ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರದನಹಳ್ಳಿ: ಕೃಷ್ಣನ ದೇವಸ್ಥಾನಕ್ಕೆ ಯುವಪಡೆಯಿಂದ ಹೊಸ ರೂಪ

ಐತಿಹಾಸಿಕ ವೇಣುಗೋಪಾಲಸ್ವಾಮಿ ದೇವಸ್ಥಾನ, ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದ ದೇಗುಲ
Last Updated 17 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಐತಿಹಾಸಿಕ ಹಿನ್ನೆಲೆ ಹೊಂದಿರುವ 14ನೇ ಶತಮಾನಕ್ಕೆ ಸೇರಿದ ತಾಲ್ಲೂಕಿನ ಹರದನಹಳ್ಳಿ ಗ್ರಾಮದ ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಗ್ರಾಮದ 50ಕ್ಕೂ ಹೆಚ್ಚು ಯುವಕರು ಹೊಸ ರೂಪ ನೀಡಿದ್ದಾರೆ.

ಶ್ರೀವಿನಾಯಕ ಭಕ್ತ ಮಂಡಳಿ ಹೆಸರಿನ ಸಂಘ ಕಟ್ಟಿಕೊಂಡಿರುವ ಗ್ರಾಮದ ಯುವಕರು ಸಂಘದ ಅಡಿಯಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪಣ ತೊಟ್ಟಿದ್ದಾರೆ.

ಶಿಥಿಲಗೊಂಡಿರುವ ದೇಗುಲವನ್ನು ಜೀರ್ಣೋದ್ಧಾರ ಮಾಡಿಕೊಡುವಂತೆ ಅನೇಕ ಬಾರಿ ಪುರಾತತ್ವ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ, ಯುವಕರೇ ಒಟ್ಟು ಗೂಡಿ ಈ ಕಾರ್ಯಕ್ಕೆ ಮುಂದಾದರು.

ಇಡೀ ದೇವಾಲಯವನ್ನು ಕಲ್ಲುಗಳಿಂದ ನಿರ್ಮಿಸಲಾಗಿದೆ. ಆಕರ್ಷಕ ಕಲೆ ಮತ್ತು ವಾಸ್ತುಶಿಲ್ಪದಿಂದ ಗಮನಸೆಳೆಯುವ ದೇವಾಲಯದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿತ್ತು.

‘ದಿನಗಳು ಕಳೆದಂತೆ ದೇವಾಲಯ ಪಾಳು ಬೀಳಲು ಆರಂಭವಾಯಿತು. ಆವರಣದಲ್ಲಿ ಆಳೆತ್ತರ ಗಿಡಗಳು ಬೆಳೆದು ಉಳುಹುಪ್ಪಟೆ, ಹಾವು, ಚೇಳುಗಳ ವಾಸಸ್ಥಾನವಾಗಿತ್ತು. ಮುಜರಾಯಿ ಹಾಗೂ ಪುರಾತತ್ವ ಇಲಾಖೆ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಲಿಲ್ಲ. ಆದ್ದರಿಂದ ಐದು ವರ್ಷಗಳ ಹಿಂದೆ ಜೀರ್ಣೋದ್ಧಾರಕ್ಕೆ ಮುಂದಾದೆವು’ ಎಂದು ಮಂಡಳಿಯ ಸದಸ್ಯರೊಬ್ಬರಾದ ಛಾಯಾಗ್ರಾಹಕ ಮಹೇಶ್ 'ಪ್ರಜಾವಾಣಿ'ಗೆ ಹೇಳಿದರು.

ವಿಶೇಷ ಪೂಜೆ:ಸಂಕ್ರಾಂತಿ, ಯುಗಾದಿ ಹಾಗೂ ಗೋಕುಲಾಷ್ಠಮಿಗೆ ವಿಶೇಷ ಪೂಜೆ ನಡೆಯುತ್ತದೆ. ವೈಕುಂಠ ಏಕಾದಶಿಗೆ ತೊಟ್ಟಿಲು ಕಟ್ಟಿ ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಉತ್ಸವ ಮೂರ್ತಿಯನ್ನು ಇರಿಸುವ ಕ್ರಮ ಇದೆ. ನಮ್ಮ ಯುವ ಬಳಗದ ಮಂಡಳಿ ಅಸ್ತತ್ವಕ್ಕೆ ಬಂದು 9 ವರ್ಷಗಳಾದವು. ಪ್ರತಿ ವರ್ಷ ಇಲ್ಲಿ ಗಣಪತಿ ಪ್ರತಿಷ್ಠಾಪಿಸುತ್ತೇವೆ. ಪೂಜೆ, ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ’ ಎಂದು ಅವರು ತಿಳಿಸಿದರು.

₹ 22 ಲಕ್ಷ ಖರ್ಚು: ಈವರೆಗೆ ದೇವಾಲಯ ಜೀರ್ಣೋದ್ಧಾರಕ್ಕೆ ₹ 22 ಲಕ್ಷ ಖರ್ಚಾಗಿದೆ. ಇದನ್ನು ಗ್ರಾಮಸ್ಥರು, ನೆರೆ ಹೊರೆಯವರು, ಎಲ್ಲ ಕೋಮಿನ ಜನರು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳು ನಡೆಯಬೇಕಿದೆ ಎನ್ನುತ್ತಾರೆ ಅವರು.

ಮನೆ ಪಾಠ: ದೇವಾಲಯದ ಆವರಣ ಈಗ ಸ್ವಚ್ಛವಾಗಿರುವುದರಿಂದ ಪಡಸಾಲೆಯಲ್ಲಿ ಮಕ್ಕಳಿಗೆ ಮನೆ ಪಾಠವನ್ನು ಉಚಿತವಾಗಿ ಹೇಳಿಕೊಡಲಾಗುತ್ತದೆ. ಆಸಕ್ತ ಶಿಕ್ಷಕರು ಹಾಗೂ ಮಕ್ಕಳು ಬರುತ್ತಾರೆ.

ದಾನಿಗಳ ನೆರವು: ‘ದೇವಸ್ಥಾನಕ್ಕೆ ಟೈಲ್ಸ್, ನೆಲಕ್ಕೆ ಕಲ್ಲುಗಳು, ಸಿಮೆಂಟ್ ಇತ್ಯಾದಿ ಅಗತ್ಯ ಪರಿಕರಗಳನ್ನು ದಾನಿಗಳು ನೀಡುತ್ತಿದ್ದಾರೆ. ಅವರ ಆರ್ಥಿಕ ಹಾಗೂ ಗ್ರಾಮಸ್ಥರ ಸಹಾಯದಿಂದಲೂ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಸರ್ಕಾರ ಕಳೆದ ವರ್ಷ ಹಾಕಲಾದ ಸಿಮೆಂಟ್ ಒಂದೇ ವರ್ಷಕ್ಕೆ ಕಿತ್ತು ಬಂದಿದೆ. ಹೀಗಾಗಿ, ಸಮಯ ಸಿಕ್ಕಾಗೆಲ್ಲ ಸಣ್ಣ ಪುಟ್ಟ ಕೆಲಸಗಳನ್ನು ಮಂಡಳಿಯಿಂದ ಮಾಡಿಸುತ್ತೇವೆ’ ಎಂದು ತಿಳಿಸಿದರು.

ಪ್ರತಿ ದಿನ ಶ್ರಮದಾನ: ‘ಯುವಕರು ಮುಂಜಾನೆ 6 ರಿಂದ ಎರಡು ಗಂಟೆ ಸಮಯ ಶ್ರಮದಾನ ಮಾಡುತ್ತಿದ್ದರು. ನಾವು ಅವರೊಂದಿಗೆ ಸೇರಿಕೊಂಡು ಕೆಲಸ ಮಾಡುತ್ತಿದ್ದೆವು. ಇದರ ಪರಿಣಾಮ ಇಂದು ದೇವಾಲಯ ಸುಂದರವಾಗಿದೆ. ಎಲ್ಲ ಗ್ರಾಮಗಳಲ್ಲೂ ಇಂತಹ ಕೆಲಸಗಳು ನಡೆಯಬೇಕು’ ಎನ್ನುತ್ತಾರೆ ಗ್ರಾಮದ ಮಹದೇವ್ ಅವರು.

'ನಮ್ಮ ತಂಡದಲ್ಲಿ ಶಿಕ್ಷಕರು, ಪೊಲೀಸ್ ಕೆಲಸದಲ್ಲಿ ಇರುವವರು, ಸ್ವಂತ ಉದ್ಯೋಗ ಹೊಂದಿರುವವರು ಸೇರಿದಂತೆ ಅನೇಕರಿದ್ದಾರೆ. ಎಲ್ಲರೂ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡುತ್ತೇವೆ' ಎಂದು ಶಿಕ್ಷಕ ಆರ್. ಚಂದ್ರು ಅವರು ‘ಪ್ರಜಾವಾಣಿ’ ತಿಳಿಸಿದರು.

ಎಲ್ಲಿದೆ, ಹೇಗಿದೆ ದೇವಾಲಯ?

ಜಿಲ್ಲಾ ಕೇಂದ್ರದಿಂದ 6 ಕಿ.ಮೀ ದೂರದಲ್ಲಿ ದೇವಾಲಯವಿದೆ. ಸತ್ಯಮಂಗಲ ರಸ್ತೆಯ ಸಿಗುವ ಹರದನಹಳ್ಳಿ ಸಮೀಪದಲ್ಲಿ ಇದೆ.

ಗರ್ಭಗೃಹ, ಸುಖನಾಸಿ ಕಂಬಗಳು ಮತ್ತು ಸ್ಥಾಪಿತ ಗೋಡೆಗಳು‌, ಅಷ್ಟಭುಜಾಕೃತಿಯ ಮೂಲೆಗಳು ಆಕರ್ಷಿಸುತ್ತವೆ.

ಒಳಾಂಗಣದಲ್ಲಿ ವೆಂಕಟೇಶನ ಸುಂದರ ಕಲಾ ಚಿತ್ರವಿದೆ. ಸುಖನಾಸಿಯ ಮರದ ಬಾಗಿಲ ಮೇಲೆ ಚಿಕ್ಕದೇವರಾಜ ಒಡೆಯರ ಹೆಸರಿದೆ. ಇವರ ಕಾಲದಲ್ಲಿ ದೇವಾಲಯದ ವಿಸ್ತರಣೆ ಮಾಡಲಾಗಿದೆ. ಶೈವ ದೇವಸ್ಥಾನಗಳಿಂದ ತಂದ ವಸ್ತುಗಳಿಂದ ನಿರ್ಮಿಸಲಾಗಿದೆ. ಗರ್ಭಗುಡಿಯಲ್ಲಿನ ಮೂರ್ತಿ ಹೊಯ್ಸಳ ಶೈಲಿಯಲ್ಲಿದೆ.

ನಿಧಿ ಪತ್ತೆ: ನಾಲ್ಕು ವರ್ಷಗಳ ಹಿಂದೆ ದೇವಾಲಯದ ಹಿಂಭಾಗ ಮುಸ್ಲಿಮರು ತೆಗೆಯುತ್ತಿದ್ದ ವೇಳೆ ಜಾಗದಲ್ಲಿ ನಿಧಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಅಂದಿನಿಂದ ಈ ದೇವಾಲಯದಲ್ಲಿ ವಿವಾಹ ಕಾರ್ಯಕ್ರಮಗಳು ನಡೆಸಬಾರದು ಎಂದು ಮುಜರಾಯಿ ಇಲಾಖೆ ಸೂಚನೆ ನೀಡಿತು ಎನ್ನುತ್ತಾರೆ ಗ್ರಾಮಸ್ಥರು.

ದಕ್ಷಿಣಾಭಿಮುಖ ಆಂಜನೇಯ: ದೇವಾಲಯದ ಹೊರಗೆ ಅಪರೂಪದ ದಕ್ಷಿಣಾಭಿಮುಖ ಅಭಯ ಆಂಜನೇಯ ದೇವಸ್ಥಾನವಿದೆ. ಪ್ರತಿ ಗುರುವಾರ, ಶನಿವಾರ 100ಕ್ಕೂ ಹೆಚ್ಚು ಭಕ್ತರು ಬರುತ್ತಾರೆ. ಅಲ್ಲದೆ, ವಿಶೇಷ ಪೂಜಾ ದಿನಗಳಲ್ಲೂ ಹೆಚ್ಚಿನ ಭಕ್ತರು ಹಾಗೂ ಪ್ರವಾಸಿಗರು ಕೂಡ ಭೇಟಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT