಮೂಲ ಸೌಕರ್ಯಗಳ ಕೊರತೆ ಆಸ್ಪತ್ರೆಯನ್ನು ಕಾಡುತ್ತಿದ್ದು, ನಗರ, ದೂರದ ಊರುಗಳಿಂದ ಬರುವವರಿಗೆ ಸರಿಯಾದ ಆರೋಗ್ಯ ಸೇವೆ ಸಿಗುತ್ತಿಲ್ಲ. ಹನೂರು ತಾಲ್ಲೂಕಿನಲ್ಲಿರುವ ಗಡಿ ಭಾಗದ ಪ್ರದೇಶಗಳಿಂದ ಹಿಡಿದು ಇತ್ತ ಯಳಂದೂರುವರೆಗೂ ಜಿಲ್ಲೆಯ ವಿವಿಧ ಗ್ರಾಮಗಳ ಜನರು ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲದಲ್ಲಿರುವ ಉಪವಿಭಾಗ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ.

ಜಾಗದ ಕೊರತೆ ಒಂದೆಡೆಯಾದರೆ, ಸಾರ್ವಜನಿಕರನ್ನು ಅನೈರ್ಮಲ್ಯ ಹಾಗೂ ಸೌಕರ್ಯಗಳ ಕೊರತೆ ಹೆಚ್ಚು ಕಾಡುತ್ತಿದೆ. ಚಿಕಿತ್ಸೆ ನೀಡುವ ಆಸ್ಪತ್ರೆಗೆ ಹೇಗಿರಬೇಕೋ, ಅದಕ್ಕೆ ತದ್ವಿರುದ್ಧವಾಗಿ ಈ ಆಸ್ಪತ್ರೆ ಇದೆ.

ಶೌಚಾಲಯಗಳು ಸ್ವಚ್ಛವಾಗಿಲ್ಲ, ಆವರಣವೂ ನಿರ್ಮಲವಾಗಿಲ್ಲ. ಅಲ್ಲಲ್ಲಿ ತ್ಯಾಜ್ಯವಸ್ತುಗಳ ರಾಶಿ ಕಾಣಿಸುತ್ತವೆ. ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ.

ಗಂಡಸರ ವಾರ್ಡ್ ಮತ್ತು ಹೆಂಗಸರ ಶೌಚಾಲಯಗಳು ಗಬ್ಬು ನಾರುತ್ತಿದೆ. ನಿಯಮಿತವಾಗಿ ಸ್ವಚ್ಛಗೊಳಿಸಲು ಆಸ್ಪತ್ರೆ ಆಡಳಿತ ಕ್ರಮ ಕೈಗೊಳ್ಳದಿರುವುದು ಒಂದೆಡೆಯಾದರೆ, ರೋಗಿಗಳು ಹಾಗೂ ಸಂಬಂಧಿಕರು ಗಲೀಜು ಮಾಡುವುದು ಇನ್ನೊಂದೆಡೆ. ಶೌಚಾಲಯಗಳಿಗೆ ಸಾಕಷ್ಟು ನೀರು ಪೂರೈಸಲಾಗುತ್ತಿದ್ದರೂ, ಜನರು ನೀರನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ.ಇದರಿಂದ ವಾರ್ಡ್‍ಗೆ ಹೋಗಬೇಕಾದರೆ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮೂಲಸೌಕರ್ಯಗಳ ಕೊರತೆ: ಕುಡಿಯುವ ನೀರು, ಕುಳಿತುಕೊಳ್ಳುವ ವ್ಯವಸ್ಥೆಗಳಂತಹ ಕನಿಷ್ಠ ಮೂಲಸೌಕರ್ಯಗಳು ಇಲ್ಲಿಲ್ಲ. ರಾತ್ರಿ ಹೊತ್ತಿನಲ್ಲಿ ಕುಡಿಯುವ ನೀರಿಗಾಗಿ ರೋಗಿಗಳು ಹಾಗೂ ಸಂಬಂಧಿಕರು ಪರದಾಡುವ ಸ್ಥಿತಿಯೂ ಇದೆ.

ವೈದ್ಯರನ್ನು ಕಾಣಲು ಬರುವ ರೋಗಿಗಳಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ. ಹಾಗಾಗಿ ಜನ ಎಲ್ಲೆಂದರಲ್ಲಿ ಕುಳಿತುಕೊಳ್ಳುತ್ತಾರೆ, ಮಲಗುತ್ತಾರೆ.

‘ಒಳರೋಗಿಗಳ ವಾರ್ಡ್‍ನ ಬೆಡ್‍ಗಳಿಗೆ ಹೊದಿಕೆಯನ್ನು ಹಾಕದೆ ರೋಗಿಗಳನ್ನು ಅದರಲ್ಲೇ ಮಲಗಿಸುತ್ತಾರೆ. ಕೆಲ ವಾರ್ಡ್‍ಗಳಲ್ಲಿ ಫ್ಯಾನ್‌ ಕೆಟ್ಟು ನಿಂತು ತಿಂಗಳು ಕಳೆದರೂ ಅದರ ಇಲ್ಲಿ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂಬುದು ಸಾರ್ವಜನಿಕರ ದೂರು.

ತಡವಾಗಿ ಬರುವ ವೈದ್ಯರು: ಆಸ್ಪತ್ರೆಯ ಕೆಲವು ವೈದ್ಯರು ನಿಗದಿತ ಸಮಯಕ್ಕೆ ಬರುವುದಿಲ್ಲ ಎಂಬ ಆರೋಪವೂ ಇದೆ. ವೈದ್ಯರಿಗಾಗಿ ರೋಗಿಗಳು ಗಂಟೆಕಟ್ಟಲೆ ಕಾದುಕುಳಿತುಕೊಳ್ಳಬೇಕಾಗುವ ಸ್ಥಿತಿ ಇದೆ.

‘ರಾತ್ರಿ ಪಾಳಿಯಲ್ಲಿ ಕೆಲ ವೈದ್ಯರು ಮತ್ತು ಸಿಬ್ಬಂದಿ ಆಸ್ಪತ್ರೆಯಲ್ಲೇ ಇರುವುದಿಲ್ಲ. ರಾತ್ರಿ ವೇಳೆ ತುರ್ತು ಚಿಕಿತ್ಸೆಗಾಗಿ ಹೋದರೆ ರೋಗಿಗಳನ್ನು ಗದರಿಸಿ ಮಾತನಾಡುತ್ತಾರೆ. ಇನ್ನೂ ಕೆಲವರು, ಬೇರೆ ಆಸ್ಪತ್ರೆಗಳು ಇಲ್ಲವೇ ಇದು ಒಂದೇ ಇರುವುದಾ ಎಂದು ಪ್ರಶ್ನಿಸುತ್ತಾರೆ’ ಎಂದು ಜನರು ದೂರುತ್ತಾರೆ.

ನುರಿತ ಶುಶ್ರೂಷಕರು ಇಲ್ಲ: ಆಸ್ಪತ್ರೆಯ ಐಸಿಯು ವಾರ್ಡ್ ಚೆನ್ನಾಗಿಯೇ ಇದೆ. ಆದರೆ ಇಲ್ಲಿ ನುರಿತ ಶುಶ್ರೂಷಕರು ಇಲ್ಲ. ಆಸ್ಪತ್ರೆಯ ಸಾಮಾನ್ಯ ಶುಶ್ರೂಷಕರೇ ಅಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 35 ಜನ ಡಿ ಗ್ರೂಪ್‌ ನೌಕರರಿದ್ದರೂ ಕೆಲಸಗಳು ಸರಿಯಾಗಿ ನಡೆಯುವುದಿಲ್ಲ ಎಂಬ ದೂರುಗಳೂ ಇವೆ.

ಆಸ್ಪತ್ರೆಯ ಆವರಣದ ಸಮೀಪದಲ್ಲೇ ಹೆರಿಗೆ ಆಸ್ಪತ್ರೆಯಲ್ಲಿ, ಸಿಬ್ಬಂದಿಗೆ ಹಣ ಕೊಡದಿದ್ದರೆ ಹೆರಿಗೆ ಮಾಡುವುದಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಸಾರ್ವಜನಿಕರು.

ಅಡ್ಡಾದಿಡ್ಡಿ ವಾಹನ ನಿಲುಗಡೆ:ಆಸ್ಪತ್ರೆಗೆ ಬರುವ ಮಂದಿ ಮುಂಭಾಗ, ಇತರೆ ಆವರಣದಲ್ಲಿ ಅಡ್ಡಾದಿಡ್ಡಿಯಾಗಿ ದ್ವಿಚಕ್ರ ಹಾಗೂ ಇತರೆ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ಆವರಣದಲ್ಲಿ ರೋಗಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಸಿಬ್ಬಂದಿಯಂತು ಆಸ್ಪತ್ರೆಯ ಪಡಸಾಲನೆಯನ್ನು ವಾಹನ ನಿಲುಗಡೆ ತಾಣವಾಗಿ ಬದಲಾಯಿಸಿದ್ದಾರೆ.

‘ತಡವಾಗಿ ಬರುವ ವೈದ್ಯರ ವಿರುದ್ಧ ಕ್ರಮ’
‘ಆಸ್ಪತ್ರೆ ವೈದ್ಯರು ಯಾವುದೇ ಕಾರಣಕ್ಕೂ ತಡವಾಗಿ ಬರುವಂತಿಲ್ಲ. ತಡವಾಗಿ ಬರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇನೆ. ದಿಢೀರ್‌ ಆಗಿ ಆಸ್ಪತ್ರೆಗೆ ಭೇಟಿ ನೀಡಿ ಸ್ವಚ್ಛತೆಯನ್ನು ಪರಿಶೀಲಿಸುತ್ತೇನೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್‌.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆವರಣದಲ್ಲಿ ಕಸ ಹಾಕುವ ಜಾಗದ ಹೊರಗಡೆ ತ್ಯಾಜ್ಯ ಚೆಲ್ಲಿರುವುದು
ಆವರಣದಲ್ಲಿ ಕಸ ಹಾಕುವ ಜಾಗದ ಹೊರಗಡೆ ತ್ಯಾಜ್ಯ ಚೆಲ್ಲಿರುವುದು

ಜನರು ಏನಂತಾರೆ?
ಕನಿಷ್ಠ ಮೂಲಸೌಕರ್ಯಗಳೂ ಇಲ್ಲ. ಚಿಕಿತ್ಸೆಗಾಗಿ ಬಂದ ರೋಗಿಗಳೊಂದಿಗೆಆಸ್ಪತ್ರೆ ಸಿಬ್ಬಂದಿ ಸರಿಯಾದ ರೀತಿಯಲ್ಲಿ ಮಾತನಾಡುವುದಿಲ್ಲ. ಎಲ್ಲದಕ್ಕೂ ಗದರುತ್ತಾರೆ. ಹೀಗಾದರೆ ನಾವು ಆರೋಗ್ಯ ಸೇವೆ ಪಡೆಯುವುದಾದರೂ ಹೇಗೆ?
– ಶಿವಮ್ಮ,ನರೀಪುರ

*
ಆಸ್ಪತ್ರೆ ಸ್ವಚ್ಛವಾಗಿಲ್ಲ.ವಾರ್ಡ್‍ಗಳು ಗಬ್ಬು ನಾರುತ್ತವೆ. ಒಳಗಡೆ ಪ್ರವೇಶ ಮಾಡುವುದಕ್ಕೆ ಆಗುವುದೇ ಇಲ್ಲ. ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ. ಕೆಲ ವೈದ್ಯರು ಸರಿಯಾದ ಸಮಯಕ್ಕೆ ಬರುವುದಿಲ್ಲ. ಇದರಿಂದ ರೋಗಿಗಳಿಗೆ ತೊಂದರೆಯಾಗಿದೆ.
–ಬಸವಣ್ಣ,ಮೋಳೆ ನಿವಾಸಿ

*
ಬಡವರ ಜೀವದೊಂದಿಗೆ ಅಧಿಕಾರಿಗಳು ಮತ್ತು ವೈದ್ಯರು ಆಟವಾಡುತ್ತಿದ್ದಾರೆ. ಇಲ್ಲಿನ ಅವ್ಯವಸ್ಥೆ ಇದರ ಬಗ್ಗೆ ಕ್ಷೇತ್ರದ ಶಾಸಕರು ಹಾಗೂ ಜನಪತ್ರಿನಿಧಿಗಳು ಗಮನಹರಿಸಬೇಕು.
–ರವಿಕಿರಣ್, ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT